ಲಘು ಪ್ರಬಂಧ: ಅವಲಕ್ಕಿಯ ಸುತ್ತಮುತ್ತ

Upayuktha
0


ವಲಕ್ಕಿಗೂ ಒಂದು ಡೇ ಅಂತಲಾ... ಮೊನ್ನೆ ಮೊನ್ನೆ ಜೂನ್ 7ನೇ ತಾರೀಖು ಎಲ್ಲರೂ ಅವಲಕ್ಕಿ ಡೇ ಮಾಡಿದ್ರಿ. ನಮಗ ದಿನಾನೂ ಅವಲಕ್ಕಿ ಡೇನೇ. ಹಂಗೇ ಒಂದು ರೌಂಡ್ ಹಾಕೊಂಡು ಬರೋಣ ಬರ್ರೆಲಾ ಅವಲಕ್ಕಿ ಸುತ್ತ.


"ಬರ್ರಿ... ಬರ್ರಿ ಒಳಗ ಬರ್ರಿ, ಏ ಇಕಿನ ಇವ್ರು... ನಮ್ಮ ಶಾಮರಾಯರು ಬಂದಾರ ಛಾ ಮಾಡು" ಅನ್ಕೋತ ಬಂದವರನ್ನು ಒಳಗ ಕರೀತಾನ ಮನಿ ಯಜಮಾನ. ಯಜಮಾನತಿ ಮೈತುಂಬಾ ಸೆರಗ ಹೊದ್ಕೊಂಡು "ಬರ್ರಿ ಶಾಮಣ್ಣ, ಆರಾಮ ಇದ್ದೀರಿ?



ಲೀಲಕ್ಕ ಹೆಂಗಿದ್ದಾರ? ಅವರನೂ ಕರ್ಕೊಂಡು ಬರ್ಬೇಕಾಗಿತ್ತು" ಅನ್ಕೋತ ಒಂದು ಪ್ಲೇಟ್ ನ್ಯಾಗ ಕುರುಕುರು ಅವಲಕ್ಕಿ ತಂದು ಕೊಡೋರು.

ಹಂಗೇ ಯಜಮಾನರಿಗೆ "ನಿಮಗೂ ಕೊಡ್ಲೇನು? ಈಗರೆ ತಿಂದು ಛಾ ಕುಡದೀರಿ ಅಂತ ತರ್ಲಿಲ್ಲ"


ಆಗ ಯಜಮಾನ್ರು "ತಿಂದೀನಿ.... ಹ್ಹ... ಹ್ಹ... ಹಂಗೇ ಸ್ವಲ್ಪ ಹಾಕೊಂಡು ಬಾ, ಇವರಿಗೆ ಕಂಪನಿ ಕೊಡ್ತೀನಿ" ಅಂತ ಹೇಳ್ಕೋತ ಮತ್ತೊಂದು ಪ್ಲೇಟ್ ಜಡದೇ ಬಿಡವ್ರು.


ಈ ಅವಲಕ್ಕಿ ಎಷ್ಟು ವೆರೈಟಿ ಮಾಡಬಹುದು ನೋಡ್ರಿ. ಎಲ್ಲರಿಗೂ ಗೊತ್ತಿದ್ದಂಗ, ಕುರು ಕುರು ಅವಲಕ್ಕಿ ಹಳದಿ ಕೆಂಪು ಎರಡು ತರಹ, ಕುಟ್ಟವಲಕ್ಕಿ, ಕರದವಲಕ್ಕಿ, ಚಟ್ನಿಪುಡಿ ಮೆಂತೆಹಿಟ್ಟು ಹಸಿ ಎಣ್ಣಿ ಹಾಕಿ ಕಲಸಿದ ಅವಲಕ್ಕಿ, ತುಪ್ಪದವಲಕ್ಕಿ, ಉಳ್ಳಾಗಡ್ಡಿ ಟೊಮೇಟೊ ಹಸಿಖೊಬ್ರಿ ಕೊತಂಬ್ರಿ ಹಾಕಿದ ಕಚ್ಚಾ ಚೂಡಾ, ಉಳ್ಳಾಗಡ್ಡಿ ತಿನ್ನದವರಿಗೆ ಸೌತಿಕಾಯಿ ಅವಲಕ್ಕಿ, ಸೂಸಲ ಅವಲಕ್ಕಿ, ಗೊಜ್ಜವಲಕ್ಕಿ, ಬಿಸಿಬೇಳೆ ಅವಲಕ್ಕಿ, ಬೆಲ್ಲದವಲಕ್ಕಿ, ಅಬ್ಬಾ ಎಷ್ಟು ತರ ತರಹ ಅವಲಕ್ಕಿರಿ ಇವು... ಹೂ ಅಂದಂಗ ನಮ್ಮ ಕೃಷ್ಣ ಪರಮಾತ್ಮನ ಪ್ರೀತಿ ಮೊಸರವಲಕ್ಕಿನೇ ಬಿಟ್ಟಿವಲ್ರಿ .... 


ಉಪ್ಪಿನಕಾಯಿ ಬಾಟ್ಲಿ ಖಾಲಿ ಆಯ್ತಾ... ಅದರಾಗ ಒಂದಿಷ್ಟು ಅವಲಕ್ಕಿ ಮೆಂತೆಹಿಟ್ಟು ಒಂಚೂರು ಎಣ್ಣಿ ಹಾಕಿ ಗರ ಗರ ಕೈ ಆಡಸ್ರಿ ಸೂಪರ್ ಟೇಸ್ಟ್.

ಒಳ್ಳಾಗ ರಂಜಕಾ ರುಬ್ಬಿ ತಗದ್ರ್ಯಾ... ಒಳ್ಳು ತೊಳಿಯುಕಿಂತ ಮೊದಲು ಒಂದಿಷ್ಟು ಅವಲಕ್ಕಿ ಹಾಕಿ ಕೈಯಾಡಸ್ರಿ. ಲಿಸ್ ಲಿಸ್ ಅಂದ್ರೂ ಮಸ್ತ್ ರುಚಿ.  ಮನ್ಯಾಗ್ ಎಂದರೆ ಒಮ್ಮೆ ಅನ್ನ ಮುಗದಿತ್ತು, ಹುಳಿ ಒಂದೇ ಇತ್ತು ಅನ್ಕೋರಿ, ಹುಳಿ ಬಿಸಿಗಿಟ್ಟು ಒಂದು ಹಿಡಿ ಮೀಡಿಯಂ ಅವಲಕ್ಕಿ ಹಾಕಿ ಚೂರು ತುಪ್ಪ ಒಗಿeರಿ. ಹೊಟ್ಟಿ ತುಂಬತದ ಹುಳಿ ಕೆಡಂಗಿಲ್ಲ. ಇಡ್ಲಿ ಚಟ್ನಿ ಸಾಂಬಾರ್ ಪಾರ್ಸಲ್ ತಂದಿದ್ರ ಸಾಂಬಾರ್ ಉಳದೇ ಉಳಿತದ. ಸಾಂಬಾರ್ ಗಿಷ್ಟು ಅವಲಕ್ಕಿ ಹಾಕಿ ತಿಂದು ನೋಡ್ರಿ. ಎಳ್ಳು ಹಾಕಿ ಟೊಮೇಟೊ ಚಟ್ನಿ ಮಾಡಿದ್ದು ಉಳದ್ರ ಅದಕ್ಕೂ ಹಸಿ ಎಣ್ಣಿ ಮೆಂತೆಹಿಟ್ಟು ಅವಲಕ್ಕಿ ಹಾಕಿ ಕಲಸಿ ತಿಂದು ನೋಡ್ರಿ, ಮತ್ ಮತ್ ಟೊಮೇಟೊ ಕಾಯಿ ಚಟ್ನಿ ಮಾಡುದ್ ಗ್ಯಾರಂಟಿ.


ಅವಲಕ್ಕಿ ಇರ್ಲಾರ್ದ ಮನಿ ಒಂದು ಮನಿ ಅನಿಸ್ತದೇನ್ರಿ... ಊಹೂಂ ಇಲ್ಲಲಾ, ದ್ವಾಸಿ ಇಡ್ಲಿ ಮಾಡುಮುಂದ ಒಂದು ಹಿಡಿ ಅವಲಕ್ಕಿ ನೆನಸಿ ರುಬ್ಲಿಕ್ ಹಾಕುದು, ಬ್ಯಾಳಿ ಹೂರಣ ಅಳ್ಳಕ ಆಗಿ ಹೋಳಿಗೆ ಬರ್ತಿಲ್ಲ... ಒಂದು ಹಿಡಿ ಅವಲಕ್ಕಿ ಹಾಕಿ ರುಬ್ಬರಿ, ಹರೀದ ಮುರೀದ ಮಸ್ತ್ ಹೋಳಿಗಿ ಬರ್ತಾವ.


ನಮ್ಮ ತಂದೆಗೆ ಅವಲಕ್ಕಿ ಅಂದ್ರ ಪಂಚ ಪಂಚ ಪಂಚ ಪ್ರಾಣ. ಅವ್ರಿಗೆ ಕುರು ಕುರು ಅವಲಕ್ಕಿಗಿಂತ ಖಾರಪುಡಿ ಎಣ್ಣಿ ಹಾಕಿ ಕಲಸಿದ ಅವಲಕ್ಕಿ ಅಂದ್ರ ಭಾಳ್ ಅಂದ್ರ ಭಾಳ್ ಪ್ರೀತಿ.


ನಮ್ಮ ತಂದೆ ದೀಪಾವಳಿ ಹಬ್ಬಕ್ಕೆ ಮಾವನ ಮನೆಗೆ ಹೋದಾಗ ಮೂರು ದಿನ ಅವರು ಮಾಡಿದ ಅವಲಕ್ಕಿ, ಫರಾಳ, ಊಟ ತಿಂದು ಮರುದಿನ ಇವತ್ತು ನಾ ಅವಲಕ್ಕಿ ಹಚ್ಚತೀನಿ, ನನಗ ಸಾಮಾನು ಕೊಡ್ರಿ ಅಂತ ಅತ್ತೆ (ನಮ್ಮಜ್ಜಿ) ಹತ್ರ ಹೇಳಿ, ತಾವೇ ಅವಲಕ್ಕಿ ಹಚ್ಚಿ ಎಲ್ಲರಿಗೂ ಕೊಟ್ಟಿದ್ರoತ. ನಮ್ಮ ಸೋದರ ಮಾವ, ಮೌಶಿಗಳು ಯಾವಾಗ್ಲೂ ಹೇಳವ್ರು.


ನಮ್ಮ ತಂದೆ ಮಾಡುವ (ತಿನ್ನುವ ) ಅವಲಕ್ಕಿಗೆ ಅವರ ಸೋದರ ಮಾವನ ಮಕ್ಕಳು ಅದಕ್ಕೆ ವೆಂಕಟೇಶ್ ಅವಲಕ್ಕಿ ಅನ್ನೋರು. ಹಿಂಗೇ ಅವರ ಮನೇಲಿ ವೆಂಕಟೇಶ್ ಅವಲಕ್ಕಿ ಅನ್ನೋದು ಕೇಳಿ ಕೇಳಿ ಅವರ ಬೀಗಿತ್ತಿ ತಾನೂ ಹಂಗೇ ಅವಲಕ್ಕಿ ಹಚ್ಚಿ ತಿರುಪತಿ ಅವಲಕ್ಕಿ ಮಾಡೀನಿ ಬರ್ರಿ ಅಂತ ಕರೆದರಂತೆ. ಅವರು ಹೇಳಿ ನಗೋರು. ನಾನು ತವರಿಗೆ ಹೋಗುವಾಗ ಒಯ್ದ ಅವಲಕ್ಕಿ ಚೂಡಾ ನಮ್ಮವ್ವಗ ಭಾಳ ಸೇರ್ತೀದ್ವು. ಎಷ್ಟು ರುಚಿ ಮಾಡ್ತಿ ನೋಡು, ನಿನ್ನ ಅವಲಕ್ಕಿ ತುಪ್ಪ ತುಪ್ಪ ಇರ್ತಾವ, ತುಪ್ಪ ಹಾಕ್ತಿಯೇನು ಅನ್ನಾಕಿ. ನಾಕಾಳು ಅವಲಕ್ಕಿ,ಚುರಮುರಿ ಶೇಂಗಾ ಪುಟಾಣಿ ಹಾಕ್ಲಾರದೇ ಹಚ್ಚಿಡು ಅಂತ ಹೇಳಿ ಮಾಡಿಸ್ಕೊಂಡಿದ್ಲು ಪಾಪ, ತಿಂದ್ಲೋ ಇಲ್ಲೋ ಗೊತ್ತಿಲ್ಲ. ಆಮ್ಯಾಲ ನಾ ಅಕಿನ್ನ ನೋಡ್ಲೆ ಇಲ್ಲ.


ಬೇಕಾದಷ್ಟು ಸ್ನಾಕ್ಸ್ ಬಂದಾವ ಖರೆ, ಆದ್ರ ನಮ್ಮ ಅವಲಕ್ಕಿ ಮುಂದ ಯಾವ್ದು ಇಲ್ಲ. ಅವಲಕ್ಕಿಗೆ ತಲಬಾಗಿಲಿಂದ  ದೇವರ ಮನಿ ತನಕ ಡೈರೆಕ್ಟ್ ಪ್ರವೇಶ. ಮಡಿಲೇ ಇದ್ದವರಿಗೂ ಓಕೆ, ಪೂಜಾ ಮಾಡವರಿಗೂ ಓಕೆ, ಉಪವಾಸ ಇದ್ದವರಿಗೂ ಓಕೆ, ಸಾಲಿಗೆ ಹೋಗವ್ರಿಗೂ ಓಕೆ, ಸಾಲಿಯಿಂದ ಬಂದಮ್ಯಾಲು ಓಕೆನೇ.


ನಾನು ಪ್ರತಿ ತಿಂಗಳು ಎರಡು ಕಿಲೋ ತೆಳು ಅವಲಕ್ಕಿ ಎರಡು ಕಿಲೋ ಮೀಡಿಯಂ ಅವಲಕ್ಕಿ ತರಸ್ತೀನಿ ತಿಂಗಳು ಸಾಮಾನು ತರಿಸುವಾಗ.(ಅಷ್ಟೂ ನಮ್ಮ ಹೊಟ್ಟಿ ಸೇರಂಗಿಲ್ಲ ಮತ್, ಮನಿಗೆ ಬರವ್ರು ಹೋಗವ್ರು ಇರ್ತಾರ ಬೇಕಾಗ್ತದ ) ಅದಕ್ಕೆ ನನ್ನ ಮಗ ಒಮ್ಮೊಮ್ಮೆ ಲೆಕ್ಕ ಹಾಕ್ತಿರ್ತಾನ. ತಿಂಗಳಿಗೆ ನಾಲ್ಕು ಕಿಲೋ, ವರ್ಷಕ್ಕೆ 48 ಕಿಲೋ, ಅಂದ್ರ... ಇಷ್ಟು ವರ್ಷಕ್ಕ ಇಷ್ಟು ಅವಲಕ್ಕಿ ತಿನಿಸಿ ನೋಡು ನಮಗ ಅಂತ


ನಮ್ಮಜ್ಜಗ ಶುಗರ್ ಇತ್ತು ಅಂತ ಜ್ವಾಳದ ಅವಲಕ್ಕಿ ಮಾಡಸ್ತಿದ್ರು ನಮ್ಮನ್ಯಾಗ. ನೂರಾರು ಎಕರೆ ಹೊಲದ ಯಜಮಾನ ಕೊನೆ ದಿನಗಳಲ್ಲಿ ತಿಂದಿದ್ದು ನವಣಿ ಅಕ್ಕಿ ಅನ್ನ, ಜ್ವಾಳದ ನುಚ್ಚು, ಜ್ವಾಳದ ಅವಲಕ್ಕಿ, ಭಕ್ರಿ. ಆಗ ತಿಳಿತಿದ್ದಿಲ್ಲ,ಪಾಪ ಅನಸ್ತದ ಈಗ. ಜ್ವಾಳದ ಅವಲಕ್ಕಿನು ಒನ್ನಮುನಿ ರುಚಿ ಇರ್ತಿದ್ವು. ಈಗಂತೂ ಗೊಂಜಾಳ ಅವಲಕ್ಕಿನೂ ಸಿಗ್ತಾವ.


ಅವಲಕ್ಕಿ ಹಪ್ಪಳ, ಅವಲಕ್ಕಿ ಸಂಡಿಗಿ, ಅವಲಕ್ಕಿ ಹಲ್ವಾ, ಅವಲಕ್ಕಿ ದೋಸೆ, ಅವಲಕ್ಕಿ ಉಂಡಿ, ಪಲಾವ್ ಅವಲಕ್ಕಿ, ಅವಲಕ್ಕಿ ಕಟ್ಲೆಟ್ ಒಂದಾ... ಎರಡಾ ಹೇಳ್ರಿ.


ಬಾಜು ಮನಿಯವರ ಪ್ಲೇಟ್ ಇತ್ತು ಅಂದ್ರ ಖಾಲಿ ಹೆಂಗ ಕೊಡುದು? ಒಂದಿಷ್ಟು ಅವಲಕ್ಕಿನರೆ ಹಾಕಿ ಕೊಡ್ಲಿಕ್ಕೆ ಬರ್ತದ. ಪಟಕ್ ಅಂತ ಯಾರೋ ಮನಿಗೆ ಬಂದ್ರು ಅಂದ್ರ ನಾಕಾಳ ಅವಲಕ್ಕಿ ಕೊಟ್ಟು ಛಾ ಮಾಡಿ ಕೊಡುದು, ಬೀಗರ ಮನಿಗೆ ಗಡಬಿಡಿಲೆ ಹೊಂಟಿದ್ರ ಅವೇ ಅವಲಕ್ಕಿ ಕಟಗೊಂಡು ಹಾದ್ಯಾಗ ಹಣ್ಣು ಹಂಪಲು ಒಯ್ಯುದು. ರಾಯರ ಭಜನಿ ಮಾಡಿದ್ರ್ಯ ಅವಲಕ್ಕಿ ಬೆಲ್ಲ ನೇವಿದ್ಯಕ್ಕ ಇಡುದೇ, ಸoಕಷ್ಟಿ ಗಣಪ್ಪಗ ಪಂಚಕಜ್ಜಾಯಕ್ಕ ಅವಲಕ್ಕಿ ಕರದು ಹಾಕುದೇ, ಸಣ್ಣ ಸಣ್ಣ ಹಬ್ಬಕ್ಕ ಏನರೆ ಸಿಹಿ ಮಾಡ್ಬೇಕು ಅಂದ್ರ ಏನ್ಮಾಡ್ಲಿ ಅಂತ ತಲಿ ಕೆಡಿಸಿಕೊಳ್ಳದೆ ಅವಲಕ್ಕಿ ಪಾಯಸ ರೆಡಿ. ಏನರೆ ಸಿಹಿ ತಿನಬೇಕು ಅನಿಸಿದ್ರ ಅವಲಕ್ಕಿಗೆ ಬೆಲ್ಲ ತುಪ್ಪ, ಹಸಿ ಕೊಬ್ರಿ ಹಾಕಿ ಕಲಸಿದ್ರ ಮಸ್ತ್ ರುಚಿ. ಒಟ್ಟ ಅವಲಕ್ಕಿ ಬೇಕು ನೋಡ್ರಿ.


ಒಂದು ಹಿಡಿ ಅವಲಕ್ಕಿ ಕೊಟ್ರ ಸುಧಾಮನಿಗೆ ಅಷ್ಟ ಐಶ್ವರ್ಯ ಕೊಟ್ಟನಂತ ಶ್ರೀ ಕೃಷ್ಣ. ಅಂದ್ರ ಅವಲಕ್ಕಿ ಎಷ್ಟು ಮಹಿಮೆ ಹೊಂದೆದ ನೋಡ್ರಿ.ಅದಕ್ಕೆ ಎಷ್ಟು ಹೊಟ್ಟಿ ತುಂಬಿದ್ರು, ಒಲ್ಲೆ ಅನಿಸ್ತಿದ್ರು, ಸುಧಾಮ ಒಲ್ಲೆ ಅನ್ಬಾರ್ದು ಅಂತ ಒಂಚೂರು ಬಾಯಿಗೆ ಹಾಕೊಳುದು.


ಟೋಟಲಿ ಅವಲಕ್ಕಿ ಅಂದ್ರ ಹೊತ್ತಿಗೆ ಆಗುವ ಪರೋಪಕಾರಿ, ಆಪತ್ಕಾಲದಲ್ಲಿ ಮಹದುಪಕಾರಿ, ಅವಲಕ್ಕಿ ನಿನ್ನ ಮಹಿಮೆ ಅಪರಂಪಾರ. ನಿನಗೆ ಶರಣು ಶರಣಾರ್ಥಿ 


-ಸಂಧ್ಯಾ ಫಡ್ನಿಸ್


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 


Post a Comment

0 Comments
Post a Comment (0)
To Top