ನೆಲಮಂಗಲ: ಸೃಜನಶೀಲತೆ, ಕಲಾತ್ಮಕ ಅಭಿವ್ಯಕ್ತಿ ಹಾಗೂ ಸಾಂಸ್ಕೃತಿಕ ವೈವಿಧ್ಯತೆಯನ್ನು ಉತ್ತೇಜಿಸುವ ಉದ್ದೇಶದಿಂದ ವಿಶ್ವದಾದ್ಯಂತ ಆಚರಿಸಲಾಗುವ ವಿಶ್ವ ಕಲಾ ದಿನಾಚರಣೆಯನ್ನು ನೆಲಮಂಗಲ ಪಟ್ಟಣದ ಪೇಟೆ ಬೀದಿಯಲ್ಲಿರುವ ಶ್ರೀ ಗೋವರ್ಧನ್ ಕೆ. ರವರ ಮಾಸ್ಟರ್ ಆರ್ಟ್ಸ್ ಗ್ಯಾಲರಿಯಲ್ಲಿ ಭಾನುವಾರ ಅರ್ಥಪೂರ್ಣವಾಗಿ ಆಚರಿಸಲಾಯಿತು.
ಖ್ಯಾತ ಚಿತ್ರಕಲಾವಿದ ಲಿಯೊನಾರ್ಡೊ ಡಾ ವಿನ್ಸಿ ಅವರ ಜನ್ಮದಿನವಾದ ಏಪ್ರಿಲ್ 15ನ್ನು ಗೌರವಾರ್ಥವಾಗಿ ಅಂತರಾಷ್ಟ್ರೀಯ ಕಲಾ ಸಂಘ ಹಾಗೂ ಯುನೆಸ್ಕೊ ಸಂಸ್ಥೆಗಳು ವಿಶ್ವ ಕಲಾ ದಿನವನ್ನಾಗಿ ಘೋಷಿಸಿರುವ ಹಿನ್ನೆಲೆಯಲ್ಲಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಕಾರ್ಯಕ್ರಮವನ್ನು ಸಾಹಿತಿ ಹಾಗೂ ಸಾಮಾಜಿಕ ಚಿಂತಕರಾದ ಡಾ. ವೆಂಕಟೇಶ್ ಆರ್. ಚೌಥಾಯಿ ಅವರು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ ಮಾತನಾಡಿ, ಲಿಯೊನಾರ್ಡೊ ಡಾ ವಿನ್ಸಿ ಅವರು ಚಿತ್ರಕಲೆ ಸೇರಿದಂತೆ ವಾಸ್ತುಶಿಲ್ಪ, ಸಂಗೀತ, ವಿಜ್ಞಾನ, ಶರೀರರಚನಾ ಶಾಸ್ತ್ರ ಮುಂತಾದ ಅನೇಕ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಬಹುಮುಖ ಪ್ರತಿಭೆ ಎಂದು ಹೇಳಿದರು. ಅವರ ಮೊನಾಲಿಸಾ ಮತ್ತು ಲಾಸ್ಟ್ ಸಪ್ಪರ್ ಚಿತ್ರಗಳು ವಿಶ್ವಪ್ರಸಿದ್ಧವಾಗಿವೆ ಎಂದು ತಿಳಿಸಿದರು.
ಹಿರಿಯ ಸಾಹಿತಿ ಹಾಗೂ ಶಿಕ್ಷಣ ಇಲಾಖೆಯ ನಿವೃತ್ತ ಉಪನಿರ್ದೇಶಕರಾದ ಶ್ರೀ ಎಂ.ವಿ. ನೆಗಳೂರ ಅವರು ಮಾತನಾಡಿ, ರಾಜಾ ರವಿವರ್ಮ ಹಾಗೂ ಲಿಯೊನಾರ್ಡೊ ಡಾ ವಿನ್ಸಿ ಅವರ ಕೊಡುಗೆಗಳು ಕಲಾ ಲೋಕಕ್ಕೆ ಅಪಾರವೆಂದು ಹೇಳಿದರು. ಕನ್ನಡ ಸಾಹಿತ್ಯ ಕ್ಷೇತ್ರದ ಮಹಾನ್ ಸಾಧಕರಾದ ಕೆ. ಶಿವರಾಮ ಕಾರಂತ ಅವರ ಬಹುಮುಖ ಪ್ರತಿಭೆಯನ್ನು ಉಲ್ಲೇಖಿಸಿ, ಇಂತಹ ಸಾಧಕರ ಆದರ್ಶಗಳು ಇಂದಿನ ಯುವಜನತೆಗೆ ಪ್ರೇರಣೆಯಾಗಬೇಕು ಎಂದರು.
ನಮ್ಮ ನಾಡ ಧ್ವನಿ ಪತ್ರಿಕೆಯ ಸಂಪಾದಕರಾದ ಶ್ರೀ ಡಿ. ಸಿದ್ದರಾಜು ಅವರು ಮಾತನಾಡಿ, ಗ್ರಾಮೀಣ ಭಾಗದ ಪ್ರತಿಭಾವಂತರನ್ನು ಗುರುತಿಸಿ ಪ್ರೋತ್ಸಾಹಿಸಲು ಇಂತಹ ಕಾರ್ಯಕ್ರಮಗಳು ಹೆಚ್ಚಿನ ಮಟ್ಟದಲ್ಲಿ ನಡೆಯಬೇಕು ಎಂದು ಅಭಿಪ್ರಾಯಪಟ್ಟರು. ತರಬೇತಿ ಶಿಬಿರಗಳ ಮೂಲಕ ಯುವ ಕಲಾವಿದರನ್ನು ಉತ್ತೇಜಿಸುವ ಅಗತ್ಯವಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಖ್ಯಾತ ಚಿತ್ರಕಲಾವಿದ ಹಾಗೂ ಕರ್ನಾಟಕ ಇಂಟರ್ನ್ಯಾಷನಲ್ ಆರ್ಟಿಸ್ಟ್ ವಿಲೇಜ್ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿಗಳಾದ ಡಾ. ಅಪ್ಪಾಸಾಹೇಬ ಗಾಣಿಗೇರ ಅವರು ಮಾತನಾಡಿ, ವಿಶ್ವ ಕಲಾ ದಿನಾಚರಣೆಯ ಮೂಲ ಉದ್ದೇಶ ಕಲಾವಿದರಿಗೆ ಗೌರವ ನೀಡುವುದು ಹಾಗೂ ಸಮಾಜದಲ್ಲಿ ಕಲೆಯ ಮಹತ್ವವನ್ನು ಅರಿವು ಮೂಡಿಸುವುದಾಗಿದೆ ಎಂದರು. ನಿಸ್ವಾರ್ಥ ಸೇವೆಯಿಂದಲೇ ಶಾಶ್ವತ ಖ್ಯಾತಿ ಸಾಧ್ಯವೆಂದು ಹೇಳಿದರು.
ಈ ಸಂದರ್ಭದಲ್ಲಿ ಅಂತರಾಷ್ಟ್ರೀಯ ಕಲಾವಿದರಾದ ಶ್ರೀ ಗೋವರ್ಧನ್ ಕೆ. ಅವರು ಸ್ಥಳದಲ್ಲಿಯೇ ಚಿತ್ರ ರಚನೆ ಮಾಡಿ ಗಮನಸೆಳೆದರು. ಜೊತೆಗೆ ಚಿತ್ರಕಲಾವಿದರಾದ ರಾಜೇಶ್, ಗಂಗಾಧರ್, ಗಾಳಿ ಹನುಮಂತ ಮತ್ತು ಮಲ್ಲಿಕಾರ್ಜುನ ಅವರು ಚಿತ್ರ ಬಿಡಿಸುವ ಮೂಲಕ ಕಾರ್ಯಕ್ರಮಕ್ಕೆ ವಿಶೇಷ ಮೆರುಗು ನೀಡಿದರು.
ಪತ್ರಕರ್ತರಾದ ಶರಣಬಸಪ್ಪ ಗೌಡ, ಸಮಾಜಸೇವಕರಾದ ವಿಶ್ವನಾಥ್ ಸೇರಿದಂತೆ ಹಲವರು ಕಾರ್ಯಕ್ರಮದಲ್ಲಿ ಭಾಗವಹಿಸಿ ಯಶಸ್ಸಿಗೆ ಕಾರಣರಾದರು.
ವಿಶ್ವ ಕಲಾ ದಿನಾಚರಣೆಯು ಕಲಾವಿದರಿಗೆ ಪ್ರೇರಣೆ ನೀಡುವುದರೊಂದಿಗೆ ಸಮಾಜದಲ್ಲಿ ಕಲೆಯ ಮಹತ್ವವನ್ನು ಇನ್ನಷ್ಟು ಬೆಳಗಿಸಲಿ ಎಂಬ ಆಶಯ ವ್ಯಕ್ತವಾಯಿತು.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


