ಬೇಸಿಗೆಯಲ್ಲಿ ಆರೋಗ್ಯ ಉಳಿಸೋಣ: ಆಯುರ್ವೇದ ಹೇಳುವ ಸರಿಯಾದ ಆಹಾರ

Upayuktha
0


ರು ಋತುಗಳು ಒಟ್ಟಾಗಿ ಒಂದು ಸಂವತ್ಸರ. ಎರಡು ಮಾಸ ಒಂದು ಋತುವನ್ನು ಉಂಟುಮಾಡಿದರೆ, ಮೂರು ಋತುಗಳು ಸೇರಿ ಒಂದು ಆಯನವಾಗುತ್ತದೆ. ಉದಾಹರಣೆಗೆ, ಚೈತ್ರ ಮತ್ತು ವೈಶಾಖ ಮಾಸಗಳು ವಸಂತ ಋತು, ಜೇಷ್ಠ ಹಾಗೂ ಆಷಾಢ ಮಾಸಗಳು ಒಟ್ಟಾಗಿ ಗ್ರೀಷ್ಮ ಋತು ಎಂದೆನಿಕೊಳ್ಳುತ್ತವೆ. ಶಿಶಿರ ಅಂದರೆ ಶೀತಕಾಲ, ವಸಂತಕಾಲ ಹಾಗೂ ಗ್ರೀಷ್ಮ ಅಂದರೆ ಬೇಸಿಗೆ ಕಾಲವನ್ನು ಜೊತೆಯಾಗಿ ಉತ್ತರಾಯಣ ಎನ್ನುತ್ತಾರೆ.ಇನ್ನುಳಿದ ಮೂರು ಋತುಗಳು ಕ್ರಮವಾಗಿ ವರ್ಷಾ, ಶರದ ಮತ್ತು ಹೇಮಂತ (ಶೀತಕಾಲ ಆರಂಭ) ದಕ್ಷಿಣಾಯನ ಎಂದೆನಿಸಿಕೊಳ್ಳುತ್ತವೆ. ಕಾಲಕ್ಕೆ ತಕ್ಕಂತೆ ವಾತಾವರಣದ ಜೊತೆ ಜೊತೆಗೆ ಮನುಷ್ಯನ ದೇಹದಲ್ಲಿ ಬದಲಾವಣೆಗಳು ಸಹಜವಾಗಿ ಕಂಡುಬರುತ್ತವೆ.


ಉತ್ತರಾಯಣ ಸೂರ್ಯ ದೇವ ತನ್ನ ಪಥ ಬದಲಿಸಿ ಉತ್ತರ ದಿಕ್ಕಿಗೆ ತೆರಳುವ ಸಮಯ. ಈ ಕಾಲದಲ್ಲಿ ಆತನ ಪ್ರಖರತೆ ಅತೀ ಹೆಚ್ಚು. ಹಾಗಾಗಿಯೇ ಈ ಸಮಯದಲ್ಲಿ ಮನುಷ್ಯನ ದೇಹ ಬಲದ ಜೊತೆಗೆ ಆತನ ಜೀರ್ಣ ಶಕ್ತಿಯೂ ಸಹ ಕ್ಷೀಣಿಸುತ್ತಾ ಸಾಗುತ್ತದೆ. ಆದ್ದರಿಂದಲೇ ಆಚಾರ್ಯರು ಆಯುರ್ವೇದ ಸಂಹಿತೆಗಳಲ್ಲಿ ಋತು ಅನುಸಾರ ಆಹಾರ, ವಿಹಾರ ಮತ್ತು ಜೀವನ ಶೈಲಿಗಳನ್ನು ವರ್ಣಿಸಿರುತ್ತಾರೆ.


ಆದಾನಕಾಲ ಅಂದರೆ ಉತ್ತರಾಯಣದಲ್ಲಿ ಮುಖ್ಯವಾಗಿ ಗ್ರೀಷ್ಮ ಋತುವಿನಲ್ಲಿ ‘ಸ್ವಾದು’ ಅಂದರೆ ಸಿಹಿ ಪದಾರ್ಥಗಳು, ‘ಶೀತ’ ಅರ್ಥಾತ್ ತಣ್ಣಗಿನ, ‘ದ್ರವ’ ಎಂದರೆ ಜಲ ಅಂಶಯುಕ್ತ ಮತ್ತು ‘ಸ್ನಿಗ್ಧ’ ಅಂದರೆ ತೇವಯುಕ್ತ ಆಹಾರ ಮತ್ತು ಪಾನೀಯಗಳನ್ನು ಸೇವಿಸುವುದು ಹಿತವೆನ್ನಲಾಗಿದೆ.  

ಆಚಾರ್ಯ ವಾಗ್ಭಟರು ಉಲ್ಲೇಖಿಸಿದಂತೆ ತೆಳುವಾದ ಮಾಂಸ ರಸ (ಸೂಪ್), ರಸಾಲಾ (ಲಸ್ಸಿ) ಗಳಂತಹ ಆಹಾರ ತಯಾರಿಗಳ ಬಳಕೆ ಅತ್ಯುತ್ತಮ. 


1. ರಸಾಲಾ: ಕಾಳು ಮೆಣಸು, ಸಕ್ಕರೆ ಹಾಕಿ ಮಥಿಸಿದ ಮೊಸರು. 


2. ಪಂಚಸಾರ ಪಾನಕ: 

ದ್ರಾಕ್ಷಾ, ಮಧೂಕ (ಹಿಪ್ಪೆ), ಖರ್ಜೂರ, ಕಾಶ್ಮರ್ಯ (ಶಿವನಿ), ಪರೂಷಕ (ಫಾಲ್ಸಾ) ಹಣ್ಣುಗಳನ್ನು ಸಮವಾದ ಪ್ರಮಾಣದಲ್ಲಿ ತೆಗೆದುಕೊಂಡು ಬೇಕಾದ ಪ್ರಮಾಣದಲ್ಲಿ ನೀರನ್ನು ಹಾಕಿ ಅದರ ರಸ ತೆಗೆದು, ಸೋಸಿಕೊಳ್ಳಬೇಕು. ನಂತರ ಪಚ್ಚೆ ಕರ್ಪೂರ ಬೆರೆಸಿ, ಮಣ್ಣಿನ ಪಾತ್ರೆಗಳನ್ನು ಬಳಸಿ ಕುಡಿಯುವುದರಿಂದ ಉರಿ ಮತ್ತು ಬಾಯಾರಿಕೆ ನಿವಾರಣೆಯಾಗುತ್ತದೆ.  


3. ನೀರಿಗೆ ಪಾಟಲಾ (ಪಡ್ರಮೊರ) ದಂತಹ ಸುಗಂಧಿ ದ್ರವ್ಯಗಳನ್ನು ಹಾಕಿ ಕುದಿಸಿ ತಣ್ಣಗಾದ ಮೇಲೆ ಕರ್ಪೂರವನ್ನು ಬೆರೆಸಿ ಕುಡಿಯುವಂತದ್ದು.


4. ರಾಗಷಾಡವ:

ದಾಳಿಂಬೆ, ಪುನರ್ಪುಳಿಯಂತಹ ಹುಳಿಯಾದ ಹಣ್ಣಿನ ರಸದೊಂದಿಗೆ, ಬೆಲ್ಲ, ದಾಲ್ಚಿನ್ನಿ (ಚೆಕ್ಕೆ), ತೇಜಪತ್ರೆ (ಪಲಾವ್ ಎಲೆ), ಏಲಕ್ಕಿ ಮತ್ತು ಕಾಳುಮೆಣಸಿನ ಪುಡಿಗಳನ್ನು ಬೆರೆಸಿ ತಯಾರಿಸಿದ ಪಾನಕ. 



ಶೇಖರಿಸುವ ಕ್ರಮ:

ಈ ರೀತಿ ತಯಾರಿಸಿದ ಪಾನೀಯಗಳಿಗೆ ತುಂಡರಿಸಿದ ಬಾಳೆ ಎಲೆ ಅಥವಾ ಹಲಸಿನ ಎಲೆಗಳನ್ನು ಹಾಕಿ, ದಾಳಿಂಬೆಯಂತಹ ಹುಳಿ ಹಣ್ಣುಗಳನ್ನು ಅಥವಾ ಅವುಗಳ ರಸವನ್ನು ಸೇರಿಸಿ, ಮಣ್ಣಿನ ಪಾತ್ರೆ ಅಥವಾ ಹೊಸತಾದ ಪಾತ್ರೆಯಲ್ಲಿ ಶೇಖರಿಸಿಟ್ಟು, ಕುಡಿಯುವಾಗಲೂ ಮಣ್ಣಿನ ಪಾತ್ರೆಗಳನ್ನು ಬಳಸುವಂತದ್ದು ಕ್ರಮ. ಇಲ್ಲಿ ಎಲೆಗಳು ಮತ್ತು ಮಣ್ಣಿನ ಪಾತ್ರೆಗಳು ತಂಪನ್ನು ಖಾದಿರಿಸುವಲ್ಲಿ ಮುಖ್ಯ ಪಾತ್ರವಹಿಸಿದರೆ, ದಾಳಿಂಬೆಯಂತಹ ಹುಳಿ ಹಣ್ಣುಗಳು ಜೀರ್ಣ ಕ್ರಿಯೆಗೆ ನೆರವಾಗುತ್ತದೆ. 


ಅಂತೆಯೇ, ಆಹಾರದಲ್ಲಿ ಅತಿಯಾದ ಉಪ್ಪು, ಖಾರ ಮತ್ತು ಹುಳಿ ಪ್ರಯೋಗ, ಹೆಚ್ಚಿನದಾದ ವ್ಯಾಯಾಮ ಹಾಗೂ ಸೂರ್ಯ ಕಿರಣಗಳ ಸೇವನೆ, ಬಲವನ್ನು ಕಡಿಮೆ ಮಾಡುವುದರಿಂದ ಬೇಸಿಗೆಯಲ್ಲಿ ನಿಷೇಧಿಸಲಾಗಿದೆ.


“ಹಾಲು-ಹಣ್ಣು ಜೋಡಿ: ರುಚಿ ಚೆನ್ನಾ… ಪರಿಣಾಮ ಹೇಗೆ?”

ಮನುಷ್ಯ ಎಷ್ಟೇ ಬುದ್ಧಿಶಾಲಿಯಾಗಿದ್ದರೂ, ವಿವೇಚನಾ ಶಕ್ತಿಯುಳ್ಳವನಾಗಿದ್ದರೂ, ತನ್ನ ಆರೋಗ್ಯದ ವಿಷಯದಲ್ಲಿ ಎಡವಿಬಿಡುತ್ತಾನೆ. ಸೂರ್ಯದೇವನ ಆ ತೀಕ್ಷ್ಣ ಕಿರಣಗಳಿಗೆ ಮೈಯ್ಯೊಡ್ಡಿ ತಕ್ಷಣ ತಂಪಿನ ಮೊರೆ ಹೋಗುವುದು ಎಷ್ಟು ಸರಿ. ಚರಕ ಸಂಹಿತೆಯಲ್ಲಿಯೇ ಹೇಳಿರುವಂತೆ, ಹೀಗೆ ಮಾಡುವುದರಿಂದ ಕುಷ್ಠ ಅಂದರೆ ಚರ್ಮ ರೋಗ ಗಳಂತಹ ವ್ಯಾಧಿಗಳಿಗೆ ಅದೊಂದು ಕಾರಣವಾಗಿಬಿಡುತ್ತದೆ. ಆ‌ ತಂಪು ಪಾನೀಯಗಳನ್ನು ತಯಾರು ಮಾಡುವಲ್ಲಿ ಬಳಕೆ ಆದ ದ್ರವ್ಯಗಳ ಸಂಯೋಗದ ಬಗ್ಗೆ ಒಂದು ಸಾರಿ ನಿದಾನಿಸಿ ಕಾಣಬೇಕಾದದ್ದೇ. ಇಲ್ಲಿ ಸಂಯೋಗ ಎಂದರೆ, ಆಹಾರ ದ್ರವ್ಯಗಳ ಮಿಲನ ಘನ ಯಾ ದ್ರವ, ಕೆಲವೊಂದು ಆಹಾರ ದ್ರವ್ಯಗಳನ್ನು ಜೊತೆಯಾಗಿ ಸೇವಿಸುವಲ್ಲಿ ಯಾ ಸಂಸ್ಕಾರಕ್ಕೊಳಪಡಿಸುವಲ್ಲಿ ನಿಬಂಧನೆಗಳಿವೆ. ಇದನ್ನೇ ನಮ್ಮ ಆಯುರ್ವೇದ ಪದ್ಧತಿಯಲ್ಲಿ ಸಂಯೋಗ ವಿರುದ್ಧ ಎಂಬ ವಿಷಯದ ಅಡಿಯಲ್ಲಿ ತಿಳಿಸಲಾಗಿದೆ. ದೇಹದಲ್ಲಿ ದೋಷವನ್ನು ಕೆರಳಿಸಿ (ಉತ್ಕ್ಲೇಶಗೊಳಿಸಿ) ಅದನ್ನು ಹೊರಗೆ ಹಾಕಲು ಅಸಮರ್ಥವಾಗುವಂತಹ ಯಾವುದೇ ಆಹಾರ, ಪಾನೀಯ ಅಥವಾ ನಾವು ಮಾಡುವ ಚಟುವಟಿಕೆಗಳು ವಿರುದ್ಧ ಎಂದೆನಿಸಿಕೊಳ್ಳುತ್ತದೆ. ಚರಕ ಆಚಾರ್ಯರು ವಿರುದ್ಧವನ್ನು ಹದಿನೆಂಟು ವಿಧವಾಗಿ ವಿಂಗಡಿಸುತ್ತಾರೆ. ಅದರಲ್ಲಿ ಒಂದು ಈ ಸಂಯೋಗ ವಿರುದ್ಧ.


ಸುಶ್ರುತ ಆಚಾರ್ಯರು ಅವರ ಸುಶ್ರುತ ಸಂಹಿತೆಯಲ್ಲಿ, ಅಮ್ಲ ಫಲ ಮತ್ತು ಹಾಲಿನ ಮಿಶ್ರಣವನ್ನು ವಿರೋಧಿಸುತ್ತಾರೆ. ವಾಗ್ಭಟ ಆಚಾರ್ಯರು ಅವರ ಅಷ್ಟಾಂಗ ಸಂಗ್ರಹ ಮತ್ತು ಅಷ್ಟಾಂಗ ಹೃದಯ ಪುಸ್ತಕದ, ವಿರುದ್ಧಾನ್ನವಿಜ್ಞಾನ ಎಂಬ ಅಧ್ಯಾಯದಲ್ಲಿ ಹಾಲಿನ ಜೊತೆ ಹಣ್ಣುಗಳ ಸೇವನೆ ಹಾಗೂ ಫಲ ಸೇವನಾ ನಂತರ ಹಾಲು ಸೇವಿಸುವುದನ್ನು ವಿರುದ್ಧ ಎನ್ನುತ್ತಾರೆ.


ಬೇಸಿಗೆ ಬಂದ ತಕ್ಷಣ ಅಂಗಡಿಗಳಲ್ಲಿ ತರ ತರಹದ ಪಾನೀಯಗಳು ಕಾಣಸಿಗುತ್ತವೆ. ಅವುಗಳಲ್ಲಿ ಒಂದಾದ 'ಮಿಲ್ಕ್ ಶೇಕ್' ಎಂಬುದು  ಮೇಲೆ ಹೇಳಿದ ವಿರುದ್ಧದ ಅಡಿಯಲ್ಲಿ ಬರುವುದು ಖೇದನೀಯ. ಯಾವ ಅಂಗಡಿಗೇ ಹೋದರೂ ತಂಪು ಪಾನೀಯಗಳ ಪಟ್ಟಿಯಲ್ಲಿ ಮೇಲುಗೈ ಇದರದ್ದೇ. ಕಾಲ ಯಾವುದೇ ಆಗಿರಲಿ, ಅಂಗಡಿಗಳಲ್ಲಿ ಕಾಣಸಿಗುವ ಪಾನೀಯಗಳಿಗೇ ಬಹುತೇಕ ಮೊರೆ ಹೋಗುವುದು ನೋಡಬಹುದು.


ಇಂತಹ ಪಾನೀಯಗಳು ಕುಡಿಯುವಾಗ ನೀಡುವ ತಂಪು ಅನುಭವಕ್ಕಿಂತ ಮುಂದೆ ನೀಡುವ ದುಷ್ಪರಿಣಾಮಗಳೇ ಹೆಚ್ಚು. ಎಳನೀರಿನಿಂದ ಹಿಡಿದು ಮಾವಿನಹಣ್ಣು, ದಾಳಿಂಬೆ, ಮುಂತಾದ ಹಣ್ಣುಗಳ ಪಾನೀಯ ತಯಾರಿಸುವಾಗ ಹಾಲನ್ನು ಹಾಕುವುದರ ಮೂಲಕ ಅವು ವಿರುದ್ಧವಾಗಿ ಪರಿಣಮಿಸುತ್ತವೆ. ಇದನ್ನು ಅರಿತೋ ಅರಿಯದೆಯೋ ಬಹುವಾಗಿ ಸೇವಿಸುವುದರಿಂದ ಮುಂದೆ ಆರೋಗ್ಯದ ಮೇಲೆ ಪರಿಣಾಮ ಕೆಟ್ಟದಾಗಿರಬಹುದು ಎಂಬುದು ನಿಜ.


ಆಯುರ್ವೇದ ಸಂಹಿತೆಗಳಲ್ಲಿ ಒಂದಾದ ಚರಕ ಸಂಹಿತೆಯಲ್ಲಿ ಆಚಾರ್ಯರು ಅಂತಹ ಆರೋಗ್ಯದ ಮೇಲಾಗುವ ಕೆಟ್ಟ ಪರಿಣಾಮಗಳನ್ನು ಒಂದೊಂದಾಗೇ ಪಟ್ಟಿ ಮಾಡಿದ್ದಾರೆ. ಷಾಂಢ್ಯ (ನಪುಂಸಕತ್ವ), ಆಂಧ್ಯ (ಕುರುಡುತನ), ವೀಸರ್ಪ (ಸರ್ಪಸುತ್ತು-ಚರ್ಮದ ತೀವ್ರ ರೋಗ), ಉದರ ರೋಗಗಳು, ವಿಸ್ಫೋಟ (ಪುಟ್ಟು), ಉನ್ಮಾದ (ಮಾನಸಿಕ ಅಸ್ವಸ್ಥತೆ), ಭಗಂದರ (ಫಿಸ್ಟುಲಾ), ಮೂರ್ಚ್ಛೆ (ಪ್ರಜ್ಞೆ ಕಳಕೊಳ್ಳುವುದು), ಮದ (ಮತ್ತತೆ), ಆಧ್ಮಾನ (ಹೊಟ್ಟೆ ಉಬ್ಬರಿಸುವುದು), ಗಲಗ್ರಹ (ಗಂಟಲು ಹಿಡಿದಿಡುವುದು), ಪಾಂಡು ರೋಗ (ವರ್ಣಹೀನತೆ), ಆಮವಿಷ (ವಿಷದಂತೆ ವರ್ತಿಸುವ ಅಪಕ್ವ ಆಹಾರ), ಅಷ್ಟು ಮಾತ್ರವಲ್ಲದೇ, ಕಿಲಾಸ (ಚರ್ಮದ ಬಿಳಿಕಲೆ), ಕುಷ್ಠ (ಚರ್ಮರೋಗಗಳು), ಗ್ರಹಣೀ ದೋಷ (ಜೀರ್ಣಕ್ರಿಯೆಯ ಅಸ್ವಸ್ಥತೆ), ಶೋಥ (ಬಾವು), ಅಮ್ಲಪಿತ್ತ (ಹುಳಿ ತೇಗು, ಎದೆ ಉರಿಯಂತಹ ಲಕ್ಷಣಯುಕ್ತ ವ್ಯಾಧಿ), ಜ್ವರ, ಪೀನಸ (ಮೂಗು ಸೋರುವುದು), ಸಂತಾನದೋಷ (ವಂಶೋತ್ಪತ್ತಿಯ ದೋಷ) ಹಾಗೂ ಮರಣಕ್ಕೂ ವಿರುದ್ಧ ಕಾರಣವಾಗುವುದಾಗಿ ಹೇಳಿದ್ದಾರೆ.

ಈ ರೀತಿಯಾಗಿ ದೋಷಗಳಿಗೆ ಸಮವಾಗಿ ಮತ್ತು ಧಾತುಗಳಿಗೆ ವಿರುದ್ಧವಾಗಿ ಪರಿಣಮಿಸುವ ಆಹಾರಾದಿಗಳು ದೇಹದ ವಾಹಿನಿ (ಸ್ರೋತಸ್) ಗಳನ್ನು ಕೆಡಿಸಿ ಹಲವು ವ್ಯಾಧಿಗಳನ್ನು ಉಂಟುಮಾಡುವಲ್ಲಿ ಮುಖ್ಯ ಪಾತ್ರವಹಿಸುತ್ತವೆ.


ಈಗ ಕಾಣಸಿಗುವ ವಿರುದ್ಧಗಳನ್ನು ನೋಡುವುದಾದರೆ, ಬಾಳೆಹಣ್ಣು ಇತ್ಯಾದಿ ಹಣ್ಣುಗಳ ಮಿಲ್ಕ್ ಶೇಕ್, ಪ್ರೊಟೀನ್ ಸ್ಮೂಥೀ ಎಂದು ಕರೆಸಿಕೊಳ್ಳುವ ತರತರಹದ ಹಾಲು-ಹಣ್ಣು ಮಿಶ್ರಿತ ಸ್ಮೂಥೀಗಳು, ಮ್ಯಾಂಗೋ ಮಸ್ತಾನಿ, ಹಾಲು ಮಿಶ್ರಿತ ಫ್ರುಟ್ ಸಲಾಡ್, ಹಾಲು ಮಿಶ್ರಿತ ಬಾಳೆಹಣ್ಣು ಹಾಗೂ ಮಾವಿನಹಣ್ಣು ರಸಾಯನ ಹೀಗೆ ಹಲವು.


- ಡಾ. ಶ್ರೀಕಲಾ

ಸ್ನಾತಕೋತ್ತರ ವಿದ್ಯಾರ್ಥಿನಿ

ಎಸ್.ಡಿ.ಎಂ. ಆಯುರ್ವೇದ ಕಾಲೇಜು, ಕುತ್ಪಾಡಿ, ಉಡುಪಿ 


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top