ಹನುಮಾನ್ ಚಾಲೀಸಾ ರಚನೆ ಹಿನ್ನೆಲೆ:
ಗೋಸ್ವಾಮಿ ತುಳಸಿದಾಸರು ಭಕ್ತ ಕವಿಗಳು. ರಾಮಭಕ್ತ ಕವಿಗಳ ಸಾಲಿನಲ್ಲಿ ಭಕ್ತಿಪಂಥದಲ್ಲಿ ಸ್ಮರಣೀಯ ಹಾಗೂ ಪೂಜನೀಯ ಕವಿ ತುಳಸಿದಾಸರಾಗಿದ್ದಾರೆ. ತುಳಸಿದಾಸರ ಅತ್ಯಂತ ಪ್ರಸಿದ್ದ ಎರಡು ರಚನೆಗಳಲ್ಲಿ ಮಹಾಕಾವ್ಯ ರಾಮಚರಿತ ಮಾನಸ ಮತ್ತೊಂದು ಹನುಮಾನ್ ಚಾಲಿಸಾ ಆಗಿರುತ್ತದೆ. ಹನುಮಾನ್ ಚಾಲಿಸಾ ರಚನೆಯ ಕಥೆಯು ಸ್ವಾರಸ್ಯಕರವಾಗಿದೆ. ಒಮ್ಮೆ ಅಕ್ಬರ್ ಬಾದಷಾ ತುಳಸಿ ದಾಸರನ್ನು ಬಂದಿ ಮಾಡಿ ಬಂದಿ ಖಾನೆಯಲ್ಲಿರಿಸುತ್ತಾನೆ. 40 ದಿನಗಳ ಕಾಲ ಬಂಧನದಲ್ಲಿರಿಸಿರುತ್ತಾನೆ. ತುಲಸಿದಾಸರು 40 ದಿನ ದಿನಕ್ಕೊಂದು ಚೌಪಾಯಿ ರಚನೆ ಮಾಡುತ್ತಾರೆ. ಆಗ ಬಹಳಷ್ಟು ಕೋತಿಗಳು ಒಟ್ಟಿಗೆ ಬಂದು ಬಂದಿಖಾನೆಯ ಸುತ್ತಮುತ್ತಲೂ ಉತ್ಪಾತ ಮಾಡಲು ಆರಂಭಿಸುತ್ತವೆ. ಆಗ ಅಕ್ಬರನು ಅನಿವಾರ್ಯವಾಗಿ ತುಳಸಿದಾಸರನ್ನು ಬಂಧ ಮುಕ್ತರನ್ನಾಗಿ ಮಾಡಬೇಕಾಯಿತು ಎಂದು ಹೇಳಲಾಗುತ್ತದೆ. ಹೀಗಾಗಿ ಹನುಮಾನ್ ಚಾಲಿಸಾ ರಚನೆಯನ್ನು ಫತೇಹಪುರ್ ಸಿಕ್ರಿಯ ಬಂದೀಖಾನೆಯಲ್ಲಿ ಮಾಡಲಾಗಿದೆ ಎಂದು ಹೇಳುತ್ತಾರೆ. ಹನುಮಾನ ಚಾಲಿಸಾದಲ್ಲಿ 40 ಚೌಪಾಯಿಗಳು ಮತ್ತು ಎರಡು ದೋಹೆಗಳು ಇವೆ.
ಹನುಮಾನ್ ಚಾಲಿಸಾದ ಅರ್ಥ ಈ ರೀತಿಯಾಗಿದೆ:
ಗುರುಗಳ ಚರಣದ ಧೂಳಿನಿಂದ ನನ್ನ ಮನದ ಕನ್ನಡಿಯನ್ನು ಸ್ವಚ್ಛಗೊಳಿಸಿ ಧರ್ಮಾರ್ಥ ಕಾಮ ಮತ್ತು ಮೋಕ್ಷಗಳೆಂಬ ಫಲಗಳನ್ನು ನೀಡುವ ರಘುಕುಲ ತಿಲಕನಾದ ಶ್ರೀರಾಮನ ನಿರ್ಮಲ ಕೀರ್ತಿಯನ್ನು ಹೇಳುತ್ತೇನೆ. ನನ್ನನ್ನು ನಾನು ಮೂರ್ಖನೆಂದು ಭಾವಿಸಿ ಬುದ್ಧಿ, ಬಲ ಮಯತ್ತು ವಿದ್ಯೆಯ ಪ್ರತೀಕನಾದ ಹನುಮಂತನೇ ನನ್ನ ಸಕಲ ಕಷ್ಟಗಳನ್ನು ದೂರ ಮಾಡಿ ಮನೋವಿಕಾರಗಳನ್ನು ದೂರ ಮಾಡು. ಜ್ಞಾನಗುಣಗಳ ಸಾಗರನಾದ ಹನುಮಂತನೇ ನಿನಗೆ ಜಯವಾಗಲಿ ಮೂರುಲೋಕದಲ್ಲಿ ಪ್ರಖ್ಯಾತನಾಗಿರುವ ನಿನ್ನ ಕೀರ್ತಿ ಹೆಚ್ಚಲಿ. ರಾಮನ ದೂತನಾದ ನೀನು ನಿನಗೆ ಸಮನಾದ ಬಲಶಾಲಿಗಳು ಯಾರೂ ಇಲ್ಲ ಮಾತೆ ಅಂಜನಾಳ ಪುತ್ರ ನಿನಗೆ ಪವನ ಸುತ ಎಂಬ ಹೆಸರಿಸಿನಿಂದಲೇ ಪೂಜಿಸುವರು. ಮಹಾವೀರನೂ ಪರಾಕ್ರಮಿಯೂ ಆದ ನಿನ್ನ ದೇಹವು ವಜ್ರದಂತೆ ಕಠೋರವಾಗಿದೆ ನೀನು ಮನುಜರಲ್ಲಿ ಕೆಟ್ಟ ಬುದ್ದಿಯನ್ನು ತೊಲಗಿಸಿ ಸುಜ್ಞಾನವನ್ನು ಕೊಡುವವನು. ಹೊನ್ನಿನ ಮೈಬಣ್ಣ ಮತ್ತು ಸುಂದರ ಉಡುಪೊಗೊಳೊಂದಿಗೆ ಶೋಭಿಸುವ ನಿನ್ನ ಕಿವಿಗಳಲ್ಲಿ ಕರ್ಣಕುಂಡಲಗಳು ಹೊಳೆಯುತ್ತಿವೆ. ಗುಂಗುರುಗೂದಲಿನಿಂದ ನಿನ್ನ ತೇಜಸ್ಸು ಎಲ್ಲೆಡೆ ಹರಡಿದೆ. ವಜ್ರಾಯುಧದಿಂದ ಮತ್ತು ಧ್ವಜಗಳಿಂದ ನೀನು ಕಂಗೊಳಿಸುತ್ತಿರುವ ಹೆಗಲ ಮೇಲೆ ಮೂಂಜ ಎಂಬ ಹುಲ್ಲಿನಿಂದ ತಯಾರಿಸಿದ ಜನಿವಾರವನ್ನು ಧರಿಸಿದ್ದೀಯೆ. ರುದ್ರಾಂಶನು ಆಗಿರುವ ನೀನು ಕೇಸರಿಯ ಮಗನಾಗಿರುವಿ ನಿನ್ನ ತೇಜಸ್ಸು ಮತ್ತು ಪರಾಕ್ರಮದಿಂದ ಜಗತ್ತಿನ್ಲಲಿಯೇ ವಂದ್ಯನಾಗಿರುವಿ. ನೀನು ಬಹಳ ಬುದ್ಧಿವಂತ ಮತ್ತು ಚತುರನಾಗಿದ್ದು ರಾಮನ ಕಾರ್ಯವನ್ನು ಮಾಡಲು ಸದಾ ತತ್ಪರನಾಗಿರುವೀ, ಶ್ರೀರಾಮನ ಚರಿತೆಯನ್ನು ಕೇಳುವುದು ನಿನಗೆ ಪರಮಾನಂದ ನಿನ್ನ ಹೃದಯದಲ್ಲಿ ಶ್ರೀರಾಮ ಲಕ್ಷಣ ಮತ್ತು ಜಾನಕೀ ಮಾತೆ ವಾಸವಾಗಿದ್ದಾರೆ.
ಸೀತಾಮಾತೆಗೆ ಸೂಕ್ಷ್ಮ ರೂಪದಲ್ಲಿ ಮತ್ತು ಲಂಕೆಯ ರಾಕ್ಷಸರಿಗೆ ನಿನ್ನ ಭೀಕರ ರೂಪವನ್ನು ತೋರಿಸಿದವನು. ಬೃಹತ್ ರೂಪವನ್ನು ತಾಳಿ ರಾಕ್ಷಸರ ಸಂಹಾರ ಮಾಡುವುದರ ಮೂಲಕ ರಾಮನ ಕಾರ್ಯವನ್ನು ಯಶಸ್ವಿಯಾಗಿ ಮಾಡಿದವನು. ಸಂಜೀವಿನಿ ಪರ್ವತ ತರುವುದರ ಮೂಲಕ ಲಕ್ಷ್ಮಣನ ಪ್ರಾಣವನ್ನು ಕಾಪಾಡಿದ ನೀನು ಶ್ರೀರಾಮನ ಪ್ರೀತಿಯ ಆಲಿಂಗನಕ್ಕೆ ಪಾತ್ರನಾದವನು. ಶ್ರೀರಾಮಚಂದ್ರನ ಪ್ರೀತಿ ವಿಶ್ವಾಸಗಳಿಗೆ ಪಾತ್ರನಾಗಿರುವ ನಿನ್ನನ್ನು ರಾಮಚಂದ್ರನು ಭರತನಂತೆಯೇ ನೀನು ನನ್ನ ಸಹೋದರ ಎನ್ನುತ್ತಾರೆ. ಸಾವಿರ ಮುಖವುಳ್ಳ ಆದಿ ಶೇಷನು ನಿನ್ನ ಕೀರ್ತಿಯನ್ನು ಕೊಂಡಾಡುತ್ತಾನೆ. ಶ್ರೀರಾಮನು ನಿನ್ನನ್ನು ಹೃದಯಲ್ಲಿರಿಸಿಕೊಂಡಿದ್ದಾನೆ. ದೇವಾದಿ ದೇವತೆಗಳು ಸನಕಾದಿ ಋಷಿಗಳೂ ವರ್ಣಿಸಲಾರದಷ್ಟು ಅಪಾರ ಮಹಿಮೆಯನ್ನು ಹೊಂದಿರುವವನು ನೀನು. ದಿಕ್ಪಾಲರು ಕುಬೇರ ಯಮಧರ್ಮರು ನಿನ್ನನ್ನು ವರ್ಣಿಸಲು ಸಾಧ್ಯವಿರದೇ ಹೋದಾಗ ಕವಿಗಳು ಪಂಡಿತರು ಸಾಮಾನ್ಯ ಜನರು ನಿನ್ನ ಮಹಿಮೆಯನ್ನು ವರ್ಣಿಸಲು ಸಾಧ್ಯವೇ? ಸುಗ್ರೀವನಿಗೆ ರಾಮನ ಅನುಗ್ರಹ ದೊರೆಯುವಂತೆ ಮಾಡಿ ರಾಜ ಪದವಿಯು ಪುನಃ ದೊರೆಯುವಂತೆ ಮಾಡಿದವನು ನೀನೆ, ವಿಭೀಷಣನು ನಿನ್ನ ಉಪದೇಶ ಪಾಲಿಸದ್ದಕ್ಕಾಗಿಯೇ ಲಂಕೆಯ ರಾಜನಾದನು. ಸಾವಿರ ಯೋಜನ ದೂರದಲ್ಲಿದ್ದ ಸೂರ್ಯನನ್ನು ಹಣ್ಣೆಂದು ಭಾವಿಸಿ ನುಂಗಲು ಹಾರಿದ ಬಹು ಪರಾಕ್ರಮೀ ನೀನು. ನೂರು ಯೋಜನ ಸಾಗರವನ್ನು ಹಾರಿ ಸೀತೆ ಮುದ್ರೆಯನ್ನಿತ್ತು ಬಂದ ಶಕ್ತಿ ಸಾಮರ್ಥ್ಯದ ಧನಿ ನೀನು.
ಜಗತ್ತಿನಲ್ಲಿ ಎಂತಹದ್ದೇ ದುರ್ಗಮವೆನಿಸುವ ಕಾರ್ಯವಿದ್ದರೂ ನಿನ್ನ ಅನುಗ್ರಹವೊಂದಿದ್ದಾಗ ಎಲ್ಲವೂ ಸುಗಮವಾಗುತ್ತದೆ. ರಾಮನ ಬಾಗಿಲನ್ನು ಕಾಯುವ ರಕ್ಷಕನಾದ ನಿನನ ಅನುಮತಿ ಅನುಗ್ರಹವಿಲ್ಲದೇ ರಾಮನನ್ನು ಪಡೆಯಲು ಸಾಧ್ಯವಿಲ್ಲ.ನಿನ್ನ ಶರಣಾರ್ಥಿಯಾಗುವವನಿಗೆ ಯಾವುದೇ ಕಷ್ಟಗಳು ಬರುವುದಿಲ್ಲ ಆದ್ದರಿಂದ ನಿನ್ನ ಭಕ್ತರಿಗೆ ಹೆದರುವ ಅವಶ್ಯಕತೆ ಇಲ್ಲ. ನಿನ್ನ ತೇಜಸ್ಸಿನ ಬಲ ಬೇರೆ ಯಾರಿಗೂ ನಿಯಂತ್ರಿಸಲು ಆಗುವುದಿಲ್ಲ ನಿನ್ ಸಿಂಹಗರ್ಜನೆಗೆ ಮೂರು ಲೋಕಗಳೂ ನಡುಗುತ್ತವೆ. ನಿನ್ನ ನಾಮ ಸ್ಮರಣೆಯ ಮಾತ್ರದಿಂದಲೇ ಭೂತ ಪ್ರೇತ ಪಿಶಾಚಗಳು ದುಷ್ಟಶಕ್ತಿಗಳು ಹತ್ತಿರ ಕೂಡ ಸುಳಿಯುವುದಿಲ್ಲ. ಹನುಮನ ಸ್ಮರಣೆಯಾಗುವವರಿಗೆ ಸಮಸ್ತರೋಗಳಿಂದ ಮುಕ್ತಿ ಮತ್ತು ನೋವುಗಳು ನಿವಾರಣೆಯಾಗುತ್ತದೆ. ಶ್ರದ್ಧಾ ಭಕ್ತಿಯಿಂದ ಹನುಮನ ಧ್ಯಾನವನ್ನು ಮಾಡಿದವರನ್ನು ಸಕಲ ಸಂಕಷ್ಟಗಳಿಂದ ಪಾರು ಮಾಡುತ್ತಾನೆ. ತಪಸ್ವಿಗಳ ರಾಜನಾದ ರಾಮಚಂದ್ರನ ಕಠಿಣಚಾದ ಕೆಲಸಗಳನ್ನು ಸುಲಭವಾಗಿ ಮಾಡಿಕೊಟ್ಟಿರುವೀ ಭಕ್ತರ ಮನೋರಥಗಳನ್ನು ಬೇಡಿಕೊಂಡಾಗ ಅವರಿಗೆ ಅಪಾರವಾದ ಫಲಗಳನ್ನು ನೀಡಿ ಅನುಗ್ರಹಿಸುವೀ ನಾಲ್ಕುಯುಗಳಲ್ಲಿ ನಿನ್ನ ಪ್ರತಾಪವು ಹರಡಿದೆ. ನಿನ್ನ ಕೀರ್ತಿ ಜಗತ್ತಿನಲ್ಲಿ ಪ್ರಕಾಶಮಾನವಾಗಿದೆ. ಸಾಧು ಸಂತರನ್ನು ರಕ್ಚಿಸಿ, ರಾಕ್ಷಸರನ್ನು ಶಿಕ್ಷಿಸಿ ಶ್ರೀರಾಮನಿಗೆ ಪ್ರೀತಿಪಾತ್ರನಾಗಿರುವಿ. ಎಂಟು ಸಿದ್ಧಿಗಳನ್ನು ಒಂಭತ್ತು ನಿಧಿಗಳನ್ನು ನೀಡಬಲ್ಲ ಶಕ್ತಿವಂತ ಈ ಮಹಾನ್ ವರವನ್ನು ಸೀತಾಮಾತೆಯು ನಿನಗೆ ಅನುಗ್ರಹಿಸಿದ್ದಾಳೇ. ರಾಮನಾಮವೆಂಬ ರಸಾಯನ ನಿನ್ನ ಬಳಿಯಲ್ಲಿದೆ ನ್ನು ಶ್ರೀರಾಮನ ಪರಮ ಭಕ್ತನಾಗಿ ದಾಸನಾಗಿ ನೆಲೆಸಿರುವಿ. ನಿನ್ನ ಭಕ್ತಿರಿಗೆ ರಾಮನ ಕೃಪೆಯು ಲಭಿಸುತ್ತದೆ, ಜನ್ಮಜ್ನಾಂತರದ ದುಃಖಗಳು ನಾಶವಾಗುತ್ತವೆ. ಮೃತ್ಯುವಿನ ಸಮೀಪ ಇರುವ ನಿನನ ಭಕ್ತರು ಶ್ರೀರಾಮನ ಪಾದವನ್ನು ಸೇರಿ ಹರಿಭಕ್ತರೆಂಬ ಶಾಶ್ವತ ನೆಲೆಯನ್ನು ಪಡೆಯುತ್ತಾರೆ. ಬೇರಾವ ದೇವ mತೆಗಳನ್ನು ಮನದಲ್ಲಿ ನೆನೆಯದಿದ್ದರೂ ಸದಾಕಾಲ ಹನುಮಂತನ ಸೇವಿಸುವ ಭಕ್ತರು ಸಕಲ ಸುಖವನ್ನು ಪಡೆಯುತ್ತಾರೆ. ಹನುಮನ ಸ್ಮರಣೆಯನ್ನು ಮಾಡಿದರೆ ಎಲ್ಲ ಕಷ್ಟಗಳು ನಾಶವಾಗಿ ದೈಹಿಕ ಮತ್ತು ಮಾನಸಿಕ ಪೀಡೆಯ ಪರಿಹಾರವಾಗುತ್ತವೆ. ಹನುಮಂತನೆಂಬ ಗುರುವಿಗೆ ಜಯವಾಗಲಿ ಈ ಸದ್ಗುರುವಿನ ಅನುಗ್ರಹ ಸದಾ ನಮ್ಮ ಮೇಲಿರಲಿ. ಯಾರು ಈ ಹನುಮಾನ ಚಾಲಿಸಾವನ್ನು ನೂರು ಬಾರಿ ಪಠಿಸುವರೋ ಅವರಿಗೆ ಮೋಕ್ಷವೆಂಬ ಮಹಾಸುಖವು ಸಿಕ್ಕೇ ಸಿಗುತ್ತದೆ. ಯಾರೆಲ್ಲ ಈ ಹನುಮಾನ ಚಾಲಿಸಾ ಪಠಿಸುವರೋ ಅವರ ಕಾಋಯಗಳೆಲ್ಲವೂ ಸಿದ್ಧಿಸುತ್ತದೆ ಎಂಬುದಕ್ಕೆ ಪಾರ್ವತಿಪತೀಯೇ ಸಾಕ್ಷಿ ತುಲಸೀದಾಸನಾದ ನಾನು ಶ್ರೀರಾಮನ ಭಕ್ತನಾಗಿದ್ದೇನೆ, ಹನುಮಂತನೇ ನೀನು ನ್ನನ ಹೃದಯದಲ್ಲಿ ಸದಾ ನೆಲೆಸು. ಸಂಕಷ್ಟಗಳನ್ನು ಪರಿಸಹರಿಸುವ ಪವನಪುತ್ರನೇ, ಮಂಗಳಕರವಾದ ರೂಪ ಹೊಂದಿರುವವನೇ, ದೇವತೆಗಳಿಗೆ ಅಧಿಪತಿಯಾದವನೇ ಶ್ರೀರಾಮ ಲಕ್ಷ್ಮಣ ಮತ್ತು ಸೀತಾದೇವಿಯೊಂದಿಗೆ ಸದಾ ನನ್ನ ಹೃದಯದಲ್ಲಿ ನೆಲೆಸಿರು ಎಂದು ತುಲಸಿದಾಸರು ಪ್ರಾರ್ಥಿಸಿದ್ದಾರೆ.
ಚಾಲೀಸಾ ಪಠಣದ ಫಲ:
ಈ ಹನುಮಾನ ಚಾಲಿಸಾ ಪಠಿಸುವುದರಿಂದ ಮಾನಸಿಕ ಶಾಂತಿ, ಆತ್ಮ ವಿಶ್ವಾಸದ ವೃದ್ಧಿ, ನಮ್ಮ ಸುತ್ತಲಿರುವ ನಕಾರಾತ್ಮಕ ಶಕ್ತಿಗಳಿಂದ ಪರಿಹಾರ ದೊರೆಯುತ್ತದೆ. ಮನಸ್ಸಿನಲ್ಲಿ ಆಗುವ ಭಯ ಉದ್ವೇಗ ಮತ್ತು ಚಿಂತೆಗಳನ್ನು ದೂರ ಮಾಡಿ ದೈಹಿಕ ಆರೋಗ್ಯದಲ್ಲಿ ಚೈತನ್ಯ ಹನುಂತನ ಕೃಪೆಯಿಂದ ದೊರೆಯುತ್ತದೆ. ವಿದ್ಯಾರ್ಥಿಗಳಲ್ಲಿ ಏಕಾಗ್ರತೆಯನ್ನು ಮತ್ತು ಎಲ್ಲರಲ್ಲೂ ಮನೋಬಲವನ್ನು ತುಂಬುವ ಸಾಮರ್ಥ್ಯವುಳ್ಳ ಮಂತ್ರವಾಗಿದೆ, ಒಟ್ಟಾರೆ ಸಕಲ ಸಂಕಷ್ಟಗಳನ್ನು ಪರಿಹರಿಸಿ ಉತ್ತಮ ಜೀವನವನ್ನು ನೀಡುವಂತದ್ದಾಗಿದೆ.
- ಮಾಧುರಿ ದೇಶಪಾಂಡೆ, ಬೆಂಗಳೂರು
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


