ಉಡುಪಿ ಭೋಜನಶಾಲೆಯ ರೋಚಕ ಇತಿಹಾಸ ಬಲ್ಲಿರಾ..?

Upayuktha
0



ಪುಟ್ಟ ಮಗುವೊಂದು ಗುಹ್ಯ ರೋಗದಿಂದ ಬಳಲುತ್ತಿತ್ತು. ಆ ಮಗುವನ್ನು ಉಳಿಸಲು ಮಗುವಿನ ಮಾತೆಯು ನೂರು ಹರಕೆಗಳನ್ನು ಹೇಳಿಕೊಂಡಳು. ತನ್ನ ಬಳಿ ಇದ್ದ ಚೂರುಪಾರು ಹಣಗಳನ್ನು ವ್ಯಯ ಮಾಡಿ, ಬಗೆ ಬಗೆಯ ಔಷಧಿಗಳನ್ನು ಚಿಕಿತ್ಸೆಗಳನ್ನು ಕೊಡಿಸಿದಳು. ದಿನ ಕಳೆದಂತೆ ಮಗುವಿನ ಆರೋಗ್ಯ ಹದಗೆಡುತ್ತಾ ಹೋಯಿತು. ತೀರಾ ದುಃಖದಲ್ಲಿದ್ದ ಆಕೆ ಪ್ರತಿದಿನ ಉಡುಪಿ ಶ್ರೀ ಕೃಷ್ಣ ಮುಖ್ಯ ಪ್ರಾಣರಲ್ಲಿ ಮಗುವನ್ನು ಉಳಿಸಿ ಕೊಡುವಂತೆ ದೈನ್ಯಳಾಗಿ ಪ್ರಾರ್ಥಿಸುತ್ತಿದ್ದಳು. ಒಂದು ರಾತ್ರಿ ಆಕೆಗೆ ಕನಸಿನಲ್ಲಿ ಕೋತಿಯೊಂದು ಕಾಣಿಸಿಕೊಂಡಿತು. ದಷ್ಟ ಪುಷ್ಟವಾಗಿದ್ದ ಆ ಕೋತಿಯು ದೊಡ್ಡ ಕಠಾರವೊಂದರಿಂದ ನೈವೇದ್ಯ ಸ್ವೀಕರಿಸುತ್ತಿರುವ ದೃಶ್ಯವನ್ನು ಕಂಡಳು. ಮರು ದಿನ ಮುಂಜಾನೆ ಮನೆಯ ಹಿರಿಯರಲ್ಲಿ ಈ ಕನಸಿನ ಕುರಿತು ಪ್ರಸ್ತಾಪಿಸಿದಾಗ ಉಡುಪಿ ಶ್ರೀ ಮುಖ್ಯ ಪ್ರಾಣ ದೇವರ ಪ್ರಸಾದವನ್ನು "ಮಗುವಿಗೆ ತಿನಿಸು, ಏನಾದರೂ ಬದಲಾವಣೆ ಆದರೂ ಆದೀತು" ಎಂದು ಸೂಚಿಸಿದರು.


ತಕ್ಷಣ ಎಚ್ಚೆತ್ತುಕೊಂಡ ಆಕೆ ಆ ದಿನದಿಂದಲೇ ನಿತ್ಯ ಮಠಕ್ಕೆ ತೆರಳಿ, ದೇವರ ನೈವೇದ್ಯವನ್ನು ತಂದು, ಮಗುವಿಗೆ ನೀಡಲು ಆರಂಭಿಸಿದಳು. ಆಗಾಗ ಆರೋಗ್ಯ ವಿಷಮ ಸ್ಥಿತಿಗೆ ತಲುಪುತ್ತಿತ್ತು. ಆದರೆ ಮಗುವಿನ ತಾಯಿಯು ಒಂದಿಷ್ಟೂ ದೃತಿಗೆಡದೆ, ಸಂಪೂರ್ಣ ನಂಬಿಕೆಯಿಂದ ಎಡೆಬಿಡದೆ 47 ದಿನಗಳ ಕಾಲ (ಏಕಾದಶಿ ಹೊರತು) ಶ್ರೀ ದೇವರ ಅನ್ನ ಪ್ರಸಾದವನ್ನು ಮಗುವಿಗೆ ಉಣಿಸಿದಳು. ಇಷ್ಟಾದರೂ ಮಗು ಚಾಪೆಯಿಂದ ಕದಲುತ್ತಿರಲಿಲ್ಲ. ಮಾತನ್ನೂ ಆಡುತ್ತಿರಲಿಲ್ಲ. 48ನೇ ದಿನ ಆಕೆ ಮಗುವಿಗೆ ಅನ್ನ ಪ್ರಸಾದ ತರಲು ಮಠಕ್ಕೆ ಬಂದಿದ್ದಳು. ಆಕೆ ಎಂದಿನಂತೆ ಅನ್ನದ ಪಾತ್ರೆ ಹಿಡಿದುಕೊಂಡು ಬಂದು ಅಡುಗೆ ಶಾಲೆಯ ಪಕ್ಕದಲ್ಲಿ ಕಾದು, ಮಠದ ಸಿಬ್ಬಂದಿಗಳು ನೀಡಿದ ಅನ್ನ ಪ್ರಸಾದ ಸ್ವೀಕರಿಸಿದಳು. ದೊಡ್ಡ ದೊಡ್ಡ ಹೆಜ್ಜೆ ಹಾಕುತ್ತಾ ವೇಗವಾಗಿ ಮನೆಗೆ ಬಂದಳು.


ಆ ಸಂದರ್ಭದಲ್ಲಿ ಘಟನೆಯೊಂದು ನಡೆಯಿತು. ಇನ್ನೇನು ಮನೆಯ ಒಳಗೆ ಪ್ರವೇಶಿಸಿಬೇಕು ಅನ್ನುವಷ್ಟರಲ್ಲಿ ತನ್ನ ಮಗು ಗಟ್ಟಿಯಾಗಿ ನಗುವ ಸದ್ದು ಕೇಳುತ್ತಿತ್ತು. ಮಾತೆಯು ಹೆದರಿ ಕಕ್ಕಾಬಿಕ್ಕಿಯಾದಳು. ಭಯದಿಂದ ಮನೆಯ ಕೋಣೆಯ ಒಳಗೆ ಕಾಲಿಟ್ಟಳು. ಅಲ್ಲಿನ ದೃಶ್ಯ ನೋಡಿ ಮಾತೆಯು ದಂಗಾದಳು. ಕೋತಿಯೊಂದು ಮಗುವಿನ ಮುಂಭಾಗದಲ್ಲಿ ಕುಳಿತಿತ್ತು. ಅನಾರೋಗ್ಯಪೀಡಿತನಾಗಿದ್ದ ಮಗುವನ್ನು ಹಿಡಿದುಕೊಂಡು ಮುದ್ದಾಡುತ್ತಿತ್ತು. ಕೋತಿಯ ಆಟ ನೋಡಿ ಕಂದಮ್ಮ ಗಟ್ಟಿಯಾಗಿ ನಗುತ್ತಿತ್ತು. ತಾಯಿಯು ಇವೆರಡೂ ಒಂದಾಗಿ ನಡೆಸುತ್ತಿರುವ ಆಟ ನೋಡಿ, ಹೆದರಿ ಕಿರುಚಿಕೊಂಡಳು. ತಾಯಿಯ ಆರ್ಭಟಕ್ಕೆ ಬೆಚ್ಚಿದ ಕೋತಿಯು ಅಲ್ಲಿಂದ ಚಂಗನೆ ನೆಗೆದು ತಾಯಿಯ ಕೈಯಲ್ಲಿದ್ದ ನೈವೇದ್ಯ ಪ್ರಸಾದವನ್ನು ಒಂದಿಷ್ಟು ಗೆರೆಸಿ ತೆಗೆದು ಪಲಾಯನ ಮಾಡಿತು. ಮಗುವು ಮಾತೆಯನ್ನು ನೋಡುತ್ತಿದ್ದಂತೆ ನಗುತ್ತಾ ಎದ್ದು ನಿಂತು ಓಡಿ ಬಂದು ಮಾತೆಯ ಮಡಿಲಲ್ಲಿ ಕುಳಿತುಕೊಂಡಿತು.


ಸುಮಾರು ಒಂದು ವರ್ಷದಿಂದ ಮಲಗಿಯೇ ಇದ್ದ ಒಂದು ಅಕ್ಷರವನ್ನೂ ಕೂಡಾ ಉಸುರದೇ ಇದ್ದ ಮಗುವಿನ ಆರೋಗ್ಯದಲ್ಲಿ ಹಠಾತ್ ಆಗಿ ಆದ ಬದಲಾವಣೆ ಕಂಡು ತಾಯಿ ಮೂಕವಿಸ್ಮಿತಳಾದಳು. ಸಂತಸ ತಡೆಯಲಾರದೆ, ಆನಂದ ಬಾಷ್ಪ ಹರಿದು ಬಂದಿತು. ಈ ಘಟನೆಯಿಂದ ತಾಯಿಗೆ ಹೊರ ಬರಲು ಬಹಳ ಹೊತ್ತು ಬೇಕಾಯಿತು. ಪ್ರಾಣ ದೇವರ ಅನ್ನದ ಮಹಿಮೆಯ ಅರಿವಾಯಿತು. ಮಗುವು ತಾಯಿಯ ಕೈಯಲ್ಲಿದ್ದ ಅನ್ನ ಪ್ರಸಾದವನ್ನು ಕಂಡು ಆಕೆ ಉಣಿಸುವ ಮೊದಲೇ ತಾನೇ ಕೈಯಾರೆ ಉಂಡಿತು. ಮಗುವಿನ ಆರೋಗ್ಯದಲ್ಲಾದ ಅನಿರೀಕ್ಷಿತ ಪರಿವರ್ತನೆಯಿಂದ ಮನೆ ಮಂದಿಗೆಲ್ಲಾ ಆಶ್ಚರ್ಯವೋ ಆಶ್ಚರ್ಯ. ಪ್ರತಿಭಾವಂತನಾಗಿ ಬೆಳೆಯುತ್ತಾ ಸಾಗಿದ ಈ ಬಾಲಕ 1887ನೇ ಇಸವಿಯಲ್ಲಿ ಶ್ರೀ ಶಿರೂರು ಮಠದ 27ನೇ ಯತಿಗಳಾಗಿ ಶ್ರೀ ಲಕ್ಷ್ಮೀ ಸಮುದ್ರ ತೀರ್ಥರೆಂದು ಅಭಿಷಿಕ್ತರಾದರು. ನಿರಂತರ ಅಧ್ಯಯನ, ಜಪ, ತಪ ಪೂಜೆಯಿಂದ ವಿಶೇಷ ಸಿದ್ಧಿಯೂ ಕೂಡಾ ಪ್ರಾಪ್ತಿಯಾಯಿತು. ಈ ಸಂದರ್ಭದಲ್ಲಿ ಶ್ರೀಗಳ ಪೂರ್ವಾಶ್ರಮದ ಮಾತೆಯು ಆಶ್ರಮ ಪೂರ್ವದಲ್ಲಿ ಅಂದರೆ ಶ್ರೀ ಪಾದರ ಬಾಲ್ಯದಲ್ಲಿ ಜರಗಿದ ಘಟನೆಯನ್ನು ಪ್ರಸ್ತಾಪಿಸಿದರು. "ತನ್ನ ಮಗು ಗುಣಮುಖವಾದರೆ, ನಿತ್ಯ ಅನ್ನದಾನ ನಡೆಸುವೆ ಎಂಬ ಹರಕೆಯನ್ನೂ ಕೂಡಾ ನಿಮ್ಮ ಸಲುವಾಗಿ ಹೊತ್ತಿದ್ದೆ" ಎಂಬ ಅಂತರಾಳದ ಮಾತನ್ನು ತಿಳಿಸಿದರು. ತಾಯಿಯ ಮಾತಿನಿಂದ ಸಂತುಷ್ಟರಾದ ಯತಿಗಳು ಭೋಜನ ಶಾಲೆ ನಿರ್ಮಾಣಕ್ಕೆ ಸಂಕಲ್ಪಿಸಿದರು.


ಈಗಿನ ಭೋಜನ ಶಾಲೆ ಇರುವ ಸ್ಥಳದಲ್ಲಿ 120+ ವರ್ಷಗಳ ಪೂರ್ವದಲ್ಲಿ ದೊಡ್ಡ ಅಂಗಣವಿತ್ತು. ಶ್ರೀ ಕೃಷ್ಣ ಮಠದಲ್ಲಿ ನಿತ್ಯ ಭೋಜನಾ ನಂತರ ಮಿಕ್ಕಿ ಉಳಿದ ನೈವೇದ್ಯಗಳನ್ನು ಇದೇ ಅಂಗಣದಲ್ಲಿ ಇರಿಸುತ್ತಿದ್ದರು. ಶ್ರೀ ಮಠದ ದನಕರುಗಳು, ಕೋತಿಗಳು, ಹಕ್ಕಿಗಳು ಬಂದು ಮಿಕ್ಕಿ ಉಳಿದ ಈ ಅನ್ನಗಳನ್ನು ತಿಂದು ಖಾಲಿ ಮಾಡುತ್ತಿದ್ದವು. ಶ್ರೀಕೃಷ್ಣನ ಗೋವುಗಳು ನೂರಾರು ವರ್ಷಗಳಿಂದ ಆಹಾರ ಸ್ವೀಕರಿಸುತ್ತಿದ್ದ ಈ ಪವಿತ್ರ ಭೂಮಿಯನ್ನು ಶ್ರೀ ಶಿರೂರು ಮಠದ ಶ್ರೀ ಲಕ್ಷ್ಮೀ ಸಮುದ್ರ ತೀರ್ಥರು ಭೋಜನ ಶಾಲೆ ನಿರ್ಮಾಣಕ್ಕೆ ಆಯ್ದುಕೊಂಡರು. ತಮ್ಮ 2ನೇ ಪರ್ಯಾಯದಲ್ಲಿ ಶ್ರೀ ಪಾದರ ಸಂಕಲ್ಪ ನೆರವೇರಿತು. ಬೃಹತ್ ಭೋಜನ ಶಾಲೆ ನಿರ್ಮಾಣವಾಯಿತು. ಪ್ರತಿದಿನ ಅನ್ನದಾನವೂ ಆರಂಭವಾಯಿತು.


ಪಾಯಸಕ್ಕೆ ತುಪ್ಪ ಬೆರೆಸಿದಂತೆ ಶ್ರೀ ಲಕ್ಷ್ಮೀ ಸಮುದ್ರ ತೀರ್ಥರು ಭೋಜನ ಶಾಲೆಗೆ ಹೊನ್ನ ಕಿರೀಟ ತೊಡಿಸುವ ನೂತನ ಸೇವೆಗೆ ಮುಂದಾದರು. ಅದೇನೆಂದರೆ ಉಡುಪಿಯ ಹೆಬ್ಬಾಗಿಲು ಎಂದು ಕರೆಯಲ್ಪಡುತ್ತಿದ್ದ  ಜೋಡು ಕಟ್ಟೆಯ ಸಮೀಪದಲ್ಲಿ ಬೃಹತ್ ಶಿಲಾಮಯ ಕೋಟೆ ಬಾಗಿಲಿತ್ತು. ಆ ಮಹಾ ದ್ವಾರದ ಶಿಲಾ ಕಂಬದಲ್ಲಿದ್ದ ಸುಂದರವಾದ ಆಂಜನೇಯನ ಪ್ರತಿಮೆ ಶ್ರೀ ಲಕ್ಷ್ಮೀ ಸಮುದ್ರ ತೀರ್ಥರ ಹೃದಯವನ್ನು ಹಲವಾರು ಸಮಯದಿಂದ ಸೆಳೆಯುತ್ತಿತ್ತು. ಒಂದು ಪರ್ವ ಕಾಲದಲ್ಲಿ ಶ್ರೀ ಲಕ್ಷ್ಮೀ ಸಮುದ್ರ ತೀರ್ಥರಿಗೆ ಸ್ವಪ್ನ ಸೂಚನೆ ಲಭಿಸಿತು. ತಡಮಾಡಲಿಲ್ಲ. ಮಹಾ ದ್ವಾರದ ಕಂಬ ಸಹಿತವಾಗಿ ಆಂಜನೇಯನ ಪ್ರತಿಮೆಯನ್ನು ಜೋಡುಕಟ್ಟೆಯಿಂದ ತಂದು ಶಾಸ್ತ್ರೋಕ್ತವಾಗಿ ಭೋಜನ ಶಾಲೆಯಲ್ಲಿ ಪ್ರತಿಷ್ಠಾಪಿಸಿದರು. ಈ ಮೂಲಕ ತಮ್ಮ ತಾಯಿಯ ಬಹು ದಿನದ ಎರಡೂ ಕನಸನ್ನೂ ನನಸಾಗಿಸಿದರು.


ಈ ಎಲ್ಲಾ ಕಾರಣಗಳಿಗಾಗಿ ಉಡುಪಿ ಶ್ರೀಕೃಷ್ಣ ಮಠದ ಭೋಜನ ಶಾಲೆಯಲ್ಲಿ ಅನ್ನ ಪ್ರಸಾದ ಸೇವಿಸುವುದಕ್ಕೆ ವಿಶೇಷ ಮಹತ್ವವಿದೆ. ಅದೂ ಕೂಡಾ ಎಲೆಯನ್ನು ಬಳಸದೇ, ಖಾಲಿ ನೆಲದ ಮೇಲೆ ಭೋಜನ ಪ್ರಸಾದ ಸೇವಿಸಿದರೆ ಸಕಲ ಇಷ್ಟಾರ್ಥಗಳೂ ಸಿದ್ಧಿಯಾಗುವುದೆಂಬ ನಂಬಿಕೆ ನೂರಾರು ವರ್ಷಗಳಿಂದ ಸಾಗಿ ಬಂದಿದೆ. ಏನೊಂದೂ ರೋಗ - ರುಜಿನಗಳು, ದುರಿತ - ದುಮ್ಮಾನಗಳು ಇದ್ದರೂ, ತರಿದು ಹೋಗುವವು ಎಂಬ ಪ್ರತೀತಿ ಇದೆ. ಇಂದಿಗೂ ಪ್ರತೀ ಶನಿವಾರ ಶ್ರೀ ಕೃಷ್ಣ ಮಠದ ಭೋಜನ ಶಾಲೆಯಲ್ಲಿ ಸಾವಿರಾರು ಭಕ್ತರು ಖಾಲಿ ನೆಲದ ಮೇಲೆ ಎಲೆಯನ್ನು ಬಳಸದೇ ಭೋಜನ ಪ್ರಸಾದ ಸ್ವೀಕರಿಸಲು ಆಗಮಿಸುತ್ತಾರೆ. ಈ ನಿಮಿತ್ತ ಶ್ರೀ ಶಿರೂರು ಮಠದ ಕೀರ್ತಿ ಶೇಷ ಶ್ರೀ ಲಕ್ಷ್ಮೀವರ ತೀರ್ಥ ಶ್ರೀಪಾದರು ತಮ್ಮ ಪರ್ಯಾಯದ 2 ವರ್ಷಗಳ ಅವಧಿಯಲ್ಲಿ ಶ್ರಾವಣ ಮಾಸದ ಐದೂ ಶನಿವಾರವೂ ಕೂಡಾ ಭೋಜನ ಶಾಲೆಯಲ್ಲಿ ಎಲೆಯನ್ನು ಬಳಸದೇ ಖಾಲಿ ನೆಲದ ಮೇಲೆ ಸ್ವತಃ ತಾವೇ ಶ್ರೀ ದೇವರ ಭೋಜನ ಪ್ರಸಾದವನ್ನು ಇಲ್ಲಿ(ಭಿಕ್ಷೆ) ಸ್ವೀಕರಿಸುತ್ತಿದ್ದರು. ತಮ್ಮ ಗುರುಗಳು ನಿರ್ಮಿಸಿದ ಪವಿತ್ರ ಸನ್ನಿಧಾನದಲ್ಲಿ ಭಿಕ್ಷೆ ಸ್ವೀಕರಿಸುವ ಮೂಲಕ ಅವರ ಕೊಡುಗೆಯನ್ನು ಸ್ಮರಿಸುವ ಶಿಷ್ಟಾಚಾರಕ್ಕೂ ಕೂಡಾ ತಲೆ ಬಾಗಿದರು.


120 ವರ್ಷಗಳ ಪೂರ್ವದಲ್ಲಿ ಶ್ರೀ ಲಕ್ಷ್ಮೀ ಸಮುದ್ರ ತೀರ್ಥ ಶ್ರೀ ಪಾದರು ತಾಯಿಯ ಹರಕೆಯನ್ನು ಸಾಕಾರಗೊಳಿಸಲು ನಿರ್ಮಾಸಿದ ಸ್ಮಾರಕವು ಇಂದು ಲಕ್ಷಾಂತರ ಭಕ್ತರ ಇಷ್ಟಾರ್ಥಗಳನ್ನು ಪೂರೈಸುತ್ತಿದೆ. ಈ ಸನ್ನಿಧಾನದ ಪ್ರಸಾದವು ಭಕ್ತ ಕೋಟಿಯ ತನು ಮನದಲ್ಲಿ ಹೊಸ ಹುರುಪನ್ನು ನೀಡಿ ಆತ್ಮ ವಿಶ್ವಾಸವನ್ನು ಹೆಚ್ಚಿಸುತ್ತಿದೆ.


1940ರ ದಶಕದಲ್ಲಿ ಶ್ರೀ ಶಿರೂರು ಮಠದ 28ನೇ ಯತಿಗಳಾದ ಶ್ರೀ ಲಕ್ಷ್ಮೀಂದ್ರ ತೀರ್ಥ ಶ್ರೀಪಾದರಿಂದ ರಚಿತವಾದ "ಶ್ರೀ ಲಕ್ಷ್ಮೀ ಸಮುದ್ರ ತೀರ್ಥ ಗುರು ಚರಿತಂ" ಕೃತಿಯಲ್ಲಿ ಈ ಘಟನೆಗಳ ಕುರಿತು ಬಲು ಸೊಗಸಾದ ವರ್ಣನೆ ಇದೆ.


- ಪಿ. ಲಾತವ್ಯ ಆಚಾರ್ಯ, ಉಡುಪಿ


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 



Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top