ಮಂಗಳೂರು: ಎಸ್.ಸಿ.ಎಸ್ ಪ್ರಥಮ ದರ್ಜೆ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಮತ್ತು ಯುವ ರೆಡ್ ಕ್ರಾಸ್ ವತಿಯಿಂದ “ಜಾಗೃತಿ, ಸಂವಾದ ಮತ್ತು ಸಮಾಲೋಚನೆ” ಎಂಬ ಶೀರ್ಷಿಕೆಯಡಿ ಮಾದಕ ವ್ಯಸನ ವಿರೋಧಿ ಅಭಿಯಾನವು 21 ಏಪ್ರಿಲ್ 2026 ರಂದು ಉಪನ್ಯಾಸ ಕೊಠಡಿ 4 ರಲ್ಲಿ ವಿದ್ಯಾರ್ಥಿಗಳಿಗಾಗಿ ಯಶಸ್ವಿಯಾಗಿ ಆಯೋಜಿಸಲಾಯಿತು.
ಕಾರ್ಯಕ್ರಮವನ್ನು ಸೇವಾಭಾರತೀ ಕರ್ನಾಟಕ, ಮಂಗಳೂರು ವಿಶ್ವವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆ, ಕೇಶವ ಸ್ಮೃತಿ ಸಂವರ್ಧನಾ ಸಮಿತಿ ಹಾಗೂ ಮೂಲತ್ವ ಫೌಂಡೇಶನ್ ಚಾರಿಟೇಬಲ್ ಟ್ರಸ್ಟ್ ಇವರು ಕಾಲೇಜಿನ ಸಹಯೋಗದಲ್ಲಿ ಸಂಯುಕ್ತವಾಗಿ ನಡೆಸಿದರು.
ಕಾರ್ಯಕ್ರಮವು ಸಂಸ್ಥೆಯ ಗೀತೆಯೊಂದಿಗೆ ಚಾಲನೆಗೊಂಡು ದೀಪ ಪ್ರಜ್ವಲನೆಯ ಮೂಲಕ ಉದ್ಘಾಟನೆಗೊಂಡಿತು. ಶ್ರೀ ಪ್ರಮೋದ್ ಮುಖ್ಯ ಪೊಲೀಸ್ ಸಿಬ್ಬಂದಿ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ, ಶ್ರೀ ಸಿದ್ದಪ್ಪ ನರೇಣೂರು ಅವರ ಪರವಾಗಿ ಅಧ್ಯಕ್ಷತೆ ವಹಿಸಿದರು.
ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಶ್ರೀಯುತ ಹಾರ್ದಿಕ್ ಪಿ. ಚೌಹಾಣ್, ಸೇವಾಭಾರತೀ ಕರ್ನಾಟಕದ ಕಾರ್ಯದರ್ಶಿ ಕೆ. ಚನ್ನಯ್ಯ ಸ್ವಾಮಿ, ಮೂಲತ್ವ ಫೌಂಡೇಶನ್ ಸಂಸ್ಥಾಪಕರಾದ ಪ್ರಕಾಶ್ ಕೋಟಿಯನ್, ಕೇಶವ ಸ್ಮೃತಿ ಸಂವರ್ಧನಾ ಸಮಿತಿಯ ಕಾರ್ಯದರ್ಶಿ ಗಜಾನನ ಪೈ ತೋನ್ಸೆ ಇವರು ಉಪಸ್ಥಿತರಿದ್ದರು.
ಇದಲ್ಲದೆ, ಸಹಾಯಕ ಪೊಲೀಸ್ ಉಪನಿರೀಕ್ಷಕ ಲಕ್ಷ್ಮಣ್ ಹಾಗೂ ಇತರೆ ಪೊಲೀಸ್ ಸಿಬ್ಬಂದಿಯವರು ಸಹ ಕಾರ್ಯಕ್ರಮದಲ್ಲಿ ಭಾಗವಹಿಸಿ ಬೆಂಬಲ ನೀಡಿದರು. ಮೂಲತ್ವ ಫೌಂಡೇಶನ್ ತಂಡದ ಸದಸ್ಯರು ಕಾರ್ಯಕ್ರಮದ ಯಶಸ್ಸಿಗೆ ಸಕ್ರಿಯವಾಗಿ ಸಹಕರಿಸಿದರು.
ಜಾಗೃತಿ ಕಾರ್ಯಕ್ರಮದಲ್ಲಿ ಪ್ರಕಾಶ್ ಕೋಟಿಯನ್ ಅವರು ವ್ಯಸನದ ಹಾನಿಗಳು, ಮಾದಕ ದ್ರವ್ಯಗಳ ದುಷ್ಪರಿಣಾಮಗಳು ಹಾಗೂ ಯುವಜನರ ಸಾಮಾಜಿಕ ಜವಾಬ್ದಾರಿಗಳ ಬಗ್ಗೆ ಆಳವಾದ ಮಾಹಿತಿ ನೀಡಿದರು. ವಿಶೇಷವಾಗಿ, ಹಿಂದಿನ ವ್ಯಸನಕ್ಕೆ ಒಳಗಾಗಿದ್ದ ಇಬ್ಬರು ವ್ಯಕ್ತಿಗಳು ತಮ್ಮ ಜೀವನ ಅನುಭವಗಳನ್ನು ಹಂಚಿಕೊಂಡಿದ್ದು, ವಿದ್ಯಾರ್ಥಿಗಳ ಮೇಲೆ ಗಾಢವಾದ ಪ್ರಭಾವ ಬೀರಿತು.
ಕಾರ್ಯಕ್ರಮದ ನಂತರ ನಡೆದ ಸಂವಾದಾತ್ಮಕ ಪ್ರಶ್ನೋತ್ತರ ಅವಧಿಯಲ್ಲಿ ವಿದ್ಯಾರ್ಥಿಗಳು ಸಕ್ರಿಯವಾಗಿ ಭಾಗವಹಿಸಿ ತಮ್ಮ ಸಂದೇಹಗಳನ್ನು ನಿವಾರಿಸಿಕೊಂಡರು. ಒಟ್ಟು 79 ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿ, ಇದರ ಯಶಸ್ಸಿಗೆ ಕೈಜೋಡಿಸಿದರು. ವಾಣಿಜ್ಯ ವಿಭಾಗದ ಉಪನ್ಯಾಸಕಾರದ ಕುಮಾರಿ ಆಶ್ವಿನಿ ಪ್ರಭು ಅವರು ಸ್ವಾಗತ ಭಾಷಣದ ಮೂಲಕ ಅತಿಥಿಗಳನ್ನು ಆತ್ಮೀಯವಾಗಿ ಬರಮಾಡಿಕೊಂಡರು.
ಕೊನೆಯಲ್ಲಿ ರಾಷ್ಟ್ರೀಯ ಸೇವಾ ಯೋಜನೆಯ ಅಧಿಕಾರಿಯಾದ ಇಂಗ್ಲೀಷ್ ವಿಭಾಗದ ಮುಖ್ಯಸ್ಥರಾದ ಶ್ರೀಮತಿ ವಿಶ್ವಾತ್ಮಿಕಾ ಅವರು ವಂದನಾರ್ಪಣೆ ಸಲ್ಲಿಸಿ, ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದ ಎಲ್ಲಾ ಅತಿಥಿಗಳು, ಆಯೋಜಕರು ಹಾಗೂ ವಿದ್ಯಾರ್ಥಿಗಳಿಗೆ ಕೃತಜ್ಞತೆ ಸಲ್ಲಿಸಿದರು. ಕಾರ್ಯಕ್ರಮವನ್ನು ರಾಷ್ಟ್ರೀಯ ಸೇವಾ ಯೋಜನೆಯ ಸಂಯುಕ್ತ ಕಾರ್ಯದರ್ಶಿ ದ್ವಿತೀಯ ಬಿ ಎಸ್ಸಿ ಶ್ರಾವ್ಯ ನಿರೂಪಣೆ ಮಾಡಿ ಸುಗಮವಾಗಿ ನಡೆಸಿಕೊಟ್ಟರು.
ಈ ಜಾಗೃತಿ ಕಾರ್ಯಕ್ರಮವು ವಿದ್ಯಾರ್ಥಿಗಳಲ್ಲಿ ವ್ಯಸನದ ಅಪಾಯಗಳ ಬಗ್ಗೆ ಅರಿವು ಮೂಡಿಸಿ, ಆರೋಗ್ಯಕರ ಜೀವನಶೈಲಿಯತ್ತ ದಾರಿದೀಪವಾಯಿತು.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ

