ಆನ್‌ಲೈನ್ ಕಲಿಕೆ ನೇರ ಕಲಿಕೆಗೆ ಪರ್ಯಾಯವೂ ಅಲ್ಲ, ಸಾಧಕವೂ ಅಲ್ಲ!

Upayuktha
0



- ಟಿ. ದೇವಿದಾಸ್

ಕೋವಿಡ್ ಅನಂತರದ ದಿನಗಳಲ್ಲಿ ಹುಟ್ಟಿಕೊಂಡ ಆನ್‌ಲೈನ್ ತರಗತಿಗಳು ಈಗ ಎಲ್ಲೆಂದರಲ್ಲಿ ಹರಡಿಕೊಂಡಿದೆ. ತರಗತಿಗೆ ಹೋಗಬೇಕಾದ ಅಗತ್ಯವಿಲ್ಲ. ಮನೆಯಲ್ಲೇ ಕುಳಿತು ಒನ್ ಲೈನ್ ಪಾಠಗಳನ್ನು ಕೇಳಿ ಪರೀಕ್ಷೆಯನ್ನು ಬರೆದು ಉತ್ತಮ ಶ್ರೇಣಿಯನ್ನು ಪಡೆಯಬಹುದು ಎಂಬ ಹಿನ್ನೆಲೆಯಲ್ಲಿ ಕಾಲೇಜುಗಳಲ್ಲಿ ತರಗತಿಗೆ ಹೋಗುವವರ ಸಂಖ್ಯೆ ಕಡಿಮೆಯಾಗುತ್ತಿದೆ. ಆಫ್ ಕೋರ್ಸ್ ಸುಳ್ಳು ಹಾಜರಾತಿಯನ್ನು ನೀಡಿ ಪರೀಕ್ಷೆಯನ್ನು ಬರೆಯಲು ಸಾಧ್ಯವಿದೆ ಎಂಬುದೂ ಈ ಆನ್‌ಲೈನ್ ತರಗತಿಗಳಿಗೆ ಬೇಡಿಕೆ ಹೆಚ್ಚುತ್ತಲೇ ಇದೆ ಈ ದಿನಮಾನಗಳಲ್ಲಿ. ಅದೂ ಮುಖ್ಯವಾಗಿ, ಪಿಯು ಹಂತದ ವ್ಯಾಸಂಗದಲ್ಲಿ ಇದು ನಡೆಯುತ್ತಿರುವುದು ವಿದ್ಯಾರ್ಥಿಗಳ ಕಲಿಕಾ ಜೀವನದ ದೊಡ್ಡ ಕೊರತೆಯಾಗಿ ಕಾಣುತ್ತಿದೆ. 


ಸಾಮಾನ್ಯವಾಗಿ ಯಾವುದೇ ವ್ಯವಸ್ಥೆಯಿಂದ ಸಾಧಕವೂ ಇರುತ್ತದೆ. ಬಾಧಕವೂ ಇರುತ್ತದೆ. ಅಂದರೆ ಅನುಕೂಲವೂ ಅನಾನುಕೂಲವೂ ಇರುತ್ತದೆ. ಅನುಕೂಲವನ್ನು ಹೊರತುಪಡಿಸಿ ಈ ಆನ್ ಲೈನ್ ತರಗತಿಗಳ ಬಗ್ಗೆ ಆಲೋಚಿಸಿದರೆ ಅನಾನುಕೂಲತೆಯೇ ಹೆಚ್ಚು. ಹಾಗಂತ, ಅನಾನುಕೂಲತೆ ಅಂತ ಅಂದುಕೊಳ್ಳದಿದ್ದರೆ ಎಲ್ಲವೂ ಅನುಕೂಲವೆಂದೇ ಭಾವಿಸುವುದರಿಂದ ಯಾವ ಸಮಸ್ಯೆಯೂ ಯಾರಿಗೂ ಇರುವುದಿಲ್ಲ. ಆದರೆ ಈ ವಿಚಾರದಲ್ಲಿ ಅವಲೋಕನ ಎಂಬುದು ತುಂಬಾ ಸೂಕ್ಷ್ಮವಾಗಬೇಕಿದೆ. ಸಾಮಾಜಿಕ ಸಂವಹನವೇ ಇಲ್ಲದೆ ಏನು ಕಲಿತರೇನು ಬಂತು ಪ್ರಯೋಜನ? ಕಲಿಕೆಯೂ ನೇರವಿಲ್ಲದೆ, ಕಲಿಕೆಯಲ್ಲಿ ನೇರ ಸಂವಹನವೂ ಇಲ್ಲದೆ, ಸಹಪಾಠಿಗಳ ನೇರ ಸಂಪರ್ಕ ಸಂವಹನವೂ ಇಲ್ಲದೆ ಕಲಿಯಲು ಸಾಧ್ಯವೇ ಇಲ್ಲ ಎಂಬುದು ನನ್ನ ಅಭಿಪ್ರಾಯವೂ ಅಲ್ಲ. ವಾದವೂ ಅಲ್ಲ. ಆರೋಪವೂ ಅಲ್ಲ. ಬೆಂಬಲವೂ ಅಲ್ಲ. ಆದರೆ, ಯಾವುದನ್ನು ಹೇಗೆ ಪಡೆಯಬೇಕು ಎಂಬುದಕ್ಕೆ ಶಿಕ್ಷಣದಲ್ಲಿ ಪರಿಕಲ್ಪನೆಗಳಿವೆ. ತಲೆಮಾರುಗಳು ನಡೆದು ಬಂದದ್ದೇ ಹಾಗೆ. ಆದರೆ, ಕಲಿಕಾ ಹಂತದಲ್ಲಿ ಪಡೆಯಬೇಕಾದ ಶಿಕ್ಷಣವೇ ಪ್ರಯೋಗದ ಸರಕಾಗಬಾರದು; ಅದೂ ಅತ್ಯಂತ ಪ್ರಧಾನವೆನಿಸಿದ ಪಿಯು ಹಂತದ ವ್ಯಾಸಂಗದಲ್ಲಿ!


ಆನ್ ಲೈನ್ ತರಗತಿಗಳು ವಿದ್ಯಾರ್ಥಿಗಳಲ್ಲಿ ಪ್ರತ್ಯೇಕತೆಯ ಭಾವನೆಯನ್ನು ಹುಟ್ಟಿಸುವ ಸಾಧ್ಯತೆಯಿರುತ್ತದೆ. ಒಂಟಿತನ ಕಾಡಬಹುದು. ಈ ಒಂಟಿತನದಿಂದ ಆಗಬಹುದಾದ ಪರಿಣಾಮ ಬಹು ಅಪಾಯಕಾರಿ. ಹೆಚ್ಚಿನ ಮಾನಸಿಕ ಖಿನ್ನತೆಗೆ ಇಂಥ ಒಂಟಿತನವೇ ಕಾರಣ. ಕಳಪೆ ಇಂಟರ್ನೆಟ್ ಸಂಪರ್ಕದಿಂದ ತಾಂತ್ರಿಕ ಅಡೆತಡೆಗಳಿಂದ ಪಾಠಾಂಶಗಳು ಸಿಗದೆ ಅಧ್ಯಯನ ಅಪೂರ್ಣವಾಗಬಹುದು. ಸೃಜನಾತ್ಮಕ ಮತ್ತು ರಚನಾತ್ಮಕ ವಾತಾವರಣವಿಲ್ಲದೆ ವಿದ್ಯಾರ್ಥಿಗಳು ಆಸಕ್ತಿ, ಏಕೀಕೃತ ಗಮನ, ಸ್ವಯಂ-ಶಿಸ್ತು ಮತ್ತು ಪ್ರೇರಣೆಯನ್ನು ಕಾಪಾಡಿಕೊಳ್ಳುವಲ್ಲಿ ಹೆಣಗಾಡುವಂತಹ ದುಃಸ್ಥಿತಿ, ಸೀಮಿತ ಪ್ರಾಯೋಗಿಕ ಕಲಿಕೆ, ಕಣ್ಣಿನ ಒತ್ತಡ ಮತ್ತು ಸಂಭಾವ್ಯ ಶೈಕ್ಷಣಿಕ ಅಪ್ರಾಮಾಣಿಕತೆ ಸೇರಿವೆ.


ಸೀಮಿತ ಸಂವಹನ: ಬೋಧಕರು ಮತ್ತು ಗೆಳೆಯರೊಂದಿಗೆ ಮುಖಾಮುಖಿ ಸಂಪರ್ಕವಿಲ್ಲದೆ, ಸಾಮಾಜಿಕ ಸಂವಹನ ಕೌಶಲವೇ ಇಲ್ಲದಿರುವಿಕೆಯ ಪರಿಣಾಮವನ್ನು ವಿದ್ಯಾರ್ಥಿಗಳು ಗಂಭೀರವಾಗಿ ಅನುಭವಿಸಬೇಕಾಗುತ್ತದೆ.


ಶಿಸ್ತು ಮತ್ತು ಪ್ರೇರಣೆಯ ಕೊರತೆ: ರಚನಾತ್ಮಕ, ಭೌತಿಕ ತರಗತಿ ಮತ್ತು ಶಿಕ್ಷಕರ ಮೇಲ್ವಿಚಾರಣೆಯ ಕೊರತೆಯು ವಿದ್ಯಾರ್ಥಿಗಳು ವಿಳಂಬ ಮಾಡಲು ಮತ್ತು ಗಮನವನ್ನು ಕಳೆದುಕೊಳ್ಳಲು ಅತ್ಯಂತ ಸುಲಭಗೊಳಿಸುವುದರಿಂದ ವಿದ್ಯಾರ್ಥಿಗೆ ಗೊತ್ತೇ ಆಗದೆ ಅಕೆಡಮಿಕ್ ಶಿಸ್ತು ಮತ್ತು ಸ್ವಾಧ್ಯಾಯದ ಕೊರತೆ ಕಾಡುತ್ತದೆ. ಕಲಿಕೆಯು ಪ್ರೇರಣೆಯಿಲ್ಲದೆ ಸೊರಗುತ್ತದೆ. 


ಸೀಮಿತ ಪ್ರಾಯೋಗಿಕ ತರಬೇತಿ: ಪ್ರಾಯೋಗಿಕ, ಕೌಶಲ ಆಧಾರಿತ ವಿಷಯಗಳನ್ನು (ಉದಾ. ವಿಜ್ಞಾನ ಪ್ರಯೋಗಾಲಯಗಳು, ವೃತ್ತಿಪರ ತರಬೇತಿ) ಆನ್‌ಲೈನ್‌ನಲ್ಲಿ ಪರಿಣಾಮಕಾರಿಯಾಗಿ ಅನುಕರಿಸುವುದು ಕಷ್ಟ. ಆಫ್ ಕೋರ್ಸ್ ಸಾಧ್ಯವಿಲ್ಲ. 


ಕಡಿಮೆಯಾದ ತೊಡಗಿಸಿಕೊಳ್ಳುವಿಕೆ: ತೊಡಗಿಸಿಕೊಳ್ಳುವುದು ವಿದ್ಯಾರ್ಥಿಗಳಿಗೆ ಅತ್ಯಂತ ಸವಾಲಿನ ಕೆಲಸ. ವಿದ್ಯಾರ್ಥಿಗಳಿಗೂ ತೊಡಗಿಸಿಕೊಳ್ಳುವಿಕೆಯೇ ದೊಡ್ದ ಸಮಸ್ಯೆಯಾಗಿ ಓದು ಹಾಳಾಗಬಹುದು. ಕಾರಣವೇನೆಂದರೆ,  ಗಮನ ಬೇರೆಡೆ ಸೆಳೆಯುವುದು. ಇದು ಪಾಠದಿಂದ ಹೊರಗುಳಿಯಲು ಕಾರಣವಾಗುತ್ತದೆ.


ದೈಹಿಕ ಆರೋಗ್ಯ ಸಮಸ್ಯೆಗಳು: ಪರದೆಗಳ ಮುಂದೆ ದೀರ್ಘಕಾಲ ಇರುವುದು ಕಣ್ಣಿನ ಒತ್ತಡ, ಕುತ್ತಿಗೆ ನೋವು ಮತ್ತು ಕಳಪೆ ದಕ್ಷತೆ- ಹೀಗೆ ಸಣ್ಣವಯಸ್ಸಿನಲ್ಲೇ ದೈಹಿಕ ಕಾಯಿಲೆಗಳಿಗೆ ಕಾರಣವಾಗಬಹುದು.


ವಿಳಂಬವಾದ ಪ್ರತಿಕ್ರಿಯೆ: ಮುಖಾಮುಖಿ ತರಗತಿಗಳಿಗಿಂತ ಹೆಚ್ಚಿನ ಸಮಯವನ್ನು ಪ್ರಶ್ನೆಗಳಿಗೆ ಉತ್ತರಗಳನ್ನು ಪಡೆಯಲು ತೆಗೆದುಕೊಳ್ಳಬಹುದು. ಇದಕ್ಕಾಗಿ ದಿನಗಳು ಬೇಕಾಗಬಹುದು. ಮಾರ್ಗದರ್ಶನವೇ ಇಲ್ಲದೆ ಕಲಿಕೆ ಅಪೂರ್ಣವಾಗುವ ಸಾಧ್ಯತೆಯೇ ಹೆಚ್ಚು. 


ಗೊಂದಲಗಳು: ಮನೆಯ ಪರಿಸರಗಳು ಗದ್ದಲದ ಅಥವಾ ಗಮನ ಬೇರೆಡೆ ಸೆಳೆಯುವಂತಿರಬಹುದು, ಇದು ವಿದ್ಯಾರ್ಥಿಯ ಗಮನ ಕೇಂದ್ರೀಕರಿಸುವ ಸಾಮರ್ಥ್ಯದ ಮೇಲೆ ಪರಿಣಾಮ ಬೀರುತ್ತದೆ.


ಪರದೆಗಳ ಮೇಲೆ ಕೇಂದ್ರೀಕರಿಸಲು ಅಸಮರ್ಥತೆ: ಅನೇಕ ವಿದ್ಯಾರ್ಥಿಗಳಿಗೆ, ಆನ್‌ಲೈನ್ ಕಲಿಕೆಯ ದೊಡ್ಡ ಸವಾಲುಗಳಲ್ಲಿ ಒಂದು ದೀರ್ಘ ಸಮಯದವರೆಗೆ ಪರದೆಯ ಮೇಲೆ ಗಮನ ಕೇಂದ್ರೀಕರಿಸುವ ಹೋರಾಟವಾಗಿದೆ. ಆನ್‌ಲೈನ್ ಕಲಿಕೆಯೊಂದಿಗೆ, ವಿದ್ಯಾರ್ಥಿಗಳು ಸಾಮಾಜಿಕ ಮಾಧ್ಯಮ ಅಥವಾ ಇತರ ಸೈಟ್‌ಗಳಿಂದ ಸುಲಭವಾಗಿ ವಿಚಲಿತರಾಗುವ ಅವಕಾಶ ಅಧಿಕವಾಗಿರುತ್ತದೆ. ಆದ್ದರಿಂದ, ವಿದ್ಯಾರ್ಥಿಗಳು ಏಕಾಗ್ರತೆಯಿಲ್ಲದೆ ಪಾಠದ ಮೇಲೆ ಗಮನ ಕಳೆದುಕೊಳ್ಳಬಹುದು. 


ತಂತ್ರಜ್ಞಾನ ಸಮಸ್ಯೆಗಳು: ಆನ್‌ಲೈನ್ ತರಗತಿಗಳ ಮತ್ತೊಂದು ಪ್ರಮುಖ ಸವಾಲು ಇಂಟರ್ನೆಟ್ ಸಂಪರ್ಕ. ಸ್ಥಿರವಾದ ಇಂಟರ್ನೆಟ್ ಸಂಪರ್ಕವಿಲ್ಲದೆ, ಮಗುವಿಗೆ ಕಲಿಕೆಯಲ್ಲಿ ನಿರಂತರತೆಯ ಕೊರತೆ ಉಂಟಾಗಬಹುದು. ಇದು ಕಲಿಕೆಯ ಓಟ್ಟೂ ಪ್ರಕ್ರಿಯೆಗೆ ಹಾನಿಕಾರಕವಾಗಿದೆ. ಪರೀಕ್ಷಗಳನ್ನು ತೆಗೆದುಕೊಳ್ಳುವುದು ವಿಳಂಬವಾಗಬಹುದು.


ಪ್ರತ್ಯೇಕತೆಯ ಭಾವನೆ: ವಿದ್ಯಾರ್ಥಿಗಳು ಗೆಳೆಯರೊಂದಿಗೆ ಒಡನಾಡುವುದರಿಂದ ಬಹಳಷ್ಟು ಕಲಿಯಬಹುದು. ಆದಾಗ್ಯೂ, ಆನ್‌ಲೈನ್ ತರಗತಿಯಲ್ಲಿ, ವಿದ್ಯಾರ್ಥಿಗಳು ಮತ್ತು ಶಿಕ್ಷಕರ ನಡುವೆ, ವಿದ್ಯಾರ್ಥಿಗಳು ಮತ್ತು ವಿದ್ಯಾರ್ಥಿಗಳ ನಡುವೆ ದೈಹಿಕ ನೇರ ಸಂವಹನವಿಲ್ಲದೆ, ಮುಖಾಮುಖಿ ಸಂವಹನವಿಲ್ಲದೆ ವಿದ್ಯಾರ್ಥಿಗಳಲ್ಲಿ ಪ್ರತ್ಯೇಕತೆಯ ಭಾವನೆಯನ್ನು ಹೆಚ್ಚು ಮಾಡುತ್ತದೆ.


ಪರದೆಯ ಸಮಯದ ನಿರ್ವಹಣೆ: ಪರದೆಯ ಮೇಲೆ ಹಲವು ಗಂಟೆಗಳ ಕಾಲ ನೋಡುವುದರಿಂದ ವಿದ್ಯಾರ್ಥಿಗಳ ಆರೋಗ್ಯದ ಮೇಲೆ ಅಪಾಯದ ಸಂಭವ ಹೆಚ್ಚಿರುತ್ತದೆ. ಪರದೆಯ ಸಮಯದ ಹೆಚ್ಚಳವು ಆನ್‌ಲೈನ್ ಕಲಿಕೆಯ ದೊಡ್ಡ ಕಾಳಜಿ ಮತ್ತು ಅನಾನುಕೂಲಗಳಲ್ಲಿ ಒಂದಾಗಿದೆ. ಕೆಲವೊಮ್ಮೆ ವಿದ್ಯಾರ್ಥಿಗಳು ಪರದೆಯ ಮುಂದೆ ಕುಳಿತುಕೊಳ್ಳುವುದರಿಂದ ಕೆಟ್ಟ ಭಂಗಿ ಮತ್ತು ಇತರ ದೈಹಿಕ ಸಮಸ್ಯೆಗಳು ಬೆಳೆಯುತ್ತದೆ. ಕಣ್ಣಿನ ಸಮಸ್ಯೆ, ತಲೆನೋವು, ಮೈಗ್ರೇನ್ ಅಂಥ ಕಾಯಿಲೆಗಳು ಹುಟ್ಟಿಕೊಳ್ಳುವ ಸಾಧ್ಯತೆಯಿರುತ್ತದೆ.


ಒಟ್ಟಾರೆಯಾಗಿ ಹೇಳುವುದಾದರೆ, ಆನ್‌ಲೈನ್ ಕಲಿಕೆ  ನೇರ ಕಲಿಕೆಗೆ ಪರ್ಯಾಯವೂ ಅಲ್ಲ, ಸಾಧಕವೂ ಅಲ್ಲ! ತರಗತಿಯಲ್ಲಿ ಶಿಕ್ಷಕರ ಎದುರು, ಸಹಪಾಠಿಗಳೊಂದಿಗೆ ಕೂತುಕೊಂಡು, ಕಣ್ಣಮುಂದೆ ಕೇಳುವಂಥ ಕಾಣುವಂಥ ಜೀವಂತ ಕಲಿಕೆಯೇ ನಿಜವಾದ ಕಲಿಕೆ. ಅಂತಹ ಕಲಿಕೆಯೇ ಜೀವಂತ ಅನುಭವವನ್ನು ಶಾಶ್ವತವಾಗಿ ಕೊಡುತ್ತದೆ. ಜಗತ್ತು ಬೆಳೆದು ಬಂದದ್ದೂ ಹಾಗೆಯೇ. ಮುಖ್ಯವಾಗಿ, ನಾನಿಲ್ಲಿ ಹೇಳಬಯಸಿದ್ದು ಪಿಯುಸಿ ಹಂತದಲ್ಲಿ ಆನ್ ಲೈನ್ ಕಲಿಕೆ ಅಷ್ಟಾಗಿ ಯುಕ್ತವಲ್ಲ, ಸರಿಯೂ ಅಲ್ಲ, ಸಮರ್ಥನೀಯವೂ ಅಲ್ಲ ಎಂಬುದನ್ನು ಮಾತ್ರ! ಆಫ್ ಕೋರ್ಸ್ ಪದವಿ ಹಂತಕ್ಕೂ ಇದೇ ಅಂಶಗಳನ್ನು ಅನ್ವಯಿಸಿಕೊಳ್ಳಬಹುದು. ಯಾಕೆಂದರೆ ಪಿಯುಸಿ ಹಂತದ ವಯಸ್ಸು ಹೊಸತನ್ನು ಸೃಷ್ಟಿಸುವ, ಸೃಜನಶೀಲತೆಯನ್ನು ಅಭಿವ್ಯಕ್ತಿಸುವ, ತಾರುಣ್ಯದ ಶಕ್ತಿಯನ್ನು ಪ್ರತಿಬಿಂಬಿಸುವ ಕಾಲ. ಸಾಹಸಗಳನ್ನು ಸಾಧಿಸುವ ಹೊತ್ತದು. ಅಂಥ ಹೊತ್ತಲ್ಲಿ ಮನೆಯೊಳಗೆ ಕಂಪ್ಯೂಟರ್ ಅಥವಾ ಮೊಬೈಲ್ ಮುಂದೆ ಕೂತುಕೊಂಡು ತಾರುಣ್ಯದ ಚೈತನ್ಯವನ್ನು ವ್ಯರ್ಥಗೊಳಿಸಿಕೊಳ್ಳುವ ವ್ಯರ್ಥ ಪ್ರಯತ್ನವೇಕೆ? ದೈಹಿಕ ಚಟುವಟಿಕೆಗಳಿಲ್ಲದೆ ಬರಬಾರದ ಕಾಯಿಲೆಗಳು ಸಣ್ಣ ಪ್ರಾಯದಲ್ಲೇ ಬರಿಸಿಕೊಳ್ಳುವ ಪ್ರಯತ್ನವೇಕೆ? ಮೇಲಾಗಿ, ಇದರಿಂದಾಗುವ ಸಾಧನೆಯೂ ಅಂಥಾದ್ದೇನಿಲ್ಲ ಎಂಬುದನ್ನು ಪೋಷಕರು ಅರಿತುಕೊಳ್ಳಬೇಕು.


ಸ್ಕೂಲ್ ಡೇಸ್, ಕಾಲೇಜು ಡೇಸ್  ಅಂತ ಸ್ಪೋರ್ಟ್ಸ್, ಕಲ್ಚರಲ್ ಇವೆಂಟುಗಳಲ್ಲಿ ಒಂದಷ್ಟು ದಿನಗಳ ಸಂಭ್ರಮದ ಸವಾಲಿನ ಸಾರ್ಥಕ್ಯದ ಹೊತ್ತು ಸಿಗುವಾಗ ಎಲ್ಲವನ್ನೂ ಬಿಟ್ಟು ಸಾಧಿಸುವುದಾದರೂ ಏನು? ಆಯಾ ಹಂತದ ಕಲಿಕೆಯ ಪ್ರಕ್ರಿಯೆಯಲ್ಲಿ ಅನುಭವಿಸಬೇಕಾದುದನ್ನು ಆ ದಿನಗಳಲ್ಲೇ ಅನುಭವಿಸಬೇಕು. ಪೋಷಕರು ಇದರ ಬಗ್ಗೆ  ಎಚ್ಚರವನ್ನು ವಹಿಸಬೇಕು. ತಮಾಷೆಗೆ ಒಂದು ಮಾತನ್ನು ಹೇಳುವುದಾದರೆ, ಯಾರಿಗಾದರೂ ಕಾಲೇಜಿಗೆ ಬಂಕ್ ಹಾಕಿ ಸುಳ್ಳು ಹಾಜರಾತಿಯೊಂದಿಗೆ ಪರೀಕ್ಷೆ ಬರೆದು ಫಸ್ಟ್ ರ್ಯಾಂಕ್ ರಾಜು ಆಗಬೇಕೆಂದಿದೆಯೇ? 


Post a Comment

0 Comments
Post a Comment (0)
To Top