ಆರೋಗ್ಯಕರ ಬದುಕಿಗೆ ಮನೆಗಳಲ್ಲಿ ಶುದ್ಧ ಗಾಳಿ-ಬೆಳಕು ಅಗತ್ಯ: ಬಿಲ್ ಮ್ಯಾಕ್ವೇಡ್

Upayuktha
0


ಬೆಂಗಳೂರು: ಮನೆಗಳು ಕೇವಲ ಇಟ್ಟಿಗೆ- ಕಾಂಕ್ರೀಟ್‌ನ ಭೌತಿಕ ಕಟ್ಟಡಗಳಾಗಿರದೆ, ಆರೋಗ್ಯಕರ ಜೀವನಕ್ಕೆ ಅನುಕೂಲವಾಗುವ ಪರಿಸರವನ್ನು ಒದಗಿಸಬೇಕು ಎಂದು ಆಶ್ರೇ ಸಂಸ್ಥೆಯ (American Society of Heating, Refrigerating and Air-Conditioning Engineers) ಅಧ್ಯಕ್ಷ ಬಿಲ್ ಮ್ಯಾಕ್ವೇಡ್ ಅಭಿಪ್ರಾಯಪಟ್ಟರು.


ನಗರದ ನಿಟ್ಟೆ ಮೀನಾಕ್ಷಿ ತಾಂತ್ರಿಕ ಮಹಾವಿದ್ಯಾಲಯದ ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿಭಾಗ ಆಯೋಜಿಸಿದ್ದ ‘ಇಂಗಾಲದ ಹೊರಸೂಸುವಿಕೆಯ ನಿಯಂತ್ರಣ ಹಾಗೂ ಸುಸ್ಥಿರತೆ’ ಕುರಿತ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಅವರು ಮಾತನಾಡಿದರು.


ಮನೆಯೊಳಗೆ ಪರಿಶುದ್ಧ ಗಾಳಿ, ಸಮರ್ಪಕ ಬೆಳಕು, ಶುದ್ಧ ಕುಡಿಯುವ ನೀರು ಮತ್ತು ಶಬ್ದಮಾಲಿನ್ಯ ಕಡಿಮೆ ಇರುವ ವಾತಾವರಣ ಇರಬೇಕು. ಗಾಳಿ ಹರಿವು ಮತ್ತು ಸೂರ್ಯನ ಬೆಳಕು ಒಳಬರುವಿಕೆಗೆ ತಜ್ಞರು ನಿಗದಿಪಡಿಸಿರುವ ಮಾನದಂಡಗಳನ್ನು ಕಟ್ಟುನಿಟ್ಟಾಗಿ ಪಾಲಿಸುವುದು ಅಗತ್ಯ. ಇದರಿಂದ ನಿವಾಸಿಗಳ ಆರೋಗ್ಯ ಸುಧಾರಿಸುವುದರ ಜೊತೆಗೆ ಕಾರ್ಯತತ್ಪರತೆಯೂ ಹೆಚ್ಚುತ್ತದೆ ಎಂದು ಅವರು ಹೇಳಿದರು.


ಭಾರತದಲ್ಲಿ ಮನೆಯೊಳಗಿನ ಮಾಲಿನ್ಯದಿಂದ ಪ್ರತಿವರ್ಷ ಸುಮಾರು 0.61 ಮಿಲಿಯನ್ ಸಾವುಗಳು ಸಂಭವಿಸುತ್ತಿವೆ. 2022ರಲ್ಲಿ ಈ ಸಂಖ್ಯೆ 1.75 ಮಿಲಿಯನ್‌ಗೆ ಏರಿರುವುದು ಆತಂಕಕಾರಿ ಬೆಳವಣಿಗೆ. ಕಲುಷಿತ ವಾತಾವರಣದಿಂದ ಹೃದಯ ಸಂಬಂಧಿತ ಕಾಯಿಲೆಗಳು, ಹೃದಯಾಘಾತ ಹಾಗೂ ಉಸಿರಾಟದ ಸಮಸ್ಯೆಗಳು ಹೆಚ್ಚುತ್ತಿವೆ ಎಂದು ಅವರು ತಿಳಿಸಿದರು.


ಹಗಲಿನ ಬೆಳಕು ಮನೆಗೆ ಸಮರ್ಪಕವಾಗಿ ನುಸುಳುವುದು ನಿವಾಸಿಗಳ ಮನೋಸ್ಥಿತಿಯ ಸ್ಥಿರತೆ, ಸುಖನಿದ್ರೆ ಮತ್ತು ವಿಟಮಿನ್-ಡಿ ಪೂರೈಕೆಗೆ ಸಹಕಾರಿಯಾಗಿದೆ. ಜೊತೆಗೆ ಸೋಂಕು ನಿವಾರಣೆಯಲ್ಲಿಯೂ ಇದು ಸಹಾಯಕವಾಗುತ್ತದೆ ಎಂದರು.


ಕಾರ್ಯಕ್ರಮದಲ್ಲಿ ಚೆನ್ನೈನ ಟ್ರೇನ್ ಟೆಕ್ನಾಲಜೀಸ್ ಸಂಸ್ಥೆಯ ಸಹ ಇಂಜಿನಿಯರಿಂಗ್ ಮುಖ್ಯಸ್ಥ ಅರುಣ್ ದೊರೈಸ್ವಾಮಿ ಗೌರವಾನ್ವಿತ ಅತಿಥಿಯಾಗಿ ಭಾಗವಹಿಸಿದ್ದರು. ಮಧ್ಯಪ್ರದೇಶ ಸರ್ಕಾರದ ಕೌಶಲ್ಯಾಭಿವೃದ್ಧಿ ಇಲಾಖೆಯ ಅಪರ ಕಾರ್ಯದರ್ಶಿ ಗಿರೀಶ್ ಶರ್ಮಾ, ನಿಟ್ಟೆ ಶಿಕ್ಷಣ ಸಂಸ್ಥೆಯ ಟ್ರಸ್ಟಿ ರೋಹಿತ್ ಪೂಂಜ, ನಿಟ್ಟೆ ಮೀನಾಕ್ಷಿ ತಾಂತ್ರಿಕ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ. ಎಚ್.ಸಿ. ನಾಗರಾಜ್, ನಿಟ್ಟೆ ಪರಿಗಣಿತ ವಿಶ್ವವಿದ್ಯಾಲಯದ ಬೆಂಗಳೂರು ಕ್ಯಾಂಪಸ್ ಉಪಾಧ್ಯಕ್ಷ ಡಾ. ಸಂದೀಪ್ ಶಾಸ್ತ್ರಿ, ಶಿಕ್ಷಕ ಸಂಯೋಜಕ ಡಾ. ಎನ್. ಕಪಿಲನ್, ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿಭಾಗದ ಮುಖ್ಯಸ್ಥ ಡಾ. ಎನ್. ರಮೇಶ್ ಬಾಬು ಸೇರಿದಂತೆ ಹಲವರು ಉಪಸ್ಥಿತರಿದ್ದರು.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top