ಉಡುಪಿ: ಕರ್ನಾಟಕದ ರಂಗಭೂಮಿಯಲ್ಲಿ ತಮ್ಮದೇ ಆದ ವಿಶಿಷ್ಟ ಗುರುತು ಮೂಡಿಸಿರುವ ಹಿರಿಯ ರಂಗಭೂಮಿ ನಟ, ನಿರ್ದೇಶಕ ಮತ್ತು ಸಂಘಟಕ ಶ್ರೀಪತಿ ಮಂಜನಬೈಲು ಅವರಿಗೆ 2025–26ನೇ ಸಾಲಿನ ಮಲಬಾರ್ ವಿಶ್ವರಂಗ ಪುರಸ್ಕಾರ – 2026 ಪ್ರದಾನವಾಗುತ್ತಿದೆ. ಸಂಸ್ಕೃತಿ ವಿಶ್ವ ಪ್ರತಿಷ್ಠಾನ ಮತ್ತು ಮಲಬಾರ್ ಗೋಲ್ಡ್ ಅಂಡ್ ಡೈಮಂಡ್ಸ್ ಉಡುಪಿ ಶಾಖೆಯ ಸಂಯುಕ್ತ ಆಶ್ರಯದಲ್ಲಿ ಇದೇ ತಿಂಗಳ ಮಾರ್ಚ್ 26 ರಂದು ಈ ಗೌರವ ಪ್ರದಾನ ಮಾಡಲಾಗುತ್ತಿದೆ. ಶಂಕರ್ ರೂಫಿಂಗ್ ಸಿಸ್ಟಮ್ ದತ್ತಿನಿಧಿಯ ಪ್ರಾಯೋಜನೆಯಲ್ಲಿ ಈ ಪುರಸ್ಕಾರ ನೀಡಲಾಗುತ್ತಿದೆ.
ಬಾಲ್ಯದಿಂದಲೇ ಸಂಕಷ್ಟಗಳನ್ನು ಎದುರಿಸುತ್ತಾ, ಕನಸುಗಳ ಬೆನ್ನಟ್ಟಿದ ಶ್ರೀಪತಿ ಮಂಜನಬೈಲು ಅವರ ಬದುಕು ಸ್ವತಃ ಒಂದು ಪ್ರೇರಣಾದಾಯಕ ಕಥೆ. ದಿ. ಹನುಮಂತರಾವ್ ಮತ್ತು ಸಂಜೀವಿನಿ ದಂಪತಿಗಳ ಪುತ್ರರಾದ ಅವರು ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಮಂಜನಬೈಲು ಗ್ರಾಮದವರು. ಕುಟುಂಬದ ಆರ್ಥಿಕ ಪರಿಸ್ಥಿತಿ ದುರ್ಬಲವಾಗಿದ್ದರೂ ಶಿಕ್ಷಣ ಮತ್ತು ಬದುಕಿನ ಹೋರಾಟವನ್ನು ಕೈ ಬಿಡದೇ ತಮ್ಮದೇ ಆದ ದಾರಿಯನ್ನು ರೂಪಿಸಿಕೊಂಡವರು.
ಪ್ರಾಥಮಿಕ ವಿದ್ಯಾಭ್ಯಾಸವನ್ನು ನಿಡ್ಡೋಡಿಯಲ್ಲಿ, ನಂತರ ಕಟೀಲು ಹೈಸ್ಕೂಲಿನಲ್ಲಿ ಅಭ್ಯಾಸ ಮಾಡಿದ ಅವರು ಕುಟುಂಬದ ಪರಿಸ್ಥಿತಿಯಿಂದ ಓದು ಜೊತೆಗೆ ಹೋಟೆಲ್ ಉದ್ಯೋಗವನ್ನೂ ನಿರ್ವಹಿಸಿದರು. ಶಿರಹಟ್ಟಿ, ಬೆಳ್ಳಟ್ಟಿ, ಬಳ್ಳಾರಿ, ಗೌರಿಬಿದನೂರು, ಬೆಂಗಳೂರು ಮತ್ತು ಧಾರವಾಡ ಹೀಗೆ ಹಲವು ಊರುಗಳಲ್ಲಿ ಕೆಲಸ ಮಾಡಿಕೊಂಡು ಶಿಕ್ಷಣ ಮುಂದುವರಿಸಿದರು. ಇದೇ ಅವಧಿಯಲ್ಲಿ ನಾಟಕ ಮತ್ತು ಯಕ್ಷಗಾನದ ಮೇಲಿನ ಆಸಕ್ತಿ ಹೆಚ್ಚುತ್ತಾ ರಂಗಭೂಮಿಯತ್ತ ಅವರ ಪಯಣ ಆರಂಭವಾಯಿತು.
ಪ್ರಾಥಮಿಕ ಶಾಲೆಯಲ್ಲೇ ಅಭಿನಯಿಸಿದ “ಲವಕುಶ” ನಾಟಕದಲ್ಲಿ ಸೀತೆಯ ಪಾತ್ರಕ್ಕೆ ದೊರೆತ ಮೆಚ್ಚುಗೆ ಅವರ ಮುಂದಿನ ರಂಗಜೀವನಕ್ಕೆ ನಾಂದಿಯಾಯಿತು. ಕಟೀಲು ಹೈಸ್ಕೂಲಿನ ಗುರು ಸದಾನಂದ ಆಸ್ರಣ್ಣರ ಪ್ರೋತ್ಸಾಹವೂ ಅವರ ಕಲಾ ಬದುಕಿಗೆ ದಿಕ್ಕು ತೋರಿಸಿತು.
ಮುಂದೆ ಪಾಂಪೇ ಕಾಲೇಜಿನಲ್ಲಿ ಪಿಯುಸಿ ಪೂರ್ಣಗೊಳಿಸಿದ ಅವರು 1972ರಲ್ಲಿ ಪರೀಕ್ಷೆ ಉತ್ತೀರ್ಣರಾಗಿ ಕರ್ನಾಟಕ ಹೌಸಿಂಗ್ ಬೋರ್ಡ್‌ನಲ್ಲಿ ಸೀನಿಯರ್ ಇನ್ಸ್ಪೆಕ್ಟರ್ ಆಗಿ ಸೇವೆಗೆ ಸೇರ್ಪಡೆಯಾದರು. ಬಳಿಕ ದಾಂಡೇಲಿ ಹಾಗೂ ಬೆಳಗಾವಿಯಲ್ಲಿ ಸೇವೆ ಸಲ್ಲಿಸಿದರು.
ಬೆಳಗಾವಿಯಲ್ಲಿ ಕನ್ನಡದ ಸಾಂಸ್ಕೃತಿಕ ಚಟುವಟಿಕೆಗಳ ಕೊರತೆಯನ್ನು ಗಮನಿಸಿದ ಅವರು ಸ್ನೇಹಿತರಾದ ಡಿ.ಟಿ. ಚೆನ್ನಕೇಶವಮೂರ್ತಿ, ಕವಿ ಸತೀಶ್ ಕುಲಕರ್ಣಿ, ಡಾ. ಸರಜೂಕಾಟ್ಕರ್ ಹಾಗೂ ಎಂ.ಕೆ. ಜೈನಾಪುರ್ ಅವರೊಂದಿಗೆ ಸೇರಿ ಕನ್ನಡ ರಂಗಚಟುವಟಿಕೆಗಳನ್ನು ಸಂಘಟಿತವಾಗಿ ಪ್ರಾರಂಭಿಸಿದರು. ಸೈಕಲ್‌ನಲ್ಲಿ ಮನೆ ಮನೆಗೆ ತೆರಳಿ ಜನರನ್ನು ಸಂಪರ್ಕಿಸಿ ನಾಲ್ಕು ದಿನಗಳ ನಾಟಕೋತ್ಸವ ಆಯೋಜಿಸಿದ ಅವರ ಮೊದಲ ಪ್ರಯತ್ನವೇ ಅಪಾರ ಯಶಸ್ಸು ಕಂಡಿತು. ಇದೇ ಚಟುವಟಿಕೆಗಳು ಮುಂದಾಗಿ ಬೆಳಗಾವಿಯ “ರಂಗಸಂಪದ” ಎಂಬ ಸಾಂಸ್ಕೃತಿಕ ಚಳುವಳಿಗೆ ಬುನಾದಿಯಾಯಿತು.
ಅವರ ನೇತೃತ್ವದಲ್ಲಿ ಅನೇಕ ನಾಟಕೋತ್ಸವಗಳು, ರಂಗ ಕಾರ್ಯಾಗಾರಗಳು, ನಾಟಕ ರಚನಾ ಶಿಬಿರಗಳು ಹಾಗೂ ಸೆಮಿನಾರ್‌ಗಳು ನಡೆದಿವೆ. 1994ರಲ್ಲಿ 14 ದಿನಗಳ ಬಹುಭಾಷಾ ನಾಟಕೋತ್ಸವ ಹಾಗೂ 1998ರಲ್ಲಿ ಗಿರೀಶ್ ಕಾರ್ನಾಡ್ ನಾಟಕೋತ್ಸವವನ್ನು ಯಶಸ್ವಿಯಾಗಿ ನಡೆಸಿದರು.
ಜ್ಞಾನಾಭಿವೃದ್ಧಿಯ ಮೇಲೂ ಅಪಾರ ಆಸಕ್ತಿ ಹೊಂದಿದ್ದ ಅವರು ದೂರಶಿಕ್ಷಣದ ಮೂಲಕ ಬಿ.ಎ. ಹಾಗೂ ಸಮಾಜಶಾಸ್ತ್ರ ಮತ್ತು ರಾಜಕೀಯಶಾಸ್ತ್ರದಲ್ಲಿ ಎಂ.ಎ. ಪದವಿ ಪಡೆದರು. ಮಾನವ ಸಂಪನ್ಮೂಲ ಮತ್ತು ಗ್ರಾಮೀಣಾಭಿವೃದ್ಧಿ ವಿಷಯಗಳಲ್ಲಿ ಪಿಜಿ ಡಿಪ್ಲೋಮಾ ಗಳಿಸಿದರು. ಜೊತೆಗೆ ವೇದ–ಪುರಾಣ, ಇತಿಹಾಸ ಅಧ್ಯಯನ, ಗಮಕ ಕಲೆ ಮತ್ತು ಹಿಂದುಸ್ತಾನಿ ಸಂಗೀತದಲ್ಲಿಯೂ ತೊಡಗಿಸಿಕೊಂಡರು.
ಇದುವರೆಗೆ ಅವರು 80ಕ್ಕೂ ಹೆಚ್ಚು ನಾಟಕಗಳಿಗೆ ನಿರ್ದೇಶನ ನೀಡಿದ್ದು, 170ಕ್ಕೂ ಹೆಚ್ಚು ನಾಟಕಗಳಲ್ಲಿ ಅಭಿನಯ ಮಾಡಿದ್ದಾರೆ. ಜೊತೆಗೆ 18 ಟಿವಿ ಧಾರಾವಾಹಿಗಳು, 12 ಸಾಕ್ಷಚಿತ್ರಗಳು ಹಾಗೂ 18 ಚಲನಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಮೂರು ಮರಾಠಿ ನಾಟಕಗಳನ್ನು ಕನ್ನಡಕ್ಕೆ ಭಾಷಾಂತರಿಸುವುದರ ಜೊತೆಗೆ ಎಸ್.ಎಲ್. ಭೈರಪ್ಪ ಅವರ “ವಂಶವೃಕ್ಷ” ಕಾದಂಬರಿಯನ್ನು ರಂಗರೂಪಾಂತರ ಮಾಡಿದ್ದಾರೆ. ಬಿ.ವಿ. ಕಾರಂತರ ಜೀವನಾಧಾರಿತ “ಬಾಬಾ ಕಾರಂತ” ಹಾಗೂ ಮಹಾತ್ಮ ಗಾಂಧೀಜಿ ಅವರ ಕರ್ನಾಟಕ ಪ್ರವಾಸದ ಆಧಾರಿತ “ಕನ್ನಡ ನೆಲದಲ್ಲಿ ಮೋಹನದಾಸ್” ನಾಟಕಗಳನ್ನು ರಚಿಸಿದ್ದಾರೆ.
ಅವರ ಕಲಾ ಬದುಕಿಗೆ ಸದಾ ಬೆಂಬಲವಾಗಿ ನಿಂತವರು ಪತ್ನಿ ಶೋಭಾ ಮತ್ತು ಪುತ್ರಿ ನಂದಿನಿ.
ಶ್ರೀಪತಿ ಮಂಜನಬೈಲು ಅವರಿಗೆ ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ, ಪೃಥ್ವಿ ಥಿಯೇಟರ್ ಪ್ರಶಸ್ತಿ, ಸುವರ್ಣ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ಅನೇಕ ಗೌರವಗಳು ಲಭಿಸಿವೆ. 2024ರಲ್ಲಿ ಮೂಡುಬಿದಿರೆ ತಾಲೂಕು ಪ್ರಥಮ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿರುವುದು ಅವರ ಸಾಧನೆಗೆ ಮತ್ತೊಂದು ಮೆರುಗು.
ರಂಗಭೂಮಿಯನ್ನು ದೇವರಂತೆ ಕಂಡು ಬದುಕು ಸಾಗಿಸಿದ ಈ ಮೇರು ಕಲಾವಿದರಿಗೆ ದೊರೆಯುತ್ತಿರುವ ಮಲಬಾರ್ ವಿಶ್ವರಂಗ ಪುರಸ್ಕಾರ – 2026 ಅವರ ದೀರ್ಘಕಾಲದ ಕಲಾಸಾಧನೆಗೆ ಸಲ್ಲುವ ಗೌರವವೆಂದು ಪರಿಗಣಿಸಲಾಗಿದೆ.
- ರಾಜೇಶ್ ಭಟ್ ಪಣಿಯಾಡಿ
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


