ಪದವಿ ಪೂರ್ವ ಶಿಕ್ಷಣ ಇಲಾಖೆಯ ಆಸ್ಮಿತೆ–ಅಸ್ತಿತ್ವಕ್ಕೆ ಸವಾಲು

Upayuktha
0

ಉನ್ನತೀಕರಣಕ್ಕೆ ಸರಕಾರದಿಂದ ಸ್ಪಷ್ಟ ನೀತಿ ಅಗತ್ಯ





ಬೆಂಗಳೂರು: ಎಸ್‌.ಎಸ್‌.ಎಲ್‌.ಸಿ ನಂತರ ಹಾಗೂ ಪದವಿ ಶಿಕ್ಷಣಕ್ಕೆ ಮುನ್ನ ಇರುವ ಎರಡು ವರ್ಷದ ಪದವಿ ಪೂರ್ವ ಶಿಕ್ಷಣವು ವಿದ್ಯಾರ್ಥಿಗಳ ಭವಿಷ್ಯ ರೂಪಿಸುವ ಅತ್ಯಂತ ಮಹತ್ವದ ಘಟ್ಟವೆಂದು ಶಿಕ್ಷಣ ತಜ್ಞರು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಇಂತಹ ಮಹತ್ವದ ಹಂತವನ್ನು ನಿರ್ವಹಿಸುವ ಪದವಿ ಪೂರ್ವ ಶಿಕ್ಷಣ ಇಲಾಖೆ ಇತ್ತೀಚಿನ ಕೆಲ ಧೋರಣೆಗಳು ಮತ್ತು ಆಡಳಿತಾತ್ಮಕ ಆದೇಶಗಳ ಪರಿಣಾಮವಾಗಿ ತನ್ನ ಆಸ್ಮಿತೆ ಮತ್ತು ಅಸ್ತಿತ್ವದ ಸವಾಲನ್ನು ಎದುರಿಸುತ್ತಿರುವುದಾಗಿ ಶಿಕ್ಷಣ ವಲಯದಲ್ಲಿ ಆತಂಕ ವ್ಯಕ್ತವಾಗುತ್ತಿದೆ.


ಶಾಲಾ ಶಿಕ್ಷಣ ಮತ್ತು ಉನ್ನತ ಶಿಕ್ಷಣದ ನಡುವಿನ ಪ್ರಮುಖ ಸಂಪರ್ಕ ಕೊಂಡಿಯಾಗಿ ಕಾರ್ಯನಿರ್ವಹಿಸುತ್ತಿರುವ ಪದವಿ ಪೂರ್ವ ಶಿಕ್ಷಣ ವ್ಯವಸ್ಥೆ, ಒಂದು ಕಾಲದಲ್ಲಿ ದೇಶದಲ್ಲಿಯೇ ಮಾದರಿ ಶಿಕ್ಷಣ ವ್ಯವಸ್ಥೆಯಾಗಿ ಗುರುತಿಸಿಕೊಂಡಿತ್ತು. ಗುಣಾತ್ಮಕ ಹಾಗೂ ಸ್ಪರ್ಧಾತ್ಮಕ ಶಿಕ್ಷಣವನ್ನು ನೀಡುವ ಮೂಲಕ ಈ ಹಂತವು ವಿದ್ಯಾರ್ಥಿಗಳನ್ನು ಉನ್ನತ ಶಿಕ್ಷಣಕ್ಕೆ ಸಿದ್ಧಗೊಳಿಸುವ ಮಹತ್ವದ ಪಾತ್ರವನ್ನು ನಿರ್ವಹಿಸುತ್ತಿದೆ.


ಕೊಠಾರಿ ಆಯೋಗದ ಶಿಫಾರಸಿನಂತೆ (10+2+3) ಶಿಕ್ಷಣ ವ್ಯವಸ್ಥೆಯನ್ನು ಜಾರಿಗೊಳಿಸುವ ಭಾಗವಾಗಿ ರಾಜ್ಯದಲ್ಲಿ +2 ಹಂತದ ಶಿಕ್ಷಣವನ್ನು 1971ರಲ್ಲಿ ಮಲ್ಲಿಕಾರ್ಜುನಪ್ಪ ಸಮಿತಿಯ ವರದಿ ಆಧಾರದ ಮೇಲೆ ಪ್ರಾರಂಭಿಸಲಾಯಿತು. ಆರಂಭದಲ್ಲಿ ಈ ಶಿಕ್ಷಣವನ್ನು ಸಾರ್ವಜನಿಕ ಶಿಕ್ಷಣ ಇಲಾಖೆಯಲ್ಲಿ ವಿಲೀನಗೊಳಿಸುವ ಪ್ರಯತ್ನ ನಡೆದಿದ್ದರೂ, ಅಂದಿನ ವಿಧಾನ ಪರಿಷತ್ ಸದಸ್ಯರಾದ ಚೆನ್ನಬಸವಯ್ಯ ಅವರ ಹೋರಾಟದ ಪರಿಣಾಮವಾಗಿ ಆ ನಿರ್ಧಾರಕ್ಕೆ ತಡೆ ಬಿದ್ದಿತು.


ನಂತರ 1979ರಲ್ಲಿ ತಜ್ಞರ ಸಮಿತಿಯನ್ನು ರಚಿಸಿ ನೀಡಿದ ಶಿಫಾರಸಿನ ಮೇರೆಗೆ 1985ರಲ್ಲಿ ಪದವಿ ಪೂರ್ವ ಶಿಕ್ಷಣ ಮಂಡಳಿಯನ್ನು ಸ್ಥಾಪಿಸಲಾಯಿತು. 1988ರಲ್ಲಿ ಈ ಮಂಡಳಿಯನ್ನು ರದ್ದುಪಡಿಸುವ ನಿರ್ಧಾರಕ್ಕೆ ವಿರೋಧ ವ್ಯಕ್ತವಾದ ಬಳಿಕ ಮತ್ತೊಮ್ಮೆ ಸಮಿತಿ ರಚನೆಗೊಂಡು, ಅದರ ಶಿಫಾರಸಿನ ಆಧಾರದ ಮೇಲೆ 1992ರಲ್ಲಿ ಪದವಿ ಪೂರ್ವ ಶಿಕ್ಷಣ ಮಂಡಳಿಯು ಪ್ರತ್ಯೇಕ ಪದವಿ ಪೂರ್ವ ಶಿಕ್ಷಣ ಇಲಾಖೆಯಾಗಿ ಅಸ್ತಿತ್ವಕ್ಕೆ ಬಂದಿತು.


ಇದೇ ಹಂತದ ಶಿಕ್ಷಣದ ಮಹತ್ವವನ್ನು ಮನಗಂಡು 1994ರಲ್ಲಿ ರಾಜ್ಯದಲ್ಲಿ ಸಾಮಾನ್ಯ ಪ್ರವೇಶ ಪರೀಕ್ಷೆ (Common Entrance Test) ವ್ಯವಸ್ಥೆಯನ್ನು ಪ್ರಾರಂಭಿಸಲಾಯಿತು. ವೃತ್ತಿಪರ ಶಿಕ್ಷಣ ಸಂಸ್ಥೆಗಳಿಗೆ ಅರ್ಹ ವಿದ್ಯಾರ್ಥಿಗಳ ಆಯ್ಕೆಗೆ ಈ ವ್ಯವಸ್ಥೆ ದೇಶದಲ್ಲಿಯೇ ಮೊದಲ ಬಾರಿಗೆ ಕರ್ನಾಟಕದಲ್ಲಿ ಜಾರಿಯಾಗಿದ್ದು, ಹೊಸ ಶಿಕ್ಷಣ ಪರಂಪರೆಯನ್ನು ಆರಂಭಿಸಿತು.


ಪಠ್ಯಕ್ರಮ, ಪರಿಣಾಮಕಾರಿ ಬೋಧನೆ ಹಾಗೂ ವ್ಯವಸ್ಥಿತ ಪರೀಕ್ಷಾ ಕ್ರಮಗಳ ಮೂಲಕ ಪದವಿ ಪೂರ್ವ ಶಿಕ್ಷಣ ಇಲಾಖೆ ರಾಷ್ಟ್ರದಲ್ಲಿಯೇ ಗಮನಾರ್ಹ ಸ್ಥಾನಮಾನವನ್ನು ಗಳಿಸಿತು. ದೇಶದ ವಿವಿಧ ರಾಜ್ಯಗಳ ಶಿಕ್ಷಣ ಇಲಾಖೆಗಳು ಸಹ ಈ ವ್ಯವಸ್ಥೆಯ ಕಾರ್ಯವೈಖರಿಯನ್ನು ಅಧ್ಯಯನ ಮಾಡಲು ರಾಜ್ಯಕ್ಕೆ ಭೇಟಿ ನೀಡಿರುವ ಉದಾಹರಣೆಗಳಿವೆ.


ಅದೇ ರೀತಿ ದೇಶದ ವಿವಿಧ ಭಾಗಗಳಿಂದ ಮತ್ತು ವಿದೇಶದಲ್ಲಿರುವ ಅನಿವಾಸಿ ಭಾರತೀಯರಿಂದಲೂ ತಮ್ಮ ಮಕ್ಕಳಿಗೆ ರಾಜ್ಯದ ಪದವಿ ಪೂರ್ವ ಕಾಲೇಜುಗಳಲ್ಲಿ ಶಿಕ್ಷಣ ನೀಡಲು ಆಸಕ್ತಿ ವ್ಯಕ್ತವಾಗುತ್ತಿದೆ. ಇದರ ಪರಿಣಾಮವಾಗಿ ಹಲವು ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳು ರಾಜ್ಯದಲ್ಲಿ ಪದವಿ ಪೂರ್ವ ಕಾಲೇಜುಗಳನ್ನು ಸ್ಥಾಪಿಸಿ ಸಾವಿರಾರು ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುತ್ತಿವೆ.


ಆದರೆ ಇತ್ತೀಚಿನ ಆಡಳಿತಾತ್ಮಕ ಕ್ರಮಗಳು ಮತ್ತು ನಿರಂತರ ಆದೇಶಗಳಿಂದ ಇಲಾಖೆಯನ್ನು ಉನ್ನತೀಕರಿಸುವ ಬದಲು ಅದರ ಸ್ವತಂತ್ರ ಆಸ್ಮಿತೆ ಮತ್ತು ಅಸ್ತಿತ್ವಕ್ಕೆ ಧಕ್ಕೆಯುಂಟಾಗುತ್ತಿರುವುದು ಶಿಕ್ಷಣ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಯಾವುದೇ ಶಿಕ್ಷಣ ವ್ಯವಸ್ಥೆಯಲ್ಲಿ ಮೂಲಭೂತ ಬದಲಾವಣೆಗಳನ್ನು ಮಾಡುವ ಮೊದಲು ತಜ್ಞರ ಸಮಿತಿಯ ಅಧ್ಯಯನ ಹಾಗೂ ಸಾಧಕ-ಬಾಧಕಗಳ ವಿಶ್ಲೇಷಣೆ ಅವಶ್ಯಕವೆಂಬ ಅಭಿಪ್ರಾಯವೂ ವ್ಯಕ್ತವಾಗುತ್ತಿದೆ.


ಈ ಹಿನ್ನೆಲೆಯಲ್ಲಿ ಪದವಿ ಪೂರ್ವ ಶಿಕ್ಷಣ ಇಲಾಖೆಯ ಸ್ವತಂತ್ರತೆ ಮತ್ತು ಶೈಕ್ಷಣಿಕ ಗುಣಮಟ್ಟವನ್ನು ಕಾಪಾಡುವ ದಿಸೆಯಲ್ಲಿ ಸರಕಾರವು ಸ್ಪಷ್ಟ ನೀತಿ ರೂಪಿಸಿ, ತಜ್ಞರ ಸಲಹೆ ಆಧಾರದಲ್ಲಿ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕೆಂದು ಶಿಕ್ಷಣ ವಲಯದ ವಲಯದವರು ಆಗ್ರಹಿಸುತ್ತಿದ್ದಾರೆ.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top