ಮನುಷ್ಯ ಮೂಲತಃ ಸಂಘ ಜೀವಿ. ಆತನ ಬದುಕಿನಲ್ಲಿ ಕುಟುಂಬ ವಹಿಸಿದಷ್ಟೇ ಪಾತ್ರವನ್ನು ಸ್ನೇಹಿತರು ವಹಿಸುತ್ತಾರೆ. ಎಷ್ಟೋ ಬಾರಿ ತಂದೆ ತಾಯಿಗಳಲ್ಲಿ ಒಡಹುಟ್ಟಿದವರಲ್ಲಿ ಸಂಗಾತಿ ಹಾಗೂ ಮಕ್ಕಳಲ್ಲಿ ಹೇಳಿಕೊಳ್ಳಲಾಗದ ಸಂಗತಿಗಳನ್ನು ನೋವುಗಳನ್ನು ಸ್ನೇಹಿತರಲ್ಲಿ ಹಂಚಿಕೊಂಡು ಹಗುರಾಗಬಹುದು. ಕಾರಣ ಸ್ನೇಹಿತರು ನಿಮ್ಮನ್ನುನೀವು ಇರುವಂತೆಯೇ ಸ್ವೀಕರಿಸುತ್ತಾರೆ. ಆದರೆ ಅದೇ ಕೌಟುಂಬಿಕ ವ್ಯವಸ್ಥೆಯಲ್ಲಿ ಎಲ್ಲರೂ ತಮ್ಮ ತಮ್ಮ ಮೂಗಿನ ನೇರಕ್ಕೆ, ಇಲ್ಲವೇ ತಮ್ಮ ಗ್ರಹಿಕೆಯ ಅನುಸಾರ ನಿಮ್ಮನ್ನು ಅರ್ಥ ಮಾಡಿಕೊಳ್ಳಲು ಪ್ರಯತ್ನಿಸುತ್ತಾರೆ.ಜೀವನದಲ್ಲಿ ಸಂತೋಷವಾಗಿರಬೇಕು ಎಂದರೆ ನಾನು ಬಹಳಷ್ಟು ಜನ ಸ್ನೇಹಿತರನ್ನು ಹೊಂದಿರಲೇಬೇಕೇ ಎಂಬುದು ಬಹುತೇಕ ಜನರ ಪ್ರಶ್ನೆ.
ಜೀವನ ಎಂಬುದು ಅತ್ಯಂತ ಉದ್ದವಾದ ಹಾಗೂ ಅಷ್ಟೇ ಕಠಿಣವಾದ ಸವಾಲುಗಳನ್ನು ಹೊಂದಿರುವ ಪ್ರಯಾಣ. ಈ ಬದುಕನ್ನು ಸಾಗಿಸಲು ನಮಗೆ ಅತಿ ಹೆಚ್ಚಿನ ಸ್ನೇಹಿತರ ಬಳಗ ಬೇಕಾಗಿಲ್ಲ... ಆದರೆ ನಮ್ಮನ್ನು ಸದಾ ಕಾಲ ಬೆಂಬಲಿಸುವ ಒಂದು ವ್ಯವಸ್ಥೆ ಮಾತ್ರ ಖಂಡಿತವಾಗಿಯೂ ಇರಬೇಕು.
ತಮ್ಮ ಸ್ನೇಹಿತನ ಕುರಿತು ಯಾವುದೇ ನಿರ್ಣಯತ್ಮಾಕ ಹೇಳಿಕೆಗಳನ್ನು ಕೊಡದೆ ಕೇವಲ ಅವರ ಮಾತುಗಳನ್ನು ಆಲಿಸುವ ಸ್ನೇಹಿತರು ಖಂಡಿತವಾಗಿಯೂ ಬೇಕು. ತಮ್ಮ ಸ್ನೇಹಿತನ ಕಣ್ಣೀರನ್ನು ಕೆನ್ನೆಯ ಮೇಲೆ ಜಾರದಂತೆ ನೋಡಿಕೊಳ್ಳುವ, ಜಾರಿದರೂ ಅದನ್ನು ಒರೆಸಲು ಸಿದ್ಧರಿರುವ, ಅವರ ನೋವಿಗೆ ಕಿವಿಯಾಗುವ, ಅವರ ಕಷ್ಟಕ್ಕೆ ಹೆಗಲಾಗುವ ಸ್ನೇಹಿತರು ಖಂಡಿತವಾಗಿಯೂ ಬೇಕು. ಸ್ನೇಹಿತರ ಗೆಲುವನ್ನು ತಮ್ಮದೇ ಗೆಲುವು ಎಂಬಂತೆ ಸಂಭ್ರಮಿಸುವ ಸ್ನೇಹವನ್ನು ಪ್ರತಿಯೊಬ್ಬ ವ್ಯಕ್ತಿಯು ಬದುಕಿನಲ್ಲಿ ಹೊಂದಿರಲೇಬೇಕು.... ನನ್ನ ಮನದ ನೋವು, ಹತಾಶೆ,ದುಃಖಗಳನ್ನು ಸ್ನೇಹಿತರೊಂದಿಗೆ ಹಂಚಿಕೊಳ್ಳುವ ಮೂಲಕ ಸಾಂತ್ವನ ಪಡೆಯುವಂತಹ ಸ್ನೇಹದ ಅವಶ್ಯಕತೆ ಎಲ್ಲರಿಗೂ ಇದ್ದೇ ಇರುತ್ತದೆ.
"ಅ ಫ್ರೆಂಡ್ ಇನ್ ನೀಡ್, ಈಸ್ ಎ ಫ್ರೆಂಡ್ ಇಂಡೀಡ್." ಎಂಬ ಮಾತನ್ನು ನೀವು ಕೇಳಿರಬಹುದು. ನಿಮ್ಮ ಅವಶ್ಯಕತೆಯ ಸಮಯದಲ್ಲಿ ಜಾರಿಕೊಳ್ಳದ, ಅದೆಷ್ಟೇ ಕಷ್ಟ ಬಂದರೂ ನಿಮಗೆ ಆರ್ಥಿಕವಾಗಿ ಸಹಾಯ ಮಾಡದೆ ಹೋದರೂ ಭಾವನಾತ್ಮಕವಾಗಿ ನಿಮ್ಮೊಂದಿಗೆ ಇರುವ ಸ್ನೇಹಿತರು ಖಂಡಿತವಾಗಿಯೂ ಬೇಕು.. ಯಾವಾಗ ಈ ಜಗತ್ತು ಅತ್ಯಂತ ಶೀತಲವೆಂದು ನಿಮಗೆ ತೋರುತ್ತದೆಯೋ ಆಗ ನಿಮಗೆ ಬೆಚ್ಚಗಿನ ಅನುಭವವನ್ನು ನೀಡುವವನೇ ಓರ್ವ ನಿಜವಾದ ಅತ್ಯುತ್ತಮ ಸ್ನೇಹಿತ.
ಚಿಕ್ಕ ವಯಸ್ಸಿನಲ್ಲಿ ಶಾಲೆಯಲ್ಲಿ ಓದುತ್ತಿರುವಾಗ, ಅಕ್ಕಪಕ್ಕದ ಮನೆಯ ಓರಗೆಯ ಮಕ್ಕಳು, ಹೀಗೆ ನಮಗೆ ಸಾಕಷ್ಟು ಜನ ಸ್ನೇಹಿತರು ಇರುತ್ತಾರೆ ಆದರೆ ದೊಡ್ಡವರಾಗುತ್ತಾ ಹೋದಂತೆ ನಾವು ನಮ್ಮದೇ ಮನಸ್ಥಿತಿಯ ನಮ್ಮದೇ ರೀತಿಯ ಹವ್ಯಾಸಗಳನ್ನು ಹೊಂದಿರುವ ವ್ಯಕ್ತಿಗಳೊಂದಿಗೆ ಸ್ನೇಹವನ್ನು ಹೊಂದುತ್ತಾ ಹೋಗುತ್ತೇವೆ. ಬದುಕಿನ ಕುರಿತು ನಮ್ಮ ಆದ್ಯತೆಗಳು ಬದಲಾದಂತೆ ನಮ್ಮ ಸ್ನೇಹಿತರನ್ನು ಕೂಡ ನಾವು ಫಿಲ್ಟರ್ ಮಾಡುತ್ತಾ ಹೋಗುತ್ತೇವೆ . ಹಾಗೆಯೇ ನಮ್ಮ ಸ್ನೇಹಿತರ ವಲಯವು ಕೂಡ ಚಿಕ್ಕದಾಗುತ್ತಾ ಹೋಗುತ್ತದೆ...ಆಗಬೇಕು ಕೂಡ.
ತುಂಬಾ ಕಡಿಮೆ ಜನರಿಗೆ ತಾವು ಚಿಕ್ಕಂದಿನಲ್ಲಿ ಹೊಂದಿದ ಸ್ನೇಹಿತರೇ ಬದುಕಿನ ಕೊನೆಯವರೆಗೂ ಇರುತ್ತಾರೆ.ಅಂತಹ ಸ್ನೇಹ ವ್ಯಕ್ತಿಯಲ್ಲಿ ಸದಾ ಉತ್ಸಾಹ, ಉಲ್ಲಾಸ, ಜೀವನೋತ್ಸಾಹ ಹಾಗೂ ಹುಮ್ಮಸ್ಸನ್ನು ಹಾಗೂ ತನ್ನೊಂದಿಗೆ ತನ್ನ ಸ್ನೇಹಿತ ಇದ್ದಾನೆ ಎಂಬ ಭರವಸೆಯನ್ನು ಸದಾ ಬದುಕಿನಲ್ಲಿ ಹೊಂದಿರಲು ಸಹಾಯಕವಾಗಿರುತ್ತದೆ.
ಬಹಳಷ್ಟು ಜನ ಸ್ನೇಹಿತರನ್ನು ಹೊಂದಿರುವುದು ಒಳ್ಳೆಯದೇ? ಎಂದು ಕೇಳಿದರೆ ನಮಗೆ ನೂರಾರು ಜನ ಪರಿಚಿತರು ಇರಬಹುದು ಆದರೆ ನೂರಾರು ಜನ ಆತ್ಮೀಯ ಸ್ನೇಹಿತರು ಇರಲು ಸಾಧ್ಯವಿಲ್ಲ. ನೂರು ಸಾವಿರಗಳ ಲೆಕ್ಕದಲ್ಲಿ ಇರುವ ಎಲ್ಲ ಪರಿಚಿತರನ್ನು ಸ್ನೇಹಿತರು ಎಂದುಕೊಂಡರೆ ಅದು ನಮ್ಮ ತಪ್ಪು ಕಲ್ಪನೆ.
ಎಲ್ಲಾ ಪರಿಚಿತರು ಸ್ನೇಹಿತರಾಗುವುದಿಲ್ಲ....
ಸಾಧ್ಯವಾದಷ್ಟು ನಮ್ಮ ಸ್ನೇಹಿತರ ವಲಯವನ್ನು ಚಿಕ್ಕದಾಗಿರಿಸಿಕೊಳ್ಳಬೇಕು ಎಂಬ ಮಾತುಗಳನ್ನು ಇತ್ತೀಚಿಗೆ ಸಾಮಾಜಿಕ ಜಾಲತಾಣಗಳಲ್ಲಿ ಬಹಳಷ್ಟು ಕೇಳುತ್ತಿದ್ದೇವೆ.... "ಕೀಪ್ ಯುವರ್ ಸರ್ಕಲ್ ಸ್ಮಾಲ್" ಎಂಬ ಈ ಮಾತಿನಲ್ಲಿ ಸತ್ಯವಿದೆ ಕೂಡ.
ಈ ಹಿಂದಿನ ದಿನಗಳಂತೆ ಎಲ್ಲರನ್ನೂ ನಂಬುವ ಕಾಲ ಇದಲ್ಲ. ಅದರಲ್ಲೂ ವೇಗವಾಗಿ ಬದಲಾಗುತ್ತಿರುವ ಇಂದಿನ ತಂತ್ರಜ್ಞಾನ ಯುಗದಲ್ಲಿ ಔದ್ಯೋಗಿಕವಾಗಿ, ಔದ್ಯಮಿಕವಾಗಿ ನಾನು ಮುಂದೆ ತಾನು ಮುಂದೆ ಎಂದು ಬೆಳೆಯುತ್ತಿರುವ ಜನರಲ್ಲಿ ವ್ಯವಹಾರ ಸಂಬಂಧಿ ಸ್ನೇಹ ಸಂಬಂಧಗಳು ಇರುತ್ತವೆಯೇ ಹೊರತು ಅದರಲ್ಲಿ ಭಾವನಾತ್ಮಕ ಬಂಧಗಳನ್ನು ಹುಡುಕಬಾರದು. ವ್ಯಾಪಾರ ವ್ಯವಹಾರಗಳನ್ನು ಮಾಡುತ್ತಿರುವುದೇ ಲಾಭಕ್ಕಾಗಿ ಎಂದಾಗ ಅದರಲ್ಲಿ ಭಾವನಾತ್ಮಕ ಬೆಂಬಲ ಎಂಬುದು ಮರೀಚಿಕೆ.
ಪ್ರಸ್ತುತ ಸಮಯದಲ್ಲಿ ಸ್ನೇಹಿತರ ವಲಯವನ್ನು ಆದಷ್ಟು ಚಿಕ್ಕದಾಗಿಟ್ಟುಕೊಳ್ಳುವುದು ನಮ್ಮೆಲ್ಲರ ಆದ್ಯತೆ ಆಗಿರಲೇಬೇಕು ಕಾರಣಗಳು ನೂರಾರಿದ್ದರೂ ಒಂದು ಪುಟ್ಟ ಉದಾಹರಣೆಯ ಮೂಲಕ ಈ ವಿಷಯವನ್ನು ವಿವರಿಸುತ್ತೇನೆ.
ನಮ್ಮ ಮನೆಯ ಹತ್ತಿರವಿರುವ ಕಾಡಿನಲ್ಲಿ ನಾವು ಓಡಾಡುವಾಗ ಯಾವ ಮರದ ಪೊಟರೆಯಲ್ಲಿ ಯಾವ ವಿಷಜಂತುಗಳು ಅಡಗಿವೆ ಎಂದು ನಮಗೆ ಗೊತ್ತಿರುವುದಿಲ್ಲ. ಯಾವಾಗ ನಮ್ಮ ಮೈ ಮೇಲೆ ಯಾವ ವಿಶ್ವ ಜಂತು ಬೀಳುತ್ತದೆ, ಕಚ್ಚುತ್ತದೆ ಎಂಬ ಭಯ ಸದಾ ನಮ್ಮನ್ನು ಕಾಡುತ್ತದೆ ಮತ್ತು ಆ ವಿಶಾಲವಾದ ಅರಣ್ಯದಲ್ಲಿ ನಾವು ಏನನ್ನಾದರೂ ಕಳೆದುಕೊಂಡರೆ ಅದನ್ನು ಹುಡುಕುವುದು ಬಲು ಕಷ್ಟ ಮಾತ್ರವಲ್ಲ ಅಸಾಧ್ಯ ಕೂಡ. ಆದರೆ ನಮ್ಮ ಕಣ್ಣ ನಿಲುಕಿನಲ್ಲಿರುವ ನಮ್ಮ ಮನೆಯ ಪುಟ್ಟ ಕೈದೋಟದಲ್ಲಿ ನಾವು ನಿರಾತಂಕವಾಗಿ ಓಡಾಡಬಹುದು, ನೋಡಬಹುದು, ಕಳೆದುಕೊಂಡ ವಸ್ತುಗಳನ್ನು ಹುಡುಕಿ ಮರಳಿ ಪಡೆಯಲೂಬಹುದು. ಸದಾ ನಮ್ಮ ಕಣ್ಣಾಗಲಿನಲ್ಲಿ ಇರುವ ಆ ಕೈದೋಟದಲ್ಲಿ ಸೇರಿಕೊಳ್ಳಲು ಸಾಧ್ಯವಿರುವುದಿಲ್ಲ. ಇದೇ ವಿಷಯವನ್ನು ನಾವು ನಮ್ಮ ಬದುಕಿನಲ್ಲಿ ಸ್ನೇಹಿತರ ಕುರಿತಾಗಿ ಯೋಚಿಸಿದಾಗ
ನೂರಾರು ಜನ ಸ್ನೇಹಿತರ ನಡುವೆ ಒಳ್ಳೆಯ ಸ್ನೇಹಿತರು ಯಾರು? ಹಾಗೂ ಒಳ್ಳೆಯತನದ ಮುಖವಾಡವನ್ನು ಧರಿಸಿರುವ ಸ್ನೇಹಿತರು ಯಾರು ಎಂಬ ಭಯ ನಮ್ಮನ್ನು ಕಾಡುವುದು ಸಹಜ. ಎಷ್ಟೋ ಬಾರಿ ನಮ್ಮ ಜೊತೆಗೆ ಇದ್ದು ನಮ್ಮಂತೆ ಮಾತನಾಡಿ ನಮ್ಮೆಲ್ಲ ಮಾತುಗಳಿಗೆ ತಲೆ ತೂಗಿ ನಮ್ಮ ಬೆನ್ನಿಗೆ ಚೂರಿ ಹಾಕುವ ವಿಶ್ವಾಸ ಘಾತಕರು ನಮ್ಮ ಸ್ನೇಹಿತರ ವಲಯದಲ್ಲಿ ಇರುವ ಸಾಧ್ಯತೆಗಳು ಬಹಳ. ನೂರಾರು ಜನ ಸ್ನೇಹಿತರ ಮಧ್ಯದಲ್ಲಿ ಇಂತಹ ವಿಶ್ವಾಸ ಘಾತುಕರನ್ನು ಹುಡುಕುವುದು ಕಷ್ಟ.
ನಮ್ಮ ಶತ್ರುಗಳಿಗಿಂತ ಮುಖವಾಡದ ಸ್ನೇಹವನ್ನು ಹೊಂದಿರುವವರು ಅಪಾಯಕಾರಿ. ನಮ್ಮ ಶತ್ರುಗಳು ನಮ್ಮೊಂದಿಗೆ ಎದುರಾ ಎದುರೇ ಮಾತನಾಡಬಹುದು., ತಿವಿಯಬಹುದು, ನೋಯಿಸಬಹುದು, ಕತ್ತಿಯನ್ನು ಹಿಡಿಯಬಹುದು.... ಆದರೆ ಅದೆಲ್ಲವನ್ನು ಎದುರಿಸಲು ನಾವು ಕೂಡ ಸಜ್ಜಾಗಿಯೇ ಇರುತ್ತೇವೆ ಅಲ್ಲವೇ?
ಆದರೆ ಸ್ನೇಹಿತರ ಮುಖವಾಡದಲ್ಲಿ ಇರುವ ಶತ್ರುಗಳು ನಮ್ಮ ಮನೆಯೊಳಗಿನ ತಾರಸಿಯ ತೂತಿನಂತೆ. ನಮ್ಮೊಂದಿಗೆ ಇದ್ದು ನಮ್ಮೆಲ್ಲ ಗುಟ್ಟುಗಳನ್ನು ತಿಳಿದುಕೊಂಡು ತಮಗೆ ಅನುಕೂಲವಾಗುವ ರೀತಿಯಲ್ಲಿ ನಮ್ಮದೇ ಬೆನ್ನಿಗೆ ಚೂರಿ ಹಾಕುತ್ತಾರೆ.
ನಿಜವಾದ ಸ್ನೇಹ ಮನೋ ದೈಹಿಕ ಶಕ್ತಿಯನ್ನು ಸಂಚಯಗೊಳಿಸುತ್ತದೆ. ನೂರಾರು ಜನ ಸ್ನೇಹಿತರನ್ನು ಹೊಂದಿ ನಮ್ಮ ಎಲ್ಲಾ ಶಕ್ತಿಯನ್ನು ಆ ಸ್ನೇಹವನ್ನು ಉಳಿಸಿಕೊಳ್ಳಲು ಖರ್ಚು ಮಾಡುವ ಬದಲು
ನಿಜವಾದ ಸ್ನೇಹವು ಕಣ್ಣಿಗೆ ಕಾಣದಂತೆ ಅತ್ಯಂತ ಆಳವಾಗಿರುತ್ತದೆಯೇ ಹೊರತು ಗೋಚರವಾಗುವ ಅದಕ್ಕೆ ಇರುವುದಿಲ್ಲ
ಏನಂತೀರಾ ಸ್ನೇಹಿತರೆ?
-ವೀಣಾ ಹೇಮಂತ್ ಗೌಡ ಪಾಟೀಲ್ ಮುಂಡರಗಿ ಗದಗ್
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


