ಸಾವಯವ ಬದುಕಿನ ಮೌನ ಸಾಕ್ಷಿ- ಮಾಳೇನಲ್ಲಿ ಶಂಕರ ಹೆಗಡೆ

Upayuktha
0


‘ಶಂಕ್ರಣ್ಣ’ ಎಂದೇ ನಾವೆಲ್ಲ ಆತ್ಮೀಯತೆಯಿಂದ ಕರೆಯುವುದು. ನಿನ್ನೆಯ ಶಂಕ್ರಣ್ಣ ಅವರ ಸೌಹಾರ್ದ ಭೇಟಿ ಹಲವು ನೆನಪಿನ ಸುರುಳಿಗಳನ್ನು ಸುತ್ತಿ ಕೊಟ್ಟಿದೆ.


ರೈತಕುಲದ ಗಟ್ಟಿ ಅನುಭವದ ಕಣಜ ನಮ್ಮ ಶಂಕ್ರಣ್ಣ. ಕೃಷಿಯ- ಕೃಷಿ ಕ್ಷೇತ್ರದ ಅನುಭವ ಅದರೊಳಗೆ ಬದುಕಿದ್ದವರಿಗೆ ಇದ್ದೆ ಇರುತ್ತದೆ. ಶಂಕ್ರಣ್ಣ ಕೃಷಿಯ ಜೊತೆ- ಕೃಷಿ ಕ್ಷೇತ್ರದ ನಡುವೆ ಬಾಳಿದವರು. ಶಂಕ್ರಣ್ಣನ ಮಾತು ಕೇಳಿದವರೆಲ್ಲರಿಗೂ ಗೊತ್ತು- ಹೃದಯಾಂತರಾಳದ ಮಾತುಗಳವು. 


ಸೋಲು- ಹತಾಶೆ- ಸವಾಲು ಕೃಷಿ ಕ್ಷೇತ್ರದ ಸಹಜ ಕವಲು. ಶಂಕ್ರಣ್ಣ ಅವರ ಮಾತು ಈ ಎಲ್ಲಾ ಕವಲುಗಳನ್ನು ದಾಟಿ ಕೇಳುಗರಲ್ಲಿ ಹೊಸ ಆಲೋಚನೆ- ಭರವಸೆ ಅರಳಿಸುತ್ತಿತ್ತು. ಉತ್ಸಾಹ ಹೆಚ್ಚಿಸುತ್ತಿತ್ತು. 


ತೊಂಬತ್ತರ ದಶಕ. ಸಾವಯವ ಕೃಷಿ -ಬದುಕಿಗೆ ಹೊಸ ವ್ಯಾಖ್ಯಾನ ಸೃಷ್ಟಿಯಾಗುತ್ತಿದ್ದ ಕಾಲ. ಆ ವ್ಯಾಖ್ಯಾನದ ರೂಪುರೇಷೆಯಲ್ಲಿ ಸರ್ವೋದಯ ವಿಚಾರಧಾರೆಯ ಶ್ರೀ ಚೇರ್ಕಾಡಿ ರಾಮಚಂದ್ರ ರಾಯರು, ವರ್ತೂರಿನ ಶ್ರೀ ನಾರಾಯಣ ರೆಡ್ಡಿ, ಕುರುವಳ್ಳಿಯ ಶ್ರೀ ಪುರುಷೋತ್ತಮ ರಾಯರು, ಪುತ್ತೂರಿನ ಶಂ.ಪಾ. ದೈತೋಟ, ಧಾರವಾಡದ ಶ್ರೀ ಪ್ರದೀಪ್ ತಪಸ್, ಯಳವತ್ತಿಯ ಶ್ರೀ ಭರಮಗೌಡರು, ಹೊಂಬಳದ ಆರ್ ಎಸ್ ಪಾಟೀಲರು, ಹುಲಕೋಟಿಯ ಮಾಜಿ ಶಾಸಕರಾದ ಶ್ರೀ ಡಿ ಆರ್ ಪಾಟೀಲರು, ಕೃಷಿ ವಿಶ್ವವಿದ್ಯಾನಿಲಯದ ಪ್ರೊಫೆಸರ್ ಡಾ ರಾಧಾ ಕಾಳೆ, ಅಥಣಿಯ ಎಸ್ ಎಂ ಪಾಟೀಲರು, ಪುತ್ತೂರಿನ ಮೈಸೂರಿನ ಎ ಪಿ ಚಂದ್ರಶೇಖರ್, ಮೇಲುಕೋಟೆಯ ಸಂತೋಷ್ ಕೌಲಗಿ, ಬರಹ ಕ್ಷೇತ್ರದ ಶ್ರೀಪಡ್ರೆ, ಶ್ರೀ ಶಿವರಾಮ್ ಪೈಲೂರು, ಶ್ರೀ ಶಂಕರ ಸಾರಡ್ಕ… ಇವರೆಲ್ಲರ ಪಾತ್ರಗಳು ಕಣ್ಮುಂದೆ ಸರಿಯುತ್ತವೆ. ಈ ಸಾಧಕರ ಸಹವಾಸದಲ್ಲಿ ಸದಾ ಬೆರೆತಿದ್ದ ಶಂಕರ ಹೆಗಡೆಯವರ ಕ್ಷೇತ್ರಾನುಭವದ ಕೊಡುಗೆಯೂ ಸಾವಯವ ಸಿದ್ಧಾಂತವನ್ನು- ವಿಚಾರವನ್ನು ಶ್ರೀಮಂತಗೊಳಿಸಿದೆ.


ಮಿತ್ರ ಅರುಣ ಕುಮಾರ ಮತ್ತು ನಾನು ಆ ದಿನಗಳಲ್ಲಿ ಕೃಷಿ ಕಾಲೇಜಿನಲ್ಲಿ ಓದುತ್ತಿದ್ದೆವು. ಒಬ್ಬೊಬ್ಬರ ವಿಚಾರವೂ ನಮಗೆ ರಸದೂಟ. ಸಾವಯವ ಎಂಬ ಪದ ಹುಟ್ಟಿದ ಆರಂಭದ ದಿನಗಳವು. ‘ನಾವು ಮರೆತಿರುವುದೇನು, ಅಲಕ್ಷ್ಯವಾದ ಹಿರೀಕರ ಮಾತುಗಳು- ಅನುಭವಗಳು, ಮರೆಯಬಾರದ ಗಾದೆಗಳು, ಪ್ರಾಚೀನರ ಕೃಷಿ ಪುಸ್ತಕಗಳು’…ಒಂದೆರಡಲ್ಲ…ದಿನಕ್ಕೊಂದೊಂದು ಹೊಸ ವಿಚಾರ-ಕಲಿಕೆ-ಚರ್ಚೆ. ಅಲ್ಲಲ್ಲಿ ಅನುಭವ ಗೋಷ್ಠಿಗಳು. ಭಾರತೀಯ ಕಿಸಾನ್ ಸಂಘದ ಕಾರ್ಯಕರ್ತರ ಭರದ ಓಡಾಟ, ರಾತ್ರಿ ಸಭೆ- ಬೈಠಕ್ ಗಳು…


ಮೊನ್ನೆ ನಡೆದ ಸಭೆಯಲ್ಲಿ ಭಾಗವಹಿಸಿದ್ದವರೆ ನಾಳದ್ದಿನ ಸಭೆಯಲ್ಲೂ! ಹೊಸ ವಿಚಾರ ಸಿಕ್ಕೀತು, ಹೊಸಬರು ಜೊತೆಯಾದಾರು, ತಂಡ ಕಟ್ಟಬಹುದು ಎಂಬ ಉತ್ಸಾಹದಲ್ಲಿ ಕಾರ್ಯಕರ್ತರ ಪ್ರವಾಸಗಳು… ಕತ್ತಲಲ್ಲಿ ಬೆಳಕಿನ ಹುಡುಕಾಟ… ಭೂಮಿ-ಬದುಕು ಉಳಿಸುವ ತವಕ. 


ನಿನ್ನೆ ಶಂಕರ ಹೆಗಡೆಯವರ ಮನೆಗೆ ಹೋಗಿದ್ದೆವು. ಮಗ ವಿಘ್ನೇಶ್ವರ ಅಪ್ಪ ಮಾತನಾಡುವಂತೆಯೆ ‘ಅಪ್ಪ ಸೈಲೆಂಟ್ ಮೋಡ್ ಗೆ ಹೋಗ್ಬಿಟಿದಾರೆ’ ಎಂದು ದುಃಖ ನುಂಗಿಕೊಂಡು ತಮಾಷೆ ಮಾಡಿದ. ಶಂಕ್ರಣ್ಣ ಅವರ ಮಾತು ಬಹುತೇಕ ನಿಂತಿದೆ… ನೆನಪು ಮರೆವನ್ನು ಆಲಂಗಿಸಿದೆ… ಜೀವಕೋಶ ಕುಗ್ಗಿದೆ… ದೇಹ ಸೊರಗಿದೆ.


ಕಾಣುವ ಆತರದಲ್ಲಿ ಶಂಕ್ರಣ್ಣ ಅವರ ಕೋಣೆಗೆ ಹೋದೆವು…ನಾನ್ಯಾರು ಶಂಕ್ರಣ್ಣ ಅಂತ ಕೇಳಿದೆ. ತಕ್ಷಣ ‘ಆನಂದ’ ಅಂದರು… ಮಡದಿಯನ್ನು ‘ಮಮತಾ’ ಎಂದು ಗುರುತಿಸಿದರು. ಎಲ್ಲರಿಗೂ ಆಶ್ಚರ್ಯ. ಇತ್ತೀಚೆಗೆ, ಮಾತನಾಡದೆ ಹೆಚ್ಚಾಗಿ ಮೌನವಾಗಿಯೇ ಇರುವ ಶಂಕ್ರಣ್ಣ ಮಾತಾಡಿ ಬಿಟ್ಟರು. ನಮ್ಮನ್ನು ನೆನಪಿಸಿಕೊಂಡರು ಎಂಬುದು ಹೆಚ್ಚಗಾರಿಕೆಯ ವಿಷಯ ಅಲ್ಲ. ಒಂದು ವಿಚಾರಕ್ಕಾಗಿ ಪ್ರಾಮಾಣಿಕವಾಗಿ ಬದುಕಿದ ಜೀವ ತನ್ನ ವೈಚಾರಿಕ ಸಂಬಂಧಿಗಳನ್ನು ಮರೆವುದುಂಟೆ. ಶಂಕ್ರಣ್ಣ ನ ನೆನಪು ಈ ದೃಷ್ಟಿಯಿಂದ ವಿಶೇಷ. ಇಂದು ಬೆಳಗ್ಗೆ ಅಷ್ಟೆ ಏಕೋ ನಿಮ್ಮಲ್ಲರ ನೆನಪು ಮಾಡಿಕೊಳ್ತಿದ್ರು ಅಂತ….. ಶಂಕ್ರಣ್ಣ ಅವರ ಮಡದಿ ಶ್ರೀಮತಿ ಸರೋಜಕ್ಕ ಹೇಳಿದ್ದು ಕೇಳಿ ನಮ್ಮ ಭೇಟಿ ದೈವಾನುಬಂಧ ಅನಿಸಿತ್ತು. 


ಶಂಕರ ಹೆಗಡೆಯವರ ಮೂಲ ಶಿರಸಿಯ ಸಮೀಪದ ಮಾಳೇನಲ್ಲಿಯಾದರೂ ಪ್ರಸ್ತುತ ವಾಸ ಶಿರಸಿಗೆ ಅತಿ ಸಮೀಪವಿರುವ (ಕುಮಟಾ ರಸ್ತೆ) ವಡಗೆರೆಯಲ್ಲಿ.


ಕಿಸಾನ್ ಸಂಘದ ಕಾರ್ಯಕರ್ತರಾಗಿದ್ದ ಶ್ರೀ ಶಿವಣ್ಣ, ಶ್ರೀ ಭಾಸ್ಕರ್ ರಾವ್, ಶ್ರೀ ಶ್ರೀಧರ, ಶ್ರೀ ಜೋಶಿ…ಎಲ್ಲಿದ್ದಾರೆ? ಸಂಘದ- ಕಿಸಾನ್ ಸಂಘದ ನೂರಾರು ಕಾರ್ಯಕರ್ತರಿಗೆ ಊಟಾಸರಿಗೆ ಕೊಟ್ಟ ಸರೋಜಕ್ಕನ ನೆನಪಿನಲ್ಲಿ ಎಲ್ಲವೂ ಜೀವಂತ.


ವಿಘ್ನೇಶ್ವರನ ಮಡದಿ ಶ್ರೀಮತಿ ಆಶಾಲತಾ. ಕುಟುಂಬದ ಪಾಲನೆಯಲ್ಲಿ ಆಕೆಯ ಪಾತ್ರ ಹಿರಿದು. ಅತ್ತೆ-ಮಾವನ ಆದರ್ಶಗಳನ್ನು ತೇವಗೊಂಡ ಕಂಗಳಿಂದ ಸ್ಮರಿಸಿದರು. ‘ನನಗೆ ಆ ಅಜ್ಜನೇ ಬೇಕು, ಮಾತನಾಡುವ, ಕೀಟಲೆ ಮಾಡಿ ನಗಿಸುವ, ಓಡಾಡುವ ಅಜ್ಜಬೇಕು‘ ಮೊಮ್ಮಗಳು ಶ್ರೀನಿಧಿ ಹೇಳುವುದನ್ನು ಅಮ್ಮ ಹೇಳುವಾಗ ಸ್ನಾತಕೋತ್ತರ ಪದವೀಧರೆ ಶ್ರೀನಿಧಿ ನೋವಿನಲ್ಲಿ ತಲೆ ತಗ್ಗಿಸಿದ್ದಳು. ಶ್ರೀಮತಿ ಆಶಾಲತಾ ಶಿರಸಿಯ ಕದಂಬ ಸಹಕಾರಿ ಸಂಸ್ಥೆಯ ನಿರ್ದೇಶಕಿಯೂ ಆಗಿ ಸಮಾಜಮುಖಿಯಾಗಿದ್ದಾರೆ.


ಮನೆಯಿಂದ ಹೊರಟೆವು. ‘ಮೊಮ್ಮಗಳ ಮದುವೆಗೆ ಬರಲೇಬೇಕು, ಹೋಗಿ ಬನ್ನಿ’ ಎಂದು ಕಾಣುವವರೆಗೂ ಕೈಬೀಸಿ ಕಳಿಸಿದ ಸರೋಜಕ್ಕ, ಮಿತ್ರ ವಿಘ್ನೇಶ್ವರ, ಆಶಾಲತಕ್ಕ… ಹೊರಟ ನಂತರ ಕ್ಷಣಕಾಲ ಬೇಸರ ಆವರಿಸಿತ್ತು.


ನಿಜ, ಶಂಕ್ರಣ್ಣನ ಮೌನ ವಯೋಮಾನದ ಸಹಜ ಸ್ಥಿತಿ. ‘ಎಲ್ಲರ ಮಾತಾಗಬೇಕು- ಉಸಿರಾಗಬೇಕು’ ಎಂದು ಆ ಜೀವ ಯಾವುದನ್ನು ಅಪೇಕ್ಷಿಸುತ್ತಿದೆಯೊ ಅದು ಜೀವಂತವಾದರೆ ಶಂಕ್ರಣ್ಣನ ಮೌನ ಮಾಯವಾದಂತೆಯೆ. ಮೌನದ ಹಿಂದಿನ ಹಿರಿಯರ ಮಾತು ಕೇಳಿಸಿಕೊಳ್ಳುವ ಉದಾರತೆ- ವ್ಯವಧಾನ ಇಂದೆಲ್ಲಿದೆ? ಮೌನದ ಹಿಂದಿನ ಮಾತ ಕೂಡಿ ಬೆಳದ ಸಂಸ್ಕೃತಿ- ಸಮಾಜ. 


ಸಂಬಂಧಗಳನ್ನು ಗೌರವಿಸುವುದು-ಪೋಣಿಸುವುದು- ಪೋಷಿಸುವುದು- ಬೆಳೆಸುವುದು ಸಾವಯವ ಬದುಕಿನ ಮೂಲ ತತ್ತ್ವ. ನನ್ನಂತ ಅನೇಕರ ಬದುಕಿನ ದೃಷ್ಟಿಗೆ ಬೆಳಕಾದ ಶಂಕ್ರಣ್ಣ ಅವರನ್ನು ನೆನೆವುದು ಸಾವಯವ ಸಂಬಂಧದ ಪೋಷಣೆಯೆಂದು ಭಾವಿಸಿ ಹೊರಹರಿದ ಬರವಣಿಗೆಯಿದು. 


ಶಂಕರ ಹೆಗಡೆ ಮಾಳೇನಲ್ಲಿ ಅವರಿಗೆ ಈಗ 81. ಮೌನದ ಮೆಲುಕಿನಲ್ಲಿ ದಿನಗಳು ಜಾರುತ್ತಿವೆ. ಆ ಮೌನದ ಮಾತಿನ ಜೊತೆ ಕೂತು ಬರೋಣ. ಹಳ್ಳಿಗಳು ಬೆಳೆದು ಬಲಿತದ್ದೆ ಈ ಮೌನದ ಮಾತು ಕೇಳಿ- ಅನುಭವಿಸಿ. 


ಹತ್ತಿರವಿದ್ದವರು ಒಮ್ಮೆ ಹೋಗಿ ಬರಬೇಕು. ಶಂಕ್ರಣ್ಣ ಅವರನ್ನು ಒಮ್ಮೆ ತಬ್ಬಿ ಬರಬೇಕು. 


- ಆನಂದ ಆ. ಶ್ರೀ.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top