ರಂಗಾಯಣಕ್ಕೆ ಅನುದಾನ ನೀಡಿ ಪ್ರೋತ್ಸಾಹಿಸಿ: ಡಾ. ಸದಾನಂದ ಪೆರ್ಲ

Upayuktha
0

ರಂಗ ಯುಗಾದಿ ನಾಟಕೋತ್ಸವಕ್ಕೆ ಚಾಲನೆ





ಕಲಬುರಗಿ: ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ ಉತ್ತಮ ರಂಗಸಾಧಕರು, ಕಲಾಸಕ್ತರು ಇರುವುದರಿಂದ ಕಲಬುರಗಿ ರಂಗಾಯಣಕ್ಕೆ ಹೆಚ್ಚಿನ ಅನುದಾನವನ್ನು ನೀಡಿ ಸಾಂಸ್ಕೃತಿಕ ಮನೋಭೂಮಿಕೆ ಕಟ್ಟುವ ಕಾರ್ಯಕ್ಕೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ  ಹೆಚ್ಚಿನ ಪ್ರೋತ್ಸಾಹ ನೀಡಬೇಕು ಎಂದು ಆಕಾಶವಾಣಿಯ ನಿವೃತ್ತ ಕಾರ್ಯಕ್ರಮ ಮುಖ್ಯಸ್ಥರಾದ ಡಾ. ಸದಾನಂದ ಪೆರ್ಲ ಸಲಹೆ ನೀಡಿದರು.


ಕಲಬುರಗಿ ರಂಗಾಯಣದಲ್ಲಿ ಮಾ.21ರಂದು ವಿಶ್ವ ರಂಗ ನಾಟಕ ಮತ್ತು ನೃತ್ಯ ಸೇವಾ ಸಂಘ ಹಾಗೂ ರಂಗಾಯಣ ಕಲಬುರಗಿ ಇವುಗಳ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ "ರಂಗ ಯುಗಾದಿ" ಮೂರು ದಿನಗಳ ನಾಟಕೋತ್ಸವವನ್ನು ನಗಾರಿ ಬಾರಿಸಿ ಉದ್ಘಾಟಿಸಿದ ನಂತರ ಮಾತನಾಡಿ ನಾಟ್ಯ ಶಾಸ್ತ್ರದಲ್ಲಿ ಹೇಳುವಂತೆ ನಾಟಕವು ಆಂಗಿಕ, ವಾಚಿಕ, ಆಹಾರ್ಯ ಮತ್ತು ಸಾತ್ವಿಕ ಈ ನಾಲ್ಕು ಬಗ್ಗೆ ಅಭಿನಯದಿಂದ ಸಹೃದಯರ ಮನಸ್ಸಿಗೆ ಮುಟ್ಟುತ್ತದೆ.ಅದಕ್ಕಾಗಿ ರಂಗಾಯಣಕ್ಕೆ ಹೆಚ್ಚಿನ ಆರ್ಥಿಕ ನೆರವು ಒದಗಿಸಿದರೆ "ಕಾಲಚಕ್ರ" ದಂತಹ ಉತ್ತಮ ನಿರ್ಮಾಣ ಸಾಧ್ಯವಾಗುತ್ತದೆ. ನಾಟಕ ಕಲಾವಿದರು, ನಿರ್ದೇಶಕರು, ನಾಟಕ ರಚನೆಕಾರರಿಂದ ಸಮೃದ್ಧವಾಗಿರುವ ಈ ಭಾಗದಲ್ಲಿ ಕಲಬುರಗಿ ಆಕಾಶವಾಣಿ ನಿರ್ಮಾಣ ಮಾಡಿದ ಸಂಧ್ಯಾ ಹೊನಗುಂಟಿಕರ್ ಅವರ "ಖರೇವಂದ್ರೆ ತಪ್ಪು" ನಾಟಕವು ರಾಷ್ಟ್ರ ಮತ್ತು ರಾಜ್ಯಮಟ್ಟದ ಪ್ರಶಸ್ತಿ ಪಡೆಯಲು ಸಾಧ್ಯವಾಯಿತು. ರಂಗಾಯಣ ನಿರ್ಮಾಣದ "ಕಾಲಚಕ್ರ"  ನಾಟಕ ರಾಜ್ಯದ ಹಲವೆಡೆ ಪ್ರದರ್ಶನಗೊಂಡು ಪ್ರಶಂಸೆ ಗಳಿಸಿದೆ ಎಂದರು. 


ರಂಗ ಕಲಾವಿದ ಅಂಕೋಲಾ ಮೂಲದ ಗಣಪತಿ ಗೌಡ ಮಾತನಾಡಿ ರಂಗಭೂಮಿಯನ್ನು ನಂಬಿದ ವ್ಯಕ್ತಿಯ ಬದುಕು ಈಗ ದುಸ್ತರವಾಗಿದೆ. ವೃತ್ತಿಯಾಗಿ ರಂಗಭೂಮಿಯನ್ನು ಆಯ್ಕೆ ಮಾಡಿದವರಿಗೆ ಭರವಸೆಯ ಬದುಕು ಕಟ್ಟಿಕೊಳ್ಳಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿದೆ. ರಸ್ತೆ ಬದಿಯ ಹೂ ಮಾರುವ, ತರಕಾರಿ ಮಾರುವವರಂತೆ ನಾಳೆಯ ಬಗ್ಗೆ ಖಾತ್ರಿ ಇಲ್ಲದ ಅತಂತ್ರತೆ ಕಾಡುತ್ತಿದೆ. ಅದಕ್ಕಾಗಿ ಸಾರ್ವಜನಿಕರ ಆರ್ಥಿಕ ನೆರವು ಮತ್ತು ಪ್ರೋತ್ಸಾಹ ಅತ್ಯಂತ ಅಗತ್ಯ ಎಂದು ಹೇಳಿದರು.


ರಂಗಾಯಣದ ನಿರ್ದೇಶಕಿ ಡಾ. ಸುಜಾತಾ ಜಂಗಮಶೆಟ್ಟಿ ಅಧ್ಯಕ್ಷತೆ ವಹಿಸಿ ಮಾತನಾಡಿ ರಂಗಾಯಣ ಚಟುವಟಿಕೆಗಳಿಗೆ ಆರ್ಥಿಕ ನೆರವು ಅಗತ್ಯವಾಗಿದ್ದು ದಾನಿಗಳು ಮತ್ತು ಸರಕಾರದ ನೆರವಿನೊಂದಿಗೆ ಉತ್ತಮ ಕೆಲಸ ನಡೆಯುತ್ತಿದೆ. ಏಳರಿಂದ ಬೇಸಿಗೆ ಶಿಬಿರ ನಡೆಯಲಿದ್ದು ಪಾಲಕರು ಪ್ರೋತ್ಸಾಹ ನೀಡಬೇಕು ಎಂದರು. ವಿಶ್ವರಂಗ ನಾಟಕ ಮತ್ತು ನೃತ್ಯ ಸೇವಾ ಸಂಘದ ಸಂಸ್ಥಾಪಕ ವಿಶ್ವರಾಜ ಪಾಟೀಲ್ ಪ್ರಾಸ್ತಾವಿಕವಾಗಿ ಮಾತನಾಡಿದರು. ರಂಗಾಯಣದ ಆಡಳಿತಾಧಿಕಾರಿ ಸಿದ್ದರಾಮ ಶಿಂಧೆ ಹಾಗೂ ವಿಶ್ವರಂಗ ನಾಟಕ ಸಂಸ್ಥೆಯ ಅಧ್ಯಕ್ಷರಾದ ನೀತಾ ಪಾಟೀಲ್ ಉಪಸ್ಥಿತರಿದ್ದರು ನಂತರ "ಟ್ಯಾಕ್ಸ್ ಫ್ರೀ" ನಾಟಕ ಪ್ರದರ್ಶನಗೊಂಡಿತು. ಮಾ. 22ರಂದು ಧು - ರೋಧನ, 23 ರಂದು ಕಾಲಚಕ್ರ ನಾಟಕ ಸಾಯಂಕಾಲ 6.30ಕ್ಕೆ ರಂಗಾಯಣದಲ್ಲಿ ಪ್ರದರ್ಶನಗೊಳ್ಳಲಿದೆ.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top