ಉಡುಪಿ: ಉಡುಪಿಯ ಪವಿತ್ರ ನೆಲದಲ್ಲಿ, ವಿಶೇಷವಾಗಿ ಉಡುಪಿ ಶ್ರೀಕೃಷ್ಣ ಮಠದ ಸುತ್ತಮುತ್ತ ಸ್ವಚ್ಛಂದವಾಗಿ ಸಂಚರಿಸುತ್ತಿದ್ದ ಗೋವುಗಳು ಕಾಣೆಯಾಗುತ್ತಿರುವುದು ತೀವ್ರ ಕಳವಳಕ್ಕೆ ಕಾರಣವಾಗಿದೆ. ಭಕ್ತರ ಸಡಗರದ ನಡುವೆ, ಮಠದ ರಥಬೀದಿಯಲ್ಲಿ ನಿರಾಳವಾಗಿ ತಿರುಗಾಡುತ್ತಿದ್ದ ಈ ಹಸುಗಳು, ಅಲ್ಲಿ ಬರುವವರ ಪ್ರೀತಿಯಿಂದ ಬದುಕು ಸಾಗಿಸುತ್ತಿದ್ದವು. ಹಣ್ಣು-ಹಂಪಲು, ಅನ್ನಪ್ರಸಾದಗಳಿಂದ ಜೀವನ ಸಾಗಿಸುತ್ತಿದ್ದ ಈ ಮೌನ ಜೀವಿಗಳು, ಮಠದ ವಾತಾವರಣದ ಅವಿಭಾಜ್ಯ ಅಂಗವಾಗಿದ್ದವು.
ಈ ಹಸುಗಳಿಗೆ ಆಶ್ರಯ ನೀಡಿದ್ದ ಪರಿಚಾರಕರ ಮೇಲ್ವಿಚಾರಣೆಯಲ್ಲಿದ್ದ ಕೆಲವು ಹಸುಗಳಲ್ಲಿ ಮೂರು ಹಸುಗಳು ಕಳೆದ ಮೂರು ದಿನಗಳಿಂದ ಕಾಣೆಯಾಗಿರುವುದು ಆತಂಕವನ್ನು ಹೆಚ್ಚಿಸಿದೆ. ಇದೇ ರೀತಿಯ ಘಟನೆಗಳು ಹಿಂದೆಯೂ ನಡೆದಿರುವ ಹಿನ್ನೆಲೆ, ಹಬ್ಬದ ಅವಧಿಯ ಸುತ್ತಮುತ್ತಲೇ ಇಂತಹ ನಾಪತ್ತೆಗಳು ಸಂಭವಿಸುತ್ತಿರುವುದು ದುರುಳರ ಕೈವಾಡ ಇರಬಹುದೆಂಬ ಅನುಮಾನಕ್ಕೆ ಕಾರಣವಾಗಿದೆ. ಈ ಕುರಿತು ಪೋಲೀಸರಿಗೆ ದೂರು ನೀಡಲಾಗಿದೆ.
ಗೋವುಗಳನ್ನು ಪವಿತ್ರವೆಂದು ಆರಾಧಿಸುವ ಸಮಾಜದಲ್ಲೇ, ಅವುಗಳ ಸುರಕ್ಷತೆ ಪ್ರಶ್ನಾರ್ಥಕವಾಗಿರು ವುದು ದುರಂತಕರ ಸಂಗತಿ. ಅವುಗಳಿಂದ ನಾವು ಪಡೆಯುವ ಪ್ರಯೋಜನಗಳ ಬಗ್ಗೆ ಹೆಮ್ಮೆಪಡುವ ನಾವು, ಅವುಗಳ ರಕ್ಷಣೆಯ ಹೊಣೆಗಾರಿಕೆಯನ್ನು ಸಮರ್ಪಕವಾಗಿ ನಿರ್ವಹಿಸುತ್ತಿದ್ದೇವೆಯೇ ಎಂಬ ಪ್ರಶ್ನೆ ಅನಿವಾರ್ಯವಾಗಿ ಮೂಡುತ್ತದೆ.
ಈ ಘಟನೆ ಕೇವಲ ಮೂರು ಹಸುಗಳ ನಾಪತ್ತೆಯಷ್ಟೇ ಅಲ್ಲ; ಇದು ನಮ್ಮ ಮಾನವೀಯತೆ, ಜವಾಬ್ದಾರಿತನ ಮತ್ತು ಮೌಲ್ಯಗಳ ಪ್ರತಿಬಿಂಬವಾಗಿದೆ. ಉಡುಪಿ ಶ್ರೀಕೃಷ್ಣ ಮಠದಂತಹ ಪವಿತ್ರ ಸ್ಥಳದಲ್ಲೇ ಇಂತಹ ಘಟನೆಗಳು ನಡೆಯುತ್ತಿರುವುದು ಸಮಾಜವೇ ಆತ್ಮಪರಿಶೀಲನೆ ಮಾಡಿಕೊಳ್ಳಬೇಕಾದ ಪರಿಸ್ಥಿತಿಯನ್ನು ಉಂಟುಮಾಡಿದೆ.
-ಜಿ. ವಾಸುದೇವ ಭಟ್ ಪೆರಂಪಳ್ಳಿ
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ

