ನಿನ್ನೆ ಸಂಜೆ ಹುಬ್ಬಳ್ಳಿಯ ಲಕ್ಷ್ಮೀಪ್ರೈಡ್ ಚಲನಚಿತ್ರ ಮಂದಿರದಲ್ಲಿ ಶ್ರೀ ಡಾ. ಮಧುಸೂದನ ಹವಾಲ್ದಾರ ಸರ್ ರಿಂದ ನಿರ್ದೇಶಿತ, ಅವರ ದಾಸವರೇಣ್ಯರ ಕುರಿತ ಐದನೆಯ ಚಲನಚಿತ್ರ ಕಾಖಂಡಕಿಯ ಶ್ರೀ ಮಹಿಪತಿದಾಸರು ಚಲನಚಿತ್ರದ ಪೂರ್ವ(ತಾಂತ್ರಿಕ) ಪ್ರದರ್ಶನವಿತ್ತು. ಹುಬ್ಬಳ್ಳಿಯ ಪ್ರಸಿದ್ಧ ವೈದ್ಯರಾದ ಡಾ .ಎಂ.ಎಂ ಜೋಶಿ ಮತ್ತು ಅವರ ಸುಪುತ್ರ ಡಾ. ಶ್ರೀನಿವಾಸ ಜೋಶಿಯವರು ಈ ಚಲನಚಿತ್ರದ ನಿರ್ಮಾಣಕ್ಕೆ ಸಹಾಯ, ಸಹಕಾರ ನೀಡಿ ಪ್ರೋತ್ಸಾಹಿಸುತ್ತಿರುವದು ನಮಗೆಲ್ಲ ತುಂಬ ಹೆಮ್ಮೆಯ ವಿಷಯವಾಗಿದೆ. ಹೀಗಾಗಿ ನಿನ್ನೆಯ ಪ್ರದರ್ಶನ ಡಾ.ಜೋಶಿಯವರ ಕುಟುಂಬಕ್ಕಾಗಿಯೇ ಮಿಸಲಾಗಿದ್ದರೂ ನಮಗೂ ವೀಕ್ಷಿಸುವ ಅವಕಾಶ ನೀಡಿದ ಹವಾಲ್ದಾರ ಸರ್ ಮತ್ತು ಕಲ್ಲೂರಕರ ಸರ್ ರಿಗೆ ನಾನು ಮೊದಲು ವಿಶೇಷ ಧನ್ಯವಾದಗಳನ್ನು ತಿಳಿಸುವೆ.
ಇನ್ನು ಈ ಚಲನಚಿತ್ರದ ಕುರಿತು ಹೇಳುವುದಾದರೆ, ಇದರಲ್ಲಿ ಬರುವ ಕಥೆ,ಪಾತ್ರಗಳು.... ಎಲ್ಲವೂ ವಿಶೇಷವೇ. ನಮ್ಮ ನಾಡಿನ ಹರಿದಾಸ ಪರಂಪರೆಯಲ್ಲಿ ಬರುವ ದಾಸವರೇಣ್ಯರಾದ ಶ್ರೀ ಮಹಿಪತಿದಾಸರ ಚರಿತ್ರೆಯು ಬೇರೆಲ್ಲ ದಾಸರಿಗಿಂತ ವಿಭಿನ್ನ. ಪುರಂದರ ದಾಸರು, ಕನಕದಾಸರು ದಾಸಸಾಹಿತ್ಯವನ್ನು ತಮ್ಮ ಕೃತಿರಚನೆಗಳಿಂದ ಅತ್ಯಂತ ಉನ್ನತಮಟ್ಟಕ್ಕೆ ಕೊಂಡೊಯ್ದು ಅತ್ಯಂತ ಉಚ್ಛ್ರಾಯ ಸ್ಥಿತಿಯಲ್ಲಿದ್ದ ಕಾಲಘಟ್ಟದಿಂದ ಆ ಸಂದರ್ಭಗಳಲ್ಲಿ ನಡೆದ ಅನೇಕ ರಾಜಕೀಯ, ಸಾಮಾಜಿಕ ಸ್ಥಿತ್ಯಂತರಗಳಿಂದಾಗಿ ದಾಸಸಾಹಿತ್ಯವು ತನ್ನ ಅಸ್ತಿತ್ವವನ್ನು ಉಳಿಸಿಕೊಳ್ಳುವ ಹಂತದಲ್ಲಿದ್ದರುವ ಸಂದರ್ಭದಲ್ಲಿ, ಬಹುಭಾಷಾ ಪಾರಂಗತರಾಗಿದ್ದ ಮಹಿಪತಿದಾಸರು ತಮ್ಮ ಮಹೋನ್ನತ ಸಾಧನೆಗಳಿಂದ ದಾಸಸಾಹಿತ್ಯವನ್ನು ಉಳಿಸಿ, ಬೆಳೆಸುವ ಕಾರ್ಯ ಮಾಡಿದ ಮಹಾಮಹಿಮರು. ಆದರೆ ಕೇವಲ ನಮ್ಮ ಭಾಗದಲ್ಲಿ ಮಾತ್ರ ಅಂದರೆ ವಿಜಯಪುರದ (ಮಹಿಪತಿದಾಸರು ಬಾಳಿ ಬದುಕಿದ ಸ್ಥಳಗಳಲ್ಲಿ )ಸುತ್ತ ಮುತ್ತಲಿನ ಭಾಗಗಳಲ್ಲಿ ಪರಿಚಯವಿದ್ದ ಮಹಿಪತಿದಾಸರನ್ನು ಈ ಚಲನಚಿತ್ರದ ಮೂಲಕ ವಿಶ್ವವ್ಯಾಪಿಯಾಗಿ ಪ್ರಸಿದ್ಧಗೊಳಿಸುತ್ತಿರುವ ನಿರ್ದೇಶಕರಾದ ಶ್ರೀ ಹವಾಲ್ದಾರ ಸರ್ ಅವರಿಗೆ ಎಷ್ಟು ಕೃತಜ್ಞತೆಗಳನ್ನು ತಿಳಿಸಿದರೂ ಸಾಲದು. ನಮ್ಮ ಭಾಗದ ಶ್ರೀ ಪ್ರಸನ್ನ ವೆಂಕಟದಾಸರು ಮತ್ತು ಶ್ರೀ ಮಹಿಪತಿದಾಸರಿಗೆ ಸಿಗಬೇಕಾದ ಸ್ಥಾನಮಾನ ಸಿಕ್ಕಿಲ್ಲ ಎಂಬ ಒಂದು ಕೊರಗನ್ನು ಹವಾಲ್ದಾರ ಸರ್ ಅವರ ಚಲನಚಿತ್ರಗಳು ಇಲ್ಲವಾಗಿಸಿವೆ. ಅದಕ್ಕಾಗಿ ಹವಾಲ್ದಾರ ಸರ್ ಕಾರ್ಯ ನಿಜಕ್ಕೂ ಸ್ತುತ್ಯಾರ್ಹವಾಗಿದೆ.
ಡಾ.ಮಧುಸೂದನ ಹವಾಲ್ದಾರ ಸರ್ ಅವರು ತಮ್ಮ ಎಲ್ಲ ಚಲನಚಿತ್ರಗಳಿಗೆ ಪಾತ್ರಗಳನ್ನು ಆಯ್ಕೆಮಾಡುವ ಪರಿಕಲ್ಪನೆಯೇ ಬಹಳ ವಿಶಿಷ್ಟವಾದದ್ದು. ತಮ್ಮ ಚಲನಚಿತ್ರದ ಪಾತ್ರಗಳನ್ನು ಹೊಸ ಹೊಸ ಪ್ರತಿಭೆಗಳನ್ನು ಹುಡುಕಿ, ಅವರಿಂದ ಆ ಪಾತ್ರಗಳಿಗೆ ನ್ಯಾಯ ಒದಗಿಸುವ (ಸುಲಭವಲ್ಲದ) ಕೆಲಸ ಹವಾಲ್ದಾರ ಸರ್ ರಿಗೆ ಕರತಲಾಮಲಕ, ಸ್ವತಃ ಬಹುಮುಖ ಪ್ರತಿಭಾವಂತರಾದ ಹವಾಲ್ದಾರ ಸರ್ ತಮ್ಮ ಕೆಲಸಗಳ ಕುರಿತು ಅತ್ಯಂತ ಸ್ಪಷ್ಟವಾದ ದೃಷ್ಟಿಕೋನಹೊಂದಿದ್ದಾರೆ. ವೀಕ್ಷಕರ ಮತ್ತು ಬೆಳ್ಳಿತೆರೆಯ ಮಧ್ಯದ ಅಂತರವನ್ನು ತೊಡೆದುಹಾಕುವಲ್ಲಿ ಸಫಲರಾಗಿದ್ದಾರೆ, ಅಂತೆಯೇ ಅವರ ಚಲನಚಿತ್ರಗಳು ಹೆಚ್ಚು ಆಪ್ತವಾಗುತ್ತವೆ. ನಿನ್ನೆ ನಮ್ಮೊಂದಿಗೆ ಈ ಚಲನಚಿತ್ರದ ಬಹುತೇಕ ಎಲ್ಲ ಪಾತ್ರಧಾರಿಗಳು ನಮ್ಮೊಂದಿಗೆ ಚಲನಚಿತ್ರವನ್ನು ವೀಕ್ಷಿಸಿದರು, ಸಂಭ್ರಮಿಸಿದರು. ಪ್ರೇಕ್ಷಕರಿಂದ ಕಿಕ್ಕಿರಿದು ತುಂಬಿದ್ದ ಚಿತ್ರಮಂದಿರದಲ್ಲಿ ಹವಾಲ್ದಾರ ಸರ್, ಸ್ಥಳಾವಭಾವದಿಂದ ಕೆಳಗೆ ಕುಳಿತು ನೋಡಿದರೂ ನಮ್ಮೆಲ್ಲರ ಪ್ರತಿಕ್ರಿಯೆಗಳನ್ನು ಕೇಳಿ ತಮ್ಮ ಕಾರ್ಯ ಸಾರ್ಥಕವಾದ ಅನುಭವ ಅಂದರು. ಸರಳ, ಸಜ್ಜನಿಕೆಯ ಅವರ ಆ ಚುಂಬಕಶಕ್ತಿಯ ವ್ಯಕ್ತಿತ್ವದ ಪ್ರಭಾವಕ್ಕೆ ಮಾರುಹೋಗದವರೇ ಇಲ್ಲವೆನ್ನಬಹುದು.
ಈ ಚಲನಚಿತ್ರದ ಪ್ರತೀ frame ತುಂಬಾ rich ಆಗಿ ಬಂದ ಕಾರಣ ಇಡೀ ಚಿತ್ರ ಪ್ರೇಕ್ಷಕರನ್ನು ಹಿಡಿದಿಡುತ್ತದೆ. ಮಹಿಪತಿದಾಸರು ಚಲನಚಿತ್ರದ ನಾಯಕರಾಗಿ ನಟಿಸಿರುವ ಶ್ರೀ ವಿಜಯಾನಂದ ಸರ್ ಮಹಿಪತಿದಾಸರಾಗಿ ಪರಕಾಯ ಪ್ರವೇಶಿಸಿ, ತಮ್ಮಅತ್ಯಂತ ಸುಮಧುರ ಗಾಯನದೊಂದಿಗೆ ಪ್ರೇಕ್ಷಕರ ಮನಸೂರೆಗೊಂಡಿದ್ದಾರೆ. ಮಹಿಪತಿದಾಸರ ಕೃತಿಗಳು( ಅಷ್ಟಾಗಿ ಪ್ರಚಲಿತವಿಲ್ಲ) ಈ ಚಲನಚಿತ್ರದ (ಹತ್ತು ಹಾಡುಗಳಿವೆ) ಮೂಲಕ ವಿಶ್ವದೆಲ್ಲೆಡೆ ಜನಪ್ರಿಯವಾಗುವುದರಲ್ಲಿ ಯಾವುದೇ ಸಂದೇಹವಿಲ್ಲ. ಮತ್ತೊಂದು ವಿಶೇಷತೆಯೆಂದರೆ ಡಾ.ಹವಾಲ್ದಾರ ಸರ್ ಈ ಚಲನಚಿತ್ರದ ಸಂಪೂರ್ಣ ಸಂಗೀತ ನಿರ್ದೇಶನವನ್ನು ತಾವೇ ಮಾಡಿ, ಈ ಕಾರ್ಯಕ್ಕೂ ತಾವು ಸೈ ಎಂದು ಸಾಬೀತುಮಾಡಿದ್ದಾರೆ. ನಾಯಕಿನಟಿಯಾಗಿ ಚಾಂದನಿಯವರು, ದಾಸರ ತಂದೆಯ ಪಾತ್ರ ಮಾಡಿದ ಶಾಸಕರಾದ ಬೆಳ್ಳೂಬ್ಬಿ ಸರ್, ಭಾಸ್ಕರಸ್ವಾಮಿಗಳ ಪಾತ್ರ... ಹೀಗೆ ಪ್ರತಿಯೊಬ್ಬ ನಟನಟಿಯರು ತಮ್ಮ ಪಾತ್ರಕ್ಕೆ ಜೀವ ತುಂಬುವಲ್ಲಿ ಯಶಸ್ವಿಯಾಗಿದ್ದಾರೆ, ತಮಗೆ ದೊರೆತ ಈ ಸೇವೆಯಿಂದ ಧನ್ಯತಾ ಭಾವವನ್ನು ವ್ಯಕ್ತಪಡಿಸಿದ್ದಾರೆ. ಸಾಮಾನ್ಯರಾಗಿದ್ದವರು ನಿರ್ದೇಶಕರ ಕೈಚಳಕದಿಂದಾಗಿ ತೆರೆಯ ಮೇಲೆ ಅಸಾಮಾನ್ಯರಾಗಿ ಮಿಂಚಿದ್ದಾರೆ. ಹೌದು ಹವಾಲ್ದಾರ ಸರ್, ತಾವೇ ಹೇಳುವಂತೆ 'ದಾಸರು ತಮ್ಮಿಂದ ಈ ಸೇವೆಯನ್ನು ಮಾಡಿಸಿ' ಸಂತೃಪ್ತರಾಗುತ್ತಿದ್ದಾರೆ. ಇದು ಕೇವಲ ಮನುಷ್ಯ ಮಾತ್ರರಿಂದ ಸಾಧ್ಯವಿಲ್ಲದ ಕಾರ್ಯ, ಹರಿವಾಯುಗಳ ವಿಶೇಷವಾಗಿ ಹರಿದಾಸ ಪರಂಪರೆಯ ಅನುಗ್ರಹಕ್ಕೆ ಪಾತ್ರರಾಗಿದ್ದೀರಿ. ಈ ಕಾರ್ಯಕ್ಕೆ ಬೆಂಬಲಿಸುವ ವಿಶ್ವದಾದ್ಯಂತ ಅಭಿಮಾನಿಗಳನ್ನು ಹೊಂದಿರುವ ತಮ್ಮ ಈ ದಾಸರ, ದಾಸಸಾಹಿತ್ಯದ ಪ್ರಚಾರ ಸೇವೆ ಮುಂದುವರೆಯಲಿ. ಸದ್ಯದಲ್ಲೇ ತೆರೆಮೇಲೆ ಪ್ರದರ್ಶನಗೊಳ್ಳುತ್ತಿರುವ ಕಾಖಂಡಕಿಯ ಶ್ರೀ ಮಹಿಪತಿದಾಸರು ಚಲನಚಿತ್ರವು ಅಪಾರ ಯಶಸ್ಸು ಕಾಣಲೆಂದು ಮನಸಾರೆ ಹಾರೈಸುತ್ತೇವೆ.
- ಶ್ರೀಮತಿ ವೀಣಾ ಬರಗಿ, ಹುಬ್ಬಳ್ಳಿ
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


