ಡಿಜಿಟಲ್ ಯುಗದಲ್ಲಿ ಪ್ರಸಾರ ಮಾಧ್ಯಮಗಳನ್ನು ಆಧುನೀಕರಿಸುವ ಪ್ರಯತ್ನಗಳು ಎಲ್ಲ ದೇಶಗಳಲ್ಲೂ ನಡೆಯುತ್ತಿವೆ. ಅದೇ ಹಾದಿಯಲ್ಲಿ ಭಾರತವೂ Digital Radio Mondiale (DRM) ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಲು ಮುಂದಾಯಿತು. ಆಕಾಶವಾಣಿಯು ದೇಶದಾದ್ಯಂತ ಹಲವಾರು ಹೈ-ಪವರ್ ಟ್ರಾನ್ಸ್‌ಮಿಟರ್‌ಗಳನ್ನು ಸ್ಥಾಪಿಸಿ, “ಡಿಜಿಟಲ್ ರೇಡಿಯೋ ಕ್ರಾಂತಿ”ಗೆ ವೇದಿಕೆ ಸಿದ್ಧವಾಗಿದೆ ಎಂದು ಘೋಷಿಸಿತು. ತಾಂತ್ರಿಕವಾಗಿ ಇದು ಮಹತ್ವದ ಹೆಜ್ಜೆಯಾಗಿದ್ದರೂ, ನೆಲಮಟ್ಟದ ವಾಸ್ತವಿಕತೆ ಬೇರೆ ಕಥೆಯನ್ನು ಹೇಳುತ್ತಿದೆ.
DRM ತಂತ್ರಜ್ಞಾನವು ಕಾಗದದ ಮೇಲೆ ನೋಡಿದರೆ ಅತ್ಯಂತ ಆಕರ್ಷಕವಾಗಿದೆ. ಒಂದೇ ಫ್ರೀಕ್ವೆನ್ಸಿಯಲ್ಲಿ ಹಲವಾರು ಚಾನೆಲ್‌ಗಳನ್ನು ಪ್ರಸಾರ ಮಾಡುವ ಸಾಮರ್ಥ್ಯ, AMಗಿಂತ ಉತ್ತಮ ಧ್ವನಿ ಗುಣಮಟ್ಟ, ವಿಶಾಲ ವ್ಯಾಪ್ತಿಯಲ್ಲಿ ಸಿಗ್ನಲ್ ತಲುಪಿಸುವ ಸಾಮರ್ಥ್ಯ- ಇವೆಲ್ಲ ಅದರ ಬಲಗಳು. ಆದರೆ ತಂತ್ರಜ್ಞಾನ ಬಲವಾದರೆ ಮಾತ್ರ ಸಾಕಾಗುವುದಿಲ್ಲ; ಅದು ಜನರ ಕೈಗೆ ತಲುಪಬೇಕು, ಬಳಕೆಗೆ ಬರಬೇಕು. ಇಲ್ಲಿಯೇ DRM ಜನರನ್ನು ತಲುಪುವಲ್ಲಿ ದಯನೀಯವಾಗಿ ವಿಫಲವಾಗಿದೆ. ಕಾರಣ ಸ್ಪಷ್ಟ — ದೂರದೃಷ್ಟಿಯ ಕೊರತೆ ಮತ್ತು ಅನುಷ್ಠಾನ ಕ್ರಮದ ಅಸಮರ್ಪಕತೆ.
ಭಾರತದಲ್ಲಿ DRM ರೇಡಿಯೋಗಳನ್ನು ಸಾಮಾನ್ಯ ಗ್ರಾಹಕರು ಸುಲಭವಾಗಿ ಖರೀದಿಸಲು ಸಾಧ್ಯವಿಲ್ಲ. ಮಾರುಕಟ್ಟೆಯಲ್ಲಿ ಲಭ್ಯತೆ ಕಡಿಮೆ, ಬೆಲೆ ದುಬಾರಿ, ಮತ್ತು ಅವುಗಳ ಬಗ್ಗೆ ಅರಿವು ಇನ್ನೂ ಅಲ್ಪವಾಗಿದೆ. ಪರಿಣಾಮವಾಗಿ, ಟ್ರಾನ್ಸ್‌ಮಿಟರ್‌ಗಳು ಕಾರ್ಯನಿರ್ವಹಿಸುತ್ತಿದ್ದರೂ, ಅವುಗಳನ್ನು ಸ್ವೀಕರಿಸುವ ಸಾಧನಗಳು ಜನರ ಕೈಯಲ್ಲಿ ಇಲ್ಲ. “ಕವರೇಜ್ ಇದೆ” ಎಂಬ ಹೇಳಿಕೆ ಮತ್ತು “ಜನರು ಕೇಳುತ್ತಿದ್ದಾರೆ” ಎಂಬ ವಾಸ್ತವಗಳ ನಡುವಿನ ಅಂತರ ದಿನೇದಿನೇ ಹೆಚ್ಚುತ್ತಿದೆ.
ಈ ಸಮಸ್ಯೆಯ ಮೂಲದಲ್ಲಿ ನೀತಿ ರೂಪಿಸುವ ವಿಧಾನವೇ ಇದೆ. ಭಾರತದಲ್ಲಿ DRM ಅನುಷ್ಠಾನ “transmitter-first” ದೃಷ್ಟಿಕೋನದಲ್ಲಿ ನಡೆದಿದೆ. ಮೊದಲು ಭಾರೀ ಹೂಡಿಕೆಯಲ್ಲಿ ಟ್ರಾನ್ಸ್‌ಮಿಟರ್‌ಗಳನ್ನು ಸ್ಥಾಪಿಸಲಾಯಿತು; ನಂತರ ರಿಸೀವರ್‌ಗಳ ಬಗ್ಗೆ ಚಿಂತನೆ ಆರಂಭವಾಯಿತು. ಪ್ರಸಾರ ತಂತ್ರಜ್ಞಾನದಲ್ಲಿ ಈ ಕ್ರಮ ಸಾಮಾನ್ಯವಾಗಿ ಫಲಕಾರಿ ಆಗುವುದಿಲ್ಲ. ಬಳಕೆದಾರರ ಕೈಯಲ್ಲಿ ಸಾಧನಗಳಿಲ್ಲದಿದ್ದರೆ, ಪ್ರಸಾರ ವ್ಯವಸ್ಥೆ ಎಷ್ಟು ಬಲವಾದರೂ ಅದು ನಿರರ್ಥಕವಾಗುತ್ತದೆ.
ಇದರ ಜೊತೆಗೆ ಮಾರುಕಟ್ಟೆ ಆರ್ಥಿಕತೆಯ ಅಂಶವೂ ಕಡೆಗಣಿಸಲ್ಪಟ್ಟಿದೆ. ಖಾಸಗಿ ಪ್ರಸಾರಕರು DRM ಕಡೆಗೆ ತಿರುಗಲು ಹಿಂಜರಿಯುತ್ತಿದ್ದಾರೆ. ಹೊಸ ತಂತ್ರಜ್ಞಾನಕ್ಕೆ ಬೇಕಾಗುವ ವೆಚ್ಚ, ಸ್ಪಷ್ಟವಾದ ಆದಾಯ ಮಾದರಿಯ ಕೊರತೆ, ಮತ್ತು ಈಗಿರುವ FM ವ್ಯವಸ್ಥೆಯೇ ಲಾಭದಾಯಕವಾಗಿರುವುದು ಇದಕ್ಕೆ ಕಾರಣ. ಹೀಗಾಗಿ DRM ಇನ್ನೂ ಸರ್ಕಾರದ ಪ್ರಸಾರ ವ್ಯವಸ್ಥೆಯೊಳಗೆ ಸೀಮಿತವಾಗಿದೆ.
DRM ಅನುಷ್ಠಾನದಲ್ಲಿ ಮತ್ತೊಂದು ಪ್ರಮುಖ ದೋಷವೆಂದರೆ ಶ್ರೋತೃ-ಕೇಂದ್ರಿತ ಯೋಜನೆಯ ಕೊರತೆ. ಪ್ರಸಾರವನ್ನು ಯೋಜಿಸುವಾಗ ತಾಂತ್ರಿಕ ಕವರೇಜ್ ಮ್ಯಾಪ್‌ಗಳಿಗೆ ಹೆಚ್ಚು ಮಹತ್ವ ನೀಡಲಾಗಿದೆ; ಆದರೆ ನಿಜವಾದ ಕೇಳುಗರ ಅನುಭವವನ್ನು ಪರಿಗಣಿಸಲಿಲ್ಲ. ಉದಾಹರಣೆಗೆ, ಕಡಲತೀರ ಪ್ರದೇಶಗಳಲ್ಲಿ ಸ್ಥಾಪಿಸಲಾದ ಕೆಲವು ಟ್ರಾನ್ಸ್‌ಮಿಟರ್‌ಗಳ ಕವರೇಜ್ ಸಮುದ್ರದ ಮೇಲೆ ಹೆಚ್ಚು ವಿಸ್ತರಿಸುವುದು ಕಂಡುಬರುತ್ತದೆ. ಭೌತಶಾಸ್ತ್ರದ ದೃಷ್ಟಿಯಿಂದ ಇದು ಸಹಜವಾದರೂ, ಸಾರ್ವಜನಿಕ ಸಂಪನ್ಮೂಲಗಳನ್ನು ಬಳಸುವಾಗ ಜನಸಂಖ್ಯೆ ಆಧಾರಿತ ಕವರೇಜ್‌ಗೆ ಆದ್ಯತೆ ನೀಡಬೇಕಾಗಿತ್ತು ಎಂಬ ಪ್ರಶ್ನೆ ಉದ್ಭವಿಸುತ್ತದೆ.
ಕಡಿಮೆ ಡೇಟಾ ಖರ್ಚಿನಲ್ಲಿ ಜಗತ್ತೇ ಕೈಯೊಳಗಿರುವಾಗ, ಅವ್ಯವಸ್ಥಿತವಾಗಿ ಅಳವಡಿಸಿದ DRM ಯಾಕಾಗಿ? ಯಾರಿಗಾಗಿ?
ಇದರ ನಡುವೆ, DRMಗೆ ಸ್ಪರ್ಧಿಯಾಗಿ ಇಂಟರ್ನೆಟ್ ರೇಡಿಯೋ ವೇಗವಾಗಿ ಬೆಳೆಯಿತು. ಕಡಿಮೆ ದರದ ಡೇಟಾ, ಸ್ಮಾರ್ಟ್‌ಫೋನ್‌ಗಳ ವ್ಯಾಪಕ ಬಳಕೆ, ಮತ್ತು ಜಾಗತಿಕ ಸ್ಟೇಷನ್‌ಗಳಿಗೆ ಸುಲಭ ಪ್ರವೇಶ — ಇವು ಇಂಟರ್ನೆಟ್ ರೇಡಿಯೋವನ್ನು ಜನಪ್ರಿಯಗೊಳಿಸಿವೆ. ಇಂದಿನ ನಗರ ಮತ್ತು ಅರ್ಧನಗರ ಪ್ರದೇಶಗಳಲ್ಲಿ ರೇಡಿಯೋ ಕೇಳುವವರು ಹೆಚ್ಚಾಗಿ ಮೊಬೈಲ್ ಅಪ್ಲಿಕೇಶನ್‌ಗಳನ್ನೇ ಅವಲಂಬಿಸುತ್ತಿದ್ದಾರೆ. ಈ ಬದಲಾವಣೆಯನ್ನು ನೀತಿ ರೂಪಿಸುವವರು ಸಮರ್ಪಕವಾಗಿ ಅಂದಾಜಿಸಿಲ್ಲವೆಂಬುದು ಸ್ಪಷ್ಟವಾಗುತ್ತದೆ.
DRM ಪರವಾಗಿ ಸಾಮಾನ್ಯವಾಗಿ ಉಲ್ಲೇಖಿಸಲಾಗುವ ಪ್ರಮುಖ ಕಾರಣವೆಂದರೆ “disaster communication”. ತುರ್ತು ಪರಿಸ್ಥಿತಿಯಲ್ಲಿ ಇಂಟರ್ನೆಟ್ ಮತ್ತು ಮೊಬೈಲ್ ಜಾಲಗಳು ವಿಫಲವಾದಾಗ ದೂರದ ಪ್ರದೇಶಗಳಿಗೆ ಪ್ರಸಾರ ತಲುಪಿಸಲು DRM ಸಹಾಯಕವಾಗಬಹುದು ಎಂಬ ವಾದವಿದೆ. ಈ ವಾದದಲ್ಲಿ ತಾಂತ್ರಿಕ ಸತ್ಯವಿದ್ದರೂ, ಒಂದು ಮೂಲಭೂತ ಪ್ರಶ್ನೆ ಉಳಿಯುತ್ತದೆ: ಜನರ ಕೈಯಲ್ಲಿ DRM ರಿಸೀವರ್‌ಗಳೇ ಇಲ್ಲದಿದ್ದರೆ, ಆ ಪ್ರಸಾರವನ್ನು ಯಾರು ಕೇಳುತ್ತಾರೆ?
ಇದಲ್ಲದೆ, DRMನಲ್ಲಿ ಪ್ರಸಾರವಾಗುತ್ತಿರುವ ವಿಷಯದಲ್ಲಿಯೂ ವಿಶೇಷ ಆಕರ್ಷಣೆಯ ಕೊರತೆ ಇದೆ. FM ಅಥವಾ AMನಲ್ಲಿ ಈಗಾಗಲೇ ದೊರೆಯುವ ವಿಷಯವನ್ನೇ DRMನಲ್ಲಿ ಪುನರಾವರ್ತಿಸಲಾಗುತ್ತಿದೆ. ಹೊಸ, ವಿಭಿನ್ನ, ಅಥವಾ ಹೆಚ್ಚುವರಿ ಸೇವೆಗಳಿಲ್ಲದಿದ್ದರೆ, ಕೇಳುಗರು ಹೊಸ ತಂತ್ರಜ್ಞಾನಕ್ಕೆ ಬರಲು ಪ್ರೇರಣೆ ನೀಡುವುದಿಲ್ಲ. “ಯಾಕೆ ಬದಲಾಯಿಸಬೇಕು?” ಎಂಬ ಸರಳ ಪ್ರಶ್ನೆಗೆ DRM ಇನ್ನೂ ಸಮರ್ಪಕ ಉತ್ತರ ನೀಡಿಲ್ಲ.
ಈ ಎಲ್ಲಾ ಅಂಶಗಳನ್ನು ಒಟ್ಟುಗೂಡಿಸಿದಾಗ, ಭಾರತದಲ್ಲಿ DRM ಅನುಷ್ಠಾನದ ಪ್ರಮುಖ ದೋಷ “ಪರಿಸರ ವ್ಯವಸ್ಥೆಯ ಅಸಂಗತತೆ” (ecosystem mismatch) ಎಂದು ಹೇಳಬಹುದು. ಪ್ರಸಾರ ಮೂಲಸೌಕರ್ಯ ಸಿದ್ಧವಾಗಿದ್ದರೂ, ಅದನ್ನು ಬೆಂಬಲಿಸುವ ಸಾಧನಗಳು, ಮಾರುಕಟ್ಟೆ, ಮತ್ತು ಬಳಕೆದಾರರ ಬೇಡಿಕೆ — ಈ ಮೂರೂ ಸಮನ್ವಯದಲ್ಲಿಲ್ಲ. ಇದರಿಂದ DRM ಒಂದು “ಸಾಮರ್ಥ್ಯ ಹೊಂದಿರುವ ತಂತ್ರಜ್ಞಾನ”ವಾಗಿಯೇ ಉಳಿದುಕೊಂಡಿದೆ; “ಸಾಮಾನ್ಯ ಬಳಕೆಯ ಮಾಧ್ಯಮ”ವಾಗಲು ಸಾಧ್ಯವಾಗಿಲ್ಲ.
ಮುಂದೆ ನೋಡಿದರೆ, DRM ಸಂಪೂರ್ಣವಾಗಿ ವಿಫಲವಾಗುತ್ತದೆ ಎಂದು ಹೇಳುವುದು ತ್ವರಿತ ನಿರ್ಣಯವಾಗಬಹುದು. ಆದರೆ ಅದು ಯಶಸ್ವಿಯಾಗಬೇಕಾದರೆ, ಮೂಲಭೂತ ಬದಲಾವಣೆಗಳು ಅಗತ್ಯ. ಕಡಿಮೆ ಬೆಲೆಯ ರಿಸೀವರ್‌ಗಳನ್ನು ಮಾರುಕಟ್ಟೆಗೆ ತರಬೇಕು, ಸ್ಮಾರ್ಟ್‌ಫೋನ್‌ಗಳಲ್ಲಿ DRM ಬೆಂಬಲ ಒದಗಿಸಬೇಕು, ಮತ್ತು ಹೊಸ ರೀತಿಯ ವಿಷಯವನ್ನು ಪರಿಚಯಿಸಬೇಕು. ಇದರ ಜೊತೆಗೆ, ಪ್ರಸಾರ ಯೋಜನೆಗಳನ್ನು ತಾಂತ್ರಿಕ ಕವರೇಜ್‌ನಿಂದ ಹೊರತುಪಡಿಸಿ, ನಿಜವಾದ ಕೇಳುಗರ ಅನುಭವದ ಆಧಾರದ ಮೇಲೆ ರೂಪಿಸಬೇಕು.
ಸಾರಾಂಶವಾಗಿ ಹೇಳುವುದಾದರೆ, DRM ತಂತ್ರಜ್ಞಾನದಲ್ಲಿ ದೋಷ ಕಡಿಮೆ; ಅದರ ಅನುಷ್ಠಾನದಲ್ಲೇ ದೊಡ್ಡ ಅಸಮತೋಲನ ಕಂಡುಬರುತ್ತಿದೆ. ತಂತ್ರಜ್ಞಾನವನ್ನು ಜನರಿಗೆ ತಲುಪಿಸುವಲ್ಲಿ ನೀತಿ, ಮಾರುಕಟ್ಟೆ ಮತ್ತು ಬಳಕೆದಾರ ಅನುಭವ- ಈ ಮೂರೂ ಸಮನ್ವಯದಲ್ಲಿರದಿದ್ದರೆ, ಅತ್ಯುತ್ತಮ ತಂತ್ರಜ್ಞಾನವೂ ಕಾಗದದ ಮೇಲಿನ ಯಶಸ್ಸಾಗಿಯೇ ಉಳಿಯುತ್ತದೆ.
DRM: ಮೊಮ್ಮಗ ಹುಟ್ಟಿದ ನಂತರ ಅಜ್ಜನನ್ನು ಹುಟ್ಟಿಸಿದಂತೆ
“ಮೊಮ್ಮಗ ಹುಟ್ಟಿದ ನಂತರ ಅಜ್ಜನನ್ನು ಹುಟ್ಟಿಸಿದಂತೆ” - ಈ ಒಂದು ಉಪಮೆ DRM ಪರಿಸ್ಥಿತಿಯ ತಾತ್ಪರ್ಯವನ್ನು ಅಚ್ಚುಕಟ್ಟಾಗಿ ಹಿಡಿದಿಡುತ್ತದೆ.
ಪ್ರಸಾರ ತಂತ್ರಜ್ಞಾನದಲ್ಲಿ ಸಹಜ ಕ್ರಮ ಹೀಗಿರಬೇಕು: ಮೊದಲು ಜನರ ಕೈಯಲ್ಲಿ ಸ್ವೀಕರಿಸುವ ಸಾಧನಗಳು ಇರಬೇಕು; ನಂತರ ಪ್ರಸಾರ ಜಾಲ ವಿಸ್ತಾರವಾಗಬೇಕು. ಆದರೆ DRMನಲ್ಲಿ ಇದು ತಲೆಕೆಳಗಾಯಿತು. ಮೊದಲು ಭಾರೀ ಹೂಡಿಕೆಯಲ್ಲಿ ಟ್ರಾನ್ಸ್‌ಮಿಟರ್‌ಗಳನ್ನು ನಿರ್ಮಿಸಲಾಯಿತು; ನಂತರ “ಇದನ್ನು ಕೇಳೋಕೆ ಜನರಿಗೆ ಸಾಧನಗಳೇ ಇಲ್ಲ” ಎಂಬ ವಾಸ್ತವ ಸ್ಪಷ್ಟವಾಯಿತು.
ನೀತಿ ನಿರೂಪಣಾ ಭಾಷೆಯಲ್ಲಿ ಹೇಳುವುದಾದರೆ, ಇದು “ಬೇಡಿಕೆ ಇಲ್ಲದೆ ಪೂರೈಕೆ ಸೃಷ್ಟಿಸಿದಂತೆ (supply creation without demand)” ಎಂಬ ದೋಷದ ಉದಾಹರಣೆ. ಗ್ರಾಹಕ ಎಲೆಕ್ಟ್ರಾನಿಕ್ಸ್ ಕ್ಷೇತ್ರದಲ್ಲಿ ಹೊಸ ತಂತ್ರಜ್ಞಾನ ಯಶಸ್ವಿಯಾಗಬೇಕಾದರೆ, Device Ecosystem - ಅಂದರೆ ಚಿಪ್‌ಗಳು, ರೇಡಿಯೋ ಸೆಟ್‌ಗಳು, ಮೊಬೈಲ್ integration - ಮೊದಲು ಬೆಳೆದು ಬರಬೇಕು. ನಂತರ ಮಾತ್ರ ಪ್ರಸಾರ ವ್ಯವಸ್ಥೆ ವಿಸ್ತಾರಗೊಳ್ಳಬೇಕು. ಇಲ್ಲಿ ಆ ಹಂತವೇ ತಪ್ಪಿಬಿಟ್ಟಿದೆ.
ಇದು ಕೇವಲ ಹಾಸ್ಯವಲ್ಲ; ಒಂದು ಗಂಭೀರ ಸಮಸ್ಯೆಯ ಸೂಚನೆ. ಇದರ ಪರಿಣಾಮವಾಗಿ ಸಾರ್ವಜನಿಕ ಹಣದಲ್ಲಿ ನಿರ್ಮಿಸಿದ ಮೂಲಸೌಕರ್ಯ ಸಂಪೂರ್ಣ ಪ್ರಮಾಣದಲ್ಲಿ ಬಳಕೆಯಾಗುವುದಿಲ್ಲ. ಜನರಿಗೆ ಉಪಯೋಗವಾಗದ ತಂತ್ರಜ್ಞಾನವೆಂಬ ಭಾವನೆ ಬಲವಾಗುತ್ತದೆ. ಮುಂದಿನ ತಂತ್ರಜ್ಞಾನಗಳ ಮೇಲೂ ನಂಬಿಕೆ ಕುಸಿಯುವ ಅಪಾಯ ಇದೆ.
ಆದರೂ, ಈ ಪರಿಸ್ಥಿತಿಯನ್ನು ಸರಿಪಡಿಸುವ ಅವಕಾಶ ಇನ್ನೂ ಇದೆ. ಕಡಿಮೆ ಬೆಲೆಯ DRM ರಿಸೀವರ್‌ಗಳನ್ನು ಸಾಮಾನ್ಯ ಮಾರುಕಟ್ಟೆಗೆ ತರಿಸುವುದು, ಸ್ಮಾರ್ಟ್‌ಫೋನ್‌ಗಳಲ್ಲಿ DRM ಬೆಂಬಲ ಒದಗಿಸುವುದು, ಮತ್ತು DRMನಲ್ಲಿ ವಿಭಿನ್ನ ವಿಷಯ ಒದಗಿಸುವುದು - ಈ ಕ್ರಮಗಳು ಅಸಂಗತತೆಯನ್ನು ಭಾಗಶಃ ನಿವಾರಿಸಬಹುದು.
ಕೊನೆಯದಾಗಿ, ಈ ಉಪಮೆ ಕೇವಲ ಹಾಸ್ಯವಲ್ಲ; DRM ಅನುಷ್ಠಾನದ ಪ್ರಮುಖ ದೋಷವನ್ನು ತೀಕ್ಷ್ಣವಾಗಿ ಬಿಚ್ಚಿಡುವ ವಿಮರ್ಶೆ.
– ಚಂದ್ರಶೇಖರ ಕುಳಮರ್ವ