ಕೆಲವು ವರ್ಷಗಳ ಹಿಂದೆ ಕಾರಿನಲ್ಲಿ ಪಯಣಿಸುತ್ತಿದ್ದಾಗ ಕಾರಿನ ರೆಕಾರ್ಡ್ ಪ್ಲೇಯರ್ನಲ್ಲಿ ಖ್ಯಾತ ಗಾಯನಕಾರ ವಾಸು ದೀಕ್ಷಿತ್ ಹಾಡುತ್ತಿದ್ದ ಪುರಂದರದಾಸರ ರಚನೆ "ಮುಳ್ಳು ಕೊನೆಯ ಮೇಲೆ ಮೂರು ಕಟ್ಟೆಯ ಕಟ್ಟಿ" ಎಂಬ ಹಾಡು ಅತ್ಯಂತ ಅರ್ಥಗರ್ಭಿತವಾಗಿರುವಂತೆ ತೋರಿತು. ತನ್ನಲ್ಲಿ ಗೂಡಾರ್ಥಗಳನ್ನು ಹೊಂದಿರುವ ಈ ಹಾಡಿನ ಬೆಂಬತ್ತಿ ವಿವರ ಕೇಳಿದಾಗ ಬಹಳಷ್ಟು ಜನರಿಗೆ ಈ ಕುರಿತು ಏನೂ ಗೊತ್ತಿರಲಿಲ್ಲ. ಆದರೂ ನನ್ನ ಪ್ರಯತ್ನ ನಡೆದೇ ಇತ್ತು. ಅಂದು ಮುಖ ಪುಸ್ತಕದ ಯಾವುದೋ ಒಂದು ಪುಟದಲ್ಲಿ ಮುಳ್ಳು ಕೊನೆಯ ಮೇಲೆ ಮೂರು ಕಟ್ಟೆಯ ಕಟ್ಟಿ.... ಮುಂಡಿಗೆಯ ವಿವರವೇನೋ ದೊರೆಯಿತು. ಆದರೆ ಇನ್ನೂ ಹೆಚ್ಚಿನ ವಿಷಯ ಸಂಗ್ರಹಣೆಯ ಅವಶ್ಯಕತೆ ಇತ್ತು.
ಇತ್ತೀಚೆಗೆ ನನ್ನೂರಿನಲ್ಲಿ ನಡೆದ ಕನ್ನಡ ಸಾಹಿತ್ಯ ಪರಿಷತ್ತಿನ ದತ್ತಿನಿಧಿ ಕಾರ್ಯಕ್ರಮವೊಂದರಲ್ಲಿ ದಾಸ ಸಾಹಿತ್ಯದ ಕುರಿತು ಉತ್ತರಾದಿ ಮಠದಲ್ಲಿ ಅಧ್ಯಯನಗೈದ ಪ್ರಸ್ತುತ ಗದಗ ಜಿಲ್ಲೆ ಮುಂಡರಗಿ ತಾಲೂಕಿನ ಕೊರ್ಲಹಳ್ಳಿಯಲ್ಲಿರುವ ಫಣೀಂದ್ರಾಚಾರ್ಯ ಅವರು ಮಾತನಾಡಿದರು. ಅತ್ಯಂತ ಕಡಿಮೆ ಸಮಯದಲ್ಲಿ ದಾಸ ಸಾಹಿತ್ಯದಲ್ಲಿ ದಾಸರ ಪದಗಳು, ಭಜನೆಗಳು, ಮುಂಡಿಗೆಗಳು,
ಸುಳಾದಿಗಳು ಉಗಾಭೋಗಗಳು ಹೀಗೆ ಹಲವಾರು ವಿಧಗಳ ಕುರಿತು ಅವರು ಉಪನ್ಯಾಸ ನೀಡಿದರು.
ಹಾಡಿದ್ದೆ ಹಾಡ್ತಾನೆ ಕಿಸ್ ಬಾಯಿ ದಾಸ ಎಂಬ ಪದದ ಅರ್ಥವನ್ನು ತಿಳಿದರೆ ಇನ್ನೆಂದು ಅದನ್ನು ಅಪಹಾಸ್ಯ ಮಾಡಲು ಬಳಸುವುದಿಲ್ಲ ನೀವು.
ಕಿಸಬಾಯಿ ಅಂದರೆ ದೊಡ್ಡ ಬಾಯಿ ಇರುವ ನರಸಿಂಹದೇವರು ಎಂದರ್ಥ. ಆ ನರಸಿಂಹ ದೇವರ ದಾಸನೇ ಹಿರಣ್ಯಕಶಿಪುವಿನ ಮಗ ಪ್ರಹ್ಲಾದ. ಆತ ಪದೇ ಪದೇ ಸ್ಮರಿಸುವುದು ತನ್ನ ನೆಚ್ಚಿನ ದೈವ ನಾರಾಯಣನನ್ನು. ಅಂದರೆ ನರಸಿಂಹದೇವರ ದಾಸ ಪ್ರಹ್ಲಾದ ಹಾಡಿದ್ದನ್ನೇ ಹಾಡುವನು ಅಂದರೆ ನಾರಾಯಣನ ನಾಮಸ್ಮರಣೆ ಮಾಡುತ್ತಿರುವನು ಎಂದರ್ಥ.
ಇನ್ನು ಮುಂಡಿಗೆಗಳಿಗೆ ಬಂದರೆ ಮುಂಡಿಗೆ ಎಂದರೆ ಮರಾಠಿ ಭಾಷೆಯಲ್ಲಿ 'ಮರದ ದಿಮ್ಮಿ' ಎಂದು ಅರ್ಥ. ಹೇಗೆ ಮರದ ದಿಮ್ಮಿಯನ್ನು ಸುಲಭವಾಗಿ ಎತ್ತಲು ಸಾಧ್ಯವಿಲ್ಲವೋ ಹಾಗೆಯೇ ಮುಂಡಿಗೆಗಳನ್ನು ಅರ್ಥಮಾಡಿಕೊಳ್ಳುವುದು ಕೂಡ ಕಷ್ಟ ಸಾಧ್ಯ.
ಮುಂಡಿಗೆ ಎಂದರೆ ತಲೆಗೆ ಕೆಲಸ ಕೊಡುವುದು ಅಂದರೆ ಬುದ್ಧಿ ಉಪಯೋಗಿಸುವುದು ಎಂದು ಅರ್ಥ. ದಾಸರು ತಮ್ಮ ಪಾಂಡಿತ್ಯ ಪ್ರದರ್ಶನಕ್ಕಾಗಿ ಮುಂಡಿಗೆಗಳನ್ನು ರಚಿಸಿಲ್ಲ ಬದಲಾಗಿ ತಮ್ಮ ಪರೋಕ್ಷ ಪ್ರಿಯತೆಯನ್ನು ಒಗಟಿನಂತಹ ಉತ್ತರಗಳನ್ನು ಹುಡುಕುವ ಜಾಣ್ಮೆ ಜನರಲ್ಲಿ ಹುಟ್ಟಲಿ ಎಂಬ ಕಾರಣದಿಂದ ಉಭಯ ಭಾಷಾ ವಿಷಾರದರಾದ ದಾಸರಲ್ಲಿ ಕನಕದಾಸರು, ಪುರಂದರದಾಸರು, ಮಹಿಪತಿ ದಾಸರು ವಿಜಯದಾಸರು ಮತ್ತು ಜಗನ್ನಾಥದಾಸರು ಮುಂತಾದವರು ಮುಂಡಿಗೆಗಳನ್ನು ರಚಿಸಿದ್ದಾರೆ.
*ಪರೋಕ್ಷಪ್ರಿಯ ವಿವಾಹಿ ದೇವಾಹ ಪ್ರತ್ಯಕ್ಷ ದ್ವಿಷಃ*
ಅಂದರೆ ದೇವತೆಗಳಿಗೂ ಕೂಡ ಪ್ರತ್ಯಕ್ಷವಾಗಿ ಹೊಗಳುವುದಕ್ಕಿಂತ ಪರೋಕ್ಷ ಪ್ರಶಂಸೆ ತುಂಬಾ ಆಪ್ತವೆನಿಸುತ್ತದೆ ಎಂದು ಇದರ ಅರ್ಥ.
ತಮ್ಮ ಕೃತಿಯಲ್ಲಿ ಪೂರ್ಣವಾಗಿ ಗೂಡಾರ್ಥಗಳಿರುವ ಹಾಡುಗಳನ್ನು ರಚಿಸಿದ್ದಾರೆ ಪಾಪೋಸು ಪೋದು ವಲ್ಲ ಎಂಬ ಹಾಡಿನಲ್ಲಿ ಚಪ್ಪಲಿ ಕಳೆದುಕೊಂಡು ದುಃಖಿಸುತ್ತಿರುವ ವ್ಯಕ್ತಿಯನ್ನು ಕುರಿತು ಹೇಳಿದರು ಚಪ್ಪಲಿ ಕಳೆದುಕೊಂಡ ವ್ಯಕ್ತಿ ತನ್ನ ಪಾಪವನ್ನು ಕೂಡ ಕಳೆದುಕೊಳ್ಳುತ್ತಾನೆ ಎಂದು ಇಲ್ಲಿ ಹೇಳಿದ್ದಾರೆ ಕೆಲವು ಮುಂಡಿಗೆಗಳು ಸೂಕ್ತಿಯಂತಿದ್ದು ಅವುಗಳ ರುಚಿ ಅನುಭವಿಸಿದ ಅನುಭವಿಗಳಿಗೆ ರಸದೌತಣವನ್ನು ನೀಡುತ್ತವೆ ಇನ್ನೂ ಕೆಲವು ಮುಂಡಿಗೆಗಳು ಶಾಸ್ತ್ರಕ್ಕೆ ವಿರುದ್ಧವಾಗಿ ಕಂಡು ಬರುತ್ತವೆ.
"ಗುರು ಹಿರಿಯರ ಬೈದವನೇ ಶಿಷ್ಯ"
ಇಂತಹ ಮುಂಡಿಗೆಗಳಲ್ಲಿ ಒಂದು.
ಪುರಂದರದಾಸರು, ಕನಕದಾಸರ ನಂತರ ವಿಜಯದಾಸರು ಗೋಪಾಲ ದಾಸರು ಜಗನ್ನಾಥದಾಸರು ಮೋಹನದಾಸರು ಪ್ರಾಣೇಶ ದಾಸರು ಮುಂತಾದ ಅನುಭವಿ ಸಂತರೂ ಮುಂಡಿಗೆಗಳನ್ನು ರಚಿಸಿದ್ದಾರೆ.
ಕನಕದಾಸರಂತೂ 'ಮುಂಡಿಗೆಯ ಬ್ರಹ್ಮ' ಎಂದೆ ಪ್ರಖ್ಯಾತರು.
ಮರನುಂಗುವ ಹಕ್ಕಿ ಮನೆಯೊಳಗೆ ಬಂದಿದೆ, ನೀ ಮಾಯೆಯೊಳಗೋ ನಿನ್ನೊಳು ಮಾಯೆಯೋ...... ಮುಂತಾದ ಮುಂಡಿಗೆಗಳು ಮಾಧ್ವ ತತ್ವದ ಪ್ರಧಾನ ಪ್ರಮೇಯಗಳನ್ನು ತಿಳಿಸಿಕೊಡುತ್ತದೆ.
ಹತ್ತುತಲೆ ಕೆಂಪಾಗಿಹನ ಆರುತಲೆ ಕಪ್ಪಾಗಿಹನ ಸಖನ ಸುತನ ಸ್ವಾಮಿಯ ವೈರಿಯ ತಮ್ಮನ ಸತಿ ಬಂದಳು ಈಗ...... ಇದೊಂದು ನಿದ್ರಾ ಮುಂಡಿಗೆ. ನಿದ್ರೆಯ ಕುರಿತಾಗಿ ಇರುವ ಮುಂಡಿಗೆ.
ಹತ್ತುತಲೆ ಕೆಂಪಾಗಿರುವುದು ಆರುತಲೆ ಕಪ್ಪಾಗಿರುವುದು... ಅಗ್ನಿ... ಅಗ್ನಿಯ ಸಖ ವಾಯು.... ವಾಯುಸುತ ಹನುಮಂತ... ಹನುಮಂತನ ಸ್ವಾಮಿ ಶ್ರೀರಾಮ.... ಶ್ರೀ ರಾಮನ ವೈರಿ ರಾವಣ.... ರಾವಣನ ತಮ್ಮ ಕುಂಭಕರ್ಣ (ನಿದ್ರೆಗೆ ಹೆಸರಾದ) ನ ಸತಿ ಎಂದರೆ ಇದರ ಉತ್ತರ ಮತ್ತೆ ನಿದ್ರೆಯೇ
.... ಸಭೆಯಲ್ಲಿ ಕುಳಿತ ಯಾರಿಗಾದರೂ ನಿದ್ರೆ ಬರುತ್ತಿದ್ದರೆ ಈ ಮುಂಡಿಗೆಯನ್ನು ಹೇಳಿದರೆ ಅವರ ತಲೆಯಲ್ಲಿ ಒಂದು ಹುಳುವನ್ನು ಬಿಟ್ಟಂತೆ . ಅರ್ಥವನ್ನು ಅರಿಯುವ ಹೊತ್ತಿಗೆ ಅವರ ನಿದ್ದೆ ಹಾರಿಯೇ ಹೋಗುತ್ತದೆ.
ಅಂತಹದೇ ಇನ್ನೊಂದು ಪುಟ್ಟ ಮುಂಡಿಗೆ
ಹರನ ಹಾರನ ಆಹಾರನ ಸುತನ ಸ್ವಾಮಿಯ ವೈರಿಯ ಅನುಜನ ಸತಿ ಬಂದಳೀಗ.... ಇದು ಕೂಡ ನಿದ್ದೆ ಬಂದಿತ್ತು ಎಂದೇ ಹೇಳುತ್ತದೆ.
ಮುಂಡಿಗೆಯ ಬ್ರಹ್ಮ ಕನಕದಾಸರನ್ನು ಅಪಹಾಸ್ಯ ಮಾಡಲೆಂದು ಒಮ್ಮೆ ಅವರ ವಿರೋಧಿಗಳು ಎಮ್ಮೆ ಹಡೆಯಿತು ಎಂಬುದನ್ನು ಕುರಿತು ಮುಂಡಿಗೆ ರಚಿಸಿ ಎಂದು ಹೇಳಿದಾಗ ಅವರು ರಚಿಸಿದ್ದು ಹೀಗೆ
ಯಮನ ವಾಹನ ಹಡೆಯಿತು.... ಹನ್ನೆರಡನೆಯ ತಾರೆಯ ಪೆಸರಳವಳ ತಾಯಿಯ ತಮ್ಮನ ಕತ್ತಲೊಳ್ ಗುದ್ದಿದವನ ಅಗ್ರಜನ ಪಿತನ ವಾಹನದ ಸತಿಗೆ ಪ್ರಸೂತಿ ಯಾಯಿತು
12ನೆಯ ತಾರೆ (ನಕ್ಷತ್ರ) ಉತ್ತರ....ಆಕೆಯ ತಾಯಿ ಸುಧೇಶ್ಣ ದೇವಿ (ವಿರಾಟರಾಯನ ಪತ್ನಿ) ....ಆಕೆಯ ತಮ್ಮ ಕೀಚಕನನ್ನು ಕತ್ತಲಲ್ಲಿ ಗುದ್ದಿದವ ಭೀಮ.... ಭೀಮನ ಅಗ್ರಜ ಧರ್ಮರಾಜ.... ಆತನ ಪಿತ ಯಮಧರ್ಮ..... ಯಮಧರ್ಮನ ವಾಹನ ಕೋಣ ....ಕೋಣನ ಸತಿ ಎಮ್ಮೆ... ಎಮ್ಮೆಗೆ ಪ್ರಸೂತಿ ಅಂದರೆ ಎಮ್ಮೆ ಹಡೆಯಿತು ಎಂದರ್ಥ.
ಅದೇ ಕನಕದಾಸರು ಮತ್ತೊಮ್ಮೆ ವಾಯುವಿಹಾರಕ್ಕೆಂದು ಹೊರಟಾಗ ಎಲ್ಲಿಗೆ ಹೊರಟಿದ್ದೀರಿ ಎಂದು ಪ್ರಶ್ನಿಸಿದಾಗ ಈ ಮುಂಡಿಗೆಯನ್ನು ಅವರು ಹೇಳಿದರು.
ಯಾರದೋ ಹೆಂಡತಿಯನ್ನು ಇನ್ನಾರೋ ಹೊಡೆದುಕೊಂಡು ಹೋದರಂತೆ. ಅವಳನ್ನು ಇನ್ನಾರೋ ಹುಡುಕಿಕೊಂಡು ಬಂದರಂತೆ. ನಾನು ಅವರಪ್ಪನ ಹುಡುಕಿಕೊಂಡು ಹೋಗುತ್ತಿದ್ದೇನೆ... ರಾಮನ ಪತ್ನಿ ಸೀತೆಯನ್ನು ರಾವಣ ಹೊಡೆದುಕೊಂಡು ಹೋದ ರಾವಣನನ್ನು ಹುಡುಕಿಕೊಂಡು ಹನುಮಂತನು ಹೋದ ಆ ಹನುಮಂತನ ಅಪ್ಪ ವಾಯುದೇವ ಅಂದರೆ ವಾಯುವಿಹಾರಕ್ಕೆ ನಾನು ಹೋಗುತ್ತಿದ್ದೇನೆ ಎಂದು ಅವರು ಉತ್ತರ ನೀಡಿದರು.
ಕೃಷ್ಣ ಪರಮಾತ್ಮನನ್ನು ಕುರಿತು ಬರೆದ ಒಂದು ಮುಂಡಿಗೆ ಹೀಗಿದೆ
ಸುರರ ವಾದ್ಯದ ಪೆಸರವನ.. ಬಸುರಲ್ಲಿ ಬಂದ ಉರಗನ ಅತ್ತೆಯ ಮಗನ ಹಿರಿಯ ತಮ್ಮನ ಸುತ್ತಿ ಬಾಧಿಸಲಾಗದೆ ಅವರಪ್ಪನ ತಿಂದನು ಧುರದೊಳ್ ಧ್ವಜದೊಳ್ ಕೀಲಿಸಿದಾತನ ವರ ಕುಮಾರರೆಲ್ಲರನು ಕೊಂದವನ ನಿಜಮಾತೆಯ ಕೂಡ ಪುಟ್ಟಿದನ ವೇಲಾಪುರದ ಆದಿಕೇಶವ ಸಲಹೋ
ಆನೇಕದುಂದುಭಿ ಎಂಬ ಹೆಸರನ್ನು ಪಡೆದಿದ್ದ ವಸುದೇವನ ಪತ್ನಿ ರೋಹಿಣಿಯ ಬಸಿರಲ್ಲಿ ಅವತರಿಸಿದ ಹಾವಿನ ಅವತಾರವಾದ ಬಲರಾಮನ ಅತ್ತೆ ಕುಂತಿಯ ಮಗ ಧರ್ಮರಾಜನ ಹಿರಿಯ ತಮ್ಮ ಭೀಮಸೇನನನ್ನು ಬಂಧಿಸಲಾಗದೆ ಅವರಪ್ಪನಾದ ವಾಯುವನ್ನು ತಿಂದನು. ದೂರ ಅಂದರೆ ಯುದ್ಧದಲ್ಲಿ ದುರ್ಯೋಧನನನ್ನು ಉರಗಕೇತನಾಗಿಸಿ ಲಕ್ಷ್ಮಣ ಕುಮಾರನೇ ಮೊದಲಾದವರನ್ನು ಕೊಂದ ನಿಜ ಮಾತೆಯಾದ ಸುಭದ್ರೆಯ ಅಭಿಮನ್ಯುವಿನ ಜೊತೆಗೆ ಹುಟ್ಟಿದ ಶ್ರೀ ಕೃಷ್ಣನಿಗೆ ನಮನ ಎಂದು.
ಪುರಂದರ ದಾಸರ ಮುಂಡಿಗೆಗಳಿಗೆ ಬಂದರೆ
ಮಾಡು ಸಿಕ್ಕದಲ್ಲ
ಮಾಡು ಸಿಕ್ಕದಲ್ಲ ಮಾಡಿನ ಗೂಡು ಸಿಕ್ಕದಲ್ಲ ಜೋಡು ಹೆಂಡರಿಗಂಜಿ ಓಡಿ ಹೋಗುವಾಗ ಗೋಡೆ ಬಿದ್ದು ಬಯಲಾಯಿತಲ್ಲ
ಎಚ್ಚರಗೊಳ್ಳಲಿಲ್ಲ ಮನವೇ ಹುಚ್ಚನಾದೆನಲ್ಲ
ಅಚ್ಚಿನೊಳಗೆ ಮೆಚ್ಚು ಮೆಚ್ಚಿನೊಳಗೆ ಅಚ್ಚು ಕಿಚ್ಚೆದ್ದು ಹೋಯಿತಲ್ಲ
ಮುಪ್ಪು ಬಂದಿತಲ್ಲ ಪಾಯಸ ತಪ್ಪದೆ ಉಣಲಿಲ್ಲ
ತುಪ್ಪದ ಬಿಂದಿಗೆ ತಿಪ್ಪೆ ಮೇಲೆ ದೊಪ್ಪನೆ ಬಿತ್ತಲ್ಲ
ಯೋಗ ಬಂದಿತಲ್ಲ ಬದುಕುವಿಭಾಗವಾಯಿತಲ್ಲ
ಭೋಗಿಶಯನ ಶ್ರೀ ಪುರಂದರ ವಿಠಲನ ಆಗ ನೆನೆಯಲಿಲ್ಲ
ಈ ಮೇಲಿನ ಮುಂಡಿಗೆಯಲ್ಲಿ
ಮಾಡು ಸಿಕ್ಕದಲ್ಲ ಎಂದರೆ ಭಕ್ತಿಯು ಈ ಸಂಸಾರದಲ್ಲಿ ಸಾಧ್ಯವಾಗುತ್ತಿಲ್ಲ. ಆದ್ದರಿಂದಲೇ ವೈಕುಂಠವು ಸಿಕ್ಕುತ್ತಿಲ್ಲ. ಬುದ್ಧಿ ಮತ್ತು ಮನಸ್ಸು ಎಂಬ ಜೋಡು ಹೆಂಡರಿಗೆ ಅಂಜಿ ಓಡಿ ಹೋಗುವಾಗ ಮನಸ್ಥಿತಿಯೆ ಬಿದ್ದು ಹೋಯಿತು.
ಬದುಕು ಇದ್ದಷ್ಟು ಕಾಲ ಭಗವಂತನ ಬಗ್ಗೆ ಎಚ್ಚರಗೊಳ್ಳಲಿಲ್ಲ... ಬೆಲ್ಲದ ಅಚ್ಚಿನಂತೆ ಎರಕಹೊಯ್ದ ಈ ಸಾಂಸಾರಿಕ ಸುಖದಲ್ಲಿ ಮುಳುಗಿ ಕಡೆಗೆ ದೊರೆತ ಅಲ್ಪಸುಖವು ಕೂಡ ಭಯಂಕರವಾದ ದುಃಖದ ಅಗ್ನಿಯಲ್ಲಿ ಕರಗಿ ಹೋಯಿತು.
ಹರಿನಾಮ ಸ್ಮರಣೆ ಎಂಬ ಪಾಯಸವನ್ನು ಉಣದೇ ಮುಪ್ಪು ಆವರಿಸಿತು... ಅಂದರೆ ದೇವರ ಆಧ್ಯಾತ್ಮದ ಕಡೆಗಿನ ನಮ್ಮ ನಡೆ ಸಾಧನ ಇಲ್ಲದೆ ಶೂನ್ಯವಾಯಿತು. ತುಪ್ಪದ ಬಿಂದಿಗೆಯಂತಹ ನಮ್ಮ ಶರೀರ ಬಿದ್ದು ಹೋಯಿತು ಎಂದರೆ ಸಾವು ಸಂಭವಿಸಿತು ಎಂದರ್ಥ.ತುಪ್ಪದ ಬಿಂದಿಗೆ ತಿಪ್ಪೆಗೆ ಬಿದ್ದಂತೆ ಅಂದರೆ ತಿಪ್ಪೆಗೆ ಬಿದ್ದ ತುಪ್ಪವನ್ನು ಎತ್ತಿಕೊಳ್ಳಲು ಆಗದಲ್ಲ.
ಈ ಸಾಧನದ ಶರೀರ ಪುಣ್ಯ ಪಾಪಗಳಿಂದಲೇ ವಿಭಾಗವಾಗಿ ಪುರಂದರ ವಿಠಲನನ್ನು ನೆನೆಯದೇ ಹೋಯಿತಲ್ಲ ಎಂದು ಪುರಂದರದಾಸರು ಈ ಮುಂಡಿಗೆಯಲ್ಲಿ ಹೇಳಿದ್ದಾರೆ.
ವಿಜಯದಾಸರ ಮುಂಡಿಗೆ
ಎರಡೊಂದು ಕಾಯ ನೋಡು
ಎರಡೊಂದು ಕಳೆದು
ಎರಡೊಂದು ಗುಣ ಶೂನ್ಯ ವಿಜಯ ವಿಠಲ ಹರಿಯ ಎರಡೊಂದ ರೂಪ ಭಜಿಸಿ
ಎರಡೊಂದು ಆವರ್ತಿ ಪೊಳೆವ.
ಮೂರೊಂದು ವರ್ಣದ
ಮೂರೊಂದು ಕಡೆ ಬಿಂಬ ರೂಪ
ಮೂರೊಂದು ಆಗಿ ಭಜಿಸು
ಮೂರೊಂದು ಪುರುಷಾರ್ಥ
ಕಾಯ ಎಂದರೆ ಶರೀರ ಈ ದೇಹವು ಸ್ವರೂಪ, ಲಿಂಗ ಮತ್ತು ಸ್ಥೂಲ ಶರೀರಗಳೆಂದು ಮೂರು ಭಾಗಗಳು (೨+೧)
ಎರಡೊಂದನ್ನು(೨+೧) ಕಳೆದು ಅಂದರೆ ಸಂಚಿತ, ಅಗಾಮಿ ಮತ್ತು ಪ್ರಾರಬ್ಧಗಳೆಂಬ ಮೂರು ಕರ್ಮಗಳನ್ನು ಕಳೆಯಬೇಕು.
ಎರಡು ಒಂದು ಗುಣ(೨+೧) ಶೂನ್ಯ ಎಂದರೆ ಸತ್ವ ರಜಸ್ಸು ಮತ್ತು ತಮಸ್ಸು ಎಂಬ ಮೂರು ಪ್ರಾಕೃತ ಗುಣಗಳಿಂದ ರಹಿತನಾದವನು.
ಎರಡೊಂದು(೨+೧) ಸಾರಿ ನೆನೆದು ಅಂದರೆ ದಿನದ ಮೂರು ಹೊತ್ತು ಮುಂಜಾನೆ ಮಧ್ಯಾಹ್ನ ಮತ್ತು ಸಾಯಂಕಾಲ ಭಗವಂತನನ್ನು ನೆನೆಯಬೇಕು ಎಂದರ್ಥ.
ಎರಡೊಂದು ಸ್ಥಾನ ಸೇರು(೨+೧) ಅಂದರೆ ಶ್ವೇತದ್ವೀಪ, ಅನಂತಾಸನ ಮತ್ತು ವೈಕುಂಠ ಎಂಬ ಮೂರು ಸ್ಥಾನ ಸೇರಲು ಸಾಧನೆ ಮಾಡು
ಎರಡೊಂದು (೨+೧) ರೂಪ ಭಜಿಸಿ ಅಂದರೆ ಅಗ್ರೇಶ ಮೂಲೇಶ ಮತ್ತು ಪ್ರಾದೇಶಗಳೆಂಬ ಬಿಂಬರೂಪಗಳನ್ನು ಭಜಿಸಿ ಮುಕ್ತಿ ಪಡೆಯುವುದು.
ಎರಡೊಂದು ಆವರ್ತಿ ಪೊಳೆವ.... ಅಂಗುಷ್ಟದಷ್ಟು ಮೂರ್ತಿ, ಅಂಗುಷ್ಟಕ್ಕಿಂತ ಹೆಚ್ಚು ದೊಡ್ಡದಾದ ಮೂರುತಿ ಮತ್ತು ಚೋಟುದ್ದ ಮೂರುತಿಗಳನ್ನೇ ಕ್ರಮವಾಗಿ ಅಗ್ರೇಶ ಮೂಲೇಶ ಮತ್ತು ಪ್ರಾದೇಶಿ ಎನ್ನುವರು ಈ ರೀತಿ ಮೂರು ವಿಧವಾದ ಆಕಾರದಲ್ಲಿರುವ ದೇವರನ್ನು ಮೂರು ವಿಧವಾಗಿ ಧ್ಯಾನಿಸುವವರ ಹೃದಯದಲ್ಲಿ ದೇವರು ಇರುತ್ತಾನೆ.
ಮೂರೊಂದು ಯುಗದಲ್ಲಿ ಅಂದರೆ ಕೃತಯುಗ, ತ್ರೇತಾಯುಗ, ದ್ವಾಪರ ಮತ್ತು ಕಲಿಯುಗಗಳಲ್ಲಿ (೩+೧)
ಮೂರೊಂದು ವರ್ಣದ ಅಂದರೆ ನಾಲ್ಕು ವರ್ಣದ ವಾಸುದೇವ, ಸಂಕರ್ಷಣ, ಪ್ರದ್ಯುಮ್ನ ಮತ್ತು ಅನಿರುದ್ಧ ರೂಪಗಳು ಕ್ರಮವಾಗಿ ಬಿಳಿ, ಅರುಣ ವರ್ಣ, ಹಸಿರು ಮತ್ತು ನೀಲಿ ಬಣ್ಣಗಳಿಂದ ಕೂಡಿದ್ದು ನಾಲ್ಕು ಯುಗಗಳ ನಿಯಾಮಕವಾಗಿವೆ.
ಮೂರೊಂದು ಕಡೆ ಬಿಂಬ ರೂಪ ಅಂದರೆ ಸ್ವರೂಪ ದೇಹ ಲಿಂಗ ದೇಹ ಅನಿರುದ್ಧ ದೇಹ ಮತ್ತು ಸ್ತೂಲ ದೇಹಗಳಲ್ಲಿ ಬೆಂಬವಾಗಿರುವ ಭಗವಂತ
ಮೂರೊಂದು ಆಗಿ ಭಜಿಸು... ಸತ ಚಿತ್ ಆನಂದ ಆತ್ಮ ಭಗವಂತನೆಂದು ಪೂಜಿಸಬೇಕು
ಮೂರೊಂದು ಪುರುಷಾರ್ಥ... ಧರ್ಮ, ಅರ್ಥ, ಕಾಮ, ಮೋಕ್ಷಗಳೆಂಬ ಚತುರ್ವಿಧ ಪುರುಷಾರ್ಥವು ಲಭಿಸುತ್ತದೆ.
ಹೀಗೆ ದಾಸರು ಮುಂಡಿಗೆಗಳ ಮೂಲಕ ನಮ್ಮ ಮಸ್ತಕಕ್ಕೆ ಹೆಚ್ಚಿನ ಜ್ಞಾನವನ್ನು ಧಾರೆ ಎರೆದಿದ್ದಾರೆ. ಒಗಟಿನ ರೂಪದಲ್ಲಿರುವ ಈ ಮುಂಡಿಗೆಗಳನ್ನು ಬಿಡಿಸುತ್ತಾ ಹೋದರೆ ಆಧ್ಯಾತ್ಮದ, ಭಗವದ್ ಚಿಂತನೆಯ ಅನಾವರಣವಾಗುತ್ತದೆ. ಮನಸ್ಸು ಪ್ರಾಕೃತವನ್ನು ಮರೆತು ಪಾರಮಾರ್ಥದಲ್ಲಿ ಲೀನವಾಗುತ್ತದೆ. ಮುಂಡಿಗೆಗಳು ನಮ್ಮಬುದ್ಧಿಗೆ ಕಸರತ್ತನ್ನು ನೀಡುವುದರ ಜೊತೆಗೆ ನಮ್ಮ ಮನಸ್ಸಿನ ಚಂಚಲ ಚಿತ್ತವನ್ನು ಹೊಡೆದೋಡಿಸಿ ಚಿಂತನೆಗೆ ದಾರಿ ಮಾಡಿ ಕೊಡುತ್ತದೆ. ಅಂತಹ ಮುಂಡಿಗೆಗಳನ್ನು ಬಿಡಿಸಲು ಮಂಡೆ ಉಪಯೋಗಿಸೋಣ. ಇನ್ನೂ ಹೆಚ್ಚು ಹೆಚ್ಚು ಮುಂಡಿಗೆಗಳ ವಿವರಗಳನ್ನು ಅರಿಯೋಣ ಎಂಬ ಆಶಯದೊಂದಿಗೆ
- ವೀಣಾ ಹೇಮಂತ್ ಗೌಡ ಪಾಟೀಲ್ ಮುಂಡರಗಿ ಗದಗ್
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ