ಸಾಗರದ ಜಿ.ಟಿ. ಶ್ರೀಧರ ಶರ್ಮಾ ಅವರಿಗೆ ಹವ್ಯಕ ಸಾಧಕ ಪ್ರಶಸ್ತಿ

Upayuktha
0


ಸಾಗರ: ಶೈಕ್ಷಣಿಕ ಹಾಗೂ ಸಾಮಾಜಿಕ ಕ್ಷೇತ್ರದಲ್ಲಿ ಸಲ್ಲಿಸಿರುವ ದೀರ್ಘಕಾಲೀನ ಸೇವೆಯನ್ನು ಗುರುತಿಸಿ ಸಾಗರದ ಜಿ.ಟಿ. ಶ್ರೀಧರ ಶರ್ಮಾ ಅವರಿಗೆ ಹವ್ಯಕ ಸಾಧಕ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು. ಈ ಪ್ರಶಸ್ತಿಯನ್ನು ಅಖಿಲ ಹವ್ಯಕ ಮಹಾಸಭಾ ಅಧ್ಯಕ್ಷ ಡಾ. ಗಿರಿಧರ ಕಜೆ ಅವರು ಪ್ರದಾನಿಸಿದರು.


ಇಲ್ಲಿನ ರಾಘವೇಶ್ವರ ಸಭಾಭವನದಲ್ಲಿ ಭಾನುವಾರ ಅಖಿಲ ಹವ್ಯಕ ಮಹಾಸಭಾ ವತಿಯಿಂದ ಆಯೋಜಿಸಲಾಗಿದ್ದ ಜಿಲ್ಲಾ ಹವ್ಯಕ ಶಿಕ್ಷಕರ ಸಮಾವೇಶ ‘ಜ್ಞಾನಮ್’ ಸಂದರ್ಭದಲ್ಲಿ ಈ ಪ್ರಶಸ್ತಿ ಪ್ರದಾನ ನಡೆಯಿತು.


ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದ ಹಾಸ್ಯ ಸಾಹಿತಿ ಭುವನೇಶ್ವರಿ ಹೆಗಡೆ, ಇತ್ತೀಚಿನ ದಿನಗಳಲ್ಲಿ ಶಿಕ್ಷಕ ದಿನಾಚರಣೆಗಳು ಆತ್ಮಾವಲೋಕನ ಮತ್ತು ಶೈಕ್ಷಣಿಕ ಚಿಂತನೆಗೆ ಅವಕಾಶ ಕಲ್ಪಿಸುವ ಬದಲು, ಕೆಲವೊಮ್ಮೆ ವ್ಯಕ್ತಿ ಪೂಜೆ ಮತ್ತು ಮೆರೆದಾಟದ ಕಾರ್ಯಕ್ರಮಗಳಾಗಿ ಪರಿವರ್ತನೆಯಾಗುತ್ತಿರುವುದು ವಿಷಾದಕರ ಸಂಗತಿಯಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು.


ಹಿಂದೆ ಶಿಕ್ಷಕರು ಭದ್ರತೆಯ ವಾತಾವರಣದಲ್ಲಿ ಮಕ್ಕಳಿಗೆ ಬೋಧನೆ ಮಾಡುತ್ತಿದ್ದರು. ಆದರೆ ಬದಲಾಗುತ್ತಿರುವ ಸಾಮಾಜಿಕ ಪರಿಸ್ಥಿತಿಯಲ್ಲಿ ಶಿಕ್ಷಕರೇ ಅಭದ್ರತೆಯನ್ನು ಎದುರಿಸಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಮಕ್ಕಳಿಗೆ ಬುದ್ಧಿಮಾತು ಹೇಳುವುದಕ್ಕೂ ಹಿಂಜರಿಯುವಂತಹ ಪರಿಸ್ಥಿತಿ ಶಿಕ್ಷಣ ವ್ಯವಸ್ಥೆಗೆ ಅಪಾಯಕಾರಿಯಾಗಿದೆ ಎಂದು ಅವರು ಹೇಳಿದರು.


ಹವ್ಯಕ ಶಿಕ್ಷಕ ಸಮೂಹವು ಪ್ರಾಚೀನ ಕಾಲದಿಂದಲೂ ಅಕ್ಷರ ಬಿತ್ತುವ ಕಾರ್ಯವನ್ನು ಶ್ರದ್ಧಾಭಕ್ತಿಯಿಂದ ನಿರ್ವಹಿಸಿಕೊಂಡು ಬಂದಿದೆ. ಶಿಕ್ಷಣದ ಜೊತೆಗೆ ಮಾನವೀಯ ಮೌಲ್ಯಗಳನ್ನು ಮಕ್ಕಳಲ್ಲಿ ಬಿತ್ತುವ ಜವಾಬ್ದಾರಿ ಶಿಕ್ಷಕರ ಮೇಲಿದೆ ಎಂದು ಅವರು ಅಭಿಪ್ರಾಯಪಟ್ಟರು.


ಪತ್ರಕರ್ತ ವಿನಾಯಕ ಭಟ್ ಮೂರೂರು ಮಾತನಾಡಿ, ಸಮಾಜದಲ್ಲಿ ಶಿಕ್ಷಕರನ್ನು ನೋಡುವ ದೃಷ್ಟಿಕೋನವೂ ಬದಲಾಗಬೇಕಿದೆ. ಇಂತಹ ಸಮಾವೇಶಗಳು ಶಿಕ್ಷಕರೊಳಗಿನ ವೃತ್ತಿಪರ ಜಾಗೃತಿಯನ್ನು ಮತ್ತಷ್ಟು ಬಲಪಡಿಸುತ್ತವೆ ಎಂದು ಹೇಳಿದರು.


ಅಧ್ಯಕ್ಷೀಯ ಭಾಷಣದಲ್ಲಿ ಡಾ. ಗಿರಿಧರ ಕಜೆ, ರಾಜ್ಯದಲ್ಲಿ 10 ಸಾವಿರಕ್ಕೂ ಅಧಿಕ ಹವ್ಯಕ ಶಿಕ್ಷಕರು ಜ್ಞಾನ ದಾಸೋಹದ ಸೇವೆಯನ್ನು ನಿಸ್ವಾರ್ಥವಾಗಿ ನಿರ್ವಹಿಸುತ್ತಿದ್ದಾರೆ. ಆರ್ಥಿಕ ಶ್ರೀಮಂತಿಕೆ ಇಲ್ಲದಿದ್ದರೂ ಜ್ಞಾನದಲ್ಲಿ ಹವ್ಯಕ ಸಮೂಹ ಸದಾ ಶ್ರೀಮಂತವಾಗಿದೆ. ರಾಜ್ಯದ ಶೈಕ್ಷಣಿಕ ಕ್ಷೇತ್ರವನ್ನು ಶ್ರೀಮಂತಗೊಳಿಸುವಲ್ಲಿ ಹವ್ಯಕ ಶಿಕ್ಷಕರ ಕೊಡುಗೆ ಅಪಾರವಾಗಿದೆ ಎಂದು ಹೇಳಿದರು.


ಈ ಸಂದರ್ಭದಲ್ಲಿ ಕೇಂದ್ರ ಸಂಬಾರು ಮಂಡಳಿ ನಿರ್ದೇಶಕರಾಗಿ ನೇಮಕಗೊಂಡಿರುವ ಪ್ರಸನ್ನ ಕೆರೆಕ್ಕೆ ಅವರನ್ನು ಸನ್ಮಾನಿಸಲಾಯಿತು.


ಕಾರ್ಯಕ್ರಮದಲ್ಲಿ ಮಹಾಸಭಾ ಉಪಾಧ್ಯಕ್ಷರಾದ ಆರ್.ಎಂ. ಹೆಗಡೆ ಬಾಳಸರ, ಶ್ರೀಧರ್ ಭಟ್ ಕೆಕ್ಕಾರು, ಪ್ರಧಾನ ಕಾರ್ಯದರ್ಶಿ ವೇಣು ವಿಶ್ಲೇಶ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಗಜಾನನ ಭಟ್ ಮತ್ತು ತಂಡ ವೇದಘೋಷ ನಡೆಸಿದರು. ಭುವನೇಶ್ವರಿ ಹೆಗಡೆ ಪ್ರಾರ್ಥಿಸಿದರು. ಎಂ.ಎಂ. ತಿಮ್ಮಪ್ಪ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು. ದತ್ತಾತ್ರೇಯ ಭಟ್ ವಂದಿಸಿದರು. ಎಂ.ಎನ್. ಗಜಾನನ ಹಾಗೂ ಸುಬ್ರಹ್ಮಣ್ಯ ಕಾರ್ಯಕ್ರಮ ನಿರೂಪಿಸಿದರು.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top