ಮಂಗಳೂರು, ಫೆ. 23: ಕುಪ್ಮ ಕರ್ನಾಟಕದ ನಿಯೋಗವು ಇತ್ತೀಚೆಗೆ ಶಾಲಾ ಶಿಕ್ಷಣ ಇಲಾಖೆಯ ಮಾನ್ಯ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರಾದ ಮಧುಬಂಗಾರಪ್ಪ ಅವರನ್ನು ಅವರ ಗೃಹ ಕಚೇರಿಯಲ್ಲಿ ಭೇಟಿ ಮಾಡಿ, ಕಳೆದ ಎರಡು ವರ್ಷಗಳಿಂದ ಕುಪ್ಮ ಸಲ್ಲಿಸುತ್ತಿರುವ ವಿವಿಧ ಮನವಿಗಳ ಪ್ರಗತಿ ಕುರಿತು ಸುದೀರ್ಘ ಚರ್ಚೆ ನಡೆಸಿತು.
ಪದವಿ ಪೂರ್ವ ಶಿಕ್ಷಣ ಹಂತದಲ್ಲಿ ಅಗತ್ಯವಿರುವ ನೀತಿ ಹಾಗೂ ಆಡಳಿತಾತ್ಮಕ ಸುಧಾರಣೆಗಳ ಕುರಿತು ವಿಸ್ತೃತವಾಗಿ ಚರ್ಚಿಸಿದ ಸಚಿವರು, ಶಾಲಾ ಶಿಕ್ಷಣ (ಪದವಿ ಪೂರ್ವ) ಇಲಾಖೆಯ ನಿರ್ದೇಶಕರು ಹಾಗೂ ಸಂಬಂಧಿಸಿದ ಅಧಿಕಾರಿಗಳೊಂದಿಗೆ ವರ್ಷಕ್ಕೆ ಎರಡು ಬಾರಿ ಕುಪ್ಮ ಸದಸ್ಯರೊಂದಿಗೆ ಸಮಾಲೋಚನಾ ಸಭೆ ನಡೆಸುವಂತೆ ಸೂಚನೆ ನೀಡಿದರು. ಸಚಿವರ ಈ ಸಕಾರಾತ್ಮಕ ಸ್ಪಂದನೆಗೆ ಕುಪ್ಮ ಕರ್ನಾಟಕ ಹರ್ಷ ವ್ಯಕ್ತಪಡಿಸಿದೆ.
ರಾಜ್ಯದಲ್ಲಿ ಸುಮಾರು 4,000ಕ್ಕೂ ಹೆಚ್ಚು ಖಾಸಗಿ ಅನುದಾನರಹಿತ ಪದವಿ ಪೂರ್ವ ಕಾಲೇಜುಗಳಲ್ಲಿ ಶೇ.63ರಷ್ಟು ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದು, ಗುಣಮಟ್ಟದ ಮೌಲ್ಯಾಧಾರಿತ ಶಿಕ್ಷಣ ಹಾಗೂ ಉತ್ತಮ ಫಲಿತಾಂಶಗಳ ಮೂಲಕ ಶಿಕ್ಷಣ ಇಲಾಖೆಗೆ ಮಹತ್ವದ ಕೊಡುಗೆ ನೀಡುತ್ತಿರುವುದನ್ನು ಈ ಸಂದರ್ಭದಲ್ಲಿ ಸಚಿವರ ಗಮನಕ್ಕೆ ತರಲಾಯಿತು. ಆದರೆ ಈ ಕಾಲೇಜುಗಳು ಹಲವಾರು ಆಡಳಿತಾತ್ಮಕ ಹಾಗೂ ತಾಂತ್ರಿಕ ಸಮಸ್ಯೆಗಳನ್ನು ಎದುರಿಸುತ್ತಿರುವುದನ್ನೂ ನಿಯೋಗ ವಿವರಿಸಿತು.
ಖಾಸಗಿ ಅನುದಾನರಹಿತ ಪದವಿ ಪೂರ್ವ ಕಾಲೇಜುಗಳ ಸಮಸ್ಯೆಗಳ ಕುರಿತು ದಿನಾಂಕ 14-07-2024 ಹಾಗೂ 15-05-2025 ರಂದು ವಿಧಾನಸಭಾಧ್ಯಕ್ಷರ ಸಮಕ್ಷಮದಲ್ಲಿ ನಡೆದ ಸಭೆಗಳಲ್ಲಿ ಕುಪ್ಮ ಪದಾಧಿಕಾರಿಗಳು ಭಾಗವಹಿಸಿ, ಶಿಕ್ಷಣ ಸಚಿವರು ಮತ್ತು ಇಲಾಖಾಧಿಕಾರಿಗಳ ಗಮನಕ್ಕೆ ಗಂಭೀರ ಸಮಸ್ಯೆಗಳು ಹಾಗೂ ಪರಿಹಾರ ಸಲಹೆಗಳನ್ನು ಈಗಾಗಲೇ ತಂದಿರುವುದನ್ನು ಈ ವೇಳೆ ಸ್ಮರಿಸಲಾಯಿತು.
ವಿದ್ಯಾರ್ಥಿಗಳ ವರ್ಗಾವಣೆ ಪ್ರಮಾಣಪತ್ರ (TC)ವನ್ನು ಮುಂದಿನ ದಿನಗಳಲ್ಲಿ ಡಿಜಿಲಾಕರ್ (ಆನ್‌ಲೈನ್) ಮೂಲಕ ವಿತರಿಸುವ ಕುರಿತಂತೆ ಅದರ ಸಾಧಕ–ಬಾಧಕಗಳನ್ನು ಕುಪ್ಮದೊಂದಿಗೆ ಚರ್ಚಿಸುವಂತೆ ನಿಯೋಗ ಮನವಿ ಮಾಡಿತು. ಜೊತೆಗೆ, ದ್ವಿತೀಯ ಪಿಯುಸಿ ಪರೀಕ್ಷೆಯ ಅಂಕಪಟ್ಟಿಯನ್ನು ಕಾಲೇಜಿನ ಮಾನ್ಯ ಪ್ರಾಂಶುಪಾಲರ ಸಹಿ ಮತ್ತು ಮೊಹರಿನೊಂದಿಗೆ ವಿತರಿಸುವ ವ್ಯವಸ್ಥೆಯನ್ನು ಮುಂದುವರಿಸಬೇಕೆಂದೂ ಆಗ್ರಹಿಸಲಾಯಿತು.
ಕಟ್ಟಡ ಸುರಕ್ಷತಾ ಪ್ರಮಾಣಪತ್ರ ಹಾಗೂ ಅಗ್ನಿ ಸುರಕ್ಷತಾ ಪ್ರಮಾಣಪತ್ರಗಳನ್ನು ಐದು ವರ್ಷಗಳಿಗೊಮ್ಮೆ ನವೀಕರಿಸುವ ಕುರಿತಂತೆ ಸರ್ಕಾರ ಈಗಾಗಲೇ ಸ್ಪಂದಿಸಿರುವುದನ್ನು ಸಚಿವರು ಈ ವೇಳೆ ಸ್ಪಷ್ಟಪಡಿಸಿದರು. ಶೈಕ್ಷಣಿಕ ತಜ್ಞರನ್ನೊಳಗೊಂಡ ಸಮಿತಿಯನ್ನು ರಚಿಸುವ ಕುರಿತ ಮನವಿಗೆ ಸಕಾರಾತ್ಮಕ ಸ್ಪಂದನೆ ನೀಡಿದ ಸಚಿವರು, ಶಾಲಾ ಶಿಕ್ಷಣ (ಪದವಿ ಪೂರ್ವ) ಇಲಾಖೆಯ ನಿರ್ದೇಶಕರಾದ ಭರತ್ ಅವರಲ್ಲಿ ಸಭೆ ಕರೆಯುವಂತೆ ಸೂಚಿಸಿದರು. ಇದರಂತೆ ಮಾರ್ಚ್ ತಿಂಗಳಲ್ಲಿ ಕುಪ್ಮ ಸದಸ್ಯರೊಂದಿಗೆ ಸಭೆ ನಡೆಸಲು ನಿರ್ದೇಶಕರು ಒಪ್ಪಿಗೆ ಸೂಚಿಸಿದ್ದಾರೆ.
ಈ ಹಿಂದಿನ ಮನವಿಗಳ ಫಲವಾಗಿ, ಖಾಸಗಿ ಶಿಕ್ಷಣ ಸಂಸ್ಥೆಗಳ ಸ್ಥಳಾಂತರ ಹಾಗೂ ಹಸ್ತಾಂತರದ ಅಧಿಕಾರವನ್ನು ಶಾಲಾ ಶಿಕ್ಷಣ (ಪದವಿ ಪೂರ್ವ) ಇಲಾಖೆ ಹಂತದಲ್ಲೇ ಅನುಮೋದಿಸುವ ವ್ಯವಸ್ಥೆ ಕಲ್ಪಿಸಲಾಗಿದೆ. ಹೊಸ ಖಾಸಗಿ ಅನುದಾನರಹಿತ ಪದವಿ ಪೂರ್ವ ಕಾಲೇಜು ಆರಂಭಕ್ಕೆ ಸಂಬಂಧಿಸಿದ ಅರ್ಜಿಯನ್ನು ಸಂಪೂರ್ಣ ಆನ್‌ಲೈನ್ ಪ್ರಕ್ರಿಯೆಗೆ ಒಳಪಡಿಸಿ, ಅರ್ಜಿ ಅಂಶಗಳನ್ನು 46ರಿಂದ 23ಕ್ಕೆ ಸರಳೀಕರಿಸಲಾಗಿದೆ.
ಹೊಸ ಸಂಯೋಜನೆ, ಭಾಷೆ ಹಾಗೂ ಹೆಚ್ಚುವರಿ ವಿಭಾಗಗಳಿಗೆ ಸಂಬಂಧಿಸಿದ ಅರ್ಜಿಗಳಿಗೂ ಸಂಪೂರ್ಣ ಆನ್‌ಲೈನ್ ವ್ಯವಸ್ಥೆ ಜಾರಿಯಲ್ಲಿದ್ದು, 2024ರ ನಿಯಮಾವಳಿ ಪ್ರಕಾರ ಸ್ಥಳ ಪರಿಶೀಲನೆಯನ್ನು ಶೇ.5ರಷ್ಟು ರ್‍ಯಾಂಡಮೈಜೇಶನ್ ಮೂಲಕ ನಡೆಸಲಾಗುತ್ತಿದೆ. ಅರ್ಜಿಗಳ ಆಹ್ವಾನವನ್ನು 2025–26ನೇ ಶೈಕ್ಷಣಿಕ ಸಾಲಿಗೆ ಫೆಬ್ರವರಿ ತಿಂಗಳಲ್ಲಿ ಮಾಡಲಾಗಿದೆ.
2025–26ನೇ ಶೈಕ್ಷಣಿಕ ವರ್ಷದಿಂದ ದಾಖಲಾತಿ ಪೂರ್ಣಗೊಂಡ ಕಾಲೇಜುಗಳಿಗೆ, ಹಿಂದಿನ ಶೈಕ್ಷಣಿಕ ಸಾಲಿನ ದಾಖಲಾತಿ ಆಧಾರದ ಮೇಲೆ ಹೊಸ ಹಾಗೂ ಹೆಚ್ಚುವರಿ ವಿಭಾಗಗಳಿಗೆ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ.
ಸಭೆಯಲ್ಲಿ ಈ ಎಲ್ಲ ವಿಷಯಗಳಿಗೆ ಸಂಬಂಧಿಸಿದಂತೆ ಸರ್ಕಾರ ಹಾಗೂ ಇಲಾಖೆಯಿಂದ ನೀಡಿರುವ ಸಕಾರಾತ್ಮಕ ಸ್ಪಂದನೆಯನ್ನು ಶಾಲಾ ಶಿಕ್ಷಣ (ಪದವಿ ಪೂರ್ವ) ಇಲಾಖೆಯ ನಿರ್ದೇಶಕರಾದ ಭರತ್ ಮತ್ತು ಜಂಟಿ ನಿರ್ದೇಶಕರಾದ ಹರ್ಷವರ್ಧನ್ ವಿವರಿಸಿದರು.
ಈ ನಿಯೋಗದ ನೇತೃತ್ವವನ್ನು ಕುಪ್ಮ ರಾಜ್ಯ ಕಾರ್ಯದರ್ಶಿ ಪ್ರೊ. ನರೇಂದ್ರ ಎಲ್. ನಾಯಕ್ ವಹಿಸಿದ್ದು, ರಾಜ್ಯ ಉಪಾಧ್ಯಕ್ಷ ಯುವರಾಜ್ ಜೈನ್, ರಾಜ್ಯ ಕೋಶಾಧಿಕಾರಿ ರಮೇಶ್ ಕೆ., ಬೆಂಗಳೂರು ಉತ್ತರ ಜಿಲ್ಲಾ ಅಧ್ಯಕ್ಷ ಕೀರ್ತನ್ ಹಾಗೂ ಜಿಲ್ಲಾ ಕಾರ್ಯದರ್ಶಿ ಡಾ. ದೇವರಾಜ್ ನಿಯೋಗದಲ್ಲಿದ್ದರು.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ

