- ಪ್ರಸನ್ನಾ ವಿ. ಚೆಕ್ಕೆಮನೆ
ಅನಿರೀಕ್ಷಿತವಾಗಿ ಬಂದ ಮಳೆಯ ಆರ್ಭಟ ಹೊರಗೆ ಜೋರಾಗಿತ್ತು. ಆಕಾಶಕ್ಕೆ ಎಣೆಯಿಲ್ಲದ ತೂತು ಬಿದ್ದಿದೆಯೇನೋ ಎನ್ನುವಂತೆ ಧೋ ಎಂದು ಸುರಿಯುತ್ತಿದ್ದ ಮಳೆಹನಿಗಳು, ಹಳೆಯ ಕಾಲದ ಮಂಗಳೂರು ಹಂಚಿನ ಮನೆಯ ಮೇಲ್ಛಾವಣಿಗೆ ಬಡಿದು 'ಟಪ್ ಟಪ್' ಎಂದು ಲಯಬದ್ಧ ಸದ್ದನ್ನು ಮಾಡುತ್ತಿದ್ದವು. ಆ ಸದ್ದು ಕೇವಲ ಗದ್ದಲವಾಗಿರಲಿಲ್ಲ; ಅದೊಂದು ಮೌನ ಪ್ರೇಮಿಯ ವಿರಹಗೀತೆಯಂತೆ, ಇಡೀ ವಾತಾವರಣವನ್ನು ಆವರಿಸಿಕೊಂಡಿತ್ತು.
ತಣ್ಣನೆಯ ಗಾಳಿ ಕಿಟಕಿಯ ಸಣ್ಣ ಸಂಧಿಯಿಂದ ಒಳ ನುಗ್ಗಿ, ಕೋಣೆಯಲ್ಲಿದ್ದ ಬೆಚ್ಚನೆಯ ಉಷ್ಣತೆಯನ್ನು ಅಳಿಸಲು ಹವಣಿಸುತ್ತಿತ್ತು. ಮಣ್ಣಿನ ಆ ಒಂದು ಮಧುರ ಘಮಲು ಗಾಳಿಯಲ್ಲಿ ತೇಲಿ ಬಂದು, ಮನುಷ್ಯನ ಸುಪ್ತ ನೆನಪುಗಳನ್ನು ಬಡಿದೆಬ್ಬಿಸುವಂತಿತ್ತು. ಕೋಣೆಯೊಳಗೆ ಮಂದವಾದ ಬೆಳಕು. ಆ ಬೆಳಕಿನಲ್ಲಿ ಹಳೆಯ ಕಾಲದ ಮರದ ಮಂಚವೊಂದು ಇತಿಹಾಸದ ಸಾಕ್ಷಿಯಂತೆ ನಿಂತಿತ್ತು.
ಮಧುಸೂಧನ ಹಾಸಿಗೆಯ ಮೇಲೆ ಆರಾಮವಾಗಿ ಮಲಗಿದ್ದ. ಮದುವೆಯಾದ ಇಪ್ಪತ್ತೈದು ವರ್ಷಗಳಿಂದಲೂ ಇದು ಅವನ ಬದಲಾಗದ ಅಭ್ಯಾಸ; ತನ್ನ ಬಲಗೈಯನ್ನು ಹಣೆಯ ಮೇಲೆ ಇರಿಸಿಕೊಂಡು, ಕಣ್ಣು ಮುಚ್ಚಿ ಯಾವುದೋ ಲೋಕದಲ್ಲಿ ವಿಹರಿಸುವುದು. ಅದು ಅವನಿಗೆ ಒದಗಿದ ಒಂದು ಬಗೆಯ ಧ್ಯಾನಸ್ಥ ಸ್ಥಿತಿ. ಹೊರಗಿನ ಜಗತ್ತಿನ ಜಂಜಾಟಗಳನ್ನೆಲ್ಲ ಮರೆತು, ತನ್ನ ಅಂತರಾತ್ಮದೊಂದಿಗೆ ಮಾತಾಡುವ ಸಮಯವದು.
ಮಧುರ ನಿಧಾನವಾಗಿ ಅವನ ಹತ್ತಿರ ಬಂದಳು. ಅವಳ ಮನಸ್ಸಿನಲ್ಲಿ ಈ ಮಳೆಯ ರಾತ್ರಿ ಏನೇನೋ ಹೊಸ ಭಾವನೆಗಳನ್ನು, ಹಳೆಯ ನೆನಪುಗಳನ್ನು ಚಿಗುರಿಸಿತ್ತು. ಕಿಟಕಿಯ ಗಾಜುಗಳ ಮೇಲೆ ಹರಿಯುವ ನೀರಿನ ಗೆರೆಗಳನ್ನು ನೋಡುತ್ತಾ ನಿಂತಿದ್ದವಳಿಗೆ, ತನ್ನ ಬದುಕಿನ ಇಪ್ಪತ್ತೈದು ವರ್ಷಗಳ ಸುದೀರ್ಘ ಪಯಣ ಕಣ್ಣಮುಂದೆ ಹಾದುಹೋಯಿತು.
ಅವಳು ಮೆಲ್ಲನೆ ಅವನ ಎದೆಯ ಮೇಲೆ ತಲೆ ಇರಿಸಿದಳು. ತನ್ನ ಬಲಗೈಯನ್ನು ಅವನ ಸುತ್ತ ಬಳಸಿ ಬಿಗಿಯಾಗಿ ಅಪ್ಪಿಕೊಂಡಳು. ಆ ಅಪ್ಪುಗೆಯಲ್ಲಿ ಕೇವಲ ದೈಹಿಕವಾಂಛೆಯಿರಲಿಲ್ಲ; ಅದರಲ್ಲಿ ಇಪ್ಪತ್ತೈದು ವರ್ಷಗಳ ನಂಬಿಕೆ, ಹಂಚಿಕೊಂಡ ಸುಖ-ದುಃಖಗಳು ಮತ್ತು ಪರಸ್ಪರರ ಮೇಲಿದ್ದ ಅಪಾರ ಗೌರವ ಅಡಗಿತ್ತು.
ಮಧುಸೂಧನ ಕಣ್ಣು ಬಿಡದೆಯೇ ತುಟಿಯಂಚಿನಲ್ಲಿ ಸಣ್ಣ ನಗು ಬೀರಿದ. ಅವನಿಗೆ ಗೊತ್ತು, ಮಧುರ ಸುಮ್ಮನೆ ಬಂದು ಅಪ್ಪಿಕೊಂಡರೆ ಅದರ ಹಿಂದೆ ಏನೋ ಒಂದು ತಕರಾರು ಅಥವಾ ಅತಿಯಾದ ಪ್ರೀತಿಯ ಹಪಾಹಪಿ ಇರುತ್ತದೆ ಎಂದು. ಅದು ಅವಳ ಪ್ರತಿ ದಿನದ ಅಭ್ಯಾಸ ಎಂದೂ ಅವನಿಗೆ ಗೊತ್ತಿದೆ.
"ಮಧೂ....... ಮಳೆ ಬರುತ್ತಿದೆಯಲ್ಲ ಹೊರಗೆ ಒದ್ದೆ ಆಗುವ ವಸ್ತುಗಳೇನು ಇಲ್ಲವಲ್ಲ. ಅನಿರೀಕ್ಷಿತ ಮಳೆಗೆ ಹೊರಗೆ ಏನಾದರೂ ಇದ್ದರೆ ಎಲ್ಲಾ ಒದ್ದೆಯಾದೀತು. ಅಗತ್ಯದ ವಸ್ತುಗಳನ್ನು ಮನೆಯೊಳಗೆ ತಂದಿರಿಸಿಯಾಗಿದೆ ತಾನೇ?" ಎಂದು ಮೆಲ್ಲನೆ ಕೇಳಿದ. ಅವಳಿಗೆ ಅವನ ಮಾತು ಕೇಳಿ ಸಿಟ್ಟು ಬಂತು. ತಾನು ಅವನ ಬಳಿ ಬೇರೇನೋ ಹೇಳಲು ಪ್ರಯತ್ನಿಸಿದರೆ ಅವನಿಗೆ ಮಳೆಗೆ ಒದ್ದೆ ಆಗುವ ವಸ್ತುಗಳ ಚಿಂತೆ ಎಂದೆನಿಸಿತು.
"ರೀ... ನಿಮಗೆ ನನ್ನ ಮೇಲೆ ನಿಜವಾಗಿಯೂ ಪ್ರೀತಿಯೇ ಇಲ್ಲ ಅಲ್ವಾ?" ಎಂದಳು. ಅವಳ ಧ್ವನಿಯಲ್ಲಿ ಒಂದು ಬಗೆಯ ಮುಗ್ಧ ಮುನಿಸು, ಸ್ವಲ್ಪ ದೂರು ಮತ್ತು ಅತೀವವಾದ ಕಾತರವಿತ್ತು.
ಮಾಧವ ಜೋರಾಗಿ ನಕ್ಕ. ಅವನ ಎದೆಯ ಆ ಕಂಪನ ಮಧುರಳಿಗೆ ಸ್ಪಷ್ಟವಾಗಿ ತಿಳಿಯುತ್ತಿತ್ತು. ಆ ನಗುವಿನ ಅಲೆಗಳು ಆ ಕೋಣೆಯ ಗೋಡೆಗಳಿಗೆ ಬಡಿದು ಪ್ರತಿಧ್ವನಿಸಿದವು. ಮಧುರ ತಟ್ಟನೆ ಎದ್ದು ಕುಳಿತಳು.
"ಯಾಕೆ ನಗುತ್ತೀರಿ? ನಾನು ಕೇಳುತ್ತಿರುವುದು ಸೀರಿಯಸ್ ವಿಷಯ ಅಲ್ವಾ? ತಮಾಷೆಯಾ? ಇದರಲ್ಲಿ ನಗುವಂತದ್ದು ಏನಿದೆ?" ಹುಸಿ ಮುನಿಸಿನಿಂದ ಅವಳ ತುಟಿಗಳು ಬಿಗಿದುಕೊಂಡವು.
"ಮಲಗು ಮಧುರ, ಯಾಕೆ ಎದ್ದೆ?" ಎಂದು ಅವನು ಅವಳ ಕೈ ಹಿಡಿದು ಪ್ರೀತಿಯಿಂದ ಕೇಳಿದ.
"ಇಲ್ಲ, ನಿಮಗೆ ಯಾವಾಗಲೂ ನಗು. ನಾನು ಇಷ್ಟು ಗಂಭೀರವಾಗಿ ಹೇಳಿದರೂ ನಿಮಗೆ ನನ್ನ ಮೇಲೆ ಸ್ವಲ್ಪವೂ ಕಾಳಜಿ ಇಲ್ಲ. ಪ್ರತಿ ಸಲವೂ ನಾನು ಮಾತ್ರ ನಿಮ್ಮನ್ನು ಬಳಸಿ ಹಿಡಿಯಬೇಕು, ನೀವು ಒಂದು ದಿನವೂ ನನ್ನನ್ನು ಹೀಗೆ ಅಪ್ಪಿಕೊಂಡು ಮಲಗಿದ್ದೀರಾ ? ನಮ್ಮ ಮದುವೆಯಾಗಿ ಎಷ್ಟು ವರ್ಷವಾಯಿತು ಎಂದು ನೆನಪಿದೆಯೇ ನಿಮಗೆ? ಬೆಳ್ಳಿ ಹಬ್ಬ ಮುಗಿದರೂ ನಿಮ್ಮಲ್ಲಿ ಆ ರೋಮ್ಯಾನ್ಸ್ ಎನ್ನುವುದೇ ಇಲ್ಲವಲ್ಲ!"
ಮಧುಸೂಧನನಿಗೆ ನಗು ತಡೆಯಲಾಗಲಿಲ್ಲ. ಮಧ್ಯಮ ವರ್ಗದ ಸಂಸಾರದಲ್ಲಿ ಪ್ರೀತಿ ಎಂಬುದು ಸದ್ದಿಲ್ಲದೆ ಹರಿಯುವ ನದಿಯಿದ್ದಂತೆ. ಅಲ್ಲಿ ಆಕರ್ಷಣೆಯ ಅಬ್ಬರಕ್ಕಿಂತ, ಹೊಣೆಗಾರಿಕೆಯ ಕಾಳಜಿಯೇ ಹೆಚ್ಚಾಗಿರುತ್ತದೆ ಎಂದು ಅವನು ಬಲ್ಲ.
ಆದರೆ ಅದನ್ನು ಮಧುರ ಬಯಸುವುದಿಲ್ಲ ಎಂದು ಅವನಿಗೆ ಗೊತ್ತು. ಜೀವನದ ಏರಿಳಿತಗಳಲ್ಲಿ ಕೆಲವೆಲ್ಲ ಅನಿವಾರ್ಯ. ಅಲ್ಲಿ ಜವಾಬ್ದಾರಿಗಳಿಗೆ ಮೊದಲ ಆದ್ಯತೆ ಕೊಡಬೇಕಾಗುತ್ತದೆ. ಆದರೂ ಪ್ರೀತಿಯ ವಿಚಾರದಲ್ಲಿ ಹೀಗೇ ಒಮೊಮ್ಮೆ ತನ್ನನ್ನು ಆರೋಪಿಯಾಗಿಸುವ ಮಧುರಾಳನ್ನು ಸ್ವಲ್ಪ ರೇಗಿಸದಿದ್ದರೆ ಈ ಮಧುಸೂಧನನಿಗೆ ನಿದ್ದೆ ಬಾರದು. ಅವಳನ್ನು ಮೃದುವಾಗಿ ರೇಗಿಸುವುದು, ಕಿಚಾಯಿಸುವುದು ಅವನ ಅಭ್ಯಾಸ.
"ಹೌದು ಮಧು, ಈಗ ಪ್ರೀತಿ ಇಲ್ಲ ಅಂತ ಗೊತ್ತಾಯ್ತಾ? ಇಪ್ಪತ್ತೈದು ವರ್ಷಗಳ ನಂತರ ಈ ಸತ್ಯದರ್ಶನವಾಯಿತೇ ನಿನಗೆ? ಪ್ರೀತಿ ಇಲ್ಲದಿದ್ದರೂ ನಾನು ನಿನ್ನನ್ನು ಇಷ್ಟು ವರ್ಷ ಬಿಟ್ಟುಬಿಡಲಿಲ್ಲವಲ್ಲ, ಅದೇ ದೊಡ್ಡ ವಿಷಯ ಅಂದುಕೋ!" ಪಿಸುಗುಟ್ಟುವಂತೆ ಮೆಲ್ಲಗೆ ಹೇಳಿದ.
ಈ ಮಾತು ಕೇಳಿ ಅವಳಿಗೆ ಮತ್ತಷ್ಟು ಸಿಟ್ಟು ಬಂತು.
"ಹೌದು, ಈಗ ನನ್ನನ್ನು ಬಿಟ್ಟರೆ ನಿಮಗೆ ಈ ವಯಸ್ಸಿನಲ್ಲಿ ಬೇರೆ ಹದಿಹರೆಯದ ಹುಡುಗಿ ಸಿಗುತ್ತಾಳೆ ಬಿಡಿ.! ಕಾದು ನೋಡಿ. ಸುಮ್ಮನೆ ಹೇಳಬೇಡಿ, ಸಿನಿಮಾಗಳಲ್ಲಿ ನೀವು ನೋಡಿಲ್ಲವೇ ಗಂಡ ಹೆಂಡತಿ ಎಷ್ಟು ಚೆನ್ನಾಗಿ ತಬ್ಬಿಕೊಂಡು ಮಲಗುತ್ತಾರೆ. ನೀವು ಒಂದು ದಿನವಾದರೂ....." ಎಂದು ಹೇಳಿ ಪಕ್ಕನೆ ತುಟಿ ಕಚ್ಚಿದಳು. 'ತಾನು ಹೇಳಿದ್ದು ಹೆಚ್ಚಾಯಿತೇ ' ಎಂದು ತೋರಿತು ಅವಳಿಗೆ.... !
ಮಧುಸೂಧನನಿಗೆ ಅವಳ ಮುಗ್ಧತೆ ಕಂಡು ಮರುಕವಾಯಿತು. ಸಿನಿಮಾ ಮತ್ತು ವಾಸ್ತವದ ನಡುವಿನ ಅಂತರ ಅವಳಿಗೆ ಎಷ್ಟು ಹೇಳಿದರೂ ಅರ್ಥವಾಗುತ್ತಿರಲಿಲ್ಲ.
"ಅದಕ್ಕೇ ನಾನು ಸಿನಿಮಾ ನೋಡೋದಿಲ್ಲ ಎಂದು ಗೊತ್ತಿಲ್ಲವೇ ನಿನಗೆ?" ಅವನು ನಕ್ಕಾಗ ಅವಳು ತುಟಿಯುಬ್ಬಿಸಿದಳು. ಅವನಿಗೆ ಅವಳ ಆ ಮುಖಭಾವ ಸದಾ ಪ್ರಿಯ.
"ಮಧುರ, ಸಿನಿಮಾದಲ್ಲಿ ನಟರು ಕೇವಲ ಹಣಕ್ಕಾಗಿ ಅಪ್ಪಿಕೊಳ್ಳುತ್ತಾರೆ ಎಂದು ನಿನಗೆ ಗೊತ್ತಿಲ್ಲವೇ? ಅದು ಕೇವಲ ಅಭಿನಯ ಅಷ್ಟೇ. ಕ್ಯಾಮೆರಾ ಮುಂದೆ ಅವರು ತೋರಿಸುವ ಆ ಅತಿಯಾದ ಪ್ರೀತಿ ಕೇವಲ ನಟನೆ. ಅವರ ನಿಜವಾದ ಬದುಕಿನಲ್ಲಿ, ಅವರು ಹೆಂಡತಿಯರನ್ನು ಹಾಗೆ ರಾತ್ರಿ ಪೂರ್ತಿ ಅಪ್ಪಿಕೊಂಡು ಮಲಗಲು ಸಾಧ್ಯವಿಲ್ಲ. ಮನುಷ್ಯನಿಗೆ ನಿದ್ರೆ ಬರಬೇಕೆಂದರೆ ಅವನದೇ ಆದ ಒಂದು ಸೌಕರ್ಯದ ಭಂಗಿ ಬೇಕು. ನನಗಂತೂ ಈ ಕೈಯನ್ನು ಹಣೆಯ ಮೇಲೆ ಇಟ್ಟುಕೊಳ್ಳದಿದ್ದರೆ ನಿದ್ರೆಯೇ ಬಾರದು. ಇದರ ಅರ್ಥ ನಿನಗೆ ನನ್ನ ಮೇಲೆ ಪ್ರೀತಿ ಇಲ್ಲ ಎಂದಲ್ಲ." ಅವನ ದನಿ ಅತ್ಯಂತ ಮೃದುವಾಗಿತ್ತು. ಅವನ ಮಾತು ನಿಜವೆಂದು ಅವಳಿಗೆ ಗೊತ್ತಿತ್ತು. ಆ ಹಿನ್ನೆಲೆಯಲ್ಲಿ ತನ್ನನ್ನು ಅವನು ಕೀಟಲೆ ಮಾಡುವುದು ಎಂಬ ಭಾವ ಅವಳಿಗೆ ಅರಿವಾಗುತ್ತಿತ್ತು. ಇದು ಅವನ ಸಹಜ ಸ್ವಭಾವ ಎಂದು ಅವಳಿಗೆ ಗೊತ್ತಿದೆ.
ಆದರೆ ಮಧುರ ಅದನ್ನೆಲ್ಲ ಅಷ್ಟು ಸುಲಭವಾಗಿ ಒಪ್ಪುವವಳಲ್ಲ. ಅವಳಿಗೆ ಅವನ ಬಳಿ ಈ ವಿಚಾರಕ್ಕೆ ಸ್ವಲ್ಪ ಜಗಳವಾಡದಿದ್ದರೆ ನಿದ್ರೆಯೇ ಬಾರದು. ಇತರ ವಿಚಾರಗಳಿಗೆ ಅವರಿಬ್ಬರ ನಡುವೆ ಯಾವ ಕಾರ್ಯಕ್ಕೂ ಜಗಳವಾಗುವುದೇ ಇಲ್ಲ ಅದು ಅವರ ಬದುಕಿನ ವಿಸ್ಮಯ.
"ನಿನಗೆ ಗಂಡನ ಜೊತೆ ಜಗಳವಾಡಲು ಗೊತ್ತಿಲ್ಲವೇ ಮಧುರ ಎಲ್ಲ ಹೆಂಡತಿಯರು ಹೇಗೆ ಜಗಳ ಮಾಡುತ್ತಾರೆ" ಎಂದು ಎಷ್ಟೋ ಬಾರಿ ಅವಳನ್ನು ರೇಗಿಸುತ್ತಿದ್ದ ಮಧುಸೂದನ.
" ಓಹೋ ನಿಮಗೆ ನನ್ನಂಥ ಪಾಪದ ಹೆಂಡತಿಗಿಂತ ಜಗಳವಾಡುವಂತಹ ಜಗಳಗಂಟಿ ಹೆಂಡತಿ ಬೇಕಿತ್ತೇ? ನನಗದು ಗೊತ್ತಿರಲಿಲ್ಲ ಜಗಳವಾಡುವ ಕೋರ್ಸ್ ಏನಾದರೂ ಇದ್ದರೆ ಕಲಿತು ಬರುತ್ತೇನೆ. ನನ್ನ ತಾಯಿ ತಂದೆಯರು ಗಂಡನ ಜೊತೆ ಜಗಳವಾಡಬಾರದು, ಅವನ ನೆಮ್ಮದಿ ಹಾಳಾಗುತ್ತದೆ ಎಂದು ಕಲಿಸಿದ್ದಾರೆ. ಸುಮ್ಮನೆ ನಾನು ನಿಮ್ಮಲ್ಲಿ ಯಾಕೆ ಜಗಳವಾಡಲಿ. ನೀವು ನನಗೆ ಬೇಕಾದನೆಲ್ಲ ಕೊಡಿಸುತ್ತಿದ್ದೀರಲ್ಲ" ಎಂದು ಅವನಿಗೆ ಉತ್ತರಿಸುತ್ತಿದ್ದಳು ಅವಳು.
ಅವಳ ಆ ಸ್ವಭಾವ ಅವನಿಗೆ ತುಂಬ ಇಷ್ಟ. ಅವನ ಇತಿಮಿತಿಯನ್ನರಿತು ಅವಳು ಜೀವನ ಸಾಗಿಸುತ್ತಿದ್ದಳು. ಹಾಸಿಗೆ ಇದ್ದಷ್ಟೇ ಕಾಲು ಚಾಚು ಎಂಬ ತತ್ವವನ್ನು ಜೀವನದಲ್ಲಿ ಪಾಲಿಸುತ್ತಿದ್ದ ಅವಳಿಗೆ ಬಡತನ ಒಂದು ಕೊರತೆ ಎಂದು ಅನಿಸಿರಲಿಲ್ಲ.
"ಹೋಗಿ... ನಿಮಗೆ ಎಲ್ಲದಕ್ಕೂ ಒಂದು ಲಾಜಿಕ್ ಇದೆ. ಸ್ವಲ್ಪ ರೋಮ್ಯಾಂಟಿಕ್ ಆಗಿ ಈ ಮಳೆಯಲ್ಲಿ ಒಂದು ಹಾಡು ಹೇಳಿ ನನ್ನನ್ನು ತಬ್ಬಿ ಹಿಡಿದರೆ ಏನಾಗುತ್ತಿತ್ತು ? ನಿಮಗೆ ಇಂಥ ಆಲೋಚನೆಯೇ ಬರುವುದಿಲ್ಲ." ಸ್ವಲ್ಪ ಹೊತ್ತಿನ ಮೌನದ ನಂತರ ಹೀಗೆ ಹೇಳಿದ ಮಧುರಾ ಮುನಿಸಿಕೊಂಡು ವಿರುದ್ಧ ದಿಕ್ಕಿಗೆ ತಿರುಗಿ ಮಲಗಿದಳು. ಮೌನ ಅವರಿಬ್ಬರ ನಡುವೆ ಕವಿಯಿತು.
ಆದರೆ ಮಧುರಳಿಗೆ ನಿದ್ರೆ ಬರಲಿಲ್ಲ. ಅವಳ ಮನಸ್ಸು ಗೆಳತಿಯರ ಜೀವನದ ಕಡೆಗೆ ಹೊರಳಿತು. ಅವಳ ಗೆಳತಿ ಸುಚಿತ್ರಾ ಯಾವಾಗಲೂ ಫೇಸ್‌ಬುಕ್‌ನಲ್ಲಿ ತನ್ನ ಗಂಡನೊಂದಿಗೆ 'ಪರ್ಫೆಕ್ಟ್ ಕಪಲ್' ಫೋಟೋಗಳನ್ನು ಹಾಕುತ್ತಿದ್ದಳು. ಎಲ್ಲರೂ ಅವರನ್ನು ನೋಡಿ ಅಸೂಯೆ ಪಡುತ್ತಿದ್ದರು.
ಆದರೆ ಒಂದು ದಿನ ಸುಚಿತ್ರಾ ಕಣ್ಣೀರು ಹಾಕುತ್ತಾ ಮನೆಗೆ ಬಂದಾಗ ತಿಳಿದ ಸತ್ಯವೇ ಬೇರೆಯಾಗಿತ್ತು. ಅಬ್ಬರದ ಪ್ರೀತಿ ತೋರಿಸುವ ಅವಳ ಗಂಡ, ಮನೆಯೊಳಗೆ ಅವಳನ್ನು ಸಣ್ಣ ಕಾರಣಕ್ಕೂ ಹೊಡೆಯುತ್ತಿದ್ದ. ಹೊರಗಿನ ಪ್ರದರ್ಶನಕ್ಕೂ ಒಳಗಿನ ಬದುಕಿಗೂ ಅಜಗಜಾಂತರ ವ್ಯತ್ಯಾಸವಿತ್ತು.
ಮತ್ತೊಬ್ಬ ಗೆಳತಿ ಶೋಭಾಳ ಗಂಡನಿಗೆ ಅವಳ ಮೇಲೆ ಅತಿಯಾದ ಸಂಶಯ. ಪ್ರೀತಿಯ ಹೆಸರಿನಲ್ಲಿ ಅವಳ ಸ್ವಾತಂತ್ರ್ಯವನ್ನೇ ಕಿತ್ತುಕೊಂಡಿದ್ದ. ಆದರೆ ತನ್ನ ಮಧುಸೂಧನ?
ಅಂದು ತಾನು ಓದಬೇಕು ಎಂದು ಬಯಸಿದಾಗ ಮನೆಯವರೆಲ್ಲ ವಿರೋಧಿಸಿದ್ದರು. ಆದರೆ ಮಧುಸೂದನ ಮಾತ್ರ "ನಿನಗೆ ಮುಂದೆ ಓದಬೇಕೆಂಬ ಹಂಬಲವಿದ್ದರೆ ಓದು, ಅಡುಗೆ ಮನೆಯಲ್ಲಿ ನಿನ್ನ ಹವ್ಯಾಸಗಳು ಮುರುಟಿ ಹೋಗಬಾರದು. ನಿನ್ನ ಕನಸುಗಳಿಗೆ ವಿಸ್ತಾರವಾದ ಪ್ರಪಂಚ ಕಾದಿದೆ. ನಿನಗೆ ಸದಾ ಬೆಂಬಲವಾಗಿ ನಾನಿದ್ದೇನೆ. ಧೈರ್ಯವಾಗಿ ಮುಂದೆ ಹೋಗು. ಹೆಣ್ಣು ಮಕ್ಕಳು ಆತ್ಮವಿಶ್ವಾಸ ಪಡೆಯಬೇಕು. ಜಗತ್ತನ್ನು ಧೈರ್ಯದಿಂದ ಎದುರಿಸುವಂತಾಗಬೇಕು. ನಿನ್ನ ಜೊತೆಗೆ ಸದಾ ನಾನಿದ್ದೇನೆ" ಎಂದು ಅವಳಿಗೆ ಭರವಸೆ ತುಂಬಿದ್ದ. ಅವಳ ಸಣ್ಣಪುಟ್ಟ ಬಯಕೆಗಳನ್ನು ತನ್ನ ಇತಿಮಿತಿಯಲ್ಲಿ ಈಡೇರಿಸುವುದು ಅವನಿಗೆ ತುಂಬಾ ಪ್ರಿಯವಾಗಿತ್ತು. ಆ ಬಯಕೆ ಈಡೇರಿದಾಗ ಅವಳು ಖುಷಿಯಿಂದ ಕಣ್ಣರಳಿಸಿದರೆ ಅವಳ ಕಂಗಳಲ್ಲಿ ಹೊಳೆಯುವ ಹೊಳಪೇ ಅವನ ಬದುಕಿನ ನೆಮ್ಮದಿಯಾಗಿತ್ತು.
ಅವಳ ವಿಶ್ರಾಂತಿಯ ದಿನಗಳಲ್ಲಂತೂ ಮಧುಸೂಧನ ಅಡುಗೆ ಮನೆ ಜವಾಬ್ದಾರಿಯನ್ನು ಸಂಪೂರ್ಣವಾಗಿ ವಹಿಸಿಕೊಂಡು ಅವಳಿಗೆ ಇಷ್ಟವಾದ ಅಡುಗೆ ತಿಂಡಿ ಮಾಡಿ ಬಡಿಸುತ್ತಿದ್ದ. ಆ ಪ್ರೀತಿ... ಅದು ಅದಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ ಎಂದೆನಿಸಿತು ಮಧುರಾಗೆ. ಇಂಥಹ ಪ್ರೀತಿ ತನ್ನ ಗೆಳತಿಯರಲ್ಲಿ ಬೇರೆ ಯಾರಿಗೂ ಸಿಗುವುದಿಲ್ಲ. ಇದು ತನಗೆ ಒಬ್ಬಳಿಗೆ ಮಾತ್ರ ಎಂದು ಅವಳಿಗೆ ಸರಿಯಾಗಿ ಗೊತ್ತಿತ್ತು.
ಸೀರೆ ಅಂಗಡಿಗೆ ಹೋದಾಗಲಂತೂ "ನಿನಗೆ ಯಾವುದು ಇಷ್ಟವೋ ಅದನ್ನೇ ತಗೋ, ಹಣದ ಚಿಂತೆ ಬೇಡ" ಎನ್ನುವ ಆ ನಂಬಿಕೆ... ಇದೆಲ್ಲವೂ ಸಿನಿಮಾದ ತಬ್ಬಿಕೊಳ್ಳುವಿಕೆಗಿಂತ ಮಿಗಿಲಾದದ್ದಲ್ಲವೇ? ಅವನ ಪ್ರೀತಿ ಅಬ್ಬರಿಸುವ ಸಮುದ್ರವಲ್ಲ, ಶಾಂತವಾಗಿ ಹರಿಯುವ ನದಿಯಂತೆ. ಕಾಣಿಸುವುದಿಲ್ಲ, ಆದರೆ ದಡದ ಮಣ್ಣನ್ನು ಸದಾ ತೇವವಾಗಿರಿಸುತ್ತದೆ.
ಮಧುರ ಹಳೆಯ ನೆನಪುಗಳಲ್ಲಿ ಕಳೆದುಹೋಗಿದ್ದಾಗ, ಮಧುಸೂಧನ ಮೆಲ್ಲನೆ ತನ್ನ ಹಣೆಯ ಮೇಲಿದ್ದ ಕೈಯನ್ನು ಕೆಳಗಿಳಿಸಿದ. ಅವನು ನಿದ್ರಿಸಿರಲಿಲ್ಲ. ಮಧುರ ಮುನಿಸಿಕೊಂಡಿರುವುದು ಅವನಿಗೆ ಗೊತ್ತು. ಅವನು ಮೆಲ್ಲನೆ ಸರಿದು ಅವಳ ಹತ್ತಿರ ಬಂದ. ಅವಳ ಕೈಯನ್ನು ನಿಧಾನವಾಗಿ ಹಿಡಿದು ತನ್ನ ಸೊಂಟದ ಸುತ್ತ ಬಳಸುವಂತೆ ಮಾಡಿಕೊಂಡ. ಅವಳನ್ನು ತನ್ನ ಕಡೆಗೆ ಎಳೆದುಕೊಂಡು, ತಾನು ಬಿಗಿಯಾಗಿ ಅಪ್ಪಿಕೊಂಡ.
ಮಧುರ ಅಚ್ಚರಿಯಿಂದ ಕಣ್ಣು ಬಿಟ್ಟಳು. ಅವಳ ಸಿಟ್ಟು ಆ ಒಂದು ಸ್ಪರ್ಶಕ್ಕೆ ಕರಗಿ ನೀರಾಗಿತ್ತು.
"ನಿಮಗೆ ನನ್ನ ಮೇಲೆ ಇಷ್ಟವಿಲ್ಲವಲ್ಲ? ಈಗ ಯಾಕೆ ನನ್ನ ಕೈ ಹಿಡಿದು ಎಳೆದುಕೊಂಡಿದ್ದೀರಿ?" ಎಂದು ಪಿಸುಗುಟ್ಟಿದಳು.
ಮಧುಸೂಧನ ಅವಳ ಕಿವಿಯ ಹತ್ತಿರ ಮೋಹಕವಾಗಿ, ಅಷ್ಟೇ ಮೃದುವಾಗಿ ಪಿಸುಗುಟ್ಟಿದ: "ಮಧುರ, ಈ ಇಪ್ಪತ್ತೈದು ವರ್ಷಗಳಿಂದ ಪ್ರತಿ ರಾತ್ರಿ ಈ ಕೈಯ ಸ್ಪರ್ಶವಿಲ್ಲದೆ ನನಗೆ ನಿದ್ರೆಯೇ ಬರುವುದಿಲ್ಲ. ನೀನು ಮುನಿಸಿಕೊಂಡು ತಿರುಗಿ ಮಲಗಿದಾಗ ನನಗೇನೋ ಕಳೆದುಕೊಂಡಂತೆ ಅನಿಸಿತು. ನಾನು ನಿನಗೆ ಪ್ರೀತಿ ಇಲ್ಲ ಎಂದು ಹೇಳಿದ್ದು ಕೇವಲ ನಿನ್ನನ್ನು ರೇಗಿಸಲು ಮಾತ್ರ. ಪ್ರದರ್ಶನದ ಪ್ರೀತಿಗಿಂತ, ಪರಸ್ಪರರ ಉಸಿರಾಗುವ ಪ್ರೀತಿ ದೊಡ್ಡದು ಅಲ್ವಾ ?"
ಮಧುರಳ ಕಣ್ಣುಗಳಲ್ಲಿ ಆನಂದಭಾಷ್ಪ ತುಂಬಿ ಬಂದಿತು. ಅವಳು ಅವನ ಎದೆಗೆ ಮುಖವನ್ನೊತ್ತಿ ಮಲಗಿದಳು. ಹೊರಗೆ ಮಳೆಯ ಸದ್ದು ಈಗ ಸುಮಧುರ ಸಂಗೀತದಂತೆ ಕೇಳಿಸಿತು. ಮಂಗಳೂರು ಹಂಚಿನ ಮನೆಯ ಆ ಸಣ್ಣ ಕೋಣೆಯಲ್ಲಿ, ಇಬ್ಬರು ಜೀವಗಳು ಒಂದುಗೂಡಿ ಬದುಕಿನ ಅರ್ಥವನ್ನು ಕಂಡುಕೊಂಡಿದ್ದರು. ಅದು ಅವರ ಸುಮಧುರ ದಾಂಪತ್ಯದ ಅನುರಾಗದ ಪಲ್ಲವಿಯಾಗಿತ್ತು.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ



