ಉಪ್ಪಿನಂಗಡಿ: ಮೊನ್ನೆಯಷ್ಟೇ ಶತ ಸಂವತ್ಸರಕ್ಕೆ ಪಾದಾರ್ಪಣೆಗೈದ ಉಪ್ಪಿನಂಗಡಿಯ ಹಿರಿಯ ವೈದ್ಯ, ಮಾಳಿಗೆ ಡಾಕ್ಟ್ರು ಎಂದೇ ಖ್ಯಾತರಾದ ಡಾ. ಮುದ್ರಜೆ ರಾಮಚಂದ್ರ ಭಟ್ ಅವರು ಸೋಮವಾರ ರಾತ್ರಿ ಅವರ ನೆಕ್ಕಿಲಾಡಿಯ ಸ್ವಗೃಹದಲ್ಲಿ ವಯೋಸಹಜವಾಗಿ ನಿಧನರಾದರು.
ಅವರ ಪಾರ್ಥಿವ ಶರೀರದ ಅಂತ್ಯಸಂಸ್ಕಾರವು ಇಂದು- ಮಂಗಳವಾರ ಅವರ ನೆಕ್ಕಿಲಾಡಿ ಮನೆಯಲ್ಲಿ ಬೆಳಗ್ಗೆ 10 ಗಂಟೆಯ ಸುಮಾರಿಗೆ ನೆರವೇರಿತು.
ವೈದ್ಯರಿಗೆ 95 ವರ್ಷಗಳಾದ ಸಂದರ್ಭದಲ್ಲಿ ಅವರ ಮೊಮ್ಮಗ ಶ್ಯಾಮಪ್ರಸಾದ್ ಮುದ್ರಜೆ ಅವರು ಉಪಯುಕ್ತ ನ್ಯೂಸ್ ನಲ್ಲಿ ಬರೆದಿದ್ದ ಲೇಖನದ ಆಯ್ದ ಭಾಗ ಇಲ್ಲಿದೆ:
1950ರ ದಶಕದಲ್ಲಿ ಉಪ್ಪಿನಂಗಡಿಗೆ ದ್ವಿತೀಯ ವೈದ್ಯರಾಗಿ ಆಗಮಿಸಿದ ಮುದ್ರಜೆಯವರ ಸಾಧನೆ, ವೈದ್ಯಕೀಯ ಸೇವೆ ಅದ್ವಿತೀಯ. ಅವರ ಆ ಕಾಲದ ವೈದ್ಯಕೀಯ ಸೇವೆ ಈ ಕಾಲದಲ್ಲಿ ವೈದ್ಯವೃತ್ತಿ ನಡೆಸುತ್ತಿರುವ ನಮಗೆಲ್ಲ ಕಲ್ಪಿಸುವುದಕ್ಕೂ ಅಸಾಧ್ಯ. ಸೈಕಲ್ ತುಳಿಯುತ್ತಾ, ಗುಡ್ಡವನ್ನು ಏರಿ, ಕಣಿವೆಯಲ್ಲಿ ಇಳಿದು, ಹಳ್ಳವನ್ನು ದಾಟಿ ರೋಗಿಯ ಮನೆಗೇ ಹೋಗಿ ಚಿಕಿತ್ಸೆ ನೀಡುತ್ತಿದ್ದುದು, ಶಿಶಿಲ ಅರಸಿನಮಕ್ಕಿಯಂತಹ ದೂರದ ಊರಿಗೆ ಸಂಜೆ ಇದ್ದ ಒಂದೇ ಒಂದು ಬಸ್ ಏರಿ, ಅಲ್ಲಿ ಮತ್ತೆ ಮೂರು-ನಾಲ್ಕು ಮೈಲು ಕಾಲ್ನಡಿಗೆಯಲ್ಲಿ ಸಾಗಿ ರಾತ್ರಿ ಆ ರೋಗಿಯನ್ನು ಉಪಚರಿಸಿ, ಅದೇ ಊರಿನ ಪರಿಚಿತರಲ್ಲಿ ಉಳಿದುಕೊಂಡು, ಮರುದಿನ ಬೆಳ್ಳಂಬೆಳಗ್ಗೆ ನಾಲ್ಕು ಗಂಟೆಗೇ ಎದ್ದು ಮತ್ತೆ ಕಾಲ್ನಡಿಗೆಯಲ್ಲಿ ಬಂದು ಬಸ್ ಏರಿ, ಉಪ್ಪಿನಂಗಡಿಯ ತನ್ನ ಕ್ಲಿನಿಕ್ ಗೆ ಮರಳುತ್ತಿದ್ದ ಅವರ ಸೇವೆಯನ್ನು ಊಹಿಸುವುದಕ್ಕೂ ಅಸಾಧ್ಯ. ವೈದ್ಯೋ ನಾರಾಯಣೋ ಹರಿ ಎನ್ನುವ ಮಾತಿಗೆ ಜೀವ ತುಂಬಿದ ಅಭಿನವ ಧನ್ವಂತರಿ ಡಾ. ಮುದ್ರಜೆಯವರು.
ಪೂರ್ಣ ಲೇಖನಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ:
ವೈದ್ಯರಾಗಿ ಎಷ್ಟು ಸಾಧಕರೋ, ಅಷ್ಟೇ ಒಳ್ಳೆಯ ಕೃಷಿಕರಾಗಿದ್ದರು. ಶಾಸ್ತ್ರೀಯ ಸಂಗೀತ ಅಭ್ಯಾಸ ಮಾಡದಿದ್ದರೂ ಯಾವುದೇ ಹಾಡು ಕೇಳಿದ ತಕ್ಷಣ ರಾಗವನ್ನು ಗುರುತಿಸಬಲ್ಲ ಸಂಗೀತಜ್ಞರಾಗಿದ್ದರು. ದೇರಾಜೆ, ಶೇಣಿಯಂತವರ ತಾಳಮದ್ದಲೆಗಳನ್ನು ಆಸ್ವಾದಿಸುತ್ತಿದ್ದ ಯಕ್ಷಪ್ರೇಮಿ, ಗುರು ಮಠ, ದೇವಸ್ಥಾನಗಳಲ್ಲಿ ನಡೆವ ಕಾರ್ಯಕ್ರಮಗಳಲ್ಲಿ ಅಗ್ರಸ್ಥಾನದಲ್ಲಿ ನಿಂತು ಮುನ್ನಡೆಸುವ ನಾಯಕ, ಧಾರ್ಮಿಕ ಶ್ರದ್ಧಾಳು. ಹೀಗೆ ಅವರ ಕಾರ್ಯಕ್ಷೇತ್ರಗಳು ಹತ್ತಾರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ