95 ಸಂವತ್ಸರಗಳನ್ನು ಪೂರೈಸಿದ ವೈದ್ಯ ತಪಸ್ವಿ- ಡಾ. ಮುದ್ರಜೆ ರಾಮಚಂದ್ರ ಭಟ್ಟರು

Upayuktha
0

ನಮ್ಮ ಅಜ್ಜ ನಮ್ಮ ಹೆಮ್ಮೆ- ಮೊಮ್ಮಗನ ಅಭಿಮಾನದ ನಮನ



ಉಪ್ಪಿನಂಗಡಿಯಲ್ಲಿ ಮಾಳಿಗೆಯಲ್ಲಿ ಕ್ಲಿನಿಕ್ ಹೊಂದಿರುವ ವೈದ್ಯರು ಬಹಳಷ್ಟು ಮಂದಿ ಇದ್ದರೂ, "ಮಾಳಿಗೆ ಡಾಕ್ಟ್ರು" ಎನ್ನುವ ನೆಗಳ್ತೆಗೆ ಪಾತ್ರರಾದವರು ಹಿರಿಯರಾದ ಆದರಣೀಯ ಡಾ.ಮುದ್ರಜೆ ರಾಮಚಂದ್ರ ಭಟ್ಟರು. ಇಂದು 95 ಸಂವತ್ಸರಗಳನ್ನು ಅರ್ಥಪೂರ್ಣವಾಗಿ ಬಾಳಿದ ಅವರಿಗೆ ಜನ್ಮದಿನದ ಶುಭಾಶಯಗಳನ್ನು ಹೇಳುವುದರ ಮೂಲಕ ಅವರ ಬಗ್ಗೆ ಬರೆಯಬೇಕೆನ್ನಿಸಿತು.


1950ರ ದಶಕದಲ್ಲಿ ಉಪ್ಪಿನಂಗಡಿಗೆ ದ್ವಿತೀಯ ವೈದ್ಯರಾಗಿ ಆಗಮಿಸಿದ ಮುದ್ರಜೆಯವರ ಸಾಧನೆ, ವೈದ್ಯಕೀಯ ಸೇವೆ ಅದ್ವಿತೀಯ. ಅವರ ಆ ಕಾಲದ ವೈದ್ಯಕೀಯ ಸೇವೆ ಈ ಕಾಲದಲ್ಲಿ ವೈದ್ಯವೃತ್ತಿ ನಡೆಸುತ್ತಿರುವ ನಮಗೆಲ್ಲ ಕಲ್ಪಿಸುವುದಕ್ಕೂ ಅಸಾಧ್ಯ. ಸೈಕಲ್ ತುಳಿಯುತ್ತಾ, ಗುಡ್ಡವನ್ನು ಏರಿ, ಕಣಿವೆಯಲ್ಲಿ ಇಳಿದು, ಹಳ್ಳವನ್ನು ದಾಟಿ ರೋಗಿಯ ಮನೆಗೇ ಹೋಗಿ ಚಿಕಿತ್ಸೆ ನೀಡುತ್ತಿದ್ದುದು, ಶಿಶಿಲ ಅರಸಿನಮಕ್ಕಿಯಂತಹ ದೂರದ ಊರಿಗೆ ಸಂಜೆ ಇದ್ದ ಒಂದೇ ಒಂದು ಬಸ್ ಏರಿ, ಅಲ್ಲಿ ಮತ್ತೆ ಮೂರು-ನಾಲ್ಕು ಮೈಲು ಕಾಲ್ನಡಿಗೆಯಲ್ಲಿ ಸಾಗಿ ರಾತ್ರಿ ಆ ರೋಗಿಯನ್ನು ಉಪಚರಿಸಿ, ಅದೇ ಊರಿನ ಪರಿಚಿತರಲ್ಲಿ ಉಳಿದುಕೊಂಡು, ಮರುದಿನ ಬೆಳ್ಳಂಬೆಳಗ್ಗೆ ನಾಲ್ಕು ಗಂಟೆಗೇ ಎದ್ದು ಮತ್ತೆ ಕಾಲ್ನಡಿಗೆಯಲ್ಲಿ ಬಂದು ಬಸ್ ಏರಿ, ಉಪ್ಪಿನಂಗಡಿಯ ತನ್ನ ಕ್ಲಿನಿಕ್ ಗೆ ಮರಳುತ್ತಿದ್ದ ಅವರ ಸೇವೆಯನ್ನು ಊಹಿಸುವುದಕ್ಕೂ ಅಸಾಧ್ಯ. ವೈದ್ಯೋ ನಾರಾಯಣೋ ಹರಿ ಎನ್ನುವ ಮಾತಿಗೆ ಜೀವ ತುಂಬಿದ ಅಭಿನವ ಧನ್ವಂತರಿ ಡಾ.ಮುದ್ರಜೆಯವರು.


ವೈದ್ಯರಾಗಿ ಎಷ್ಟು ಸಾಧಕರೋ, ಅಷ್ಟೇ ಒಳ್ಳೆಯ ಕೃಷಿಕರು. ಶಾಸ್ತ್ರೀಯ ಸಂಗೀತ ಅಭ್ಯಾಸ ಮಾಡದಿದ್ದರೂ ಯಾವುದೇ ಹಾಡು ಕೇಳಿದ ತಕ್ಷಣ ರಾಗವನ್ನು ಗುರುತಿಸಬಲ್ಲ ಸಂಗೀತಜ್ಞ... ದೇರಾಜೆ, ಶೇಣಿಯಂತವರ ತಾಳಮದ್ದಲೆಗಳನ್ನು ಆಸ್ವಾದಿಸುತ್ತಿದ್ದ ಯಕ್ಷಪ್ರೇಮಿ, ಗುರು ಮಠ, ದೇವಸ್ಥಾನಗಳಲ್ಲಿ ನಡೆವ ಕಾರ್ಯಕ್ರಮಗಳಲ್ಲಿ ಅಗ್ರಸ್ಥಾನದಲ್ಲಿ ನಿಂತು ಮುನ್ನಡೆಸುವ ನಾಯಕ, ಧಾರ್ಮಿಕ ಶ್ರದ್ಧಾಳು.. ಹೀಗೆ ಅವರ ಕಾರ್ಯಕ್ಷೇತ್ರಗಳು ಹತ್ತಾರು.


ಅಜಾತಶತ್ರು, ಸರಳ ಸಜ್ಜನಿಕೆಯ ಪ್ರತಿರೂಪ, ಸಚ್ಚಾರಿತ್ಯದ, ಮಾನವೀಯತೆಯ ಸಾಕಾರಮೂರ್ತಿ ಡಾ.ಮುದ್ರಜೆ ರಾಮಚಂದ್ರ ಭಟ್ ಅವರಿಗೆ ಆರೋಗ್ಯಭಾಗ್ಯ ದೇವ ಧನ್ವಂತರಿ ಅನುಗ್ರಹಿಸಲಿ ಎಂದು ಪ್ರಾರ್ಥಿಸುತ್ತಾ ಅವರಿಗೆ ಜನ್ಮದಿನದ ಆದರಪೂರ್ವಕ ಶುಭಕಾಮನೆಗಳು.


-ಶ್ಯಾಮಪ್ರಸಾದ ಮುದ್ರಜೆ


(ಉಪಯುಕ್ತ ನ್ಯೂಸ್)


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top