ಮಂಗಳೂರು: ಕರ್ನಾಟಕ ರಾಜ್ಯ ಅಸಂಘಟಿತ ಪುರೋಹಿತ ಕಾರ್ಮಿಕರ ಕ್ಷೇಮಾಭಿವೃದ್ಧಿ ಸಂಘದ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಘಟಕದ ಉದ್ಘಾಟನೆ ಜು. 25ರಂದು ಪಣಂಬೂರಿನ ನಂದನೇಶ್ವರ ದೇವಸ್ಥಾನದಲ್ಲಿ ನಡೆಯಲಿದೆ.
ಸಂಘದ ಸಂಘಟನಾ ಕಾರ್ಯದರ್ಶಿ ವೇ.ಮೂ. ಸುಬ್ರಹ್ಮಣ್ಯ ಮಯ್ಯರ ನಿವಾಸ 'ಶ್ರೀಶಕ್ತಿ' ಕೂಳೂರು- ಇಲ್ಲಿ ಇಂದು (ಜು.18) ನಡೆದ ಪದಾಧಿಕಾರಿಗಳ ಸಭೆಯಲ್ಲಿ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲಾ ಘಟಕಗಳ ಉದ್ಘಾಟನೆ ಸಮಾರಂಭದ ಬಗ್ಗೆ ತೀರ್ಮಾನಿಸಲಾಯಿತು.
ಸಂಘಟನೆಯ ರಾಷ್ಟ್ರಾಧ್ಯಕ್ಷರಾದ ಡಾ. ವೇ.ಬ್ರ. ಎಂ.ಬಿ. ಅನಂತಮೂರ್ತಿ, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ವೇ. ಬ್ರ. ಅಭಿಷೇಕ್ ಭಾರದ್ವಾಜ್, ಅಖಿಲ ಭಾರತ ಅಸಂಘಟಿತ ಪುರೋಹಿತ ಕಾರ್ಮಿಕರ ಕ್ಷೇಮಾಭಿವೃದ್ಧಿ ಸಂಘದ ರಾಷ್ಟ್ರೀಯ ಜಂಟಿ ಕಾರ್ಯದರ್ಶಿ ವೇದಬ್ರಹ್ಮ ಸತೀಶ್ ಸಿಂಹ, ರಾಷ್ಟ್ರೀಯ ಉಪಾಧ್ಯಕ್ಷ ವೇ.ಬ್ರ. ಶ್ರೀಮಂಡಲಂ ಗೋಪಿನಾಥ್, ಸಂಘಟನೆಯ ರಾಜ್ಯ ನಿರ್ದೇಶಕರಾದ ವೇ.ಬ್ರ. ಫಣೀಂದ್ರ ಕುಮಾರ್ ಹೆಚ್.ಜಿ ಸೇರಿದಂತೆ ಕೇಂದ್ರೀಯ ಪದಾಧಿಕಾರಿಗಳ ಸಮ್ಮುಖದಲ್ಲಿ ಇಂದಿನ ಸಭೆ ನಡೆಯಿತು.
ಇದೇ ಸಂದರ್ಭದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಶಾಖೆಯ ಪದಾಧಿಕಾರಿಗಳಿಗೆ ಸಂಸ್ಥೆಯ ಗುರುತಿನ ಚೀಟಿಗಳನ್ನು (ಐಡಿ ಕಾರ್ಡ್) ವಿತರಿಸಲಾಯಿತು.
ಇಂದಿನ ಸಭೆಯಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಅಸಂಘಟಿತ ಪುರೋಹಿತ ಕಾರ್ಮಿಕರ ಸಂಘದ ಅಧ್ಯಕ್ಷ ವೇ.ಮೂ. ಶ್ರೀ ವಿ. ಪ್ರಕಾಶ್ ಹೊಳ್ಳ, ಜಿಲ್ಲಾ ಸಂಘಟನಾ ಕಾರ್ಯದರ್ಶಿ, ವೇ. ಮೂ ಶ್ರೀ ಸುಬ್ರಹ್ಮಣ್ಯ ಮಯ್ಯ, ಗೌರವಾಧ್ಯಕ್ಷರಾದ ಶ್ರೀ ರಘುರಾಮ ರಾವ್ ಕಂದಾವರ,
ಲೆಕ್ಕಪತ್ರ ನಿರ್ವಾಹಕ ಪದಾಧಿಕಾರಿಗಳಾದ ಶಿವರಾಮ ರಾವ್, ಶ್ರೀಧರ ರಾವ್ ಹಾಗೂ ಇತರ ಸದಸ್ಯರು ಭಾಗವಹಿಸಿದ್ದರು.
ಹಿನ್ನೆಲೆ:
ವೈದಿಕರು, ಪೌರೋಹಿತ್ಯ ವೃತ್ತಿಯಲ್ಲಿ ತೊಡಗಿರುವ ಬ್ರಾಹ್ಮಣರು ಅಸಂಘಟಿತ ನೆಲೆಯಲ್ಲಿ ತಮ್ಮ ವೃತ್ತಿಗಳನ್ನು ನಡೆಸಿಕೊಂಡು ಅದರಿಂದ ಬರುವ ಅಲ್ಪ ಆದಾಯದಲ್ಲೇ ಜೀವನ ನಡೆಸುತ್ತಿದ್ದಾರೆ. ಪ್ರಸ್ತುತ ಕೋವಿಡ್ ಸಂಕಷ್ಟದಿಂದಾಗಿ ಯಾವ ಆದಾಯ ಮೂಲವೂ ಇಲ್ಲದೆ, ಸ್ವಾಭಿಮಾನ ತೊರೆದು ಅನ್ಯರ ಬಳಿ ಸಹಾಯ ಯಾಚಿಸಲೂ ಆಗದೆ ಸಂಕಟಪಡುತ್ತಿದ್ದಾರೆ. ಸರಕಾರದಿಂದಲೂ ಇವರಿಗೆ ಯಾವುದೇ ನೆರವು ಸಿಗುತ್ತಿಲ್ಲ. ರಾಜ್ಯದಲ್ಲಿ ಒಟ್ಟಾರೆ 47,000ಕ್ಕೂ ಅಧಿಕ ವೈದಿಕ ಪುರೋಹಿತ ಕಾರ್ಮಿಕರು ಕೆಲಸ ಮಾಡುತ್ತಿದ್ದು, ಇವರ್ಯಾರೂ ಸಂಘಟಿತರಾಗಿಲ್ಲ. ಅಂಥವರನ್ನು ಒಂದೇ ವೇದಿಕೆಯಲ್ಲಿ ಸಂಘಟಿಸಿ ಸರಕಾರದ ಸೌಲಭ್ಯಗಳನ್ನು ದೊರಕಿಸಿ ಕೊಡುವುದರ ಜತೆಗೆ ಸಾಮಾಜಿಕ ಭದ್ರತೆ ಹಾಗೂ ಸಾಮಾಜಿಕ ಗೌರವ ದೊರಕಿಸುವ ನಿಟ್ಟಿನಲ್ಲಿ ಪ್ರಯತ್ನಗಳು ಆರಂಭವಾದಾಗ ಜನ್ಮ ತಳೆದಿದ್ದೇ ಕರ್ನಾಟಕ ರಾಜ್ಯ ಅಸಂಘಟಿತ ಪುರೋಹಿತ ಕಾರ್ಮಿಕರ ಕ್ಷೇಮಾಭಿವೃದ್ಧಿ ಸಂಘ.
ವೇ.ಬ್ರ. ಶ್ರೀ ಎಂ.ಬಿ ಅನಂತಮೂರ್ತಿ ಹಾಗೂ ಶ್ರೀ ಅಭಿಷೇಕ್ ಭಾರದ್ವಾಜ್ ಅವರ ಜಂಟಿ ಪ್ರಯತ್ನದಲ್ಲಿ ಮೊಳಕೆಯೊಡೆದ ಸಂಘಟನೆಗೆ ಆರಂಭಿಕ ಆಸರೆ ನೀಡಿ ಪೋಷಿಸಿದವರು ಕೇಂದ್ರೀಯ ಪದಾಧಿಕಾರಿಗಳು. ಸರಕಾರದಿಂದ ನೋಂದಾಯಿತ ಹಾಗೂ ಕರ್ನಾಟಕ ಪ್ರದೇಶ ಅಸಂಘಟಿತ ಕಾರ್ಮಿಕ ಪರಿಷತ್‌ಗೆ ಸಂಯೋಜಿತವಾಗಿರುವ ಈ ಸಂಘಟನೆ ಇದೀಗ ಮೊದಲ ಹಂತದಲ್ಲಿ ಕರ್ನಾಟಕದ ಎಲ್ಲ ಜಿಲ್ಲೆಗಳಲ್ಲಿ ಶಾಖೆಗಳನ್ನು ಆರಂಭಿಸುವ ಪ್ರಯತ್ನದಲ್ಲಿದೆ. ಜತೆ ಜತೆಗೇ ನೆರೆಹೊರೆಯ ರಾಜ್ಯಗಳಲ್ಲೂ ಘಟಕಗಳನ್ನು ಆರಂಭಿಸಿ ರಾಷ್ಟ್ರೀಯ ಮಟ್ಟದಲ್ಲಿ ಅಸಂಘಟಿತ ಪುರೋಹಿತ ಕಾರ್ಮಿಕರ ಸಂಘಟನೆಯಾಗಿ ಬೆಳೆಯುವ ಮೂಲಕ ದೇಶದ ಎಲ್ಲ ವೈದಿಕ-ಪುರೋಹಿತ-ಕಾರ್ಮಿಕರಿಗೆ ಸಾಮಾಜಿಕ ಭದ್ರತೆ ಒದಗಿಸಿಕೊಡುವ ಹಂಬಲ ಹೊಂದಿದೆ.
Key Words: ಕರ್ನಾಟಕ ರಾಜ್ಯ ಅಸಂಘಟಿತ ಪುರೋಹಿತ ಕಾರ್ಮಿಕರ ಕ್ಷೇಮಾಭಿವೃದ್ಧಿ ಸಂಘ, Karnataka State Unroganised Purohtha Workers welfare organisation
(ಉಪಯುಕ್ತ ನ್ಯೂಸ್)
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ