ಪ್ರೀತಿಯಿಂದ ಮಾಡುವ ಸಾಹಿತ್ಯ ಸೇವೆ ದಣಿವನ್ನು ತರುವುದಿಲ್ಲ: ಶತಾವಧಾನಿ ಡಾ. ಆರ್. ಗಣೇಶ್

Upayuktha
0

ಮಂಗಳೂರು ಲಿಟ್‌ ಫೆಸ್ಟ್‌ 7ನೇ ಆವೃತ್ತಿಗೆ ತೆರೆ



ಮಂಗಳೂರು: ಸ್ಥಾನಮಾನ ಪ್ರದರ್ಶನಕ್ಕೆ ಮೆಟ್ಟಿಲಾಗಿ ಸಾಹಿತ್ಯವನ್ನು ಬಳಸಬಾರದು ಎಂದು ಶತಾವಧಾನಿ ಡಾ. ಆರ್ ಗಣೇಶ್ ಅಭಿಪ್ರಾಯಪಟ್ಟರು. ಭಾರತ್ ಫೌಂಡೇಶನ್ ಮತ್ತು ಬೆಂಗಳೂರು ಮಿಥಿಕ್ ಸೊಸೈಟಿ ಆಯೋಜಿಸಿದ ಮಂಗಳೂರು ಲಿಟ್ ಫೆಸ್ಟ್ 7ನೇ ಆವೃತ್ತಿಯ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿ ಹಲವು ಪ್ರಮುಖ ವಿಚಾರಗಳತ್ತ ಬೆಳಕು ಚೆಲ್ಲಿದರು.


ಸಾಹಿತ್ಯ ಕ್ಷೇತ್ರವನ್ನು ಪ್ರೀತಿಯಿಂದ ಮತ್ತು ಬದ್ಧತೆಯಿಂದ ಬೆಳೆಸಬೇಕು. ಅದು ಲಾಭದಾಯಕ ಉದ್ಯಮವಲ್ಲ. ಪ್ರೀತಿಯಿಂದ, ಸಮರ್ಪಿತ ಭಾವದಿಂದ ಮಾಡುವ ಸಾಹಿತ್ಯ ಮತ್ತು ಸಮಾಜದ ಸೇವೆ ಯಾವತ್ತೂ ದಣಿವನ್ನು ತರುವುದಿಲ್ಲ ಎಂದು ಅವರು ನುಡಿದರು.


ಸಾಹಿತ್ಯದ ರಚನೆಯನ್ನು ರಸನಿಷ್ಠವಾಗಿ ಅನುಸಂಧಾನ ಮಾಡಬೇಕು ಎಂದ ಅವರು ಮಹಾಮಹೋಪಾಧ್ಯಾಯ ಪಿ.ವಿ ಕಾಣೆ, ಡಿವಿಜಿ ಅವರಂತಹ ಮಹಾನ್ ಕೃತಿಕಾರರ ಉದಾಹರಣೆಯನ್ನು ನೀಡಿದರು.


ನೇತ್ಯಾತ್ಮಕ ವಿಚಾರಧಾರೆಗಳ ಇಸಂಗಳಿಂದ ಪ್ರೇರಿತವಾಗಿ ಭಾಷೆ-ಸಂಸ್ಕೃತಿಗಳ ನಡುವೆ ಒಡಕು ಹುಟ್ಟಿಸುವ ಮತ್ತು ಸಂಘರ್ಷ ಸೃಷ್ಟಿಸುವ ದುರಭ್ಯಾಸವುಳ್ಳವರಿಂದ ದೂರವಿರಬೇಕು ಎಂಬ ಕಿವಿಮಾತನ್ನೂ ಅವರು ನುಡಿದರು.


ಎಲ್ಲವನ್ನೂ ಸಮನ್ವಯಗೊಳಿಸುವ ಅವಿರೋಧವಾಗಿ ವಿಚಾರಗಳನ್ನು ಮಂಡಿಸುವ ಸಾಹಿತ್ಯವು ಆಸ್ವಾದಕನಿಗೆ ರಸೋತ್ಪತ್ತಿ ಮತ್ತು ಅನುಭೂತಿಯನ್ನು ಸೃಷ್ಟಿಸುತ್ತದೆ. ಅದು ಸಾಹಿತ್ಯ ರಚನೆಯ ಉದ್ದೇಶವಾಗಬೇಕು ಎಂದು ಆರ್ ಗಣೇಶ್ ಪ್ರತಿಪಾದಿಸಿದರು.



ಪ್ರಾದೇಶಿಕತೆ ಮತ್ತು ರಾಷ್ಟ್ರೀಯತೆ ಎಂಬ ಭೇದ ಮೂಡಿಸುವ ಸಾಹಿತ್ಯ ಬೇಕಿಲ್ಲ. ವಾಸ್ತವದಲ್ಲಿ ಅವರೆಡೂ ಒಂದೇ ಭಾವದಲ್ಲಿ ನಿಲ್ಲುವಂಥದ್ದು. ನವ್ಯ, ನವ್ಯೋತ್ತರ ಎಂದೆಲ್ಲ ಹೆಸರುಗಳನ್ನಿಟ್ಟುಕೊಂಡ ಸಮಾಜದಲ್ಲಿ ಒಡಕು ಹುಟ್ಟಿಸುವ ಸಾಹಿತ್ಯ ಬೇಕಿಲ್ಲ ಎಂದು ಶತಾವಧಾನಿಗಳು ಹೇಳಿದರು.


ಭಾಷೆಯ ಅಧ್ಯಯನದಲ್ಲಿ ಗಂಭೀರತೆ ಬೇಕು. ಭಾಷಾ ಶಾಸ್ತ್ರದಲ್ಲಿ ಸಾಹಿತ್ಯ ಎಂಬುದು ಒಂದು Lungs Space (ಉಸಿರಾಟದ ಅವಕಾಶ) ವಿದ್ದಂತೆ. ಸಾಹಿತ್ಯದ ವಿಮರ್ಶೆಗಳನ್ನು ಮಾಡುವಾಗ ಪಠ್ಯ ಕೇಂದ್ರಿತ ಚರ್ಚೆ ಬೇಕಿಲ್ಲ. ಸಾಹಿತ್ಯದ ರಚನೆಯ ಮೂಲ ಆಶಯವನ್ನು ಗಮನಿಸಬೇಕು. ಕಥನಗಳನ್ನಾಧರಿಸಿದ (ನರೇಟಿವ್ಸ್) ಸಮ್ಮೇಳನಗಳೂ ಆಗ ಕೂಡದು. ಹಾಗಾದಾಗ ಅದು ಎದುರಾಳಿಗಳ ನಿಯಮದ ಪ್ರಕಾರ ಆಡಿದ ಆಟದಂತಾಗುತ್ತದೆ ಎಂದರು.


ಮೂಲದ ಅನ್ವೇಷಣೆಯೇ ಭಾರತೀಯ ಸಂಸ್ಕೃತಿ ಮುಖ್ಯ ಲಕ್ಷಣ ಎಂದ ಆರ್ ಗಣೇಶ್ ಅವರು, ಸೇಡಿಯಾಪು ಕೃಷ್ಣ ಭಟ್ಟರ ತಾಳಾತೀತ ಛಂದಸ್ಸು ಮತ್ತು ಪಾದೆಕಲ್ಲು ನರಸಿಂಹ ಭಟ್ಟರ ಸಾಹಿತ್ಯ ಸೇವೆಯನ್ನು ವಿಶೇಷವಾಗಿ ಉಲ್ಲೇಖಿಸಿದರು.


ಭಾರತೀಯ ಜ್ಞಾನಧಾರೆಯಲ್ಲಿ ಆಧುನಿಕ ವಿಶ್ವವಿದ್ಯಾಲಯಗಳ ಪ್ರಣೀತ ಶಿಕ್ಷಣಕ್ಕಿಂತ ಅನೌಪಚಾರಿಕ ಶಿಕ್ಷಣದ ವ್ಯವಸ್ಥೆಯೇ ಪ್ರಮುಖ ಪಾತ್ರ ವಹಿಸಿದೆ. ಆ ಮೂಲಕವೇ ಜ್ಞಾನ ಮತ್ತು ಸಂಸ್ಕೃತಿಯ ಪ್ರಸರಣ ವಿವಿಧ ಆಯಾಮಗಳಲ್ಲಿ ನಡೆದಿದೆ ಎಂದರು.


ಪ್ರಾಚೀನ ಶಾಸನಗಳನ್ನು ಓದಬಲ್ಲವರು ಈಗ ಹುಡುಕಿದರೆ ಬೆರಳೆಣಿಕೆಯಷ್ಟು ಮಾತ್ರ ಸಿಗಬಹದೇನೋ. ಆದರೆ ಆ ಕೌಶಲ್ಯ ಉಳ್ಳವರನ್ನು ತಯಾರು ಮಾಡಬೇಕಿದೆ. ಲಿಪಿಜ್ಞಾನ ಇರುವವರು ಬೇಕಾಗಿದೆ. ಈಗಿನ ಅನುವಾದ ಸಾಹಿತ್ಯಗಳು ಬರೆದವರ ಮೂಗಿನ ನೇರಕ್ಕೆ ರಚನೆಯಾಗುತ್ತಿವೆ. ಹಾಗಾಗಬಾರದು. ಜ್ಞಾನಕ್ಕಾಗಿ ಯಾರ ಶಿಷ್ಯತ್ವವನ್ನೂ ಸ್ವೀಕರಿಸಬಲ್ಲೆ ಎನ್ನುವ ಮನೋಭಾವದಿಂದ ಸಾಹಿತ್ಯ ರಚನೆಯಾಗಬೇಕು. ಪಾಂಡಿತ್ಯವೆಂಬುದು ಪರಿಶ್ರಮದಿಂದ ಮಾತ್ರ ಬರುತ್ತದೆ ಎಂದು ಅವರು ಪ್ರತಿಪಾದಿಸಿದರು.


ಲಿಟ್ ಫೆಸ್ಟ್ ಸಮಾರೋಪದ ಅಧಿವೇಶನವನ್ನು ಡಾ. ಅಜಕ್ಕಳ ಗಿರೀಶ್ ಭಟ್ ನಿರ್ವಹಿಸಿದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top