ಮದುವೆ ಅಂದಾಗ ನೆನಪಾಗೋದು ಮನೆ ತುಂಬಾ ಜನ, ಶಾಸ್ತ್ರ, ಸಂಪ್ರದಾಯ, ಸಂಭ್ರಮ, ಗೌಜು, ಸಡಗರ. ವಾರಕ್ಕೆ ಮುಂಚೆನೇ ಶುರು ವಾಗುವ ತಯಾರಿ ,ಅಲಂಕಾರ ಮನೆಗೂ ಮೊಗಕ್ಕೂ .ಆದರೆ ಈ ತೆರನಾದ ಮದುವೆಗಳ ನಡುವೆ ಸರಳ ರೆಜಿಸ್ಟರ್ ಮ್ಯಾರೇಜ್,ಡೆಸ್ಟಿನೇಷನ್ ಮದುವೆಗಳು ಟ್ರೆಂಡ್ ನಲ್ಲಿವೆ...ಆದರೆ ಈ ಎಲ್ಲಾ ಮದುವೆಗಳಿಗಿಂತ ವಿಭಿನ್ನ ಕುವೆಂಪುರವರ ಮಂತ್ರ ಮಾಂಗಲ್ಯ ಎಂಬ ಸುಂದರ ವಿವಾಹ ಪರಿಕಲ್ಪನೆ.
ಕುವೆಂಪು ಸಾಹಿತಿ, ಕವಿ, ಬರಹಗಾರ, ಪ್ರಾಧ್ಯಾಪಕರಷ್ಟೇ ಅಲ್ಲ ಶ್ರೇಷ್ಠ ಸಮಾಜ ಸುಧಾರಕರು ಕೂಡ. ಸಮಾಜದಲ್ಲಿದ್ದ ಮೇಲು ಕೀಳು, ಅಸಮಾನತೆ, ಮೌಢ್ಯ, ದುಂದುವೆಚ್ಚ, ಪುರೋಹಿತಶಾಹಿಗಳ ವಿರುದ್ಧ ಗಟ್ಟಿಯಾದ ಪ್ರತಿರೋಧ ತೋರಿದವರು. ಈ ಎಲ್ಲವುಗಳ ಜೊತೆಗೆ ಅದ್ದೂರಿತನ ಮತ್ತು ಮೌಢ್ಯಗಳೇ ತುಂಬಿದ್ದ ಮದುವೆ ಎಂಬ ಸಾಂಸ್ಥಿಕ ಆಚರಣೆಯನ್ನು ಕೂಡ ಪರಿಷ್ಕರಿಸಿ ಪ್ರಚಾರ ಮಾಡಲು ಶ್ರಮವಹಿಸಿದವರು ಕುವೆಂಪು.
ವಿವಾಹಗಳಿಗೆ ಜನರು ಮಾಡುತ್ತಿದ್ದ ದುಂದುವೆಚ್ಚ, ಅದರಿಂದ ಉಂಟಾಗುತ್ತಿದ್ದ ಸಾಲಬಾಧೆ, ಅಲ್ಲಿದ್ದ ಕಂದಾಚಾರ, ಪುರೋಹಿತಶಾಹಿ ವ್ಯವಸ್ಥೆ ಮುಂತಾದವುಗಳ ವಿರುದ್ಧವಿದ್ದ ಕುವೆಂಪು ಅವರು, ಜನರು ಸರಳವಾಗಿ ಮದುವೆ ಮಾಡಿಕೊಂಡು ಬದುಕಬೇಕೆಂದು ಹಂಬಲಿಸಿದ್ದರು. ಇದಕ್ಕಾಗಿ ಹುಟ್ಟುಹಾಕಿದ ಹೊಸ ಪರಿಕಲ್ಪನೆಯೆ ’ಮಂತ್ರ ಮಾಂಗಲ್ಯ’.
’ಮಂತ್ರ ಮಾಂಗಲ್ಯ’ ಎನ್ನುವುದು ಒಂದು ವಿವಾಹ ವಿಧಾನ. ಇದೊಂದು ಸರಳ ವಿವಾಹವಿಧಿ. ಸಹಸ್ರಾರು ವರ್ಷಗಳ ಕಾಲದಿಂದ ಯಾವ ಮೌಲ್ಯಗಳನ್ನು ಭಾರತೀಯರು ದೊಡ್ಡದು ಎಂದು ಭಾವಿಸಿ, ಅವುಗಳನ್ನು ಆರಾಧಿಸುತ್ತಾ, ತಮ್ಮಲ್ಲಿ ಅಳವಡಿಸಿಕೊಳ್ಳುತ್ತಾ ಬಂದಿದ್ದಾರೋ, ಆ ಎಲ್ಲಕ್ಕೂ ಸಂಕೇತಗಳಾಗಿರುವ ಮತ್ತು ಅಗತ್ಯವಿರುವಷ್ಟು ಸಂಗತಿಗಳನ್ನು ವಧೂವರರು, ತಮ್ಮ ಬದುಕಿನಲ್ಲಿ ಒಳಗೊಳ್ಳುತ್ತಾ, ಈ ಮಂತ್ರಗಳ ಮೂಲಕ ವಿವಾಹ ಸಂಹಿತೆಯ ಪ್ರತಿಜ್ಞಾವಿಧಿಗಳನ್ನು ತಮ್ಮ ಜೀವನಕ್ಕೆ ಅಳವಡಿಸಿಕೊಳ್ಳುವುದು.
ಮಂತ್ರ ಮಾಂಗಲ್ಯದ ವಿಧಿವಿಧಾನಗಳನ್ನು ಕುವೆಂಪು ಪುಟ್ಟ ಪುಸ್ತಕವಾಗಿ ಹೊರತಂದಿದ್ದಾರೆ. ಈ ಪುಸ್ತಕದಲ್ಲಿ ನಮ್ಮ ದೇಶದ ಋಷಿಗಳು, ದಾರ್ಶನಿಕರು ಸಂತರು ರಚಿಸಿದ ಸ್ತೋತ್ರ, ಪ್ರಾರ್ಥನೆ ಮತ್ತು ಮಂತ್ರಗಳು ಇವೆ. ಇವುಗಳನ್ನು ಪಠಿಸುವ ಮೂಲಕ ವಿವಾಹವಾಗುವ ವಧೂವರರು ತನ್ನ ಜೀವನ ವಿಧಾನವನ್ನು ಬದಲಿಸಿಕೊಳ್ಳಬೇಕು, ತನ್ನ ಜೀವನಕ್ಕೆ ಅಳವಡಿಸಿಕೊಳ್ಳಬೇಕು ಎನ್ನುವುದು ಈ ಮಂತ್ರ ಮಾಂಗಲ್ಯದ ಉದ್ದೇಶವಾಗಿದೆ.
ಈ ಹಿನ್ನೆಲೆಯಲ್ಲಿ ಮದುವೆಯಾಗುವುದಕ್ಕ್ಕೆ ಕೆಲವು ನಿಯಮಗಳನ್ನು ಮಾಡಲಾಗಿದೆ. ದುಂದುವೆಚ್ಚ ಮಾಡಬಾರದು, ಅದ್ದೂರಿತನ ವಿರಬಾರದು, ವಧುದಕ್ಷಿಣೆ, ವರದಕ್ಷಿಣೆ ಯಾವುದು ಇಲ್ಲಿ ನುಸುಳುವಂತಿಲ್ಲ. ಜನರು ಕಡಿಮೆ ಇರಬೇಕು, 200 ಜನರಿಗಿಂತ ಕಡಿಮೆ. ಮದುವೆಗೆ ಪುಟ್ಟ ಮಂಟಪವಿರಬೇಕು, ಯಾವ ವೇದಿಕೆಯಾದರೂ ಸಾಕು. ಅರಳಿ ಕಟ್ಟೆಯಾದರೂ ಆದೀತು. ಅಲ್ಲಿ ಉಡುಗೊರೆಗಳು ನಿಷೇಧ. ಉಡುಗೊರೆ ನೀಡಿ ತಮ್ಮ ಶ್ರೀಮಂತಿಕೆ ಪ್ರದರ್ಶಿಸುವುದಕ್ಕೆ ಅವಕಾಶವಿಲ್ಲ.
ಮಂತ್ರ ಮಾಂಗಲ್ಯದ ವಿವಾಹ ಸಂಹಿತೆಯು ಮದುವೆಯನ್ನು, ವಧೂವರರ ಮತ್ತು ಅವರ ಕುಟುಂಬದ ಖಾಸಗಿ ಸಂದರ್ಭವೆಂದು ಪರಿಗಣಿಸುತ್ತದೆ. ಇದು ಎರಡು ಕುಟುಂಬಗಳ ಆತ್ಮಾವಲೋಕನ, ಅಂತಃಸಾಕ್ಷಿಯ ಸಂದರ್ಭವಾದ್ದರಿಂದ ವಿವಾಹವು ಪ್ರಶಾಂತವಾದ, ಗಂಭೀರ ವಾತಾವರಣದಲ್ಲಿ ನಡೆಯಬೇಕು. ವಾದ್ಯ, ಓಲಗ, ತಮಟೆ, ಧ್ವನಿವರ್ಧಕಗಳಿಗೆ ಅಲ್ಲಿ ಜಾಗವಿಲ್ಲ.
ಮಂತ್ರ ಮಾಂಗಲ್ಯಕ್ಕೆ ಮುಹೂರ್ತ ನೋಡುವ ಹಾಗಿಲ್ಲ. ಮನುಷ್ಯ ಜೀವಿತವೇ ಒಂದು ಸುಮುಹೂರ್ತ ಎಂದು ಭಾವಿಸಿರುವುದರಿಂದ ಗುಳಿಕಕಾಲ, ಯಮಗಂಡಕಾಲ, ರಾಹುಕಾಲಗಳಿಗೆ ಅಲ್ಲಿ ಸ್ಥಳವಿಲ್ಲ. ಪುಸ್ತಕದಲ್ಲಿ ನೀಡಲಾಗಿರುವ ಮಂತ್ರಗಳು, ಪ್ರತಿಜ್ಞಾವಿಧಿ ಬಿಟ್ಟು ಬೇರೆ ಶಾಸ್ತ್ರಗಳಾಗಲೀ, ಜೋಯಿಸರಿಂದ ಜಾತಕ ನೋಡಿಸುವುದು ಎಲ್ಲವೂ ನಿಷಿದ್ಧ.
ಜಾತಿಪದ್ಧತಿ, ಸ್ತ್ರೀ ಅಸಮಾನತೆ, ಅಸ್ಪೃಶ್ಯತೆ, ಮೇಲು-ಕೀಳುಗಳು ತುಂಬಿರುವ ಭಾರತೀಯ ಶಾಸ್ತ್ರಗಳು ಮತ್ತು ಆಚಾರಗಳಿಂದ ಮನುಷ್ಯರನ್ನು ವಿಮುಕ್ತರಾಗಿಸುವುದೇ ಮಂತ್ರಮಾಂಗಲ್ಯದ ಮುಖ್ಯ ಉದ್ದೇಶವಾಗಿದೆ. ಪೌರೋಹಿತ್ಯಕ್ಕೆ ಪ್ರವೇಶ ನಿಷಿದ್ಧ. ಓದುಬರಹ ಬರುವ ಯಾರಾದರೂ ಮಂತ್ರ ಮಾಂಗಲ್ಯದ ಮಂತ್ರಗಳನ್ನು ಮತ್ತು ಪ್ರತಿಜ್ಞಾವಿಧಿಯನ್ನು ಬೋಧಿಸಬಹುದು. ಪ್ರತಿಜ್ಞಾ ವಿಧಿಗಳನ್ನು ಜೋರಾಗಿ ಎಲ್ಲರಿಗೂ ಕೇಳಿಸುವ ಹಾಗೆ ವಧೂವರರು ಪುನರುಚ್ಚರಿಸಬೇಕು. ಎಲ್ಲರ ಮುಂದೆ ತಾವು ಪ್ರಮಾಣಗಳನ್ನು ನೀಡುವುದನ್ನು ದೃಢಪಡಿಸಬೇಕು.
ವೇದಿಕೆ ಮೇಲೆ ’ಮಂತ್ರ ಮಾಂಗಲ್ಯ’ ಮದುವೆಯ ಪರಿಕಲ್ಪನೆಯ ಬಗ್ಗೆ ನಾಲ್ಕೈದು ನಿಮಿಷದಲ್ಲಿ ಸರಳವಾಗಿ ವಿವರಿಸಬಹುದು. ವೇದಿಕೆ ಮೇಲಿರುವ ತಮಗೆ ಆದರ್ಶ ದಂಪತಿ ಎಂದುಕೊಂಡಿರುವ ನಾಲ್ವರು ಮಹಾಪುರುಷರ ಚಿತ್ರಗಳನ್ನು ಇಡಬೇಕು. ಇವರಿಗೆ ನಮಸ್ಕರಿಸಿ ಗಂಡು – ಹೆಣ್ಣು ಪರಸ್ಪರ ಹೂವಿನ ಹಾರಗಳನ್ನು ಬದಲಾಯಿಸಿಕೊಂಡು, ಇಷ್ಟ ಇದ್ದವರು ಮಾಂಗಲ್ಯಧಾರಣೆ ನೆರವೇರಿಸುವರು. ತಂದೆ – ತಾಯಿಯರು ಅವರಿಗೆ ಹಾರೈಸುತ್ತಾರೆ. ಮಡಿ, ಮೈಲಿಗೆ, ಮುಯ್ಯಿ, ಇವಾವೂ ಇರದೆ ಮದುವೆಗೆ ಬಂದವರಿಗೆಲ್ಲಾ ಅತಿ ಸರಳವಾಗಿ ಊಟದ ವ್ಯವಸ್ಥೆ ಮಾಡಬಹುದು.
ಇಂತಹ ಸರಳ ಮತ್ತು ಸಾಮಾನ್ಯ ನಿಯಮಗಳೊಂದಿಗೆ ಮದುವೆ ಎಂಬ ಸಾಂಸ್ಥಿಕ ಆಚರಣೆಯಲ್ಲಿದ್ದ ಮೌಢ್ಯಗಳನ್ನು ತೊಡೆದುಹಾಕಿ ಸಮಗ್ರ ಬದಲಾವಣೆಗೆ ’ಮಂತ್ರ ಮಾಂಗಲ್ಯ ಪ್ರಯತ್ನಿಸಿತ್ತು. ಇದು ಕರ್ನಾಟಕದ ಹಲವು ಭಾಗಗಳಲ್ಲಿ ಒಂದು ಮಟ್ಟದ ಜನಪ್ರಿಯತೆ ಗಳಿಸಿದ್ದು ಕೂಡ ವಿಶೇಷ.
ಮಂತ್ರ ಮಾಂಗಲ್ಯ ಸರಳ ವಿವಾಹ ಪರಿಕಲ್ಪನೆ ಹುಟ್ಟುಹಾಕಿದ್ದ ಕುವೆಂಪು ಅವರು ತಮ್ಮ ಮನೆಯಿಂದಲೇ ಬದಲಾವಣೆಯನ್ನು ಪ್ರಾರಂಭಿಸಿದ್ದರು. ಮೊದಲ ಮಂತ್ರ ಮಾಂಗಲ್ಯ ವಿವಾಹವಾಗಿದ್ದು ಅವರ ಮಗ, ಸಾಹಿತಿ ಪೂರ್ಣಚಂದ್ರ ತೇಜಸ್ವಿ. 1966ರ ನವೆಂಬರ್ 27ರಂದು ಚಿತ್ರಕೂಟದಲ್ಲಿ ತೇಜಸ್ವಿ ಮತ್ತು ರಾಜೇಶ್ವರಿಯವರದ್ದು ಮೊದಲ ಮಂತ್ರ ಮಾಂಗಲ್ಯದ ವಿವಾಹವಾಗಿದೆ. “ನಮ್ಮ ಹಿತೈಷಿಗಳಾದ ತಾವು ತಮಗೆ ಅನುಕೂಲವಿರಾಮ ದೊರೆತಾಗ ’ಚಿತ್ರಕೂಟ’ಕ್ಕೆ ಆಗಮಿಸಿ, ವಧೂವರರ ಆತಿಥ್ಯ ಸ್ವೀಕರಿಸಿ ಅವರನ್ನು ಆಶೀರ್ವದಿಸಿ, ಅವರ ಶ್ರೇಯೋಭಿವೃದ್ಧಿ ಕೋರಬೇಕೆಂದು ವಿಜ್ಞಾಪಿಸಿಕೊಳ್ಳುತ್ತೇವೆ” ಎಂದು ಬರೆದು ಆ ಮದುವೆಗೆ ಹೊರಡಿಸಿದ್ದ ಅತಿ ಸರಳ ಆಹ್ವಾನ ಪತ್ರಿಕೆ ಇಂದಿಗೂ ಜನಪ್ರಿಯವಾಗಿ ಉಳಿದುಕೊಂಡಿದೆ.
ಅಂದು ಕುವೆಂಪು ಹುಟ್ಟುಹಾಕಿದ ಮಂತ್ರ ಮಾಂಗಲ್ಯ ಇಂದಿಗೂ ಸಾಹಿತ್ಯಾಸಕ್ತರಲ್ಲಿ, ವಿಚಾರಪರ ಆಲೋಚನೆ ಹೊಂದಿರುವವರ ನಡುವೆ ಭರವಸೆಯಾಗಿ ಉಳಿದುಕೊಂಡಿದೆ. ಮಂತ್ರ ಮಾಂಗಲ್ಯ ಕಾಲಕಾಲಕ್ಕೆ ತನ್ನದೇ ಆದ ರೀತಿಯಲ್ಲಿ ಬದಲಾವಣೆ ಹೊಂದುತ್ತಿದೆ.ಮುಂದುವರಿದು, ಮಂತ್ರ ಮಾಂಗಲ್ಯ ಕೇವಲ ಸರಳ ವಿವಾಹಕ್ಕೆ ಮಾತ್ರ ಸೀಮಿತವಲ್ಲ. ಇದರ ಉದಾತ್ತ ಮತ್ತು ವಿಚಾರಪರ ಪ್ರತಿಜ್ಞಾ ವಿಧಿಗಳನ್ನು ಜೀವನ ಪೂರ್ತಿ ಅನುಸರಿಸಬೇಕು.
ಈಗ ಕೆಲವು ಮಂತ್ರ ಮಾಂಗಲ್ಯ ಮದುವೆಗಳಲ್ಲಿ ಅದ್ದೂರಿತನ ಕಾಣಿಸುತ್ತಿದೆ. ಭಾಗವಹಿಸುವ ಜನರ ಸಂಖ್ಯೆ ಹೆಚ್ಚಾಗುತ್ತಿದೆ. ಖಾಸಗಿ ಸಮಾರಂಭವೆಂಬುದು ಹೋಗಿ ಸಾರ್ವಜನಿಕ ಸಮಾರಂಭವಾಗಿದೆ. ವಧೂವರರ ವೇಷಭೂಷಣಗಳಲ್ಲೂ ಬದಲಾವಣೆಯಾಗಿದೆ. ಮಂತ್ರ ಮಾಂಗಲ್ಯ ಮಾಡಿಕೊಂಡು ಸಂಜೆ ರಿಸೆಪ್ಶನ್ ಮಾಡಿಕೊಳ್ಳುವವರು ಇದ್ದಾರೆ. ಇವುಗಳ ನಡುವೆಯೂ ಇಂತಹ ಒಂದು ಪರಿಕಲ್ಪನೆಯನ್ನು ಮೂಲ ಆಶಯದಂತೆ ಒಪ್ಪಿ ಅಳವಡಿಸಿಕೊಳ್ಳುವ ಯುವಜನರು ಬದಲಾವಣೆಯ ಆಶಾಭಾವನೆ ಮೂಡಿಸುತ್ತಿದ್ದಾರೆ.
-ನೈದಿಲೆ ಶೇಷೇಗೌಡ. ಎಸ್ ಡಿ ಎಂ ಕಾಲೇಜು ಉಜಿರೆ
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ