ಕರ್ನಾಟಕದ ಪ್ರಮುಖ ದೇವಿ ದೇವಾಲಯಗಳಲ್ಲಿ ಬಾದಾಮಿಯ ಬನಶಂಕರೀ ದೇವಾಲಯವು ಕೂಡ ಒಂದಾಗಿದೆ. ಬಾಗಲಕೋಟೆಯ ಬಾದಾಮಿಯ ಬನಶಂಕರಿ ದೇವಿಯ ದೇವಾಲಯವು ಬನಶಂಕರಿ ದೇವಿಯ ಪ್ರಸಿದ್ಧ ದೇವಾಲಯವಾಗಿದೆ. ಇದು ಕರ್ನಾಟಕದ ಶಕ್ತಿಪೀಠಗಳಲ್ಲಿ ಒಂದಾಗಿದೆ. ಬನಶಂಕರಿಯನ್ನು ಶಾಕಾಂಬರಿ ಎಂದು ಕೂಡ ಕರೆಯಲಾಗುತ್ತದೆ.
ಸ್ಕಂದ ಪುರಾಣ ಮತ್ತು ಪದ್ಮ ಪುರಾಣದಲ್ಲಿ ಬನಶಂಕರಿ ದೇವಿಯ ಕಥೆಯು ಬರುತ್ತದೆ. ದುರ್ಗಮಾಸುರ ಎಂಬ ರಾಕ್ಷಸನು ಜನರಿಗೆ ಬಹಳ ಉಪಟಳವನ್ನು ಕೊಡುತ್ತಿದ್ದನು. ಆಗ ಆ ಜನರು ದೇವತೆಗಳನ್ನು ಪ್ರಾರ್ಥಿಸಿದರು. ದೇವರು ಶಾಕಾಂಬರಿ ದೇವಿಯನ್ನು ಜನರ ರಕ್ಷಣೆಯನ್ನು ಮಾಡುವ ಆಜ್ಞೆಯನ್ನು ನೀಡಿ ಭೂಮಿಗೆ ಕಳುಹಿಸಿದನು. ಜನರು ಮಾಡಿದ ಯಜ್ಞ ಕುಂಡದಿಂದ ಬನಶಂಕರೀ ದೇವಿಯು ಉದ್ಭವಿಸಿ ಆ ರಾಕ್ಷಸನಾದ ದುರ್ಗಮಾಸುರನ ಸಂಹಾರ ಮಾಡಿ ಅಲ್ಲಿಯ ಜನರನ್ನು ರಕ್ಷಿಸಿದಳು. ಬನಶಂಕರೀ ಅಥವಾ ಶಾಕಾಂಬರಿ ದೇವಿಯನ್ನು ಪಾರ್ವತಿಯ ರೂಪವೆಂದೇ ಪೂಜಿಸಲಾಗುತ್ತದೆ. ದುರ್ಗಮಾಸುರನ ಉಪದ್ರವದಿಂದ ಬರಗಾಲವು ಉಂಟಾಗಿದ್ದು ದೇವಿಯು ತನ್ನೊಡನೆ ಅನೇಕ ಬಗೆಯ ಶಾಕಗಳನ್ನು ತಂದ ಕಾರಣವು ಅವಳಿಗೆ ಶಾಕಾಂಬರಿ ಎಂದೂ, ತಿಲಕಾರಣ್ಯದ ಭಾಗದಲ್ಲಿ ವಾಸವಾಗಿದ್ದರಿಂದ ವನಶಂಕರೀ ಅಥವಾ ಬನಶಂಕರೀ ಎಂಬ ಹೆಸರಿನಿಂದ ಕರೆಯಲಾಗುತ್ತದೆ.
ಬನಶಂಕರಿ ದೇವಾಲಯದಲ್ಲಿ ದೇವಿಯು ಕುಳಿತ ಭಂಗಿಯಲ್ಲಿ ಪೂಜೆಗೊಳ್ಳುತ್ತಾಳೆ. ಅವಳ ಕಾಲಿನಡಿಯಲ್ಲಿ ರಾಕ್ಷಸನು ಮತ್ತು ಅವಳು ತನ್ನ ಆಸನವಾದ ಸಿಂಹದ ಮೇಲೆ ಆಸೀನಳಾಗಿದ್ದಾಳೆ. ಬನಶಂಕರೀ ದೇವಿಯ ಮೂರ್ತಿಯ ಕಪ್ಪು ಶಿಲೆಯದ್ದಾಗಿದೆ. ದೇವಿಯು ಅಷ್ಟಭುಜಳಾಗಿದ್ದು ತನ್ನ ಕೈಗಳಲ್ಲಿ ತ್ರಿಶೂಲ, ಡಮರುಗ, ಕಮಲಪತ್ರ, ಘಂಟೆ, ವೇದದ ತಾಳೆಗರಿಗಳು, ಖಡ್ಗ ಮೊದಲಾದ ಆಯುಧಗಳಿಂಧ ಭೂಷಿತಳಾಗಿದ್ದಾಳೆ. ಬಾದಾಮಿಯ ಬನಶಂಕರೀ ದೇವಿಯು ಚಾಲುಕ್ಯ ರಾಜರುಗಳ ಕುಲದೇವಿಯಾಗಿದ್ದಳು.
ಬಾದಾಮಿಯಲ್ಲಿ ಚಾಲುಕ್ಯರ ಕಾಲದಲ್ಲಿ ಬನಶಂಕರೀ ದೇವಿಯ ದೇವಾಲಯವು ನಿರ್ಮಿತವಾಗಿದ್ದು ನಂತರ 17ನೇ ಶತಮಾನದ ಶಿಲ್ಪದ ಕುರುಹು ದೊರೆಯುತ್ತದೆ. ದೇವಾಲಯದ ಬಳಿ ಹರಿದ್ರಾ ತೀರ್ಥವಿದೆ ಇದನ್ನು ಹರಿಶ್ಚಂದ್ರ ತೀರ್ಥದ ಅಪಭ್ರಂಶವೆಂಧು ಭಾವಿಸಲಾಗಿದೆ.
ಬನಶಂಕರಿ ಉತ್ಸವವು ಪುಷ್ಯ ಮಾಸದಲ್ಲಿ ನಡೆಯುತ್ತದೆ. ಆದರೆ ನವರಾತ್ರಿಯಲ್ಲಿ ಕೂಡ ವಿಶೇಷ ಪೂಜೆಗಳು ಇರುತ್ತವೆ. ಶರನ್ನವರಾತ್ರಿಯ ಪೂಜೆಗಿಂತ ಬನಶಂಕರಿಯ ನವರಾತ್ರಿಯಲ್ಲಿ ವಿಶೇಷ ಪೂಜೆ ಮತ್ತು ಉತ್ಸವಗಳು ನಡೆಯುತ್ತವೆ. ಬನಶಂಕರಿಯ ನವರಾತ್ರಿಯು ಪುಷ್ಯ ಮಾಸದ ಅಷ್ಟಮಿಯಿಂದ ಹಿಡಿದು ಬನದ ಹುಣ್ಣಿಯವರೆಗೆ ನಡೆಯುತ್ತದೆ. ಆ ಕಾಲವನ್ನು ಬನಶಂಕರಿಯ ನವರಾತ್ರಿಯಂದು ಕರೆಯಲಾಗುತ್ತದೆ. ಬನಶಂಕರಿ ದೇವಿಗೆ ಕರ್ನಾಟಕ ಮತ್ತು ಮಹಾರಾಷ್ಟ್ರದ ಭಕ್ತರು ವಿಶೇಷವಾಗಿ ಬರುತ್ತಾರೆ. ಹುಣ್ಣಿಮೆಯ ದಿನದಂದು ರಥೋತ್ಸವ ಮತ್ತು ತೆಪ್ಪೋತ್ಸವಗಳು ನಡೆಯುತ್ತದೆ. ಇಲ್ಲಿಯ ರಥವನ್ನು ದೇವಾಯಲದ ರೂಪದಲ್ಲಿ ನಿರ್ಮಿಸಲಾಗಿದ್ದು ನುರಿತ ಮತ್ತು ತರಬೇತಿ ಪಡೆದವರು ರಥವನ್ನು ಎಳೆಯುತ್ತಾರೆ.
ಬಾದಾಮಿಯ ಬನಶಂಕರೀ ದೇವಾಲಯವನ್ನು ಬಾದಾಮಿಯ ಚಾಲುಕ್ಯರು 7ನೇ ಶತಮಾನದಲ್ಲಿ ನಿರ್ಮಿಸಿದರು. ವಿಜಯನಗರ ಶೈಲಿಯ ಶಿಲ್ಪಗಳಿಂದ ಈ ದೇವಾಲಯವನ್ನು ನಿರ್ಮಿಸಲಾಗಿದ್ದು, ದೇವಾಲಯದ ಗೋಡೆಗಳು ಎತ್ತರವಾಗಿವೆ. ಮುಖಮಂಟಪ, ಅರ್ಥಪಂಟಪ ಹಾಗೂ ದೇವಾಲಯದ ಮೇಲ್ಭಾಗದಲ್ಲಿ ಗೋಪುರಗಳಿವೆ. ಹರಿದ್ರಾ ತೀರ್ಥದ ಒಂದು ಭಾಗದಲ್ಲಿ ದೀಪಸ್ಥಂಭವಿವೆ. ಕಳೆದ 2-3 ದಶಕಗಳಿಂದ ಬೆಂಗಳೂರಿನಲ್ಲಿ ಕೂಡ ಬನಶಂಕರಿಯ ದೇವಾಲಯವನ್ನು ಸ್ಥಾಪಿಸಿದ್ದಾರೆ.
- ಮಾಧುರಿ ದೇಶಪಾಂಡೆ, ಬೆಂಗಳೂರು
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ