ಹೆಸರಾಂತ ಉದ್ಯಮಿ ಪದ್ಮವಿಭೂಷಣ ರತನ್ ಟಾಟಾ ವಿಧಿವಶ

Upayuktha
0


ಮುಂಬಯಿ: ಭಾರತದ ಹೆಸರಾಂತ ಉದ್ಯಮಿ, ಟಾಟಾ ಸಮೂಹದ ಅಧ್ಯಕ್ಷರಾಗಿದ್ದ ರತನ್ ಟಾಟಾ ಬುಧವಾರ ತಡರಾತ್ರಿ ವಿಧಿವಶರಾಗಿದ್ದಾರೆ. ಅವರಿಗೆ 86 ವರ್ಷ ವಯಸ್ಸಾಗಿತ್ತು.


ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಚಿಕಿತ್ಸೆ ಪಡೆಯುತ್ತಿದ್ದ ವೇಳೆ ಮುಂಬಯಿಯ ಆಸ್ಪತ್ರೆಯಲ್ಲಿ ನಿನ್ನೆ ತಡರಾತ್ರಿ ಕೊನೆಯುಸಿರೆಳೆದರು.


ರತನ್ ಟಾಟಾ ಅವರು 1991ರಲ್ಲಿ ಟಾಟಾ ಸನ್ಸ್‌ ಸಮೂಹದ ಚುಕ್ಕಾಣಿ ಹಿಡಿದರು. ನಂತರ ಭಾರತೀಯ ಉದ್ಯಮ ಪ್ರಪಂಚದಲ್ಲಿ ಅತ್ಯುನ್ನತ ವ್ಯಕ್ತಿಯಾಗಿ ಬೆಳೆದರು. ಅವರ ನಾಯಕತ್ವದಲ್ಲಿ ಟಾಟಾ ಗ್ರೂಪ್ ಅನ್ನು  ಜಾಗತಿಕ ಬ್ರಾಂಡ್ ಆಗಿ ರೂಪಿಸಿದರು.


ಜಾಗ್ವಾ‍ರ್ ಲ್ಯಾಂಡ್‌ ರೋವರ್, ಟೆಟ್ಲಿ, ಕೋರಸ್‌ ನಂತಹ ಕಂಪನಿಗಳನ್ನು ಟಾಟಾ ಸಮೂಹದ ಜತೆಗೆ ಸ್ವಾಧೀನಪಡಿಸಿಕೊಳ್ಳುವ ಕಾರ್ಯತಂತ್ರಗಳು ಸಮೂಹದ ಹೆಜ್ಜೆ ಗುರುತನ್ನು ಜಾಗತಿಕವಾಗಿ ವಿಸ್ತರಿಸಿದವು.


ಬಡವರಿಗೆ ಅತಿ ಕಡಿಮೆ ಬೆಲೆ ಕಾರು ಒದಗಿಸಬೇಕೆಂಬ ಅವರ ದೃಷ್ಟಿ‍ಕೋನವು ನ್ಯಾನೋ ಕಾರಿನ ಸೃಷ್ಟಿಗೆ ಕಾರಣವಾಯಿತು. ಜಗತ್ತಿನಲ್ಲೇ ಅತ್ಯಂತ ಕಡಿಮೆ ಬೆಲೆ ಕೈಗೆಟುಕುವ ಕಾರು ಎಂಬ ಖ್ಯಾತಿಗೆ ಅದು ಪಾತ್ರವಾಯಿತು. ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ ಐಟಿ ವಲಯದಲ್ಲಿ ಟಾಟಾ ಸಮೂಹದ ಖ್ಯಾತಿಯನ್ನು ಹೆಚ್ಚಿಸಿತು.


2012ರಲ್ಲಿ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿದ ಅವರು, ಟಾಟಾ ಕಂಪನಿಯಲ್ಲಿ ಮಾರ್ಗದರ್ಶಕರಾಗಿ ಮುಂದುವರಿದರು. ಟಾಟಾ ಸನ್ಸ್‌, ಟಾಟಾ ಮೋಟರ್ಸ್ ಮತ್ತು ಟಾಟಾ ಸ್ಟೀಲ್‌ ಸಂಸ್ಥೆಗಳು ಸಾಕಷ್ಟು ಗೌರವ, ಪ್ರತಿಷ್ಠೆಯನ್ನು ಗಳಿಸಿದವು. 2016ರಲ್ಲಿ ಕಂಪನಿಯೊಳಗೆ ಸಂಘರ್ಷದ ಪರಿಸ್ಥಿತಿ ಉದ್ಭವಿಸಿದಾಗ ತಾತ್ಕಾಲಿಕವಾಗಿ ಮತ್ತೊಮ್ಮೆ ನಾಯಕತ್ವ ವಹಿಸಿಕೊಂಡರು.


ದೇಶದ ಪ್ರಮುಖ ಉದ್ಯೋಗದಾತ ಕಂಪನಿಯಾಗಿ, ಇತರ ಹಲವು ಉದ್ಯಮಿಗಳಿಗೂ ಪ್ರೇರಣೆ ಮತ್ತು ಮಾರ್ಗದರ್ಶಕರಾಗಿ ಟಾಟಾ ಸಮೂಹವನ್ನು ಬೆಳೆಸಿದ ಖ್ಯಾತಿ ರತನ್ ಟಾಟಾ ಅವರದ್ದಾಗಿದೆ.

2000ನೇ ಇಸವಿಯಲ್ಲಿ ಅವರಿಗೆ ಭಾರತ ಸರಕಾರವು ಪದ್ಮಭೂಷಣ ಹಾಗೂ 2008ರಲ್ಲಿ ಪದ್ಮವಿಭೂಷಣ ಪ್ರಶಸ್ತಿ ನೀಡಿ ಗೌರವಿಸಿದೆ.


ಪ್ರಧಾನಿ ಸಂತಾಪ:


ರತನ್ ಟಾಟಾ ಅವರ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ತಮ್ಮ ಸಂದೇಶವನ್ನು ಎಕ್ಸ್‌ ನಲ್ಲಿ ಪೋಸ್ಟ್ ಮಾಡಿದ್ದಾರೆ.

 

ರತನ್ ಟಾಟಾ ಜಿ ಅವರು ಒಬ್ಬ ದಾರ್ಶನಿಕ ವ್ಯಾಪಾರ ನಾಯಕ, ಸಹಾನುಭೂತಿಯುಳ್ಳವರು ಮತ್ತು ಅಸಾಧಾರಣ ವ್ಯಕ್ತಿಯಾಗಿದ್ದರು. ಅವರು ದೇಶದ ಅತ್ಯಂತ ಹಳೆಯ ಮತ್ತು ಪ್ರತಿಷ್ಠಿತ ವ್ಯಾಪಾರ ಸಂಸ್ಥೆಗಳಲ್ಲಿ ಒಂದಕ್ಕೆ ಸ್ಥಿರ ನಾಯಕತ್ವವನ್ನು ಒದಗಿಸಿದರು. ಅದೇ ಸಮಯದಲ್ಲಿ, ಅವರ ಕೊಡುಗೆಯು ಬೋರ್ಡ್ ರೂಮ್ ಪಾತ್ರಕ್ಕೆ ಮೀರಿದ್ದಾಗಿತ್ತು. ಅವರ ನಮ್ರತೆ, ದಯೆ ಮತ್ತು ನಮ್ಮ ಸಮಾಜವನ್ನು ಉತ್ತಮಗೊಳಿಸುವ ಅಚಲವಾದ ಬದ್ಧತೆಗೆ ಧನ್ಯವಾದಗಳು. ಅವರು ಹಲವಾರು ಜನರನ್ನು ಪ್ರೀತಿಸುತ್ತಿದ್ದರು.


ರತನ್ ಟಾಟಾ ಜಿಯವರ ಅತ್ಯಂತ ವಿಶಿಷ್ಟವಾದ ಅಂಶವೆಂದರೆ, ದೊಡ್ಡ ಕನಸುಗಳನ್ನು ಕಾಣುವ ಮತ್ತು ಹಿಂತಿರುಗಿಸುವ ಅವರ ಉತ್ಸಾಹ. ಅವರು ಶಿಕ್ಷಣ, ಆರೋಗ್ಯ ರಕ್ಷಣೆ, ನೈರ್ಮಲ್ಯ, ಪ್ರಾಣಿ ಕಲ್ಯಾಣ ಮುಂತಾದ ಪ್ರಮುಖ ಕ್ಷೇತ್ರಗಳಲ್ಲಿ ಮುಂಚೂಣಿಯಲ್ಲಿದ್ದರು ಎಂದು ಪ್ರಧಾನಿ ಮೋದಿ ನೆನಪಿಸಿಕೊಂಡಿದ್ದಾರೆ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top