ಶರನ್ನವರಾತ್ರಿಯ ಎಂಟನೇ ದಿನವು ದುರ್ಗಾಷ್ಟಮಿಯಾಗಿದ್ದು ಅಂದು ದುರ್ಗಾದೇವಿಯ ವಿಶೇಷ ಪೂಜೆಯನ್ನು ಮಾಡಲಾಗುತ್ತದೆ.
ಭಾಗವತ ಪುರಾಣದಲ್ಲಿ ದುರ್ಗಾದೇವಿಯು ಕೃಷ್ಣನ ಸಹೋದರಿ ಎಂದು ಭಾವಿಸಲಾಗಿದೆ. ಕಂಸನು ದೇವಕಿ ವಸುದೇವರನ್ನು ಬಂಧನದಲ್ಲಿರಿಸಿದಾಗ ಬಂದೀಖಾನೆಯಲ್ಲಿಯೇ ಶ್ರೀಕೃಷ್ಣನ ಅವತಾರವಾಗುತ್ತದೆ ಅದೇ ಸಮಯದಲ್ಲಿ ದುರ್ಗಾದೇವಿಯು ನಂದಗೋಪ ಮತ್ತು ಯಶೋದೆಯರ ಮನೆಯಲ್ಲಿ ಅವತಾರವನ್ನು ಮಾಡಿರುತ್ತಾಳೆ. ವಸುದೇವನು ಗೋಕುಲಕ್ಕೆ ಹೋಗಿ ಯಶೋದೆಯಲ್ಲಿ ಜನಿಸಿದ ದುರ್ಗೆಯನ್ನು ಕರೆತಂದು ದೇವಕಿಯ ಮಡಿಲಿನಲ್ಲಿ ಹಾಕುತ್ತಾನೆ. ಕಂಸನು ಮಗುವನ್ನು ಕೊಲ್ಲಲು ಬಂದಾಗ ಆ ಹೆಣ್ಣು ಮಗು ಆಕಾಶಕ್ಕೆ ಹಾರಿ ದುರ್ಗೆಯ ರೂಪವನ್ನು ತಾಳಿ ಅಷ್ಟಭೂಜಗಳಲ್ಲೂ ಆಯುಧ ಧರಿಸಿದ ದೇವಿಯಾಗಿ ನಿನ್ನ ಮೃತ್ಯು ಗೋಕುಲದಲ್ಲಿದೆ ಎಂದು ಹೇಳಿ ಅದೃಶ್ಯಳಾಗುತ್ತಾಳೆ. ಇದಲ್ಲದೇ ದುರ್ಗಾದೇವಿಯನ್ನು ಮಹಿಷಾಸುರ ಮರ್ದಿನಿ ಎಂದು ಕೂಡ ಪೂಜಿಸಲಾಗುತ್ತದೆ ಮಹಿಷ ರೂಪದ ಅಸುರನು ದೇವತೆಗಳಿಗೆ ಮನುಷ್ಯರಿಗೆ ಉಪಟಳವನ್ನು ಕೊಡುವಾಗ ದುರ್ಗೆಯು ಅವತರಿಸಿ ಅವನನ್ನು ಕೊಂದ ಕಾರಣ ವಿಶೇಷ ಪೂಜೆಯನ್ನು ಮಾಡಲಾಗುತ್ತದೆ. ಅಷ್ಟಮಿಯ ದಿನ ದೇವಿಯ ಪೂಜೆಯನ್ನು ಮಾಡಿ ಮಹಾನವಮಿಯ ದಿನ ಅವಳ ಆಯುಧಗಳ ಪೂಜೆಯನ್ನು ಮಾಡಲಾಗುತ್ತದೆ.
ಲೋಕಕಲ್ಯಾಣಕ್ಕಾಗಿ ದೇವಿಯು ದುಷ್ಟರನ್ನು ಸಂಹಾರ ಮಾಡಲು ಉದ್ಭಿಸಿದ ಈ ದಿನವನ್ನು ದುರ್ಗಾಷ್ಟಮಿ ಎಂದು ಪೂಜಿಸಲಾಗುತ್ತದೆ. ಕಾಲಿಕಾ ಪುರಾಣದಲ್ಲಿ ಹೇಳಿರುವಂತೆ ಮಂಡಲವನ್ನು ರಚಿಸಿ ಅಷ್ಟದಲ ಕಮಲದಲ್ಲಿ ದೇವಿಯನ್ನು ಆವಾಹಿಸಬೇಕು. ಮಂತ್ರದಿಂದ ಅವಾಹನೆ ಮಾಡಿ ದುರ್ಗಾತಂತ್ರದಲ್ಲಿ ಹೇಳಿದ ಮಂತ್ರದಿಂದ ಪೂಜಿಸಬೇಕು. ದೇವಿಗೆ ಭಕ್ತಿಯಿಂದ ಅಲಂಕಾರವನ್ನು ಮಾಡಿ ದೇವಿಗೆ ಇಷ್ಟದ ಹೂವಿನ ಅಲಂಕಾರ ನೈವೇದ್ಯಕ್ಕೆ ಅವಳಿಗೆ ಪ್ರಿಯವಾದ ಗುಡಾನ್ನಗಳನ್ನು ತಯಾರಿಸಿ ಅರ್ಪಿಸಬೇಕು. ಹಲುವ ಕಡೆಗಳಲ್ಲಿ ಚಂಡಿಕಾ ಹೋಮವನ್ನು ಅಥವಾ ದುರ್ಗಾ ಹೋಮವನ್ನು ಕೂಡ ಮಾಡುತ್ತಾರೆ. ದುರ್ಗಾ ಸಪ್ತಶತಿ ಪಾರಾಯಣವನ್ನು ಅನುಷ್ಠಾನಪೂರ್ವಕವಾಗಿ ಮಾಡುತ್ತಾರೆ.
ಕನ್ಯಾ ಪೂಜನವು ದುರ್ಗಾಷ್ಟಮಿಯ ದಿನ ವಿಶೇಷವಾಗಿದೆ. ಭಾರತದಲ್ಲಿ ಎಲ್ಲ ಪ್ರದೇಶಗಳಲ್ಲಿಯೂ ದುರ್ಗಾಷ್ಟಮಿಯ ದಿನ ವಿಶೇಷವಾಗಿ ಪೂಜಿಸಲಾಗುತ್ತದೆ. ಕುಮಾರಿ ಪೂಜನದಲ್ಲಿ 8 ವರ್ಷಕ್ಕಿಂತ ಸಣ್ಣ ಹೆಣ್ಣು ಮಕ್ಕಳನ್ನು ಕರೆದು ಅವರಿಗೆ ಕಾಲನ್ನು ತೊಳೆದು ಪಾದಪೂಜೆ ಮಾಡಿ ವಸ್ತ್ರ ಹಾಲು ಹಣ್ಣು ದಕ್ಷಿಣೆ ಮತ್ತು ಸಣ್ಣ ಮಕ್ಕಳಿಗೆ ಪ್ರಿಯವಾದ ವಸ್ತುಗಳನ್ನು ನೀಡಿ ಆಶೀರ್ವಾದವನ್ನು ಪಡೆಯುತ್ತಾರೆ.
9 ದಿನದ ಪೂಜೆಯು ದುರ್ಗೆಯ ಪೂಜೆಯೇ ಆಗಿದ್ದರೂ ಅಷ್ಟಮಿಯ ದಿನ ದೇವಿಯ ಪೂಜೆ ವಿಶೇಷ ನವಮಿಯ ದಿನ ಅವಳ ಆಯುಧಗಳ ಪೂಜೆ ವಿಶೇಷವಾಗಿದೆ.
- ಮಾಧುರಿ ದೇಶಪಾಂಡೆ, ಬೆಂಗಳೂರು
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ