ಯಾವುದೇ ವಿಶ್ವವಿದ್ಯಾಲಯ ಸ್ಥಾಪನೆಯ ಮುಖ್ಯ ಉದ್ದೇಶವೇ ಸ್ನಾತಕೋತ್ತರದಂತಹ ಉನ್ನತ ಶಿಕ್ಷಣ ಅತ್ಯಂತ ಉನ್ನತಮಟ್ಟದಲ್ಲಿ ನುರಿತ ಅರ್ಹ ಪ್ರಾಧ್ಯಾಪಕರುಗಳಿಂದಲೇ ಪಾಠ ಪ್ರವಚನಗಳು ನಡೆಯ ಬೇಕು ಮಾತ್ರವಲ್ಲ, ವಿದ್ಯಾರ್ಥಿಗಳಿಗೂ ಕೂಡಾ ಶಿಕ್ಷಣದ ಹೊಸ ಪ್ರಪಂಚದ ಅರಿವಾಗಬೇಕು ಅನ್ನುವ ನಿಟ್ಟಿನಲ್ಲಿ ವಿಶ್ವವಿದ್ಯಾಲಯಗಳ ಕೇಂದ್ರದಲ್ಲಿಯೇ ವಿವಿಧ ವಿಷಯಗಳ ಸ್ನಾತಕೋತ್ತರ ಅಧ್ಯಯನಕ್ಕೆ ವಿಶೇಷ ಮಹತ್ವ ನೀಡಲಾಯಿತು. ಆದರೆ ಕಾಲ ಕ್ರಮೇಣ ಇನ್ನೊಂದು ವಿಶೇಷ ಆಲೇೂಚನೆ ನಮ್ಮ ಶಿಕ್ಷಣ ವಲಯದಲ್ಲಿ ಹುಟ್ಟಿಕೊಂಡಿತು. ಉನ್ನತ ಶಿಕ್ಷಣವನ್ನು ಪ್ರತಿಯೊಬ್ಬರ ಮನೆ ಬಾಗಿಲಿಗೆ ತೆಗೆದುಕೊಂಡು ಹೇೂಗಬೇಕು ಅನ್ನುವ ನಿಟ್ಟಿನಲ್ಲಿ ಪ್ರತಿ ಹಳ್ಳಿಯ ಪದವಿ ಕಾಲೇಜಿನಲ್ಲಿ ಕೂಡಾ ಸ್ನಾತಕೋತ್ತರ ವಿಷಯಗಳ ಅಧ್ಯಯನಕ್ಕೆ ಅವಕಾಶ ಮಾಡಿಕೊಡಬೇಕು. ತನ್ಮೂಲಕ ಪ್ರತಿಯೆಾಬ್ಬ ವ್ಯಕ್ತಿಯೂ ಸ್ನಾತಕೋತ್ತರ ಪದವೀಧರರಾಗಬೇಕು ಅನ್ನುವ ಸಂಕಲ್ಪ ಮಾಡಿ ನಾವು ಯಾವುದನ್ನು ವಿ.ವಿ. ಕೇಂದ್ರದಲ್ಲಿ ಅಧ್ಯಯನ ಮಾಡುತ್ತಿದ್ದೆವೊ ಅವೆಲ್ಲವನ್ನೂ ಕೂಡಾ ಪ್ರತಿ ಊರಿನ ಸರಕಾರಿ; ಖಾಸಗಿ ಪದವಿ ಕಾಲೇಜು ಗಳಲ್ಲಿ ಅಧ್ಯಯನಕ್ಕೆ ಅವಕಾಶ ಮಾಡಿಕೊಟ್ಟರು. ಇದನ್ನು ನಾನು ತಪ್ಪು ಅಂತ ಹೇಳುತ್ತಿಲ್ಲ. ಆದರೆ ಗುಣಮಟ್ಟವನ್ನು ಯಾವ ರೀತಿಯಲ್ಲಿ ಕಾಪಾಡಿಕೊಂಡು ಬಂದಿದ್ದೇವೆ ಈ ಸ್ನಾತಕೋತ್ತರ ಅಧ್ಯಯನ ಕ್ಕೆ ಬೇಕಾಗುವ ಪರಿಸರ ಪರಿಕರ ಉಪನ್ಯಾಸಕರ ಅನುಭವ ಅರ್ಹತೆಯನ್ನು ಎಷ್ಟರ ಮಟ್ಟಿಗೆ ಕಾಪಾಡಿಕೊಂಡು ಬಂದಿದ್ದೇವೆ ಅನ್ನುವುದು ಕೂಡಾ ಅಷ್ಟೇ ಮುಖ್ಯ.
ಇಂದು ಅದೇಷ್ಟೊ ಸರಕಾರಿ ಖಾಸಗಿ ಕಾಲೇಜುಗಳಲ್ಲಿ ಸ್ನಾತಕೋತ್ತರ ಅಧ್ಯಯನ ಕೇಂದ್ರವಿದೆ. ಆದರೆ ಪ್ರಾಮಾಣಿಕವಾಗಿ ನೇೂಡಿದರೆ ಆ ಕಾಲೇಜಿನ ಆಡಳಿತ ಮಂಡಳಿಗಾಗಲಿ ಸಂಸ್ಥೆಯ ಮುಖ್ಯಸ್ಥರಿಗಾಗಲಿ ಅದರ ಅನಿವಾರ್ಯತೆಯ ಭಾವನೆ ಇರಲಿಲ್ಲ ಬದಲಾಗಿ ಬೇರೆ ಬೇರೆ ಕಾಲೇಜುಗಳಲ್ಲಿ ಇದೆಯಲ್ಲಾ ನಮ್ಮ ಕಾಲೇಜಿಗೂ ಸ್ನಾತಕೋತ್ತರ ಕೇಂದ್ರ ಬೇಕು ಅನ್ನುವ ಪ್ರತಿಷ್ಠೆಯ ಕಾರಣಕ್ಕಾಗಿಯೇ ಹುಟ್ಟಿಕೊಂಡಿದ್ದಾವೆ ಬಿಟ್ಟರೆ ನಿಜಕ್ಕೂ ವಿದ್ಯಾರ್ಥಿಗಳು ತುಂಬಿ ತುಳುಕುತ್ತಿದ್ದಾರೆ ವಿಶೇಷ ಬೇಡಿಕೆ ಇದೆ ಅನ್ನುವ ಕಾರಣಕ್ಕಾಗಿಯೇ ಹುಟ್ಟಿಕೊಂಡ ಕೇಂದ್ರ ಅಲ್ಲ ಅನ್ನುವುದು ಎಲ್ಲರ ಅನುಭವದ ಮಾತು.
ಈ ಸ್ನಾತಕೋತ್ತರ ಅಧ್ಯಯನದ ವಿಷಯಗಳು ಅಳವಡಿಸಿದರೆ ನ್ಯಾಕ್‌ನಿಂದ ಎ++ಗ್ರೇಡ್ ಬರಬಹುದು ಅನ್ನುವ ಒಂದೇ ಕಾರಣದಿಂದ ಅದೆಷ್ಟೊ ಪದವಿ ಕಾಲೇಜಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸ್ನಾತಕೋತ್ತರ ವಿಷಯಗಳ ಅಧ್ಯಯನಕ್ಕೆ ಅವಕಾಶ ಮಾಡಿಕೊಟ್ಟರು. ಆದರೆ ಇತ್ತೀಚಿನ ನ್ಯಾಕ್ ನೀಡಿದ ಮೌಲ್ಯಾಂಕಗಳನ್ನು ನೇೂಡಿದಾಗ ಅವುಗಳು ನಿರೀಕ್ಷೆ ಮಾಡಿದಷ್ಟು ಗ್ರೇಡ್ ಬರಲೇ ಇಲ್ಲ. ಆದರೆ ಅತಿ ಕಡಿಮೆ ವಿಷಯ ಅಳವಡಿಸಿರುವ ಗ್ರಾಮೀಣ ಸರಕಾರಿ ಕಾಲೇಜುಗಳಿಗೆ ಎ+ ಬಂದ ಉದಾಹರಣೆಗಳು ನಮ್ಮ ಉಡುಪಿ ಜಿಲ್ಲೆಯಲ್ಲಿಯೇ ಇದೆ. ಇನ್ನೊಂದು ವಿಶೇಷವೆಂದರೆ ಅದೆಷ್ಟೊ ಪದವಿ ಕಾಲೇಜಿನ ಮಟ್ಟದಲ್ಲಿ ಇರುವ ಸ್ನಾತಕೋತ್ತರ ಕೇಂದ್ರಗಳು ವಿದ್ಯಾರ್ಥಿಗಳ ಕೊರತೆಯಿಂದಾಗಿಯೇ ಮುಚ್ಚಿದ ಉದಾಹರಣೆಗಳು ನಮ್ಮ ಮುಂದಿದೆ.
ಇತ್ತೀಚೆಗೆ ಮಂಗಳೂರು ಸರಕಾರಿ ವಿ.ವಿ. ಕಾಲೇಜಿನಲ್ಲಿಯೇ ವಿದ್ಯಾರ್ಥಿಗಳ ಕೊರತೆಯಿಂದಾಗಿ ಎರಡು ವಿಷಯಗಳ ಅಧ್ಯಯನಕ್ಕೆ ಇತಿಶ್ರೀ ಹಾಡಿದ ಸುದ್ದಿಯನ್ನು ಕೇಳಿದ್ದೇವೆ. ಹಾಗೆನ್ನುವಾಗ ಮುಂದಿನ ದಿನಗಳಲ್ಲಿ ಬೇರೆ ಕಾಲೇಜಿನ ಪರಿಸ್ಥಿತಿ ಎಲ್ಲಿಗೆ ಬರಬಹುದು? ಹಾಗಾಗಿ ವಿಶ್ವವಿದ್ಯಾಲಯಗಳ ಕೇಂದ್ರ ಸ್ಥಾನದಲ್ಲಿಯೇ ಅಧ್ಯಯನಕ್ಕೆ ಹೆಚ್ಚಿನ ಒತ್ತುಕೊಡಬೇಕಾದ ಅನಿವಾರ್ಯತೆ ಇದೆ. ಇಲ್ಲವಾದರೆ ಈ ಉದಾರಿಕರಣದ ವಿಕೇಂದ್ರೀಕರಣದ ಶಿಕ್ಷಣ ನೀತಿಯಿಂದಾಗಿ ವಿಶ್ವ ವಿದ್ಯಾಲಯ ಪೀಠಗಳೇ ಕಳಚಿಹೇೂಗುವ ಪರಿಸ್ಥಿತಿ ಬಂದರೂ ಆಶ್ಚರ್ಯ ಪಡ ಬೇಕಾಗಿಲ್ಲ. ಈಗಾಗಲೇ ಸ್ವಾಯತ್ತತೆ ಕಾಲೇಜಿನ ಪರಿಕಲ್ಪನೆಯಿಂದಾಗಿ ವಿಶ್ವ ವಿದ್ಯಾಲಯಗಳ ಕೆಲಸ ಅರ್ಧದಷ್ಟು ಕಡಿಮೆಯಾಗಿದೆ. ಆದರ ಜೊತೆಗೆ ಇದು ಒಂದು ಸೇರಿ ಬಿಟ್ಟರೆ ನಮಗೆ ವಿ.ವಿ.ಗಳ ಅಗತ್ಯವಿದೆಯಾ ಅನ್ನುವ ಪ್ರಶ್ನೆ ಹುಟ್ಟಿಕೊಂಡರೂ ಆಶ್ಚರ್ಯ ಪಡಬೇಕಾಗಿಲ್ಲ.
ಒಂದು ಕಾಲದಲ್ಲಿ ಮಂಗಳೂರಿನ ಕೊಣಾಜೆ ವಿಶ್ವವಿದ್ಯಾಲಯದಲ್ಲಿ ಎಲ್ಲಾ ವಿಷಯಗಳಲ್ಲಿ ವಿದ್ಯಾರ್ಥಿಗಳು ತುಂಬಿ ತುಳುಕುತ್ತಿದ್ದರು. ಒಂದು ಸೀಟು ಸಿಗ ಬೇಕಾದರೆ ಎಷ್ಟು ಕಷ್ಟ ಪಡಬೇಕಿತ್ತು ಆದರೆ ಈಗ ಈ ವಿದ್ಯಾರ್ಥಿಗಳಿಗಾಗಿಯೇ ಪ್ರೊಫೆಸರುಗಳೇ ಕಷ್ಟ ಪಡಬೇಕಾಗಿದೆ. ಎಂತಹ ಸವಲತ್ತುಗಳು ಇಲ್ಲದ ಕಾಲದಲ್ಲೂ ನಾವು ಮಂಗಳೂರು ವಿ.ವಿ.ಕೇಂದ್ರದಲ್ಲಿ ಪಡೆದ ಶಿಕ್ಷಣದ ಅನುಭವ ನಮ್ಮನ್ನು ಎಷ್ಟು ಚೆನ್ನಾಗಿ ಗಟ್ಟಿಯಾಗಿ ಬೆಳೆಸಿದೆ. ಆದರೆ ಇಂದಿನ ನಮ್ಮ ವಿದ್ಯಾರ್ಥಿಗಳು ತಮ್ಮಮನೆ ಬಾಗಿಲಲ್ಲಿಯೇ ಪಡೆದ ಶಿಕ್ಷಣ ಎಷ್ಟು ಚೆನ್ನಾಗಿ ಬೆಳೆಸಿದೆಯೊ ಗೊತ್ತಿಲ್ಲ. ನಮಗೆ ಎಂತಹ ಅನುಭವ ಪಡೆದ ಉನ್ನತ ಗುಣಮಟ್ಟದ ಉಪನ್ಯಾಸಕರಿಂದ ಪಾಠ ಕೇಳಿಸಿಕೊಂಡ ಅನುಭವ. ಮಂಗಳೂರಿನ ಕೊಣಾಜೆಯ ವಿದ್ಯಾ ಪೀಠವೆಂದರೆ ಬೈಂದೂರಿನಿಂದ ಹಿಡಿದು ಸುಳ್ಯ ಮಡಿಕೇರಿ ಆಸುಪಾಸಿನ ವಿದ್ಯಾರ್ಥಿಗಳದ್ದೆ ಕಲರವ ಎಷ್ಟೊಂದು ಬದುಕಿನ ಸವಿ ಅನುಭವ. ಇದುವೇ ನಿಜವಾದ ಶಿಕ್ಷಣ ಅನ್ನಿಸುವಂತಿತ್ತು. ಆದರೆ ಇಂದಿನ ವಿಕೇಂದ್ರೀಕರಣದ ವಿಶ್ವ ಪಾಠ ಶಾಲೆಯಲ್ಲಿ ಇವೆಲ್ಲವೂ ಮರೆಯಾಗಿದೆ ಅಲ್ವೇ?
- ಪ್ರೊ. ಕೊಕ್ಕರ್ಣೆ ಸುರೇಂದ್ರನಾಥ ಶೆಟ್ಟಿ ಉಡುಪಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ