ಹೀಗಿದ್ದರು ನಮ್ಮ ಮಾಜಿ ಪ್ರಧಾನಿ ಗುಲ್ಜಾರಿ ಲಾಲ್ ನಂದ

Upayuktha
0


94 ವರ್ಷದ ಆ ವೃದ್ಧರನ್ನು ಬಾಡಿಗೆ ಕಟ್ಟಿಲ್ಲ ಎಂಬ ಕಾರಣಕ್ಕೆ ಮನೆಯ ಮಾಲೀಕ ಹೊರ ಹಾಕಿದ್ದ. ಆ ವೃದ್ಧರ ಬಳಿ ಒಂದು ಹಳೆಯ ಹಾಸಿಗೆ, ಕೆಲ ಅಲುಮಿನಿಯಂ ಪಾತ್ರೆಗಳು ಮತ್ತು ಒಂದು ಪ್ಲಾಸ್ಟಿಕ್ ಬಕೆಟ್ ಹೊರತುಪಡಿಸಿ ಮತ್ತೇನು ಇರಲಿಲ್ಲ ಕೆಲವೇ ದಿನಗಳಲ್ಲಿ ಹಣವನ್ನು ಕಟ್ಟುವೆ ಎಂದು ಆ ವೃದ್ಧರು ಅದೆಷ್ಟೇ ಬೇಡಿಕೊಂಡರು ಮನೆಯ ಮಾಲೀಕ ಒಪ್ಪಲಿಲ್ಲ... ಅಕ್ಕ ಪಕ್ಕದ ಜನರೆಲ್ಲ ಈ ಘಟನೆಯನ್ನು ಕರುಣೆಯಿಂದ ನೋಡುತ್ತಿದ್ದವರು ಆ ಮನೆಯ ಮಾಲೀಕನಿಗೆ ವೃದ್ಧರಿಗೆ ಬಾಡಿಗೆ ಹಣವನ್ನು ಕಟ್ಟಲು ಸ್ವಲ್ಪ ಸಮಯಾವಕಾಶ ಕೊಡಲು ಒತ್ತಾಯಿಸಿದರೂ ಮಾಲಿಕ ಒಪ್ಪದೇ ಹೋದ.


ಅ ದಾರಿಯಾಗಿ ಹಾದು ಹೋಗುತ್ತಿದ್ದ ಪತ್ರಕರ್ತನೋರ್ವ ಅಲ್ಲಾಗುತ್ತಿದ್ದ ಗಲಾಟೆಯನ್ನು ಕಂಡು ಈ ಘಟನೆಯಿಂದ ತನ್ನ ಪತ್ರಿಕೆಗೆ ಏನಾದರೂ ಸುದ್ದಿ ದೊರೆಯಬಹುದು ಎಂದು ವೀಕ್ಷಿಸಲು ನಿಂತಿದ್ದು ಕೆಲ ಚಿತ್ರಗಳನ್ನು ತನ್ನ ಕ್ಯಾಮರಾದಲ್ಲಿ ಕ್ಲಿಕ್ಕಿಸಿ ಅಲ್ಲಿಂದ ಹೊರಟ.


ತಾನು ತೆಗೆದ ಫೋಟೋಗಳನ್ನು ಡೆವಲಪ್ ಮಾಡಿಸಿದ ಆ ಪತ್ರಕರ್ತ ಸುದ್ದಿ ಮತ್ತು ಫೋಟೋಗಳನ್ನು ಸಂಪಾದಕರ ಮುಂದೆ ಹಿಡಿದಾಗ ಆ ಸಂಪಾದಕರು ಗಾಬರಿಯಿಂದ "ನೀನು ಆ ವೃದ್ಧ ಮನುಷ್ಯರನ್ನು ನೋಡಿರುವೆಯಾ?" ಎಂದು ಕೇಳಿದರು. ಅದಕ್ಕೆ ತಲೆ ಅಲ್ಲಾಡಿಸಿದ ಪತ್ರಕರ್ತ "ಹೌದು, ದೂರದಿಂದಲೇ ನೋಡಿದ್ದೇನೆ" ಎಂದು ಹೇಳಿದನು. ಆತ ನಿನಗೆ ಗುರುತು ಸಿಕ್ಕಲಿಲ್ಲವೇ!? ಎಂಬ ಸಂಪಾದಕರ ಪ್ರಶ್ನೆಗೆ ತುಸು ಆಶ್ಚರ್ಯದಿಂದ ಗುರುತು ಸಿಗಲು ಆತನೇನು ಪ್ರಧಾನಮಂತ್ರಿಯೆ? ಎಂದು ಆ ಪತ್ರಕರ್ತ ಕೇಳಿದ.


ಮರುದಿನ ಮುಂಜಾನೆ ಪತ್ರಿಕೆಯ ಮುಖಪುಟದಲ್ಲಿ ಆ ವೃದ್ಧರ ಫೋಟೋ ಮತ್ತು ಸುದ್ದಿ ಭಾರತ ದೇಶದ ಮಾಜಿ ಪ್ರಧಾನಿ ಗುಲ್ಜಾರಿ ಲಾಲ ನಂದ ಅವರು ಅತ್ಯಂತ ಹೀನಾಯ ಸ್ಥಿತಿಯಲ್ಲಿ ಎಂದು ಪ್ರಕಟವಾಗಿತ್ತು. ಜೊತೆಗೆ ನಿನ್ನೆ ನಡೆದ ಘಟನೆಯನ್ನು ವಿವರವಾಗಿ ಬರೆಯಲಾಗಿದ್ದು ಸ್ವಂತ ಮನೆಯನ್ನು ಹೊಂದಿರದ ಮಾಜಿ ಪ್ರಧಾನಿ ಗುಲ್ಜಾರಿಲಾಲ್ ನಂದ ಅವರು ಬಾಡಿಗೆ ಕಟ್ಟದ ಕಾರಣ ಅವರನ್ನು ಬಾಡಿಗೆ ಮನೆಯಿಂದ ಹೊರ ಹಾಕಿದ ವಿಷಯ ಪತ್ರಿಕೆಯಲ್ಲಿ ಪ್ರಕಟಗೊಂಡಿತು. ಹೊಸದಾಗಿ ರಾಜಕೀಯಕ್ಕೆ ಸೇರಿದವರು ಕೂಡ ಲಕ್ಷ ಲಕ್ಷ ಹಣ ಮಾಡಿಕೊಳ್ಳುವ ಇಂದಿನ ಕಾಲದಲ್ಲಿ ಎರಡು ಬಾರಿ ಪ್ರಧಾನಿಯಾಗಿ ಕಾರ್ಯನಿರ್ವಹಿಸಿದ, ಮತ್ತು ಕೇಂದ್ರ ಸಚಿವನಾಗಿ ದೀರ್ಘಕಾಲ ಕಾರ್ಯನಿರ್ವಹಿಸಿದ ಮಾಜಿ ಪ್ರಧಾನಿ ಗುಲ್ಜಾರಿ ಲಾಲ್ ನಂದಾ ಸ್ವಂತ ಮನೆಯನ್ನು ಹೊಂದಿಲ್ಲ ಎಂಬುದು ಸೋಜಿಗದ ವಿಷಯವಾಗಿತ್ತು.


ಸ್ವಾತಂತ್ರ್ಯ ಯೋಧರಾಗಿಯು ಕಾರ್ಯನಿರ್ವಹಿಸಿದ್ದ ಗುಲ್ಜಾರಿಲಾಲ್ ನಂದ ತಮಗೆ ಕೊಡ ಮಾಡುತ್ತಿದ್ದ 500 ರೂ ಸ್ವಾತಂತ್ರ್ಯ ಯೋಧರ ಪಿಂಚಣಿಯನ್ನು ಕೂಡ ನಿರಾಕರಿಸಿದ್ದರು. ಸ್ವಾತಂತ್ರ್ಯ ಯೋಧರ ಪಿಂಚಣಿಗಾಗಿ ತಾನು ಹೋರಾಟ ಮಾಡಿಲ್ಲ ಎಂದು ಹೇಳಿದ ಅವರಿಗೆ ಯಾವುದೇ ಆದಾಯ ಮೂಲಗಳು ಇರಲಿಲ್ಲ. ಸ್ನೇಹಿತರ ಅಪಾರ ಒತ್ತಾಯದ ನಂತರ ಮನೆ ಬಾಡಿಗೆಗೆ ಪಿಂಚಣಿಯನ್ನು ಅವರು ಒಪ್ಪಿಕೊಂಡರು.


ಪತ್ರಿಕೆಯಲ್ಲಿ ಈ ವಿಷಯ ಪ್ರಕಟವಾದ ಮರುದಿನವೇ ಅಂದಿನ ಪ್ರಧಾನಿ ತಮ್ಮ ಮಂತ್ರಿಗಳನ್ನು ಮತ್ತು ಅಧಿಕಾರಿಗಳನ್ನು ಗುಲ್ಜಾರಿ ಲಾಲ್ ನಂದ ಅವರ ಮನೆಗೆ ಕಳುಹಿಸಿದರು. ಆಡಳಿತ ಯಂತ್ರ ಮತ್ತು ಸರ್ಕಾರದ ಪ್ರಮುಖ ವ್ಯಕ್ತಿಗಳನ್ನು ಕಂಡು ಮನೆಯ ಮಾಲೀಕ ಗಾಬರಿಗೊಂಡನು. ತನ್ನ ಮನೆಯಲ್ಲಿ ಬಾಡಿಗೆಗಿರುವುದು ಸ್ವತಃ ಮಾಜಿ ಪ್ರಧಾನಿ ಗುಲ್ಜಾರಿ ಲಾಲ್ ನಂದ ಎಂಬ ವಿಷಯ ತಿಳಿದ ಆತ ಸ್ಥಂಭೀಭೂತನಾದನಲ್ಲದೇ ಗುಲ್ಜಾರಿ ಲಾಲ್ ನಂದ ಅವರ ಪಾದಗಳಿಗೆ ನಮಸ್ಕರಿಸಿ ತನ್ನನ್ನು ಕ್ಷಮಿಸು ಎಂದು ಬೇಡಿಕೊಂಡನು.


ಅವರನ್ನು ಭೇಟಿಯಾಗಲು ಬಂದ ಅಧಿಕಾರಿಗಳು ಮತ್ತು ಮಂತ್ರಿಗಳು ಅವರಿಗೆ ಸರ್ಕಾರಿ ನಿವಾಸದಲ್ಲಿ ವಾಸವಾಗಲು ವ್ಯವಸ್ಥೆ ಮಾಡುವುದಾಗಿ ಹೇಳಿದಾಗ ಅದನ್ನು ನಿರಾಕರಿಸಿದ ಗುಲಾಲ್ ನಂದ ಈ ವಯಸ್ಸಿನಲ್ಲಿ ಅದರ ಅವಶ್ಯಕತೆ ತನಗೆ ಇಲ್ಲ ಎಂದು ನಿರಾಕರಿಸಿದರು.


ತಮ್ಮ ಜೀವಿತದ ಕೊನೆಯವರೆಗೂ ಓರ್ವ ನಿಜವಾದ ಸ್ವಾತಂತ್ರ್ಯ ಯೋಧನಾಗಿಯೇ ಜೀವಿಸಿದ ಗುಲ್ಜಾರೀ ಲಾಲ್ ನಂದಾ ಓರ್ವ ನಿಜವಾದ ದೇಶ ಭಕ್ತ. ಅಂಥವರ ಸಂತತಿ ಸಾವಿರವಾಗಲಿ.

 

-ವೀಣಾ ಹೇಮಂತ್ ಗೌಡ ಪಾಟೀಲ್ ಮುಂಡರಗಿ ಗದಗ್


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top