- ವಿನಾಯಕ ಭಟ್ ತದ್ದಲಸೆ
ರಾಮನಾಮದ ಅರ್ಥ ವಿಶ್ಲೇಷಿಸಲು ಹೊರಟರೆ ಸಮುದ್ರವನ್ನು ಬೊಗಸೆಯಲ್ಲಿ ಹಿಡಿದಂತೆ. ಅದು ಸಮುದ್ರಕ್ಕಿಂತ ಆಳ, ಆಕಾಶದಷ್ಟು ಅನಂತ. ಪರಮಪುರುಷ ದಿವಿಯ ತೇಜಸ್ಸನ್ನೆಲ್ಲ ಒಟ್ಟುಗೂಡಿಸಿಕೊಂಡು ಭುವಿಗೆ ಬಂದಿರುವಾಗ ಅವನ ಹೆಸರು ಸವಿಯಾಗಿಯೇ ಇರಬೇಕಲ್ಲವೆ? ಅದೇ ರಾಮ. ಈ ಹಿಂದೆ ಸೂರ್ಯವಂಶದ ಯಾವ ಚಕ್ರವರ್ತಿಯೂ ತನ್ನ ಪುತ್ರನಿಗೆ ರಾಮ ಎಂದು ಹೆಸರಿಟ್ಟಿರಲಿಲ್ಲ. ದೇವ, ಗಂಧರ್ವ, ಯಕ್ಷ, ಕಿನ್ನರ, ಕಿಂಪುರುಷರೆಲ್ಲ ದಶರಥನ ಪುತ್ರಕಾಮೇಷ್ಠಿಯ ವರದಿಂದ ಮಾನವನಾಗಿ ಜನಿಸುವ ನಾರಾಯಣನ ಪ್ರತೀಕ್ಷೆಯಲ್ಲಿದ್ದಾಗ ಈ ಹಿಂದೆ ಎಲ್ಲೂ ʻರಾಮʼ ಎಂಬ ನಾಮ ಕೇಳಿರಲಿಲ್ಲ! ಮಾನವಕುಲದಲ್ಲಿ ಹಾಗಂತ ಕರೆಸಿಕೊಂಡ ಮೊಟ್ಟಮೊದಲ ಪ್ರಭು ಆ ಕೌಸಲ್ಯಾ ಸುಪ್ರಜಾ ರಾಮ.
ದಶರಥಸುತನಿಗೆ ರಾಮ ಎಂಬ ಹೆಸರನ್ನು ಸೂಚಿಸಿದವರು ಗುರು ವಶಿಷ್ಠರು. ಮುನಿಗಳ ಹೃದಯ ರಮಣನಾಗುವಂಥವ ಎಂಬ ಭಾವ. ಅದಕ್ಕೆ ಅನ್ವರ್ಥವೋ ಎಂಬಂತೆ, ರಾಮ ವಿದ್ಯಾಭ್ಯಾಸಕ್ಕಾಗಿ ವಿಶ್ವಾಮಿತ್ರ ಆಶ್ರಮದಲ್ಲಿ ಹಲವು ವರ್ಷ ಕಾಡಲ್ಲಿದ್ದ. ಪಿತೃವಾಕ್ಯ ಪರಿಪಾಲನೆಗಾಗಿ ಹದಿನಾಲ್ಕು ವರ್ಷ ಕಾಡಿನಲ್ಲಿ ಕಳೆದ. ಮುನಿಗಳ ಮನದಲ್ಲಿ ಮನೆ ಮಾಡಿ ನಿಜ ಭಕುತರ ಹೃದಯಲದಲ್ಲಿ ಮೆರೆದಾಡಿದ!
ಯಸ್ಮಿನ್ ರಮಂತೇ ಮುನಯೋಃ ವಿದ್ಯಯಾ ಜ್ಞಾನ ವಿಪ್ಲವೇ |
ತಂ ಗುರುಃ ಪ್ರಾಹ ರಮೇತಿ ರಮಾನಾಥ ರಾಮ ಇತಿ ಅಪಿ |
ಎನ್ನುವುದಾಗಿ ರಾಮಾಯಣದ ಬಾಲಕಾಂಡದಲ್ಲಿ ನಿರೂಪಿತವಾಗಿದೆ.
`ರಾಮ ಎನ್ನುವ ಎರಡು ಅಕ್ಷರದ ಮಹಿಮೆಯನು ಪಾಮರರು ತಾವೇನು ಬಲ್ಲರಯ್ಯ?ʼ ಎಂದರು ಪುರಂದರದಾಸರು.
ರಾ ಎಂದ ಮಾತ್ರದೊಳು ರಕ್ತ ಮಾಂಸದೊಳಿದ್ದ
ಆಯಸ್ಥಿಗತವಾದ ಅತಿಪಾಪವನ್ನು
ಮಾಯವನು ಮಾಡಿ ಮಹರಾಯ ಮುಕ್ತಿಯ ಕೊಡುವ
ದಾಯವನು ವಾಲ್ಮೀಕಿ ಮುನಿರಾಯ ಬಲ್ಲ|
ಮತ್ತೆ ಮ ಎಂದೆನೆಲು ಹೊರಬಿದ್ದ ಪಾಪಗಳು
ಒತ್ತಿ ಒಳಪೊಗದಂತೆ ಕವಾಟವಾಗಿ
ಚಿತ್ತ ಕಾಯಗಳ ಪವಿತ್ರ ಮಾಡುವ ಪರಿಯ
ಭಕ್ತವರ ಹನುಮಂತ ತಾನೊಬ್ಬ ಬಲ್ಲ |
ಧರೆಯೊಳೀ ನಾಮಕ್ಕೆ ಸರಿಮಿಗಿಲು ಇಲ್ಲೆಂದು
ಪರಮ ವೇದಗಳೆಲ್ಲ ಪೊಗಳುತಿಹವು
ಸಿರಿಯರಸ ಪುರಂದರ ವಿಠಲನ ನಾಮವನು
ವರ ಕಾಶಿಯೊಳಗಿಪ್ಪ ಶಿವ ತಾನು ಬಲ್ಲ ||
ಈ ದಾಸಪದ ರಾಮ ಎಂಬ ಎರಡು ಅಕ್ಷರದ ಪದದ ದಿವ್ಯತೆಯನ್ನು ಕೆಲವೇ ಸಾಲುಗಳಲ್ಲಿ ಸಾರಿವೆ.
ರಾಮ ಎನ್ನುವ ಎರಡಕ್ಷರದ ಅರ್ಥ ಒಂದೆರಡಲ್ಲ. ಅನೇಕ ಉಲ್ಲೇಖಗಳಲ್ಲಿ ಅನೇಕ ಅರ್ಥ ವ್ಯಾಖ್ಯಾನ ದೊರೆಯುತ್ತದೆ. ಒಂದು ಉಲ್ಲೇಖದ ಪ್ರಕಾರ ರಾ ಎನ್ನುವುದು ನಾʻರಾʼಯಣನ ಎರಡನೆ ಅಕ್ಷರ ಹಾಗೂ ಮ ಎನ್ನುವುದು ನʻಮಃʼ ಶಿವಾಯದ ಎರಡನೆ ಅಕ್ಷರ. ಅವೆರಡೂ ಸೇರಿ ʻರಾಮʼ ಆಗಿದೆ. ಶಿವ ಹಾಗೂ ವಿಷ್ಣು ಬೇರೆ ಬೇರೆ ಅಲ್ಲ ಎನ್ನುವ ಧ್ವನಿ ಇದರಲ್ಲಿ ಅಡಗಿದೆ. ಪ್ರತಿ ದೇವತಾ ಸ್ವರೂಪವೂ ಅಂತಿಮವಾಗಿ ನಾರಾಯಣಮಯವೇ ಎನ್ನುವುದು ಕೂಡ ಇದರಲ್ಲಿ ಅಡಕವಾಗಿದೆ ಎನ್ನಬಹುದು.
ಇನ್ನೊಂದು ವ್ಯಾಖ್ಯಾನ ಬಹಳ ಅಚ್ಚರಿ ಹುಟ್ಟಿಸುವಂಥದ್ದು. ಶವಯಾತ್ರೆ ಮಾಡುವಾಗ, ವಿಶೇಷವಾಗಿ ಉತ್ತರ ಭಾರತದಲ್ಲಿ ʻರಾಮನಾಮ್‌ಸತ್ಯ ಹೈʼ ಅಂತ ಹೇಳುತ್ತಾ ಸಾಗುತ್ತಾರೆ. ವಿಚಿತ್ರ ಅಂದರೆ, ಶಿವನ ಆವಾಸ ಸ್ಥಾನ ಕಾಶಿಯ ಮಣಿಕರ್ಣಿಕಾ ಘಾಟ್, ಹರಿಶ್ಚಂದ್ರ ಘಾಟ್‌ಗಳಲ್ಲೂ ʻಶಿವನಾಮ್‌ಸತ್ಯ ಹೈʼ ಅಂತ ಹೇಳುವುದಿಲ್ಲ. ʻರಾಮನಾಮ ಸತ್ಯ ಹೈʼ ಅಂತಲೇ ಹೇಳುವುದು. ಏನಿದರ ಮರ್ಮ? ರಾ ಎನ್ನುವುದು ಜನನ ಹಾಗೂ ಮ ಎನ್ನುವುದು ಮರಣದ ಸಂಕೇತ. ಸಂಸ್ಕೃತ ಭಾಷೆ ಹೇಗಿದೆ ಎಂದರೆ ಒಂದು ಅಕ್ಷರವೂ ಒಂದು ಪದದಂತೆ ಅರ್ಥ ಹೊಮ್ಮಿಸಬಲ್ಲದು. ಹಾಗೂ ಪ್ರತಿ ಅಕ್ಷರವೂ ಒಂದೊಂದು ಬೀಜಾಕ್ಷರದಂತೆ ಶಕ್ತಿಶಾಲಿ. ಪ್ರಪಂಚದ ಬೇರಾವ ಭಾಷೆಯಲ್ಲೂ ಈ ಸತ್ವ ಇಲ್ಲ. ಹಾಗಾಗಿ ಸಂಸ್ಕೃತದಲ್ಲಿ ಎರಡು ಅಕ್ಷರಗಳನ್ನು ಒಟ್ಟುಗೂಡಿಸಿದರೆ ಬ್ರಹ್ಮಾಂಡದಂಥ ಅರ್ಥವೇ ಧ್ವನಿಸಬಹುದು. ಉದಾಹರಣೆಗೆ ಗುರು. ಗು ಅಂದರೆ ಕತ್ತಲೆ, ಅಜ್ಞಾನ. ರು ಅಂದರೆ ಬೆಳಕು, ತೇಜ, ಜ್ಞಾನ. ಹಾಗೆಯೇ ರಾಮ.
ರಾಮ ಪದದ ಬಗ್ಗೆ ಅಗ್ನಿಪುರಾಣದ 348ನೇ ಅಧ್ಯಾಯದ ಶ್ಲೋಕಗಳಲ್ಲಿ ಅಡಗಿರುವ ಅರ್ಥ ವೈಶಿಷ್ಟ್ಯಪೂರ್ಣ. ವ್ಯಾಸರು ಅಗ್ನಿಪುರಾಣವನ್ನು ಸಂಕಲಿಸಿದ ಋಷು. ಅದರಲ್ಲಿ ಅಗ್ನಿದೇವ ʻರಾಮʼ ಪದವನ್ನು ವಿವರಿಸಿರುವುದು ಹೀಗೆ- ರಾ ಅಕ್ಷರದ ಅರ್ಥ ಜ್ವಾಲೆ, ಬಲ, ಇಂದ್ರ. ಮ ಅಂದರೆ ಅಮ್ಮ, ಲಕ್ಷ್ಮಿ. ಹೀಗೆ ರ ಮತ್ತು ಮ ಎರಡು ಬೀಜಾಕ್ಷರಗಳು ರಾಮ ಆಗಿವೆ. ಅಂದರೆ ಬಲ, ತೇಜಸ್ಸು ಕ್ಷಾತ್ರ ಗುಣಗಳು. ಅಂದರೆ ಭಕ್ತರನ್ನು ಕಾಯುವ ಗುಣಗಳು. ಹಾಗೆಯೇ ತಾಯಿಯಂಥ ಗುಣ ಅಂದರೆ, ಅಮ್ಮನಂತೆ ಲಾಲಿಸುವ, ಪೊರೆಯುವ ಗುಣ. ಅದು ಮ ಅಕ್ಷರದಲ್ಲಿ ಅಡಗಿದೆ. ಹಾಗಾಗಿ ರಾಮ ಬೇರೆ ಅಲ್ಲ ಅಮ್ಮ ಬೇರೆ ಅಲ್ಲ. ರಾಮನಲ್ಲೇ ಶಕ್ತಿ, ಧೈರ್ಯಗಳ ಜೊತೆಗೆ ಅʻಮ್ಮʼನೂ ಇರುವಾಗ ಯಾವ ಭಯವೂ ಇರುವುದಿಲ್ಲ ಎಂಬುದನ್ನು ಈ ವ್ಯಾಖ್ಯಾನಗಳು ಧ್ವನಿಸುತ್ತವೆ.
ಹಾಗೆಯೇ ʻರಾಮʼ ಜನನ-ಮರಣ-ಪುನರ್ಜನನ-ಪುನರ್ಮರಣ ಹೀಗೆ ಈ ಆತ್ಮದ ಪಯಣವನ್ನು ಸಂಕೇತಿಸುತ್ತದೆ ಎನ್ನುತ್ತದೆ ಅಗ್ನಿಪುರಾಣ. ರಾ ಎಂದರೆ ಜನನ, ಮ ಎಂದರೆ ಮರಣ. ಜನನ ಮರಣ ಚಕ್ರದಿಂದ ಮುಕ್ತಿ ಪಡೆಯಲು ತಾರಕ ಮಂತ್ರವೇ ʻರಾಮʼ. ಹಾಗಾಗಿ ಶವಯಾತ್ರೆಯಲ್ಲಿ ಬಳಸುವ ಘೋಷವೇ - ರಾಮನಾಮ ಸತ್ಯ ಹೈ. ಅಂದರೆ ಜೀವವು ಜನಿಸಿದಾಗ ಅಸ್ತಿತ್ವ ಕಂಡುಕೊಂಡು ಮರಣಿಸಿದಾಗ ಇಲ್ಲವಾಗುವಂಥದ್ದು. ರಾಮನಾಮವೊಂದೇ ಇಲ್ಲಿ ಶಾಶ್ವತ ಎಂದರ್ಥ. ಕಾಶಿಯಲ್ಲಿ ಸ್ವತಃ ಶಿವನೇ ಬಂದು ಮೋಕ್ಷದಾಯಕ ʻರಾಮತಾರಕಮಂತ್ರʼ ಉಪದೇಶಿಸುತ್ತಾನೆ ಎಂಬ ನಂಬಿಕೆ ಇದೆ.
ಇನ್ನು ರಾಮನ ಜೊತೆಗೆ ಶ್ರೀ ಸೇರಿಸಿ ಶ್ರೀರಾಮ ಎಂದು ಬಳಸುವುದು ಉಂಟು. ಶ್ರೀಸೂಕ್ತದ ಪ್ರಕಾರ ಶ್ರೀ ಎಂದರೆ ಲಕ್ಷ್ಮೀ ಎಂದರ್ಥ. ಇನ್ನೊಂದು ಅರ್ಥದಲ್ಲಿ ಶ್ರೀ ಎಂದರೆ ಸೀತಾ ಎಂದೂ ಹೇಳಬಹುದು. ಹಾಗಾಗಿ ಶ್ರೀರಾಮ ಎಂದರೆ ಸೀತಾರಾಮ- ಲಕ್ಷ್ಮೀನಾರಾಯಣ ಇದ್ದಹಾಗೆ. ಎಷ್ಟೆಂದರೂ ನಾರಾಯಣನ ಅವತಾರವೇ ರಾಮ ಅಲ್ಲವೇ?
ಆಧ್ಯಾತ್ಮದಲ್ಲಿ 'ರಂ' ಎನ್ನುವುದು ಅತ್ಯಂತ ಪ್ರಭಾವಶಾಲಿ ಬೀಜಾಕ್ಷರ. ನಿಮಗೆ ಚಕ್ರಗಳ ಬಗ್ಗೆ ಗೊತ್ತಿದ್ದರೆ ಇದನ್ನು ಸಲೀಸಾಗಿ ಅರ್ಥಮಾಡಿಕೊಳ್ಳ ಬಹುದು. ಮನುಷ್ಯನ ದೇಹ ಒಂದು ಬಲ್ಬ್ ಇದ್ದ ಹಾಗೆ. ಅದು ಅನ್ನಮಯ ಕೋಶ. ಅದರಲ್ಲಿ ಪ್ರಾಣ ಸಂಚಾರವಾದರೆ ಮಾತ್ರ ಆ ದೇಹಕ್ಕೆ ಜೀವಚೈತನ್ಯ ತುಂಬುವುದು. ಅದು ಪ್ರಾಣಮಯ ಕೋಶ. ಪ್ರಾಣಸಂಚಾರ ಎನ್ನುವುದು ಬಲ್ಬ್‌ನಲ್ಲಿ ವಿದ್ಯುತ್ತು ಪ್ರವಹಿಸಿದ ಹಾಗೆ. ಹೀಗೆ ಚೈತನ್ಯ ಪ್ರವಾಹವನ್ನು ಟ್ರಾನ್ಸಫಾರ್ಮರ್ ಥರ ಏಳು ಪ್ರಮುಖ ಚಕ್ರಗಳು ನಿರ್ವಹಿಸುತ್ತವೆ. ಅವುಗಳೇ ಮೂಲಾಧಾರ, ಸ್ವಾಧಿಷ್ಠಾನ, ಮಣಿಪುರ, ಅನಾಹತ, ವಿಶುದ್ಧಿ, ಆಜ್ಞೇಯ ಹಾಗೂ ಸಹಸ್ರಾರ ಚಕ್ರಗಳು. ಒಂದೊಂದು ಚಕ್ರಕ್ಕೂ ಒಂದೊಂದು ಬೀಜಾಕ್ಷರ. ಅದರಲ್ಲಿ ಹೊಕ್ಕಳು ಭಾಗದಲ್ಲಿ ಇರುವಂಥ ಚಕ್ರ ಮಣಿಪುರ. ಅದರ ಬೀಜಾಕ್ಷರ ʻರಂʼ.. ಅಂದರೆ ರಾಮ್. ವಿಶೇಷ ಎಂದರೆ ಮಣಿಪುರ ಚಕ್ರ ಪ್ರಬಲವಾಗಿರುವ ವ್ಯಕ್ತಿಯು ಕ್ಷಾತ್ರತೇಜವುಳ್ಳವನೂ, ಧೀರೋದಾತ್ತನೂ, ಧೈರ್ಯಶಾಲಿಯೂ, ನಾಯಕತ್ವದ ಗುಣವುಳ್ಳವನೂ ಆಗಿರುತ್ತಾನೆ ಎಂದು ಹೇಳಲಾಗಿದೆ. ಅಲ್ಲಿಗೆ, ರಾಮ್ ಎನ್ನುವ ಬೀಜಾಕ್ಷರದ ಶಕ್ತಿಗೂ, ಶ್ರೀರಾಮಚಂದ್ರನ ಬಗ್ಗೆ ಇರುವ ವರ್ಣನೆಗೂ ಸಾಮ್ಯತೆ ಇದೆ. ರಾಮ ಕೂಡ ಧೀರೋದಾತ್ತನೂ, ತೇಜೋಪುಂಜನೂ, ನಾಯಕತ್ವ ಗುಣವುಳ್ಳವನೂ ಆಗಿದ್ದಾನೆ. ಯೋಗಸಾಧಕರೂ ಇದನ್ನು ಪುಷ್ಟೀಕರಿಸಿದ್ದಾರೆ.
ಹೀಗೆ ಅರ್ಥ ಮತ್ತು ಭಾವಗಳಲ್ಲಿ ಅನಂತತೆ ಹೊಂದಿರುವ ʻರಾಮʼ ಸದಾ ಸತ್ಯವೇ ಆಗಿದ್ದಾನೆ ಮತ್ತು ರಾಮನಾಮ ಸತ್ಯವೇ ಆಗಿದೆ!
- ವಿನಾಯಕ ಭಟ್ ತದ್ದಲಸೆ
ಲೇಖಕರ ಸಂಕ್ಷಿಪ್ತ ಪರಿಚಯ:
ವಿನಾಯಕ ಭಟ್ ತದ್ದಲಸೆ ಶಿರಸಿ ಮೂಲದವರು. ಬೆಂಗಳೂರಿನಲ್ಲಿ ಮಾಧ್ಯಮ ಕ್ಷೇತ್ರದಲ್ಲಿ ಇಪ್ಪತ್ತು ವರ್ಷಗಳ ಅನುಭವ ಹೊಂದಿದ್ದಾರೆ. ಉದಯವಾಣಿ, ವಿಜಯಕರ್ನಾಟಕ, ಜ಼ೀ ಕನ್ನಡ, ಕಲರ್ಸ್ ಕನ್ನಡ ಹೀಗೆ ಮುದ್ರಣ ಮತ್ತು ದೃಶ್ಯ ಮಾಧ್ಯಮಗಳಲ್ಲಿ ವಿವಿಧ ಜವಾಬ್ದಾರಿಗಳನ್ನು ಸಮರ್ಥವಾಗಿ ನಿಭಾಯಿಸಿ ಅನುಭವ ಗಳಿಸಿದವರು. ಪ್ರಸ್ತುತ ಉದಯ ಟಿವಿಯಲ್ಲಿ ಕಂಟೆಂಟ್ ವಿಭಾಗದ ಮುಖ್ಯಸ್ಥರಾಗಿ ಜವಾಬ್ದಾರಿ ನಿರ್ವಹಿಸುತ್ತಿದ್ದಾರೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ