ಸನಾತನ ಸಂಸ್ಥೆಯ ರಜತ ಮಹೋತ್ಸವದ ನಿಮಿತ್ತ ಲೇಖನ
ಪ್ರಸ್ತಾವನೆ: ಸನಾತನ ಧರ್ಮದಲ್ಲಿ ಅಧ್ಯಾತ್ಮವನ್ನು ವೈಜ್ಞಾನಿಕ ಪರಿಭಾಷೆಯಲ್ಲಿ ಕಲಿಸಲು ಮತ್ತು ಸನಾತನ ಧರ್ಮವನ್ನು ಆಚರಣೆಯಲ್ಲಿ ತಂದು ಮಾನವ ಜೀವನವನ್ನು ಆನಂದಮಯಗೊಳಿಸಲು ಅಂತರಾಷ್ಟ್ರೀಯ ಖ್ಯಾತಿಯ ವಿಜ್ಞಾನಿ ಮತ್ತು ಅಧ್ಯಾತ್ಮದ ಅಧಿಕಾರಿ ಸಂತ ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ ಅವರು 22 ಮಾರ್ಚ್ 1999 ರಂದು ಸನಾತನ ಸಂಸ್ಥೆಯನ್ನು ಸ್ಥಾಪಿಸಿದರು. ಈ ವರ್ಷ ಸನಾತನ ಸಂಸ್ಥೆಯು 25 ವರ್ಷಗಳನ್ನು ಪೂರ್ಣಗೊಳಿಸಿದೆ. ಈ ರಜತ ಮಹೋತ್ಸವದ ನಿಮಿತ್ತ ಸಂಸ್ಥೆಯ ಸಂಸ್ಥಾಪಕರು ಮತ್ತು ಕಾರ್ಯವನ್ನು ಪರಿಚಯಿಸುವ ಈ ವಿಶೇಷ ಲೇಖನ.
1. ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಬಾಳಾಜಿ ಆಠವಲೆ : ಸನಾತನ ಸಂಸ್ಥೆಯ ಸಂಸ್ಥಾಪಕ, ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ಸ್ವತಃ ಅಂತಾರಾಷ್ಟ್ರೀಯ ಖ್ಯಾತಿಯ ಸಂಮೋಹನ ತಜ್ಞರಾಗಿದ್ದರು. 1971 ರಿಂದ 1978 ರ ಕಾಲಾವಧಿಯಲ್ಲಿ, ಅವರು ಇಂಗ್ಲೆಂಡ್‌ನಲ್ಲಿ ಕ್ಲಿನಿಕಲ್ ಹಿಪ್ನೋಥೆರಪಿ ಅಂದರೆ ವೈದ್ಯಕೀಯ ಸಂಮೋಹನ ಚಿಕಿತ್ಸೆಯ ವಿಷಯದಲ್ಲಿ ವಿವರವಾದ ಸಂಶೋಧನೆಗಳನ್ನು ಮಾಡಿದರು. ಇಯೋಸಿನೊಫಿಲಿಯಾ ಈ ರಕ್ತ ಕಣಗಳ ಕಾಯಿಲೆಯು ಮಾನಸಿಕ ಕಾರಣಗಳಿಂದ ಉಂಟಾಗುತ್ತದೆಯೆಂಬ ಬಗ್ಗೆ ವೈದ್ಯಕೀಯ ಕ್ಷೇತ್ರದಲ್ಲಿ ಮೊದಲ ಸಂಶೋಧನೆಯನ್ನು ಮಾಡಿದರು. ಮಾನಸಿಕ ಅಸ್ವಸ್ಥತೆಗಳಿಗೆ ಸ್ವಯಂ ಸಂಮೋಹನ ಚಿಕಿತ್ಸಾ ಪದ್ಧತಿಯಾಗಿರುವ ಸ್ವಯಂಸೂಚನೆಯ ಸಂಶೋಧನೆಯನ್ನು ಅವರು ಮಾಡಿದರು. 1978 ರಿಂದ 1995 ರವರೆಗೆ ಅವರು ಸ್ವತಃ ವೈದ್ಯಕೀಯ ವೃತ್ತಿಯಲ್ಲಿ ಕಾರ್ಯನಿರತರಾಗಿದ್ದರು. ತಮ್ಮ ಬಳಿಗೆ ಬರುವ ರೋಗಿಗಳಲ್ಲಿ ಸುಮಾರು ಶೇ. 30 ರಷ್ಟು ರೋಗಿಗಳು ಎಂದಿನ ಚಿಕಿತ್ಸಾ ವಿಧಾನಗಳಿಂದ ಗುಣವಾಗದೇ ಯಾವುದಾದರೂ ಸಂತರ ಬಳಿಗೆ ಹೋಗಿ, ಧಾರ್ಮಿಕ ವಿಧಿಗಳನ್ನು ಮಾಡಿದ ಬಳಿಕ ಅಥವಾ ಆಧ್ಯಾತ್ಮಿಕ ಉಪಚಾರ ಮಾಡಿದ ಬಳಿಕ ಗುಣಮುಖರಾಗುತ್ತಿರುವುದು ಅವರ ಗಮನಕ್ಕೆ ಬಂತು. ಆಗ ಅವರ ಮನಸ್ಸಿನಲ್ಲಿ ಅಧ್ಯಾತ್ಮದ ವಿಷಯದಲ್ಲಿ ಜಿಜ್ಞಾಸೆ ನಿರ್ಮಾಣವಾಯಿತು. ಅವರು ಅನೇಕ ಸಂತರ ಬಳಿ ಹೋಗಿ ಅಧ್ಯಾತ್ಮಕ್ಕೆ ಸಂಬಂಧಿಸಿದ ಸಂಶಯಗಳನ್ನು ನಿವಾರಣೆ ಮಾಡಿಕೊಂಡರು. ಸ್ವತಃ ಸಾಧನೆಯನ್ನು ಮಾಡಿದರು. ಆಗ ವೈದ್ಯಕೀಯ ಕ್ಷೇತ್ರಕ್ಕಿಂತ ಹೆಚ್ಚು ಮುಂದುವರಿದ ಶಾಸ್ತ್ರಗಳಿವೆ ಮತ್ತು ಅದು ಅಧ್ಯಾತ್ಮಶಾಸ್ತ್ರವಾಗಿದೆ, ಎನ್ನುವುದು ಅವರ ಗಮನಕ್ಕೆ ಬಂತು. ತದ ನಂತರ ಅವರು ಸನಾತನ ಧರ್ಮದ ಅಧ್ಯಾತ್ಮಶಾಸ್ತ್ರದ ವೈಜ್ಞಾನಿಕ ಪದ್ಧತಿಯಲ್ಲಿ ಅಭ್ಯಾಸ ಮಾಡಿದರು ಮತ್ತು ಸಮಾಜಕ್ಕೆ ಅಧ್ಯಾತ್ಮವನ್ನು ವೈಜ್ಞಾನಿಕ ಪರಿಭಾಷೆಯಲ್ಲಿ ಕಲಿಸಲು ಗ್ರಂಥ ಲೇಖನ, ಪ್ರವಚನಗಳು, ಅಭ್ಯಾಸವರ್ಗ ಮುಂತಾದ ಮಾಧ್ಯಮಗಳಿಂದ ಅಧ್ಯಾತ್ಮ ಪ್ರಸಾರದ ಕಾರ್ಯವನ್ನು ಪ್ರಾರಂಭಿಸಿದರು.
2. ಸನಾತನದ ವ್ಯಾಪಕ ಕಾರ್ಯ
ಅಧ್ಯಾತ್ಮ ಮತ್ತು ಸಾಧನೆಯನ್ನು ಕಲಿಸುವುದು : ಸನಾತನದ ಮುಖ್ಯ ಕಾರ್ಯ ಅಧ್ಯಾತ್ಮ ಪ್ರಸಾರ ಮತ್ತು ಸಮಾಜಕ್ಕೆ ಸಾಧನೆಯನ್ನು ಕಲಿಸುವುದಾಗಿದೆ. ಅದಕ್ಕಾಗಿ ಸಂಸ್ಥೆಯ ವತಿಯಿಂದ ‘ಆನಂದಮಯ ಜೀವನಕ್ಕೆ ಅಧ್ಯಾತ್ಮ’ ಈ ವಿಷಯದ ಕುರಿತು ಪ್ರವಚನ ಹಾಗೂ ಅಭ್ಯಾಸ ವರ್ಗಗಳನ್ನು ನಡೆಸಲಾಗುತ್ತಿದೆ. ಸಾಧನೆಯನ್ನು ಕಲಿಸಲು, ಉಚಿತ ಸಾಧನಾ ಸತ್ಸಂಗ, ಸಾಧನಾ ಶಿಬಿರಗಳು, ಯುವ ಸಾಧನಾ ಸತ್ಸಂಗ ಶಿಬಿರಗಳು, ಮತ್ತು ಬಾಲಸಂಸ್ಕಾರ ವರ್ಗಗಳನ್ನು ಆಯೋಜಿಸಲಾಗುತ್ತದೆ. ಸಾವಿರಾರು ಜನರು ಈ ಸತ್ಸಂಗದೊಂದಿಗೆ ಜೋಡಣೆಯಾಗಿ ಇಂದು ಆನಂದಮಯ ಜೀವನದ ಮಾರ್ಗದಲ್ಲಿ ಚಲಿಸುತ್ತಿದ್ದಾರೆ. ಸಂಸ್ಥೆಯ ವತಿಯಿಂದ ಸೈನಿಕರು, ಪೊಲೀಸರು, ಬ್ಯಾಂಕ್ ನೌಕರರು, ಶಿಕ್ಷಕರು, ವೈದ್ಯರು, ಸರ್ಕಾರಿ ನೌಕರರು, ಐ.ಟಿ. ಉದ್ಯೋಗಿಗಳು ಮುಂತಾದವರಿಗೆ ಮಾನಸಿಕ ಒತ್ತಡ ನಿಯಂತ್ರಣ ಕಾರ್ಯಶಾಲೆಗಳನ್ನು ಸಹ ಆಯೋಜಿಸಲಾಗುತ್ತಿದೆ. ಇದಲ್ಲದೇ ಸಂಸ್ಥೆಯ ವತಿಯಿಂದ ವ್ಯಕ್ತಿತ್ವ ವಿಕಸನ ಕಾರ್ಯಶಾಲೆಗಳನ್ನು ಆಯೋಜಿಸಲಾಗುತ್ತದೆ. ವ್ಯಕ್ತಿತ್ವದಲ್ಲಿರುವ ಕೊರತೆಯ ಮೂಲದಲ್ಲಿ ಕ್ರೋಧ, ಸೋಮಾರಿತನ, ಸ್ವಾರ್ಥ ಮುಂತಾದ ಸ್ವಭಾವದೋಷಗಳೇ ಕಾರಣೀಭೂತವಾಗಿರುತ್ತವೆ. ಅವುಗಳನ್ನು ದೂರಗೊಳಿಸುವುದರಿಂದ ಶಾಶ್ವತ ವ್ಯಕ್ತಿತ್ವ ವಿಕಸನವಾಗುತ್ತದೆ. ಆ ದೃಷ್ಟಿಯಲ್ಲಿ ಈ ಕಾರ್ಯಶಾಲೆಗಳಲ್ಲಿ ಸ್ವಭಾವದೋಷ ನಿರ್ಮೂಲನೆ ಪ್ರಕ್ರಿಯೆಯನ್ನು ಕಲಿಸಲಾಗುತ್ತದೆ. ಎಲ್ಲ ಸಂತರು ಷಡ್ರಿಪು ನಿರ್ಮೂಲನೆಯ ವಿಷಯದಲ್ಲಿ ಹಾಗೆಯೇ ಅಂತಃಕರಣ ಶುದ್ಧಿಯ ವಿಷಯದಲ್ಲಿ ಹೇಳಿದ್ದಾರೆ. ಸ್ವಭಾವದೋಷ ನಿರ್ಮೂಲನೆ ಪ್ರಕ್ರಿಯೆಯನ್ನು ಕಲಿಸುವುದು ಸನಾತನದ ವೈಶಿಷ್ಟ್ಯವಾಗಿದೆ. ಈ ಪ್ರಕ್ರಿಯೆ ಕೃತಿಯಲ್ಲಿ ತರುವುದರಿಂದ ಸ್ವಭಾವದಲ್ಲಿ ಆಮೂಲಾಗ್ರ ಸಕಾರಾತ್ಮಕ ಬದಲಾವಣೆಯಾಗಿರುವ ಮತ್ತು ಜೀವನ ಆನಂದಮಯವಾಗಿರುವ ಅನುಭವವನ್ನು ಅನೇಕ ಜನರು ಪಡೆದಿದ್ದಾರೆ.
ಇದಲ್ಲದೇ ಸಂಸ್ಥೆಯ ವತಿಯಿಂದ ಕುಂಭಮೇಳ, ದೇವಸ್ಥಾನಗಳ ಜಾತ್ರೆ-ಉತ್ಸವಗಳ ಸಂದರ್ಭದಲ್ಲಿ ಧರ್ಮಶಿಕ್ಷಣ ನೀಡುವ ಭೋಧನಾಪ್ರದ ಫಲಕಗಳು, ಆಧ್ಯಾತ್ಮಿಕ ಗ್ರಂಥಗಳನ್ನು ಪ್ರದರ್ಶಿಸಲಾಗುತ್ತದೆ. ಶಾಲೆಗಳಲ್ಲಿ ಆಧ್ಯಾತ್ಮಿಕ ರಸಪ್ರಶ್ನೆ ಸ್ಪರ್ಧೆ, ಹಾಗೆಯೇ ನೈತಿಕ ಮೌಲ್ಯಗಳ ಕುರಿತು ಉಪನ್ಯಾಸಗಳನ್ನು ತೆಗೆದುಕೊಳ್ಳಲಾಗುತ್ತದೆ. ಗುರು-ಶಿಷ್ಯ ಪರಂಪರೆಯ ಸಂವರ್ಧನೆಯಾಗಲು ನೂರಾರು ಗುರುಪೂರ್ಣಿಮಾ ಮಹೋತ್ಸವಗಳನ್ನು ಆಚರಿಸಲಾಗುತ್ತದೆ.
ಧಾರ್ಮಿಕ ವಿಧಿಗಳು ಶಾಸ್ತ್ರಾನುಸಾರ ಪೌರೋಹಿತ್ಯವಾಗಬೇಕು ಮತ್ತು ಯಜಮಾನನಿಗೆ ಧಾರ್ಮಿಕ ವಿಧಿಗಳ ಶಾಸ್ತ್ರ ಮತ್ತು ಮಹತ್ವವನ್ನು ಬೋಧಿಸುವ ಪುರೋಹಿತರು ನಿರ್ಮಾಣವಾಗಬೇಕು, ಈ ಉದ್ದೇಶದಿಂದ ಸನಾತನ-ಸಾಧಕ ಪುರೋಹಿತ ಪಾಠಶಾಲೆ ಕಾರ್ಯನಿರ್ವಹಿಸುತ್ತಿದೆ. ಇದಲ್ಲದೇ, ಹಿಂದೂ ಧರ್ಮದ ವಿಷಯದಲ್ಲಿ ಆಗುವ ಟೀಕೆಗಳಿಗೆ ಸೈದ್ಧಾಂತಿಕ ಪ್ರತಿವಾದಗಳನ್ನು ಮಾಡುವ ಹಾಗೆಯೇ ಹಿಂದೂ ಧರ್ಮದ ಪರವಾಗಿ ಪ್ರಭಾವಯುತವಾಗಿ ಮಂಡಿಸುವ ವಕ್ತಾರರನ್ನು ಸಿದ್ಧ ಪಡಿಸಲು ಸನಾತನದ ವತಿಯಿಂದ ವಕ್ತಾರರ ತರಬೇತಿ ಕಾರ್ಯಾಶಾಲೆಗಳನ್ನು ನಡೆಸಲಾಗುತ್ತದೆ.
ಗ್ರಂಥ ಸಂಪತ್ತು : ಸನಾತನದ ಆಧ್ಯಾತ್ಮಿಕ ಕಾರ್ಯದ ಒಂದು ಪ್ರಮುಖ ಅಂಶವೆಂದರೆ ಅಧ್ಯಾತ್ಮದ ಜ್ಞಾನವನ್ನು ನೀಡುವ ಅಮೂಲ್ಯ ಗ್ರಂಥ ಸಂಪತ್ತಿನ ನಿರ್ಮಿತಿ, ಈ ಗ್ರಂಥಗಳ ವಿಶೇಷತೆಯೆಂದರೆ ಗ್ರಂಥದಲ್ಲಿ ಆಧುನಿಕ, ವೈಜ್ಞಾನಿಕ ಪರಿಭಾಷೆಯಲ್ಲಿ ಅಧ್ಯಾತ್ಮದ ಬೋಧನೆಯನ್ನು ನೀಡಲಾಗಿದೆ. ಇದರಿಂದ ಅಧ್ಯಾತ್ಮದಲ್ಲಿ ಆಸಕ್ತಿ ಇರುವವರಿಂದ ಈ ಪುಸ್ತಕಗಳಿಗೆ ಹೆಚ್ಚಿನ ಬೇಡಿಕೆಯಿದೆ. ಸನಾತನದ ಪರವಾಗಿ ಫೆಬ್ರವರಿ 2024 ರವರೆಗೆ, 13 ಭಾರತೀಯ ಭಾಷೆಗಳಲ್ಲಿ 365 ಪುಸ್ತಕಗಳ 95 ಲಕ್ಷ 96 ಸಾವಿರ ಪ್ರತಿಗಳು ಪ್ರಕಟವಾಗಿವೆ, ಇನ್ನೂ 5 ಸಾವಿರ ಪುಸ್ತಕಗಳು ಪ್ರಕಟವಾಗುವಷ್ಟು, ಲೇಖನ ಸನಾತನ ಸಂಸ್ಥೆಯ ಸಂಸ್ಥಾಪಕ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ವರ್ಗೀಕರಣ ಮಾಡಿ ಸಂಗ್ರಹಿಸಿದ್ದಾರೆ. ಇಷ್ಟು ಜ್ಞಾನದ ಸಂಗ್ರಹವಿರುವುದು ಮತ್ತು ಯಾವುದೇ ಆಧ್ಯಾತ್ಮಿಕ ಸಂಸ್ಥೆಯ ಗ್ರಂಥದ 1 ಕೋಟಿ ಪ್ರತಿಗಳ ಮುದ್ರಿತಗೊಳ್ಳುವುದು ಅಪರೂಪದ ಸಂಗತಿಯಾಗಿದೆ.
ಗುರುಕುಲಕ್ಕೆ ಸಮಾನ ಸನಾತನ ಆಶ್ರಮ : ಇಂದಿನ ಕಾಲದಲ್ಲಿ ರಾಜಕಾರಣಿಗಳು ಪ್ರತಿಯೊಂದು ಕ್ಷೇತ್ರದಲ್ಲೂ ಜಾತಿಯನ್ನು ತಂದು ಸಮಾಜದಲ್ಲಿ ಜಾತಿ ಜಾತಿಗಳಲ್ಲಿ ವಿಷವನ್ನು ಹರಡುತ್ತಿದ್ದಾರೆ. ಆದ್ದರಿಂದ ಜಾತಿದ್ವೇಷ ಹೆಚ್ಚಾಗುವಲ್ಲಿ, ಕೊಳಕು ರಾಜಕಾರಣವೇ ಕಾರಣವಾಗಿದೆ. ಈ ಜಾತಿದ್ವೇಷವನ್ನು ಕೇವಲ ಸಮಾಜವನ್ನು ಆಧ್ಯಾತ್ಮಿಕಗೊಳಿಸಿ ತಡೆಯಬಹುದಾಗಿದೆಯೆನ್ನುವುದು ನಮ್ಮ ಅಭಿಪ್ರಾಯವಾಗಿದೆ. ಉದಾಹರಣೆಗೆ ಹೇಳುವುದಾದರೆ, ಸನಾತನದ ಆಶ್ರಮದಲ್ಲಿ ಜಾತ್ಯಾತೀತತೆ ಸ್ಪಷ್ಟವಾಗಿ ಗೋಚರಿಸುತ್ತದೆ. ಆಶ್ರಮದಲ್ಲಿ ಯಾರಿಗೂ ಯಾವುದೇ ಜಾತಿಯನ್ನು ಕೇಳಲಾಗುವುದಿಲ್ಲ. ಪ್ರತಿಯೊಬ್ಬರೂ ಸಾಧಕಬಂಧು ಆಗಿದ್ದಾರೆ, ಗುರುಬಂಧು ಆಗಿದ್ದಾರೆ, ಈ ಆಧ್ಯಾತ್ಮಿಕ ಭಾವದಿಂದ ಅವರನ್ನು ನೋಡಲಾಗುತ್ತದೆ. ಆದ್ದರಿಂದ, ಸನಾತನ ಆಶ್ರಮವು ನೂರಾರು ಸದಸ್ಯರ ಒಂದು ಕುಟುಂಬವಾಗಿದೆ. ಈಶ್ವರಪ್ರಾಪ್ತಿಯ ಮಾಧ್ಯಮದಿಂದ ಒಂದು ಐಕ್ಯ ಸಮಾಜ ನಿರ್ಮಾಣ ಮಾಡಬಹುದು ಮತ್ತು ರಾಮರಾಜ್ಯದ ಅನುಭೂತಿಯನ್ನು ಪಡೆಯಬಹುದು ಎನ್ನುವುದು ಸನಾತನದ ಆಶ್ರಮದಲ್ಲಿ ಅನುಭವಿಸಬಹುದಾಗಿದೆ. ಆನಂದಪ್ರಾಪ್ತಿಗಾಗಿ ಪೂರ್ಣವೇಳೆ ಸಾಧನೆ ಮಾಡುವ ಇಚ್ಛೆಯಿರುವವರಿಗೆ ಸಂಸ್ಥೆಯು ಗುರುಕುಲಕ್ಕೆ ಸಮಾನವಾಗಿರುವ ಆಶ್ರಮವನ್ನು ನಿರ್ಮಿಸಿದೆ. ಸನಾತನದ ಆಶ್ರಮದಿಂದ ಅವಿರತವಾಗಿ ರಾಷ್ಟ್ರ ಮತ್ತು ಧರ್ಮಕಾರ್ಯ ಮುಂದುವರಿದಿದೆ. ಚೈತನ್ಯದ ಅನುಭೂತಿ ನೀಡುವ ಸನಾತನ ಆಶ್ರಮವನ್ನು ನೋಡಲು ಹಾಗೆಯೇ ಸಾಧನೆಯನ್ನು ಅರಿತುಕೊಳ್ಳಲು ದೇಶ-ವಿದೇಶದ ಅನೇಕ ಜಿಜ್ಞಾಸುಗಳು ಆಶ್ರಮಕ್ಕೆ ಭೇಟಿ ನೀಡುತ್ತಾರೆ. ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆಯವರ ಪ್ರೇರಣೆಯಿಂದ ದೇಶಾದ್ಯಂತ ಅನೇಕ ಸ್ಥಳಗಳಲ್ಲಿ ಸನಾತನದ ಆಶ್ರಮವಿದ್ದು, ಅಲ್ಲಿ ಸಾವಿರಾರು ಸಾಧಕರು ಪೂರ್ಣವೇಳೆ ಸಾಧನೆಯನ್ನು ಮಾಡುತ್ತಿದ್ದಾರೆ.
ಯಜ್ಞಯಾಗ : ಯಜ್ಞಯಾಗ ಇದು ಸನಾತನ ಸಂಸ್ಕೃತಿಯ ಅಂಗವಾಗಿದೆ. ವಿಶ್ವಕಲ್ಯಾಣಕ್ಕಾಗಿ ಯಜ್ಞಯಾಗ ಮಾಡುವುದು ನಮ್ಮ ಪರಂಪರೆಯಾಗಿದೆ. ಯಜ್ಞದಿಂದ ಪ್ರಕೃತಿಯ ಮೇಲೆ ಹಾಗೆಯೇ ಮಾನವಜಾತಿಯ ಮೇಲೆ ಬಹಳಷ್ಟು ಸಕಾರಾತ್ಮಕ ಪರಿಣಾಮ ಬೀರುತ್ತದೆ ಎನ್ನುವುದು ವೈಜ್ಞಾನಿಕ ಸಂಶೋಧನೆಯಿಂದ ಬಹಿರಂಗವಾಗಿದೆ. ಸನಾತನದ ಆಶ್ರಮದಲ್ಲಿ ಇಲ್ಲಿಯವರೆಗೆ ೪೫೦ಕ್ಕಿಂತ ಅಧಿಕ ಯಜ್ಞ ಮತ್ತು ಧಾರ್ಮಿಕ ವಿಧಿಗಳು ನಡೆದಿವೆ. ಇದರಲ್ಲಿ ಸಾಗ್ನಿಚಿತ್ ಅಶ್ವಮೇಧ ಮಹಾಸೋಮಯಾಗ, ಉಚ್ಛಿಷ್ಟ ಗಣಪತಿ ಯಜ್ಞ, ಚಂಡಿಯಾಗ, ಧನ್ವಂತರಿ ಯಾಗ, ಸಂಜೀವನಿ ಹೋಮ, ಪಂಚಮಹಾಭೂತ ಯಾಗ ಮುಂತಾದ ಯಾಗಗಳು ಸೇರಿವೆ. ಈ ಯಜ್ಞಯಾಗದ ಸಂಕಲ್ಪ ವೈಯಕ್ತಿಕವಾಗಿರಲಿಲ್ಲ, ಬದಲಾಗಿ ಧರ್ಮಕಾರ್ಯದಲ್ಲಿ ಎದುರಾಗುವ ಅಡಚಣೆಗಳ ನಿವಾರಣೆಯಾಗಬೇಕು, ಸಾಧನೆ ಮಾಡುವ ಜೀವಗಳಿಗೆ ಆಗುವ ತೊಂದರೆ ದೂರವಾಗಬೇಕು, ಹಾಗೆಯೇ ರಾಮರಾಜ್ಯರೂಪಿ ಹಿಂದೂ ರಾಷ್ಟ್ರದ ಸ್ಥಾಪನೆಯಾಗಬೇಕು ಎನ್ನುವ ಸಮಷ್ಟಿಯ ಕಲ್ಯಾಣದ್ದಾಗಿತ್ತು.
ಸನಾತನ ಸಂಸ್ಥೆಯ ಹಿಂದೂ ರಾಷ್ಟ್ರದ ಸಂಕಲ್ಪನೆ : ಸದ್ಯಕ್ಕೆ ಹಿಂದೂ ರಾಷ್ಟ್ರದ ಚರ್ಚೆ ಸಮಾಜದಲ್ಲಿ ಆಗುತ್ತಿದೆ. ಅದು ಪ್ರಮುಖವಾಗಿ ರಾಜಕೀಯ ವ್ಯವಸ್ಥೆಯ ಸಂದರ್ಭದಲ್ಲಿ ಆಗುತ್ತದೆ. ‘ಹಿಂದೂಗಳ ಹಿತವನ್ನು ಸಾಧಿಸುವ ಆಡಳಿತ’ ಎನ್ನುವ ಒಂದು ವಿಚಾರ ಸದ್ಯಕ್ಕೆ ಜನಪ್ರಿಯವಾಗುತ್ತಿದೆ. ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ‘ಆಧ್ಯಾತ್ಮಿಕ ರಾಷ್ಟ್ರ ರಚನೆಗೆ ಹಿಂದೂ ರಾಷ್ಟ್ರ’ ಎಂದು ಹೇಳಿದ್ದಾರೆ. ೧೯೯೮ ರಲ್ಲಿ ಅವರು ‘ಈಶ್ವರೀ ರಾಜ್ಯದ ಸ್ಥಾಪನೆ’ ಈ ಗ್ರಂಥವನ್ನು ಸಂಕಲನ ಮಾಡಿದ್ದರು. ಅದರಲ್ಲಿ ಸಮಾಜವನ್ನು ಸತ್ವಗುಣಿಗೊಳಿಸುವುದು, ಅಧ್ಯಾತ್ಮ ಕೇಂದ್ರಿತವಾಗಿರುವ ಆಡಳಿತ ವ್ಯವಸ್ಥೆಯ ಸ್ಥಾಪನೆ ಮಾಡುವುದು ಮತ್ತು ಅದರಿಂದ ವಿಶ್ವಕಲ್ಯಾಣ ಮಾಡುವುದು, ಈ ಹಿಂದೂ ರಾಷ್ಟ್ರದ ಸಂಕಲ್ಪನೆಯನ್ನು ಹೇಳಿದ್ದರು. ಮುಂದೆ ಹಿಂದೂರಾಷ್ಟ್ರ ಸ್ಥಾಪನೆಯ ಮಾರ್ಗ ಪುಸ್ತಕದಲ್ಲಿ ಅವರು ‘ವಿಶ್ವಕಲ್ಯಾಣಕ್ಕಾಗಿ ಕಾರ್ಯನಿರತವಾಗಿರುವ ಸತ್ವಗುಣಿ ಜನರ ರಾಷ್ಟ್ರ’ ಎಂದು ಹಿಂದೂ ರಾಷ್ಟ್ರದ ವ್ಯಾಖ್ಯಾನವನ್ನು ಮಾಡಿದ್ದರು. ಸ್ವಲ್ಪದರಲ್ಲಿ ಹಿಂದೂಗಳ ಹಿತವಷ್ಟೇ ಅಲ್ಲ, ಬದಲಾಗಿ ವಿಶ್ವಕಲ್ಯಾಣ ಸಾಧ್ಯಗೊಳಿಸುವುದು ಮತ್ತು ಅದಕ್ಕಾಗಿ ಸತ್ವಗುಣಿ ಸಮಾಜ ನಿರ್ಮಾಣ ಮಾಡುವುದು ಸನಾತನ ಸಂಸ್ಥೆಯ ವಿಚಾರವಾಗಿದೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ