ಶ್ರೀರಾಮ ಕಥಾ ಲೇಖನ ಅಭಿಯಾನ-32: ಅಯೋಧ್ಯಾ ನಗರಿ ಪೌರಾಣಿಕ ಮಹತ್ವ

Upayuktha
0


- ಡಾ. ಎ.ಬಿ. ಶ್ಯಾಮಾಚಾರ್ಯ


ಪ್ತ ಮೋಕ್ಷದಾಯಕ ಕ್ಷೇತ್ರಗಳಲ್ಲಿ ಮೊಟ್ಟಮೊದಲನೆಯದಾಗಿ ಉಲ್ಲೇಖಿಸಲ್ಪಟ್ಟಿರುವ ಕ್ಷೇತ್ರವೇ ಅಯೋಧ್ಯೆ. "ಅಯೋಧ್ಯಾ ಮಥುರಾ, ಮಾಯಾ" ಎಂಬುದಾಗಿ ಅಯೋಧ್ಯೆಯು ಕ್ಷೇತ್ರಗಳ ಪ್ರಥಮ ಓಂಕಾರ ಎನ್ನಬಹುದು. ಅಯೋಧ್ಯಾ ಎಂದರೆ ಯುದ್ಧ ಮಾಡಲು ಸಾಧ್ಯವಲ್ಲದ ಬಲಿಷ್ಠ ಸ್ಥಳ ಎಂದರ್ಥ. ಅಂಥ ಸ್ಥಳವು ನಿಜವಾಗಿ ವೈಕುಂಠವೇ ಆದರೂ ವೈಕುಂಠಾಧಿಪತಿಯಾದ ವಿಷ್ಣುವಿನಿಂದಾಗಿ ಈ ಕ್ಷೇತ್ರಕ್ಕೆ ಈ ಹೆಸರು ಅನ್ವರ್ಥವಾದುದು. ರಾಮನ ಜನುಮದ ನಾಡು- ಅವನ ಆಳ್ವಿಕೆಯ ಅಪ್ರತಿಮ ಸ್ಥಳ ಇದಾಗಿದೆ. ಇಲ್ಲಿ ಸರಯೂನದಿಯೇ ಮುಖ್ಯ ಆಕರ್ಷಣೆಯಾಗಿದೆ. ವಸಿಷ್ಠರು ಮಾನಸ ಸರೋವರದ ಬಳಿ ಗಂಗೆಯ ಪ್ರವಾಹವು ಕೈಲಾಸಕ್ಕೆ ಮುನ್ನುಗ್ಗುವುದನ್ನು ತಡೆದರು. ತಡೆದ ರಭಸಕ್ಕೆ ಪ್ರವಾಹವು ಸರಿಯುತ್ತಾ ಬೇರೆಡೆ ಹರಿದು ಸರಯೂನದಿ ಎನಿಸಿದೆ. ಹೀಗಾಗಿ ಇದು ಗಂಗೆಯ ಮತ್ತೊಂದು ರೂಪವೇ ಆಗಿದೆ. 


ಅಲ್ಲಿ ಸ್ವರ್ಗದ್ವಾರ ತೀರ್ಥವೆಂಬ ಪ್ರಸಿದ್ಧ ಸ್ಥಳವಿದೆ. ರಾಮನು ಪ್ರಜೆಗಳಿಗೆಲ್ಲಾ ಸುಖವನ್ನು ಉಂಟುಮಾಡುತ್ತಾ ರಾಜ್ಯವಾಳಿ ಕೊನೆಗೆ ವೈಕುಂಠಕ್ಕೆ ತೆರಳುವಾಗ ಎಲ್ಲಾ ಸಜ್ಜೀವರನ್ನು ಕರೆದುಕೊಂಡು ಸರಯೂ ನದಿಯ ಈ ಪ್ರವಾಹದ ಮೂಲೆಯಲ್ಲಿಯೇ ವೈಕುಂಠಕ್ಕೆ ತೆರಳಿದನು. ಹೀಗಾಗಿ ಇದನ್ನು ಸ್ವರ್ಗದ್ವಾರ ತೀರ್ಥ ಎನ್ನುತ್ತಾರೆ. ಗೋಪ್ರತಾರ ತೀರ್ಥ ಇದರ ಮತ್ತೊಂದು ಹೆಸರು. ಅಂತಿಮವಾಗಿ ಭಗವಂತನೊಂದಿಗೆ ಮೀಯುತ್ತಾ ಮುಂದುವರೆಯುತ್ತಾ ಮುಕ್ತಿಗೆ ಮುನ್ನಡೆದ ಈ ಸ್ಥಳದಲ್ಲೂ, ನೀವು ಮೀಯಲು ಮೀನ ಮೇಷ ಎಣಿಸುವುದು ತರವೇ? ಅಷ್ಟೇ ಅಲ್ಲದೆ, ಎಲ್ಲಾ ತೀರ್ಥವಿಧಿಗಳೂ ಈ ಸ್ಥಳದಲ್ಲಿಯೇ ಜರಗುವುದರಿಂದ ಇಲ್ಲಿಯೇ ದಾನ-ಪಾರಾಯಣ-ಪೂಜೆಗಳನ್ನು ಮಾಡಿರಿ. ನದಿಯ ತೀರದಲ್ಲಿರುವ ಮೆಟ್ಟಿಲುಗಳು ಭವ್ಯವಾಗಿಯೂ ಅನುಕೂಲವಾಗಿಯೂ ಇವೆ.


ಸಾರ್ಥಕವಾಗುವುದು ಆಯು(ಸ್ಸು) ಆದ್ದರಿಂದಲೇ ಸರಯೂ ಬ್ರಹ್ಮನಿಗೆ ಭಗವಂತ ಸೃಷ್ಟಿಮಾಡಲು ಆದೇಶಿದ. ಅದಕ್ಕಾಗಿ ಬ್ರಹ್ಮ ತಪಸ್ಸು ಮಾಡಿದ. ಭಗವಂತನು ಎದರು ಬಂದು ನಿಂತನು. ಬ್ರಹ್ಮನ ನಿಷ್ಕಲ್ಮಷ ಭಕ್ತಿ ಕಂಡು ಭಗವಂತನ ಎದೆ ತುಂಬಿ ಬಂತು. ಲೋಕಕಲ್ಯಾಣಕ್ಕಾಗಿಯೇ ಹಾತೊರೆಯುವ ಪೂರ್ಣಭಕ್ತಿ ಬ್ರಹ್ಮನಲ್ಲಿ ಬಿಟ್ಟು ಬೇರಾರಲ್ಲಿ ಸಿಗಲು ಸಾಧ್ಯ? ಅದನ್ನು ನೆನೆದು ಭಗವಂತನ ಮನ ಕರಗಿತು. ಕಣ್ಣಲ್ಲಿ ನೀರು ಹರಿಯಿತು. ಆ ಆನಂದಾಶ್ರುವನ್ನು ಶತಾನಂದ ಎನಿಸಿದ ಬ್ರಹ್ಮ ಭಾರೀ ಗೌರವದಿಂದ ಕಮಂಡಲುವಿನಲ್ಲಿ ಶೇಖರಿಸಿದ. ಮನಃಪೂರ್ವಕವಾಗಿ ಶೇಖರಿಸಿದ್ದು ಮಾನಸ ಸರೋವರಕ್ಕೆ ಮೂಲವಾಯಿತು. ಒಮ್ಮೆ ಇಕ್ಷ್ವಾಕು, ಇರಳು-ಹಗಲೂ ವಸಿಷ್ಠರಿಗೆ ದುಂಬಾಲು ಬಿದ್ದ-ನದಿ ಬರುವಂತೆ ಮಾಡಿ ಎಂದು ಗೋಗರೆದ. ವಸಿಷ್ಠರಿಗೆ ಮನಸ್ಸು ಒಪ್ಪಿ ಬ್ರಹ್ಮನ ಬಳಿ ಬಿನ್ನೈಸಿದರು. ಬ್ರಹ್ಮ ಅಯೋಧ್ಯೆಯ ಬಳಿ ಮಾನಸ ಸರೋವರದ ನೀರು ಸರಿಯಲಿ ಎಂದು ಸಂಕಲ್ಪಗೈದ. ಅಯೋಧ್ಯೆಯ ಬಳಿ ಸರಿದ ಆ ಸರಸ್ಸು ಸರಯೂ ಎನಿಸಿತು. 


ಹೀಗಾಗಿ ಬ್ರಹ್ಮನ ನದಿಯನ್ನು ತನ್ನತ್ತ ಸರಿಸಿಕೊಂಡ ಮಹಿಮೆ. ಸರಯೂ ಇದೆ. ಆ ನದಿ ಜ್ಯೇಷ್ಠ ಶುಕ್ಲ ಹುಣ್ಣಿಮೆಯಂದು ಭೂಮಿಗೆ ಬಂದಿತು. ಇಲ್ಲಿ ಮಿಂದರೆ ಸಾವಿರ ಮನ್ವಂತರ ಕಾಶಿಯಲ್ಲಿ ನೆಲೆಸಿದ ಫಲ, 60,000 ವರ್ಷಗಳಷ್ಟು ಗಂಗಾ ನದಿಯಲ್ಲಿ ಮಿಂದ ಫಲ ಕೇವಲ ಸರಯುವಿನಲ್ಲಿ ಸುಮ್ಮನೆ ಮುಳುಗಿದರೆ ಆಯಿತು. ವಿಧಿಬದ್ಧವಾಗಿ ಹರಿಸ್ಮರಣೆ ಪೂರ್ವಕ ಸ್ನಾನಮಾಡಿ. ಅಖಿಲಾಂಡಕೋಟಿ ಬ್ರಹ್ಮಾಂಡನಾಯಕನಾದ ಭಗವಂತನೇ ಇಲ್ಲಿ ಮುಳುಗಿರುವಾಗ ಈ ಫಲ ಉತ್ಪ್ರೇಕ್ಷೆ ಎಂದರೆ ಉದ್ಧಟತನ ಆದೀತು! ಅಷ್ಟೇ ಏಕೆ? ಭಗವಂತ ವೈಕುಂಠಕ್ಕೆ ತೆರಳುವಾಗ ಈ ನದಿಯ ಮಾರ್ಗದಿಂದಲೇ ಅವತಾರ ಸಮಾಪ್ತಿಗೊಳಿಸಿರುವಾಗ ಇದರ ಮಹಿಮೆ ಸಾಧಾರಣವೇ? 


ಶ್ರೀವಾದಿರಾಜರಿಂದ ಅಯೋಧ್ಯಾ ಸ್ತುತಿ 


ಅಯೋಧ್ಯಾ ರಾಮನಗರೀ ಭಾತಿ ಸಾಧ್ವೀ ವಧೂರಿವ |ವನಂ ಗತಸ್ಯಾತಿ ತಸ್ಯ ಪಾದುಕೇ ಯಾ$ಕರೋತ್ ಪತಿಂ ||


ಸೋದೆಯ ವಾದಿರಾಜರು ಅಯೋಧ್ಯೆಯ ವೈಭವವನ್ನು ಬಣ್ಣಿಸುತ್ತಾ ಅಯೋಧ್ಯೆಯು ಒಂದು ಪತಿವ್ರತ ಸ್ತ್ರೀಯಂತೆ ಎಂದಿದ್ದಾರೆ. ಪತಿ ಪರಸ್ಥಳಕ್ಕೆ ಹೋದಾಗ ಅವನನ್ನು ಎದೆಯಲ್ಲಿ ತುಂಬಿಕೊಂಡು ಸುಖವನ್ನೆಲ್ಲಾ ಬದಿಗೆ ಸರಿಸಿ ಅವನ ಯೋಚನೆಯಲ್ಲೇ ಕಾಲ ಕಳೆಯುವ ಕುಲವಧುವಿನಂತೆ ಈ ನಗರವು ರಾಮ ಕಾಡಿಗೆ ಹೋದಾಗ ಅವನ ಪಾದವನ್ನೇ ಇಟ್ಟಿಕೊಂಡು 14 ವರ್ಷ ವೈಭವವನ್ನೇಲ್ಲಾ ಬದಿಗಿಟ್ಟು ಭಗವಂತನ ಧ್ಯಾನದಲ್ಲೇ ಕಾಲ ತಳ್ಳಲಿಲ್ಲವೇ. ಪತಿವ್ರತೆಯೆನ್ನಲು ಇದೇ ಪುರಾವೆ.


ದರ್ಶನೀಯ ಸ್ಥಳಗಳು 

ಹನುಮಾನ್ ದುಡ್ಡ ಎಂಬ ಎತ್ತರದ ಸ್ಥಳದಲ್ಲಿರುವ ಮಾರುತಿ ಮಂದಿರ 2. ಬಾಬರ ಮಸೀದಿಯ ಬಳಿಯಲ್ಲೆ ಇರುವ ರಾಮನ ಜನ್ಮಸ್ಥಳ. 3. ಸರಯೂ ನದಿರೀತದಲ್ಲಿ ಕುಶನು ಸ್ಥಾಪಿಸಿದ ಲಿಂಗವಿದೆ. 4. ಅಯೋಧ್ಯೆಯಿಂದ 11 ಮೈಲು ದೂರದಲ್ಲಿ ನಂದಿಗ್ರಾಮವಿದೆ. ರಾಮನು ವನವಾಸದಲ್ಲಿದ್ದಾಗ ಭರತನು ರಾಮನ ಧ್ಯಾನ ಮಾಡುತ್ತಾ ಈ ಸ್ಥಳದಲ್ಲಿ ಅವನ ಪಾದುಕೆಗಳನ್ನಿಟ್ಟು ರಾಜ್ಯಭಾರ ಮಾಡುತ್ತಿದ್ದನು. ಇದನ್ನು ಭರತ ಮಂದಿರವೆನ್ನುತ್ತಾರೆ. 5. ಅದರ ಬಳಿಯಲ್ಲೇ ಭರತನು ಪ್ರತಿದಿನವೂ ಸ್ನಾನಗೈಯುತ್ತಿದ್ದ ಭರತಕುಂಡವೂ ಇದೆ. ಅಲ್ಲಿ ಮಿಂದು ರಾಮಧ್ಯಾನ ಮಾಡಿ, ವಿಷ್ಣುಪಾದಗಳಿದ್ದ ಆ ಸ್ಥಳದಲ್ಲಿ ವಿಷ್ಣುಸಹಸ್ರನಾಮ ಹೇಳಿ ನಿಮ್ಮ ಜೀವನ ಸಾರ್ಥಕಪಡಿಸಿಕೊಳ್ಳಬಹುದು. 6. ರಾಮ್‍ಘಾಟ್‍ನಿಂದ 8 ಮೈಲು ದೂರದಲ್ಲಿ ದಶರಥನ ದೇಹವನ್ನು ದಹನ ಮಾಡಿದ ಸ್ಥಳವಿದೆ. ಇಲ್ಲಿ ಸ್ನಾನ ಮಾಡಿ ಫೈಜಾಬಾದ್ ಮೂಲಕ ಪ್ರಯಾಗಕ್ಕೆ ಪ್ರಯಾಣ.


ಶ್ರೀ ವಿಶ್ವೇಶತೀರ್ಥರು- ಶ್ರೀರಾಮ ಜನ್ಮಭೂಮಿಯ ನಂಟು 

ಭಾರತ ಜಗತ್ತಿನಲ್ಲಿ ಸುಸಂಸ್ಕøತಿ ಪರಂಪರೆಯನ್ನು ಹೊಂದಿರುವ ದೇಶ. ಇದನ್ನು ಕರ್ಮಭೂಮಿ ಎಂದು ಕರೆಯಲಾಗಿದೆ. ಭಗವಂತ ಅವತಾರಗಳನೆತ್ತಿ ಧರ್ಮಸಂಸ್ಥಾಪನೆ ಮಾಡಿದ ಭೂಮಿ. ಈ ಧರೆಯಲ್ಲಿ ಅನೇಕ ದಾರ್ಶನಿಕರು, ಸಾಧು-ಸಂತರು ಜನ್ಮತಾಳಿ ಪರಂಪರೆಯನ್ನು ಮುಂದುವರೆಸಿದರು. ಇಂದಿಗೂ ಸಾಗಿ ಬರುತ್ತಿರುವುದು ದೇಶದ ಸುದೈವ. ಹೀಗೆ ಪರಂಪರೆಯಲ್ಲಿ ಈ ಶತಮಾನ ಕಂಡ ಅಪರೂಪದ ಸಾಧಕರು-ಚಿಂತಕರು ನಮ್ಮ ಶ್ರೀವಿಶ್ವೇಶತೀರ್ಥ ಶ್ರೀಪಾದಂಗಳವರು. ಇವರು ಉಡುಪಿಯ ಅಷ್ಟಮಠಗಳಲ್ಲಿ ಒಂದಾದ ಪೇಜಾವರ ಮಠದಲ್ಲಿ ವಿರಾಜಮಾನರಾದ 33ನೇಯ ಯತಿವರೇಣ್ಯರು.


ಶ್ರೀ ವಿಶ್ವೇಶತೀರ್ಥರು ವಿಶ್ವಕಂಡ ವಿಶಿಷ್ಟ ವ್ಯಕ್ತಿತ್ವದ ಸಾಧಕರು. ತಮ್ಮ ಜೀವನದಲ್ಲಿ ಸಾಧಿಸಿದ ಕಾರ್ಯಗಳು ಅಗಣಿತ. ಆಧ್ಯಾತ್ಮಿಕ ಹಾಗೂ ಸಾಮಾಜಿಕವಾಗಿ ಮಾಡಿದ ಕಾರ್ಯಗಳು ಅಭೂತಪೂರ್ವ. ಅತಿ ಚಿಕ್ಕವಯಸ್ಸಿನಲ್ಲಿ ಉನ್ನತವಾದ ಸನ್ಯಾಸವನ್ನು ಸ್ವೀಕರಿಸಿ ಗುರುಗಳಲ್ಲಿ ವಿದ್ಯಾಭ್ಯಾಸಮಾಡಿ ವಿದ್ವಾಂಸರಾದರು. 1953ರಲ್ಲಿ ಅಖಿಲಭಾರತ ಮಾಧ್ವ ಮಹಾಮಂಡಲಿಯನ್ನು ಸ್ಥಾಪಿಸಿ ದೇಶಾದ್ಯಾಂತ ನೂರಾರು ಶಾಖೆಗಳ ಮೂಲಕ ಧಾರ್ಮಿಕ ಸಾಮಾಜಿಕ ಕಾರ್ಯಗಳು ನಿರಂತರ ನಡೆಯುವಂತಾಗಿಸಿದರು. 1956ರಲ್ಲಿ ಬೆಂಗಳೂರಿನಲ್ಲಿ ಪೂರ್ಣಪ್ರಜ್ಞವಿದ್ಯಾಪೀಠವನ್ನು ಸ್ಥಾಪಿಸಿ ಈಗಾಗಲೇ ಐನೂರಕ್ಕೂ ಹೆಚ್ಚಿನ ವಿದ್ವಾಂಸರು, ಪುರೋಹಿತರನ್ನು ಸಮಾಜಕ್ಕೆ ನೀಡಿದರು. 1956ರಲ್ಲಿ ಸ್ಥಾಪಿತಗೊಂಡ ವಿಶ್ವಹಿಂದೂ ಪರಿಷತ್‍ನ ಪ್ರಾರಂಭದಿಂದಲೂ ಸ್ಥಾಪಕ ಸದಸ್ಯರಾಗಿ ಮಾಡಿದ ಕಾರ್ಯಗಳನ್ನು ಯಾರೂ ಮರೆಯುವಂತಿಲ್ಲ. ಅದರ ಎಲ್ಲ ಸಮ್ಮೇಳನಗಳಲ್ಲೂ ಸಕ್ರಿಯವಾಗಿ ಭಾಗವಹಿಸಿ ಮಾರ್ಗದರ್ಶಕರಾದರು. ಇದರಂತೆ ರಾ.ಸ್ವ.ಸಂಘದ ಸಂಬಂಧವಿದ್ದು ಹಿಂದುಗಳ ಪರವಾಗಿ ಅನೇಕಸಲ ಹೋರಾಡಿ ಚಳುವಳಿಗಳಲ್ಲಿ ಭಾಗವಹಿಸಿದ್ದು ಅವಿಸ್ಮರಣೀಯ. ಎಲ್ಲಕ್ಕೂ ಮಿಗಿಲಾಗಿ ಉಡುಪಿಯ ಶ್ರೀಕೃಷ್ಣಮಠದಲ್ಲಿ ಐದು ಪರ್ಯಾಯಗಳನ್ನು ಪೂರೈಸಿದ್ದು ದಾಖಲೆಯಾಯಿತು. ಅಸಂದರ್ಭದಲ್ಲಿ ಕೈಗೊಂಡ ಆಧ್ಯಾತ್ಮಿಕ, ಧಾರ್ಮಿಕ, ಸಾಂಸ್ಕøತಿಕ, ಶೈಕ್ಷಣಿಕ ಕ್ಷೇತ್ರಗಳಲ್ಲಿ ಮಾಡಿದ ಶ್ರೀಗಳವರ ಕೊಡುಗೆ ಅಪಾರ.


ಶ್ರೀವಿಶ್ವೇಶತೀರ್ಥರಿಗು ವಿಶ್ವಹಿಂದೂ ಪರಿಷತ್‍ಗಳಿಗೆ ಇದ್ದದ್ದು ಅವಿನಾಭಾವ ಸಂಬಂಧ. ಹಿಂದುತ್ವದ ದೊಡ್ಡದನಿಯಾಗಿ ವಿರೋಧ-ವಿವಾದಗಳು ಬಂದಾಗ ಸ್ಪಂದಿಸಿ ಹೋರಾಡಿದರು. ವಿಶೇಷವಾಗಿ ಹಿಂದುತ್ವ ವಿಚಾರಗಳಲ್ಲಿ ವಿವಾದಗಳಿಗೆ ಇವರು ಬಳಿ ಮುಕ್ತ ಚರ್ಚೆಗೆ ಅವಕಾಶವಿತ್ತು. ಅಯೋಧ್ಯೆಯ ಶ್ರೀರಾಮಜನ್ಮಭೂಮಿ ವಿಷಯವಾಗಿ ಅನೇಕಸಲ ಸಂಘಟನೆಗಳಲ್ಲಿ ಭಾಗವಹಿಸಿದರು. ಹೋರಾಟದ ಸಂದರ್ಭಗಳಲ್ಲೂ ಮುಂದಾಳುತ್ವವಹಿಸಿ ಭಾಗಿಯಾದರು. 1990ರಲ್ಲಿ ಜನ್ಮಭೂಮಿ ವಿಮುಕ್ತಿಗಾಗಿ ಹೋರಾಟ ನಡೆದಾಗ ಇತರ ಸ್ವಾಮಿಗಳ, ಗಣ್ಯರ ಸಮೇತವಾಗಿ ಕರಸೇವೆಯಲ್ಲಿ ಪಾಲ್ಗೊಂಡರು. 4.11.1990ರಲ್ಲಿ ಕರಸೇವೆಗೆಂದು ತೆರಳುವಾಗ ಲಕ್ನೋಬಳಿ ಶ್ರೀಗಳವರನ್ನು ಪೋಲಿಸರು ಬಂಧಿಸಿದರು. ಬಿಡುಗಡೆ ಹೊಂದಿ ಮುಂದೆ ಸಾಗಲು ಮತ್ತೆ ಫರೂಕಾಬಾದ್‍ನಲ್ಲಿ ಬಂಧಿಸಿ ಸೆರೆಮನೆಗೆ ಕರೆದೊಯ್ದರು. ಪೋಲಿಸರ ಅನುಮತಿ ಪಡೆದು ಸೆರೆಮನೆಯಲ್ಲಿಯೇ ದೇವರ ಮಂಟಪವನ್ನು ಹಾಕಿ ದೇವಮಂದಿರವನ್ನಾಗಿಸಿ ಯಥಾರೀತಿ ಪೂಜಾದಿಗಳನ್ನು ನೆರವೇರಿಸಿದರು. ನೆರೆದ ಪೋಲಿಸರು ಊರಿನ ಜನರು ದೇವರ ದರುಶನ ಪಡೆದು ಪುನೀತರಾದರು. 

1992ರಲ್ಲಿ ಅಯೋಧ್ಯೆ ಪರಿಷತ್ ನೇತೃತ್ವದಲ್ಲಿ ಸಂಘ-ಪರಿವಾರದಿಂದ ಕರಸೇವೆ ನಿರ್ಧರಿಸಲಾಯಿತು. ಶ್ರೀಗಳವರು ಇತರ ಶ್ರೀಗಳು ಹಾಗೂ ವಿದ್ಯಾರ್ಥಿಗಳೊಂದಿಗೆ ಹೊರಟರು. 5.12.1992ರಂದು ಶ್ರೀಗಳವರ ಅಧ್ಯಕ್ಷತೆಯಲ್ಲಿ ಧರ್ಮಸಂಸತ್ ಸಭೆ ನಡೆಯಿತು. ಅಯೋಧ್ಯೆಯಲ್ಲಿ ಸುಮಾರು ಐದುಲಕ್ಷ ಕರಸೇವಕರು ಸೇರಿದ್ದರು. ತಿಳಿದಂತೆ 6ನೇ ತಾರೀಕು ಕರಸೇವಕರಿಂದ ಬಾಬರಿಮಸೀದಿ ಶ್ರೀಗಳವರು ನೋಡುತ್ತಿದ್ದಂತೆ ಧ್ವಂಸಗೊಂಡಿತು. ಅದೇ ಸಂದರ್ಭದಲ್ಲಿ ಕರಸೇವಕ ಗುಂಪೊಂದು ಕಬ್ಬಿಣದ ಪೆಟ್ಟಿಗೆಯಲ್ಲಿ ಸ್ಥಾಪಿಸಿದ ಶ್ರೀರಾಮ, ಸೀತಾ, ಲಕ್ಷ್ಮಣ ಹಾಗೂ ಹನುಮಂತನ ಪ್ರತಿಮೆಗಳನ್ನು ಶ್ರೀಗಳವರಿಗೆ ತಂದು ಒಪ್ಪಿಸಿದರು, ಅಂದಿನ ಕೇಂದ್ರ ಸರಕಾರ ಅಂದು ನಿಷೇಧ ಘೊಷಿಸಿ ಸೈನ್ಯದ ಬಿಗಿಭದ್ರತೆ ಮಾಡಿತು. ಲಕ್ಷಾಂತರ ಕರಸೇವಕರು ಹಿಂತಿರುಗಿದರೂ. ಶ್ರೀಗಳವರು ಅಲ್ಲೇ ಕುಳಿತರು. ದಿನಾಂಕ. 7ರಂದು ಪ್ರಯತ್ನಿಸಿದರೂ ಆ ಸ್ಥಳಕ್ಕೆ ಹೋಗಲಾಗಲಿಲ್ಲ. ರಸ್ತೆಯಲ್ಲೇ ಶಿಷ್ಯರೊಂದಿಗೆ ಧರಣಿಗೆ ಕೂತರು. ಮುಖ್ಯ ಸೈನ್ಯಾಧಿಕಾರಿ 8ಮೇ ತಾ. ಶ್ರೀಗಳವರೊಂದಿಗೆ ಒಬ್ಬ ಶಿಷ್ಯನನ್ನು ಹೋಗಲು ಅನುಮತಿ ನೀಡಿದರು. ಅಂದು ಬೆಳಿಗ್ಗೆ ಮಿಲಿಟರಿ ಹಾಗೂ ಪೋಲಿಸರ ನಿರ್ಭಂಧದಲ್ಲಿ ಪ್ರತಿಮೆಗಳಿದ್ದ ಆ ಪೆಟ್ಟಿಗೆಯೊಂದಿಗೆ ಹೋಗಿ ಅದೇ ಸ್ಥಳದಲ್ಲಿ ಶ್ರೀರಾಮಲಲ್ಲಾ ಮೂರ್ತಿಗಳ ಪ್ರತಿಷ್ಟೆ ಮಾಡಿದರು. ಇದು ನಿಜಕ್ಕೂ ದೇಶವು ಎಂದೂ ಮರೆಯಲಾಗದ ವಿಶೇಷ ರೋಮಾಂಚನಕಾರಿಯಾದ ಘಟನೆ. ಮುಂದೆ ಅದೇ ಸ್ಥಳದಲ್ಲಿ ಶ್ರೀರಾಮಮಂದಿರರ ನಿರ್ಮಾಣಕ್ಕೆ ನಾಂದಿಯಾಯಿತು.


ಶ್ರೀಪೇಜಾವರ ಶ್ರೀಪಾದಂಗಳವರ ಜೀವಿತಕಾಲದ ಕಾರ್ಯ-ಆಚರಣೆಗಳ ವಿವರಣೆ ಯಾರಿಂದಲೂ ಕೊಡಲಾಗದ್ದು. ಬಹುಮುಖವಾಗಿ, ಬಹುವಿಧದಲ್ಲಿ ಅವರು ಮಾಡಿರುವ ಕೈಂಕರ್ಯಗಳು ಸಮಾಜದ ನಾನಾ ವರ್ಗದವರಿಗೆ ಪ್ರೇರಣ-ಪ್ರಯೋಜನ-ಪ್ರಚೋದನೆ- ಪ್ರಾಪ್ತಿದಾಯಕವಾಗಿದೆ. ಇಂತಹ ಮಹಾತ್ಮರನ್ನು ಆದರಿಸುವ-ಅನುಕರಿಸುವುದು ನಮ್ಮದಾಗಬೇಕು.


- ಡಾ. ಎ.ಬಿ. ಶ್ಯಾಮಾಚಾರ್ಯ

98867 64668


ಲೇಖಕರ ಸಂಕ್ಷಿಪ್ತ ಪರಿಚಯ:

ಡಾ.ಎ.ಬಿ.ಶ್ಯಾಮಾಚಾರ್ಯರು ಮೂಲತಃ ಸಂತೆಬಿದನೂರಿನವರು. ವೃತ್ತಿಯಿಂದ ಇಂಜಿನಿಯರ್ ಆಗಿ  ನಿವೃತ್ತರಾಗಿದ್ದಾರೆ.  ಪ್ರವೃತ್ತಿಯಿಂದ ಆಧ್ಯಾತ್ಮ ಚಿಂತಕರು, ಹರಿದಾಸ ಸಾಹಿತ್ಯ ಪ್ರಸರಣದಲ್ಲಿ ಕಳೆದ 24 ವರ್ಷಗಳಿಂದ ಹರಿದಾಸ ವಾಹಿನಿ ಪತ್ರಿಕೆಯ ಸಂಪಾದಕರಾಗಿ, ದ್ವೈತ ವೇದಾಂತ ಪ್ರತಿಷ್ಠಾನ ಕಾರ್ಯದರ್ಶಿಯಾಗಿ ಸಂಸ್ಕೃತದಲ್ಲಿ ಮಧ್ವಸಿದ್ದಾಂತ ಕುರಿತು 10 ಹಾಗೂ ಕನ್ನಡದಲ್ಲಿ 40 ಗ್ರಂಥಗಳು ಪ್ರಕಟವಾಗಿದೆ, ಪೂಜ್ಯ ವಿಶ್ವೇಶ ತೀರ್ಥರ ಕುರಿತು ವಿಶ್ವೇಶ ತರಂಗ, ದಾಸ ಸಾಹಿತ್ಯದಲ್ಲಿನ ಜೀವನ ಮೌಲ್ಯಗಳ ಜೀವನ ಸೂತ್ರ ಪ್ರಮುಖವಾದವು, ಹರಿದಾಸ ಸಂಪದ ನೀಡುವ ಪ್ರಸನ್ನ ವೇಂಕಟ ಪುರಸ್ಕಾರವೇ ಮೋದಲಾದ ಗೌರವಕ್ಕೆ ಭಾಜನರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter   

Post a Comment

0 Comments
Post a Comment (0)
Best Summer Deals Marvellous May Offers at Mandovi Motors
Best Summer Deals Marvellous May Offers at Mandovi Motors
To Top