ಹರೇರಾಮ ಶ್ರೀಗುರುಭ್ಯೋನಮಃ
ಸಮಕಾಲೀನ ಜಾಗತಿಕ ಶಿಕ್ಷಣ ವ್ಯವಸ್ಥೆಯಲ್ಲಿ ಪ್ರಮುಖವಾದ ಪರೀಕ್ಷೆಯ ನಿರೀಕ್ಷೆಯಲ್ಲಿ ನಾವೆಲ್ಲ ಇದ್ದೇವೆ. ಅಂತಹ ಪರೀಕ್ಷೆಯನ್ನು ಎದುರಿಸುವ ಬಗೆ ಹೇಗೆ? ಪರೀಕ್ಷೆಯಲ್ಲಿ ಉತ್ತರಿಸುವುದು ಹೇಗೆ? ಎಂಬುದನ್ನು ವಿವರಿಸುವ ಪ್ರಯತ್ನವನ್ನು ಇಲ್ಲಿ ಮಾಡುತ್ತಿದ್ದೇನೆ.
ಪರೀಕ್ಷೆಯ ದಿನಗಳ ಸಂದರ್ಭದಲ್ಲಿ
• ಪರೀಕ್ಷೆಗಿಂತ ಮೊದಲಿನ ಅವಧಿ
• ಪರೀಕ್ಷೆಯು ನಡೆಯುತ್ತಿರುವ ಅವಧಿ-
ಎಂಬ ಎರಡು ಹಂತಗಳಿವೆ.
ಪರೀಕ್ಷೆಗಿಂತ ಮೊದಲ ಅವಧಿಯಲ್ಲಿ-
• ಹಿಂದಿನ ಇರುಳು ಯಾವುದೇ ಆತಂಕವಿಲ್ಲದೆ ಚೆನ್ನಾಗಿ ನಿದ್ರಿಸುವುದು
• ಮುಂಜಾನೆಯೆದ್ದು ಲಘು ಶಾರೀರಕ ವ್ಯಾಯಾಮ,
ಯೋಗಾಭ್ಯಾಸಗಳನ್ನು ಮಾಡುವುದಿದ್ದರೆ ಅವನ್ನು ಬಿಟ್ಟುಬಿಡದೇ ಮಾಡುವುದು
• ದೈನಂದಿನ ದಿನಚರ್ಯೆಗಳನ್ನು ಬಿಟ್ಟುಬಿಡದೆ ಆಚರಿಸುವುದು
• ಸ್ನಾನ-ಪಾನ-ಧ್ಯಾನಾದಿಗಳನ್ನು ಗಡಿಬಿಡಿಯಿಲ್ಲದೆ ಸಾವಕಾಶವಾಗಿ (In time) ಮಾಡುವುದು
• ದೇವರ, ಗುರುಹಿರಿಯರ ಆಶೀರ್ವಾದಗಳನ್ನು ಪಡೆಯುವುದು
• ಸಹಪಾಠಿಗಳಿಗೆ ಯಾವುದೇ ಮತ್ಸರ, ಸ್ಪರ್ಧಾ ಮನೋಭಾವದ ಅಳುಕು ಹುಳುಕುಗಳನ್ನು ಮನದಲ್ಲಿಡದೆ ತನ್ನಂತೆ ಅವನೂ/ಳೂ ಪರೀಕ್ಷೆಯನ್ನು ಯಶಸ್ವಿಯಾಗಿ ಎದುರಿಸಿ ತನಗೂ ಸಂಸ್ಥೆಗೂ ಕೀರ್ತಿಯನ್ನು ತರಲೆಂದು ಎದೆಯಾಳದಿಂದ ಶುಭ ಹಾರೈಸುವುದು (ಇದು ಬಹಳ ಮುಖ್ಯ. ಯಾಕೆಂದರೆ ಸ್ವಹಿತಾಸಕ್ತಿಯಿಂದ ಇನ್ನೊಬ್ಬರಿಗೆ ಶಭ ಕೋರದಿದ್ದಾಗ ನಮ್ಮಮನಸ್ಸೂ ಸ್ವಲ್ಪ ಮಟ್ಟಿಗೆ ಮುದುಡುತ್ತದೆ. ಮುದುಡಿದ ಮನವು ಮುಗಿಲು ಮುಸುಕಿದ ಆಗಸದಂತಿರುತ್ತದೆ, ಹೂವಿನ ಮೊಗ್ಗಿನಂತಿರುತ್ತದೆ. ಅಲ್ಲಿ ಸ್ಪಷ್ಟವಾಗಿ ತಾರೆಗಳನ್ನು ಕಾಣಲಾರೆವು, ಪರಿಮಳವನ್ನು ಅನುಭವಿಸಲಾರೆವು. ಇನ್ನೊಬ್ಬರಿಗೆ ಶುಭಕೋರುವಾಗ ನಮ್ಮ ಮನವೂ ಅರಳಿರುತ್ತದೆ ಎಂಬುದನ್ನು ಮನಗಾಣಬೇಕು. ಅರಳಿದ ಮನದಲ್ಲಿ ಆತಂಕವಿರದು.)
• ಶುಭ್ರವಾದ ಉಡುಗೆಯನ್ನು ಧರಿಸುವುದು
• ಕುಡಿಯುವ ನೀರಿನ ಬಾಟಲಿಯನ್ನು ಜತೆಯಲ್ಲಿರಿಸಿಕೊಳ್ಳುವುದು
• ಸಾಮಾನ್ಯವಾಗಿ ಸಮವಸ್ತ್ರ, ಗುರುತು ಚೀಟಿಗಳನ್ನು ಧರಿಸಿ ಹೋಗುವುದು ಅಪೇಕ್ಷಣೀಯ.
• ಮರೆಯದೇ ಪ್ರವೇಶ ಪತ್ರ, ಚೆನ್ನಾಗಿ ಬರೆಯುತ್ತಿರುವ ಕನಿಷ್ಠ ಮೂರು ಪೆನ್ನುಗಳನ್ನು ಹೊಂದಿರುವುದು.
ಪೆನ್ಸಿಲ್, ಜಿಯೊಮೆಟ್ರಿ ಬಾಕ್ಸ್ (ಅಗತ್ಯವಿದ್ದ ದಿನ ಮಾತ್ರ) ತೆಗೆದುಕೊಂಡು ಹೋಗುವುದು
• ಪರೀಕ್ಷಾ ಕೇಂದ್ರಕ್ಕೆ ಪರೀಕ್ಷೆಯ ಆರಂಭಕ್ಕೆ ಕನಿಷ್ಠ ಅರ್ಧ ಗಂಟೆಯ ಮೊದಲು ತಲುಪುವಂತೆ ಹೋಗುವುದು
• ತನ್ನ ನೋಂದಣಿ ಸಂಖ್ಯೆಯು ಯಾವ ವಿಭಾಗದ ಯಾವ ಕೊಠಡಿಯಲ್ಲಿ ಇದೆಯೆಂಬುದನ್ನು ತಿಳಿದು ಖಚಿತಪಡಿಸಿಕೊಂಡು ಅಲ್ಲೇ ಸಮೀಪವಿದ್ದು ನಿರಾತಂಕವಾಗಿ ಪರೀಕ್ಷೆಯ ಆರಂಭಕ್ಕೆ ಕಾಯುವುದು...
ಇವು ಪೂರ್ವ ಸಿದ್ಧತೆಗಳಾದರೆ ಮುಂದಿನದ್ದು ಪರೀಕ್ಷೆಯ ಕೊಠಡಿಯಲ್ಲಿನ ಕಾರ್ಯಗಳಾಗಿವೆ. ಅವನ್ನು ನಾಳೆ ಗಮನಿಸುವ ಆಗದೇ?
ಹರೇರಾಮ
- ವಿಶ್ವ ಉಂಡೆಮನೆ
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ