|ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946
ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಇರುಳು ಕತ್ತಲೆಯ ಗವಿ ಮನೆ ದೂರ ಕನಿಕರಿಸಿ ಕೈ ಹಿಡಿದು ನಡೆಸೆನ್ನನು (ಗದ್ಯ ಭಾವ ಗೀತೆ)

ಇರುಳು ಕತ್ತಲೆಯ ಗವಿ ಮನೆ ದೂರ ಕನಿಕರಿಸಿ ಕೈ ಹಿಡಿದು ನಡೆಸೆನ್ನನು (ಗದ್ಯ ಭಾವ ಗೀತೆ)




ದು ತುಮಕೂರು ಜಿಲ್ಲೆಯ ತುರುವೆಕೆರೆ ತಾಲೂಕಿನ ಸಂಪಿಗೆ ಎನ್ನುವ ಹಳ್ಳಿ. ತೀರ ಹಳ್ಳಿಯಲ್ಲ, ಸಣ್ಣ ಊರೆ. ಅಲ್ಲಿ ಶತಮಾನದ ಹಿಂದಿನ ಸಂಪಿಗೆ ಶ್ರೀ ಶ್ರೀನಿವಾಸ ದೇವಾಲಯ ಎಂಬ ದೇವಾಲಯ ಇದೆ.


ಆ ದೇವಸ್ಥಾನದಲ್ಲಿ ಪ್ರತೀವರ್ಷವೂ ಒಂದು ವಿಶಿಷ್ಟ ಕಾರ್ಯಕ್ರಮ ನೆಡೆಯುತ್ತೆ. ಆ ಕಾರ್ಯಕ್ರಮದ ಹೆಸರೂ ಒಂದು ವಿಶಿಷ್ಟ! ಅದು ಪವಿತ್ರೋತ್ಸವ.


ಆ ಪವಿತ್ರೋತ್ಸವದಲ್ಲಿ, ಡಿವಿಜಿಯವರ ಮಂಕುತಿಮ್ಮನ ಕಗ್ಗದ ಆಯ್ದ ಮುಕ್ತಕಗಳನ್ನು ಬಳಸಿ ಆಶೆಗಳ ಕೆಣಕದಿರು ಪಾಶಗಳ ಬಿಗಿಯದಿರು ಶೀರ್ಷಿಕೆಯಲ್ಲಿ ಒಂದು ಅವಧಿಯ ಸುಮಾರು ಒಂದೂವರೆ ಗಂಟೆಯ ಕಾರ್ಯಕ್ರಮಕ್ಕೆ ನನಗೊಂದು ಅವಕಾಶ.  


ಕಾರ್ಯಕ್ರಮ 03.11.2023 ಸಂಜೆ ಆರು ಗಂಟೆಗೆ. ಕಾರ್ಯಕ್ರಮಕ್ಕೆ ಅವಕಾಶ ಕೊಟ್ಟಿದ್ದು ಹಿರಿಯರಾದ ಸಂಪಿಗೇಹಳ್ಳಿ ಶ್ರೀಧರ್ ಮತ್ತು ಸಂಪಿಗೆ ಹಳ್ಳಿ ಶ್ರೀನಿವಾಸ್ ಸಹೋದರರು.


ಹೊಸ ಜಾಗ, ಹೊಸ ಜನ, ಹೊಸ ವಾತಾವರಣ. ಒಂದಿಷ್ಟು ಟಿಪ್ಪಣಿಯೊಂದಿಗೆ, ಒಂದಿಷ್ಟು ಕಗ್ಗ ಮುಕ್ತಕಗಳೊಂದಿಗೆ ಸಂಪಿಗೆ ಹಳ್ಳಿ ತಲುಪಿದ್ದಾಯ್ತು.  


ಅಲ್ಲಿ ತಲುಪಿದ ಮೇಲೆ ಗೊತ್ತಾಗಿದ್ದು... ಸುಮಾರು ಎರಡು ತಿಂಗಳ ಹಿಂದೆ ಶ್ರೀಯುತ ನಟೇಶ್ ಶಿವಮೊಗ್ಗರವರು ಅದೇ ಸಂಪಿಗೆ ಶ್ರೀನಿವಾಸ ದೇವಸ್ಥಾನದಲ್ಲಿ ಕಗ್ಗ ಉಪನ್ಯಾಸ ಮಾಡಿದ್ದರು ಅಂತ.  


ಆಗ ಶುರುವಾಗಿದ್ದು ಹೃದಯ ಬಡಿತದ ಏರು ಪೇರು!. ನನಗೆ ಒಂದು ಸ್ಪಷ್ಟತೆ ಇದೆ, 'ಶ್ರೀಯುತ ನಟೇಶ್‌ರವರ ಉಪನ್ಯಾಸದ 50% ನಷ್ಟು ಸೊಗಸಾಗಿ ನಾನು ಮಾಡಬೇಕಂದ್ರೂ, ಕನಿಷ್ಟ ಇನ್ನು ಮೂರು ಜನ್ಮ ಎತ್ತಿ ಅಭ್ಯಾಸ ಮಾಡಿದರೂ ಆಗಲಿಕ್ಕಿಲ್ಲ.' ಆಗ ಆಯೋಜಕರು ಒಂದು ಸಮಾಧಾನ ಹೇಳಿದರು "ಅವತ್ತಿನ ಅವರ ಪ್ರೇಕ್ಷಕರು ಬೇರೆ, ಇವತ್ತಿನ ಪ್ರೇಕ್ಷಕರು ಬೇರೆ" ಅಂತ.  


ಸ್ವಲ್ಪ ಧೈರ್ಯ ಬಂತು.  


**


ಕಾರ್ಯಕ್ರಮದ ಪ್ರಾರಂಭವಾಗುವ ಮುನ್ನ ಆಯೋಜಕರನ್ನು ಕೇಳಿದೆ ಪವಿತ್ರೋತ್ಸವದ ವಿಶೇಷತೆ ಏನು ಅಂತ. ಅವರು ವಿವರಿಸಿದ್ದು : "ಶ್ರೀನಿವಾಸನ ಸನ್ನಿಧಿಯಲ್ಲಿ ಕಳೆದೊಂದು ವರ್ಷದ ನಿತ್ಯ ನೆಡೆಯುವ ಪೂಜೆಯಲ್ಲಿ ಆದ ಲೋಪ, ಪೂಜೆಯಲ್ಲಿ ಭಾಗವಹಿಸುವ ಭಕ್ತಾದಿಗಳು ಮಾಡಿರಬಹುದಾದ ದೋಷ, ಗೊತ್ತಿಲ್ಲದೇ ದೇವಾಲಯದಲ್ಲಿ ಆಗಿರಬಹುದಾದ ತಪ್ಪುಗಳು... ಎಲ್ಲವನ್ನು ಕ್ಷಮಿಸುವಂತೆ ಶ್ರೀ ಶ್ರೀನಿವಾಸ ದೇವರನ್ನು ಬೇಡಿ, ಎಲ್ಲರನ್ನು, ಎಲ್ಲವನ್ನು ಅಂದರೆ ಅಪವಿತ್ರತೆಯಿಂದ ಪವಿತ್ರತೆಯ ಕಡೆಗೆ ನಮ್ಮ ನೆಡೆ ಎಂಬರ್ಥದಲ್ಲಿ  ಪವಿತ್ರಗೊಳಿಸುವ ಕಾರ್ಯಕ್ರಮವೇ ಪವಿತ್ರೋತ್ಸವ" ಅಂತ.


ಇದು ಹೇಗೆಂದರೆ, ಮಂತ್ರ ತಂತ್ರ, ಸ್ವರ ವರ್ಣ, ನ್ಯೂನಾತಿರಿಕ್ತ, ಲೋಪ ದೋಷ, ಪ್ರಾಯಶ್ಚಿತ್ತಾರ್ಥಂ ನಾಮತ್ರಯ ಮಹಾ ಮಂತ್ರ ಜಪಂ ಕರಿಷ್ಯೆ .... ಈ ಅರ್ಥದಲ್ಲಿ, ಇಡೀ ವರ್ಷದಲ್ಲಿ ಘಟಿಸಿರಬಹುದಾದ... ಪೂಜೆಯಲ್ಲಿ ಮಾತ್ರ ವಲ್ಲದೆ, ಊರಿನ ಎಲ್ಲರ ಬದುಕಿನಲ್ಲೂ, ಆಗಿರಬಹುದಾದ ಪ್ರತ್ಯಕ್ಷ ಹಾಗೂ ಪರೋಕ್ಷ ಲೋಪ ದೋಷಗಳ ಸಮಗ್ರ ಪ್ರಾಯಶ್ಚಿತ್ತಾರ್ಥಕ್ಕೆ ಮಾಡುವ ಪ್ರಾರ್ಥನೆಯ ಅರ್ಥಪೂರ್ಣ ಕಾರ್ಯಕ್ರಮವೇ ಪವಿತ್ರೋತ್ಸವ.


ಮೂರು ದಿನಗಳ ಈ ಕಾರ್ಯಕ್ರಮದಲ್ಲಿ ಅಭಿಷೇಕ, ಮಹಾಮಂಗಳಾರತಿ, ಕಳಸ ಪ್ರತಿಷ್ಠಾಪನೆ  ನಿತ್ಯಹೋಮ, ಗೋಪೂಜೆ, ಪೂರ್ಣಾಹುತಿ, ಉತ್ಸವ, ದ್ವಾದಶಾರಾಧನೆ... ಹೀಗೆ ಅನೇಕ ಕಾರ್ಯಕ್ರಮಗಳು ಜರುಗುತ್ತವೆ.  


ವೃತ್ತಿ, ವ್ಯವಹಾರ, ಸಾಮಾಜಿಕ ಬಂಧಗಳಿಂದ ದೂರದ ಊರಲ್ಲಿ ಇರುವ ಸಂಪಿಗೆ ಹಳ್ಳಿಯವರು ಈ ಪವಿತ್ರೋತ್ಸವದಲ್ಲಿ ಬಂದು ಸೇರುತ್ತಾರೆ. ಗೊತ್ತಿಲ್ಲದೆ ಮಾಡಿರುವ ಪಾಪಗಳನ್ನು ಕಳೆದುಕೊಂಡು ಪವಿತ್ರರಾಗುತ್ತಾರೆ.  ಹಾಗೆಯೇ ಪುನೀತರಾಗುತ್ತಾರೆ.


ಈ ಉತ್ಸವದ ಪರಿಕಲ್ಪನೆಯೇ ಒಂದು ವಿಶಿಷ್ಟವಾದುದು.


**


ಇಂತಹ ಪವಿತ್ರೋತ್ಸವ ನೆಡೆಯುವ ಸಂಪಿಗೆ ಶ್ರೀನಿವಾಸನ ಸನ್ನಿಧಿಯಲ್ಲಿ, ಪವಿತ್ರೋತ್ಸವ ಸಂದರ್ಭದಲ್ಲಿ, ಕಗ್ಗದ ಸಾಲುಗಳನ್ನು ನೆನಪು ಮಾಡಿಕೊಳ್ಳುತ್ತ ಎರಡು ಮಾತಾಡುವ ಅವಕಾಶ ಭಗವಂತ ಶ್ರೀ ಶ್ರೀನಿವಾಸನ ಅನುಗ್ರಹದಿಂದ ಆಯೋಜಕರಾದ, ದೇವಸ್ಥಾನದ ಟ್ರಸ್ಟ್‌ನವರೂ ಆಗಿರುವ ಶ್ರೀಯುತ ಸಂಪಿಗೇಹಳ್ಳಿ ಶ್ರೀಧರ್ ಮತ್ತು ಸಂಪಿಗೆ ಹಳ್ಳಿ ಶ್ರೀನಿವಾಸ್ ರವರ ಮೂಲಕ ನನಗೆ ದೊರೆಯಿತು.


ಕಾರ್ಯಕ್ರಮದ ಪ್ರೇಕ್ಷಕರಿಗೆ ಕಗ್ಗದ ಕಾರ್ಯಕ್ರಮ ಹೇಗಿತ್ತೋ ಗೊತ್ತಿಲ್ಲ, ಆದರೆ, ಇದರಲ್ಲಿ ಭಾಗವಹಿಸಿದ ನನಗೆ ಒಂದು ರೋಮಾಚನಕಾರಿ ಅದ್ಭುತ ಅನುಭವ, ಮರೆಯಲಾಗದ ಕ್ಷಣಗಳು.


***


ಮಾತಾಡುವ ಈ ಅವಕಾಶದ ರೋಮಾಂಚನ ಸಾಲದೆಂಬಂತೆ ಕಾರ್ಯಕ್ರಮ ಮುಗಿದ ಮೇಲೆ, ಮತ್ತೊಂದು ರೋಮಾಂಚನ ಸನ್ನಿವೇಶ!!


ಕಗ್ಗದ ಕಾರ್ಯಕ್ರಮ ಮುಗಿಸಿ, ಸೊಗಸಾದ ರಾತ್ರಿಯ ಭೋಜನದ ನಂತರ, ದೇವಸ್ಥಾನದ ಎಡ ಭಾಗದ ಹೊರವಲಯಕ್ಕೆ ನನ್ನನ್ನೂ, ನನ್ನ ಜೊತೆ ಬಂದಿದ್ದ ನನ್ನ ದೊಡ್ಡಮ್ಮನ ಮಗ ನಾಗಮಂಗಲದ ವಾಸಿಯಾದ ಸುರೇಶ್ ಎನ್ ಎಸ್ ರವರನ್ನು ಕಾರ್ಯಕ್ರಮದ  ನಿರ್ವಾಹಕರಲ್ಲೊಬ್ಬರಾದ ಗೌರವಾನ್ವಿತ  ಶ್ರೀಯುತ ಅಜಯ್‌ ರವರು ಕೆಲವು ಅಡಿಗಳ ದೂರದ ಒಂದು ಅಭೂತಪೂರ್ವ ಸ್ಥಳಕ್ಕೆ ಕರೆದೊಯ್ದರು.


ಅಲ್ಲೊಂದು ಪುಟ್ಟ ರಸ್ತೆ, ಹೆಚ್ಚು ಬೆಳಕಿಲ್ಲ. ರಸ್ತೆಯ ಆಕಡೆಗೆ ಒಂದು ಮನೆ. ಆ ಮನೆಯ ಕಡೆ ಕೈ ತೋರಿಸಿದ ಅಜಯ್‌ರವರು "ಇದು ಬಿಎಂಶ್ರೀಯವರ ಮನೆ" ಅಂದ್ರು. 


ರೋಮಾಂಚನ ಆಗಿದ್ದು ಆಗ!!!


ಕನ್ನಡದ ಕಣ್ವ ಬಿಎಂಶ್ರೀಯವರ ಮನೆಯ ಗೇಟಿನ ಬುಡದಲ್ಲಿ ನಿಂತಿದ್ದೇವೆ!! ಅದೂ ಆ ಕ್ಷಣದವರೆಗೆ ಗೊತ್ತಿಲ್ಲದೆ!!! ಅವಿಸ್ಮರಣೀಯ ಕ್ಷಣ.


***


ಅಲ್ಲಿ ಹೆಚ್ಚು ಬೆಳಕಿರಲಿಲ್ಲ, ಗೇಟಿಗೆ ಬೀಗ ಹಾಕಿತ್ತು, ಹಾಗಾಗಿ ಒಳಗೆ ಹೋಗಲಾಗಲಿಲ್ಲ. ಸರಕಾರದಿಂದ ಬಿಎಂಶ್ರೀಯವರ ಮನೆಯ ಮೊದಲ ಮಹಡಿಯನ್ನು ಒಂದು ಗ್ರಂಥಾಲಯ ಮತ್ತು ನಿತ್ಯ ಕನ್ನಡ ಕಾರ್ಯಕ್ರಮ ನೆಡೆಯಲಿ ಎಂದು ಒಂದು ಸಭಾಂಗಣವನ್ನು ನಿರ್ಮಾಣ ಮಾಡಿದ್ದಾರೆ .


ಮಬ್ಬು ಕತ್ತಲೆಯಲ್ಲಿ ನಿಂತೇ ಒಂದೆರಡು ಫೋಟೋ ತೆಗೆಸಿಕೊಂಡೆವು.  


ಬಿಎಂಶ್ರೀ ಅಂದಾಗ ರೋಮಾಂಚನದ ಜೊತೆ ನೆನಪಾಗಿದ್ದು, ಪಠ್ಯ ಪುಸ್ತಕದಲ್ಲಿದ್ದ ಮೈಸೂರು ಪೇಟದ ಅವರ ಭಾವ ಚಿತ್ರ ಮತ್ತು ಯಾವತ್ತೂ ಮರೆಯದ ಕರುಣಾಳು ಬಾ ಬೆಳಕೆ ಮುಸುಕಿದೀ ಮಬ್ಬಿನಲಿ ಪದ್ಯ.


ರಾತ್ರಿ ಒಂಬತ್ತೂವರೆಯ ಮುಸುಕು ಮಬ್ಬಿನಲ್ಲೇ ಬಿಎಂಶ್ರೀಯವರ ಮನೆಯ ಗೇಟ್ ಬಳಿ ಮೊದಲ ಬಾರಿ ನಿಂತಿದ್ದು, ಆ ಪಲ್ಲವಿಗೊಂದು ಹೊಸ ಆಯಾಮ ಕೊಟ್ಟಂತಿತ್ತು.


ಇನ್ನೂ ತಮಾಷೆ ಅಂದ್ರೆ, ಆ ರಾತ್ರಿಯಲ್ಲಿ ಯಾವುದೇ ಬಸ್ಸಿಲ್ಲದ ಕಾರಣ, ನಾಗಮಂಗಲಕ್ಕೆ ಹಿಂದಿರುಗವ ನಮ್ಮ ಆಲೋಚನೆ ಬಿಟ್ಟು   ಬಿಎಂಶ್ರೀಯವರ ಮನೆಯಿಂದ ಕೆಲವೇ ಅಡಿಗಳಷ್ಟು ದೂರದ ದೇವಸ್ಥಾನದ್ದೆ ಒಂದು ದೊಡ್ಡ ಹಾಲ್‌ನಲ್ಲಿ ನಾನು, ನನ್ನ ಜೊತೆಗಾರ  ಸುರೇಶ್ ಕೂಡಾ  ತಂಗುವಂತಾಯ್ತು. ಏನೋ ಆನಂದ... ಅಂತರಾಳದಲ್ಲಿ  ವಿಶೇಷ ಅನುಭವ!!


"ಇರುಳು ಕತ್ತಲೆಯ ಗವಿ ಮನೆ ದೂರ ಕನಿಕರಿಸಿ ಕೈ ಹಿಡಿದು ನಡೆಸೆನ್ನನು" ಅಂತ ಪ್ರಾರ್ಥಿಸಿದರೂ, "ಬೇಡ, ಇಲ್ಲೆ ಮಲಗಿಕೊಳ್ಳಿ.  ನೂರಾರು ವರ್ಷಗಳಿಂದ ನಾವಿಬ್ಬರೂ ಇಲ್ಲೇ ಇದೀವಿ. ಇವತ್ತು ನೀವೂ ಇರಿ" ಅಂತ ಬಿಎಂಶ್ರೀ ಮತ್ತು ಕ್ಷೇತ್ರದ ಶ್ರೀ ಶ್ರೀನಿವಾಸ ದೇವರು ಒಟ್ಟಿಗೆ ಹೇಳಿದ ಹಾಗಾಯ್ತು. ಹೇಳ್ಳಿಲ್ಲ, ಇಬ್ಬರು ಒಟ್ಟು ಸೇರಿ ಹಾಗೊಂದು ಅಂದಾಜು ಮಾಡಿ ನಮ್ಮನ್ನು ಒಂದು ರಾತ್ರಿ ಸಂಪಿಗೆ ಹಳ್ಳಿಯಲ್ಲಿ ಉಳಿಸಿಕೊಂಡು ಧನ್ಯತೆಯ ಭಾವ ಬೆಳೆಸಿದರು! ನಿಜಕ್ಕೂ ನಾವೇ ಧನ್ಯರು.


ಮರುದಿನ ಬಸ್ಸಿನಲ್ಲಿ ಬರುವಾಗಲೂ ಆ ಹಾಡು ಮತ್ತೆ ಮತ್ತೆ ನೆನಪಾಗ್ತಾ ಇತ್ತು. ಅ ಪದ್ಯದ ಪೂರ್ಣ ಪಾಠ ಫೋನಿಗೆ ಇಳಿಸಿಕೊಂಡೆ.


***


ಕರುಣಾಳು ಬಾ ಬೆಳಕೆ


ಕರುಣಾಳು ಬಾ ಬೆಳಕೆ ಮಸುಕಿದೀ ಮಬ್ಬಿನಲಿ ಕೈ ಹಿಡಿದು ನಡೆಸೆನ್ನನು

ಇರುಳು ಕತ್ತಲೆಯ ಗವಿ ಮನೆ ದೂರ ಕನಿಕರಿಸಿ ಕೈ ಹಿಡಿದು ನಡೆಸೆನ್ನನು


ಹೇಳಿ ನನ್ನಡಿಯಿಡಿಸು ಬಲುದೂರ ನೋಟವನು ಕೇಳನೊಡನೆಯೆ ಸಾಕು ನನಗೊಂದು ಹೆಜ್ಜೆ

ಮುನ್ನ ಇಂತಿರದಾದೆ ನಿನ್ನ ಬೇಡದೆ ಹೋದೆ

ಕೈ ಹಿಡಿದು ನಡೆಸೆನ್ನನು


ಇಷ್ಟುದಿನ ಸಲಹಿರುವೆ ಈ ಮೂರ್ಖನನು ನೀನು ಮುಂದೆಯೂ

ಕೈ ಹಿಡಿದು ನಡೆಸದಿಹೆಯಾ?

ಕಷ್ಟದಡವಿಯ ಕಳೆದು ಬೆಟ್ಟ ಹೊಳೆಗಳ ಹಾದು ಇರುಳನ್ನು ನೂಕದಿಹೆಯಾ?


ಬೆಳಗಾಗ ಹೊಳೆಯದೆಯೆ ಹಿಂದೊಮ್ಮೆ ನಾನೊಲಿದು ಈ ನಡುವೆ ಕಳಕೊಂಡೆ ದಿವ್ಯ ಮುಖ ನಗುತ


ಬಿ.ಎಂ. ಶ್ರೀಕಂಠಯ್ಯನವರು,


**


ಇದು ಬಿಎಂಶ್ರೀಯವರ ಭಾವಗೀತೆಯಾದರೂ, ಇದರೊಳಗಿನ ಸಂಪೂರ್ಣ ಭಾವ ಆ ಒಂದು ದಿನ ನನ್ನದಾಗಿತ್ತು.


ದಿನಾ ಬೆಳಗ್ಗೆ ಎದ್ದು, ಕರಾಗ್ರೆ ವಸತೇ... ಹೇಳಿ ಆದ ಮೇಲೆ... ಈ ಪದ್ಯ ಹೇಳಿಕೊಂಡು ಸಣ್ಣ ಮಕ್ಕಳ ರೀತಿ ಕಣ್ಣುಜ್ಜುತ್ತ ಮುಖ ತೊಳೆಯಲು ಹೋದರೆ ಹೇಗೆ!!? ಹೌದಲ್ಲವಾ...


**


ಬಿಎಂಶ್ರೀ., ಟಿಎಸ್.ವೆಂ. ಮತ್ತು ಕುವೆಂಪು ರವರು ಕುಪ್ಪಳಿಯ ಕವಿಶೈಲದಲ್ಲಿ ಒಟ್ಟಿಗೆ ಕುಳಿತು ಬಂಡೆಯ ಮೇಲೆ ತಮ್ಮ ಇನಿಷಿಯಲ್‌ಗಳನ್ನು ಕೆತ್ತಿದ್ದಾರೆ.  


ಹಾಗೆ ಕೆತ್ತಿ ಕೆತ್ತಿ ಸುಸ್ತಾದಾಗ ಮೂರು ಜನ ಒಟ್ಟಿಗೆ ಬಸವಾನಿಯ ಈ ಕಡೆಯ ವಿಹಂಗಮ ಜೇನುಕಲ್ಲು ಗುಡ್ಡ ಮತ್ತು ಆ ಕಡೆಯ ತುಂಗಾ ನದಿಯ ಬದಿಗೆ, ಕಾಡು ಮಧ್ಯದ ಹಳ್ಳಿ ದಾರಿಯಲ್ಲಿ ವಾಕ್ ಹೋಗಿದಾರೆ. ಹಾಗೆ ಹೋಗುವಾಗ, ಒಂದು ಕಿ.ಮೀ. ನಡೆಯುವುದನ್ನು ಉಳಿಸಲು ಮೇಲುಕೊಪ್ಪದ ನಮ್ಮ ತೋಟದ ಮೂಲಕ ಇಳಿದು-ಹತ್ತಿ ಹಾದು ಹೋಗುವ ಒಳದಾರಿಯ ಬೈ ಪಾಸ್‌ನಲ್ಲಿ ನೆಡೆದಿದ್ದಾರೆ!   


ಸಂಪಿಗೆ ಹಳ್ಳಿಯ ಬಿಎಂಶ್ರೀಯವರ ಮನೆಯ ಸಮೀಪದ ಹಾಲ್‌ನಲ್ಲಿ ಮಲಗಿ ಎದ್ದು ಮೇಲುಕೊಪ್ಪ ದಾರಿ ಹಿಡಿದು ಬಸ್‌ನಲ್ಲಿ ಕುಳಿತಾಗ ಅನ್ನಿಸಿದ್ದು. ಇಲ್ಲಾಂದ್ರೆ, ಬಿಎಂಶ್ರೀಯವರು "ಕಷ್ಟದಡವಿಯ ಕಳೆದು ಬೆಟ್ಟ ಹೊಳೆಗಳ ಹಾದು" ಅಂತ ಆ ಪದ್ಯದಲ್ಲಿ ಯಾಕಾದ್ರೂ ಬರೆಯುತ್ತಿದ್ರು!


**


ಎಲ್ಲರಿಗೂ ದೀಪಾವಳಿಯ ಶುಭಾಶಯಗಳು.


ಕರುಣಾಳು ಬಾ ಬೆಳಕೆ ಮಸುಕಿದೀ ಮಬ್ಬಿನಲಿ ಕೈ ಹಿಡಿದು ನಡೆಸೆನ್ನನು

ಇರುಳು ಕತ್ತಲೆಯ ಗವಿ ಮನೆ ದೂರ ಕನಿಕರಿಸಿ ಕೈ ಹಿಡಿದು ನಡೆಸೆನ್ನನು


- ಅರವಿಂದ ಸಿಗದಾಳ್, 

ಮೇಲುಕೊಪ್ಪ.

9449631248


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

1 Comments

  1. ಧನ್ಯವಾದಗಳು. ದೀಪಾವಳಿಯ ಶುಭಾಶಯಗಳು

    ReplyDelete

Post a Comment

Post a Comment

Previous Post Next Post