ಉಜಿರೆ: ನಾಯಕತ್ವ ಎಂಬ ಗುಣ ಕೇವಲ ಶಾಲಾ-ಕಾಲೇಜುಗಳಿಗೆ ಮಾತ್ರ ಸೀಮಿತವಾಗದೇ ಭವಿಷ್ಯದಲ್ಲಿ ನಮ್ಮ ಸಮಾಜದ ಮತ್ತು ದೇಶದ ಅಭಿವೃದ್ಧಿಗೆ ಪೂರಕವಾಗಬೇಕೆಂದು ಬೆಳ್ತಂಗಡಿ ಸುವರ್ಣ ಸಾಂಸ್ಕೃತಿಕ ಪ್ರತಿಪ್ಠಾನದ ಅಧ್ಯಕ್ಷ ಜೇಸಿ ಸಂಪತ್ ಸುವರ್ಣ ಹೇಳಿದರು.
ಉಜಿರೆ ಶ್ರೀ ಧ. ಮಂ. ಸ್ವಾಯತ್ತ ಕಾಲೇಜಿನಲ್ಲಿ ಸೆಪ್ಟೆಂಬರ್ 15ರಂದು ನಡೆದ ಪ್ರಸಕ್ತ ಶೈಕ್ಷಣಿಕ ವರ್ಷದ ವಿದ್ಯಾರ್ಥಿ ಸಂಘಟನೆಗಳ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಈ ವೇಳೆ ನಾಯಕತ್ವವೆಂಬುದು ರಾಜಕೀಯ ಚಟುವಟಿಕೆಗಳಿಗೆ ಮಾತ್ರ ಸಂಬಂಧಿಸದೇ, ನಾವು ಮಾಡುವ ಪ್ರತಿಯೊಂದು ಕೆಲಸಗಳಿಗೆ ನ್ಯಾಯ ಒದಗಿಸುವ ಮಾಧ್ಯಮವಾಗಬೇಕು ಎಂದರು. ಈ ಸಂದರ್ಭದಲ್ಲಿ ವಿದ್ಯಾರ್ಥಿ ಪ್ರತಿನಿಧಿಗಳಿಗೆ ಪ್ರಮಾಣ ಪತ್ರ ಮತ್ತು ಗುರುತಿನ ಚೀಟಿಯನ್ನು ನೀಡಲಾಯಿತು.
ಅಧ್ಯಕ್ಷೀಯ ನೆಲೆಯಲ್ಲಿ ಮಾತನಾಡಿದ ಕಾಲೇಜಿನ ಪ್ರಾಂಶುಪಾಲ ಡಾ. ಬಿ. ಎ. ಕುಮಾರ ಹೆಗ್ಡೆ ವಿದ್ಯಾರ್ಥಿ ಜೀವನದಲ್ಲಿ ವಿವಿಧ ಹವ್ಯಾಸಗಳನ್ನು ಬೆಳೆಸಿಕೊಳ್ಳಬೇಕು ಮತ್ತು ಆ ಮೂಲಕ ವಿದ್ಯಾರ್ಥಿಸಂಘ ಕ್ರಿಯಾಶೀಲವಾಗಿ ಕಾರ್ಯನಿರ್ವಹಿಸಬೇಕು ಎಂದು ಹಿತವಚನ ನುಡಿದರು.
ಸಮಾರಂಭದಲ್ಲಿ ಕಾಲೇಜಿನ ಪತ್ರಿಕೋದ್ಯಮ ವಿಭಾಗದ ವಿದ್ಯಾರ್ಥಿಗಳಿಂದ ತಯಾರಾದ “ಚಿಗುರು” ವಿಶೇಷ ಸಂಚಿಕೆಯನ್ನು ಅನಾವರಣಗೊಳಿಸಲಾಯಿತು.
ವೇದಿಕೆಯಲ್ಲಿ ವಿದ್ಯಾರ್ಥಿ ಕ್ಷೇಮಪಾಲನ ಸಮಿತಿ ಸಂಯೋಜಕ ನಟರಾಜ್ ಎಚ್, ಕೆ ಮತ್ತು ವಿದ್ಯಾರ್ಥಿ ಪ್ರತಿನಿಧಿಗಳು ಉಪಸ್ಥಿತರಿದ್ದರು. ವಿವಿಧ ವಿಭಾಗಗಳ ಮುಖ್ಯಸ್ಥರು, ಉಪನ್ಯಾಸಕರು ಮತ್ತು ವಿದ್ಯಾರ್ಥಿಗಳು ಹಾಜರಿದ್ದರು. ವಿದ್ಯಾರ್ಥಿ ಕಿರಣ್ ಸ್ವಾಗತಿಸಿ, ಮಾನಸ ಅಗ್ನಿಹೋತ್ರಿ ಅತಿಥಿ ಪರಿಚಯ ಮಾಡಿದರು. ಪ್ರತೀಕ್ಷಾ ವಂದಿಸಿ, ತೇಜಸ್ವಿ ಮತ್ತು ಹರ್ಷಿತಾ ಕಾರ್ಯಕ್ರಮವನ್ನು ನಿರೂಪಿಸಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ