ಬೊಟ್ಟಿಕೆರೆ: ಲೋಕಾಭಿರಾಮ ಕೃತಿ ಬಿಡುಗಡೆ
ಮುಡಿಪು: ಬೊಟ್ಟಿಕೆರೆ ಪುರುಷೋತ್ತಮ ಪೂಂಜರು ಯಕ್ಷಗಾನದ ಹಿಮ್ಮೇಳ ಮುಮ್ಮೇಳದಲ್ಲಿ ತೊಡಗಿಕೊಂಡು ಸವ್ಯಸಾಚಿಯಾಗಿ ಗುರುತಿಸಿಕೊಂಡಿರುವುದರ ಜೊತೆಗೆ ಯಕ್ಷಗಾನ ಸಾಹಿತ್ಯ ಕ್ಷೇತ್ರದಲ್ಲಿಯೂ ಸಕ್ರಿಯವಾಗಿ ತೊಡಗಿಸಿಕೊಂಡಿದ್ದ ಓರ್ವ ವಿದ್ವತ್ ಪೂರ್ಣ ಕಲಾವಿದರಾಗಿದ್ದರು, ಎಂದು ಮಂಗಳೂರು ವಿವಿ ಡಾ.ಪಿ.ದಯಾನಂದ ಪೈ ಮತ್ತು ಶ್ರೀ ಪಿ.ಸತೀಶ್ ಪೈ ಯಕ್ಷಗಾನ ಅಧ್ಯಯನ ಕೇಂದ್ರದ ನಿರ್ದೇಶಕ ಪ್ರೊ.ಶ್ರೀಪತಿ ಕಲ್ಲೂರಾಯ ಅವರು ಹೇಳಿದರು.
ಅಂಬುರುಹ ಯಕ್ಷಪ್ರತಿಷ್ಠಾನ ಬೊಟ್ಟಿಕೆರೆ(ರಿ) ಇದರ ವತಿಯಿಂದ ಬೊಟ್ಟಿಕೆರೆಯ ಅಂಬುರುಹದಲ್ಲಿ ಭಾನುವಾರ ನಡೆದ ಯಕ್ಷ ಶ್ರಾವಣ ಶ್ರವಣ 2023 ಹಾಗೂ ದಿ.ಬೊಟ್ಟಿಕೆರೆ ಪುರುಷೋತ್ತಮ ಪೂಂಜರು ವಿರಚಿತ ಅರ್ಥಸಹಿತವಾದ ಯಕ್ಷಗಾನ ಪ್ರಸಂಗ ಲೋಕಾಭಿರಾಮ ಕೃತಿ ಬಿಡುಗಡೆಗೊಳಿಸಿ ಅವರು ಮಾತನಾಡಿದರು. ಪೂಂಜರು ಸರಳತೆಯ ವ್ಯಕ್ತಿತ್ವದ ಶ್ರಮಜೀವಿಯಾಗಿದ್ದರು. ಸೂಕ್ಷ್ಮತೆ ಮತ್ತು ತೀಕ್ಷ್ಮತೆಯ ಸೆಳೆಯಲ್ಲಿ ಅವರು ಕಥಾನಕವನ್ನು ನೋಡುತ್ತಾರೆ ಹಾಗೂ ನಿರೂಪಿಸುತ್ತಾರೆ. ಇದು ಅವರ ವಿಶೇಷತೆಯಾಗಿತ್ತು. ಪೂಂಜರ ಕನಸಿನ ಅಂಬುರುಹ ಯಕ್ಷಗಾನ ಪ್ರತಿಷ್ಠಾನದ ವತಿಯಿಂದ ಯಕ್ಷಗಾನಕ್ಕೆ ಸಂಬಂಧಿಸಿದ ಅನೇಕ ಕಾರ್ಯಯೋಜನೆಗಳು ಮುನ್ನಡೆಯುತ್ತಿದ್ದು , ಅದರಲ್ಲೂ ಈ ಪ್ರತಿಷ್ಠಾನದ ಮೂಲಕ ಯುವ ಸಮುದಾಯ ಹೆ ತೊಡಗಿಸಿಕೊಂಡಿರುವುದು ಉತ್ತಮ ಬೆಳವಣಿಗೆಯಾಗಿದೆ, ಎಂದರು.
ಅಂಬುರುಹ ಯಕ್ಷಪ್ರತಿಷ್ಠಾನ ಬೊಟ್ಟಿಕೆರೆ(ರಿ) ಇದರ ಅಧ್ಯಕ್ಷರಾದ ಶೋಭಾ ಪೂಂಜಾ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಪ್ರತಿಷ್ಠಾನದ ಉಪಾಧ್ಯಕ್ಷರಾದ ರಾಜಾರಾಂ ಹೊಳ್ಳ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು. ಅಂಬುರುಹ ಪ್ರತಿಷ್ಠಾನದ ದೀವಿತ್ ಕೋಟ್ಯಾನ್ ಅವರು ಕೃತಿಯ ಪರಿಚಯ ಮಾಡಿದರು. ಕಲಾವಿದ ಸದಾಶಿವ ಆಳ್ವ ಕಾರ್ಯಕ್ರಮ ನಿರೂಪಿಸಿದರು.
ಕಾರ್ಯಕ್ರಮದ ಅಂಗವಾಗಿ ಲೋಕಾಭಿರಾಮ ಪ್ರಸಂಗದ ಆಯ್ದ ಭಾಗದ ಯಕ್ಷಗಾನ ತಾಳಮದ್ದಳೆ ಹಾಗೂ ನರಶಾರ್ದೂಲ ಯಕ್ಷಗಾನ ಪ್ರದರ್ಶನ ನಡೆಯಿತು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
'ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಚಾನೆಲ್ ಫಾಲೋ ಮಾಡಲು ಈ ಲಿಂಕ್ ಕ್ಲಿಕ್ ಮಾಡಿ