ಬೆಂಗಳೂರು: 'ಕಳೆದ ಒಂದೂವರೆ ದಶಕದ ತನಕ ನಮ್ಮ ಭಾರತ ದೇಶದ ಕೈಗಾರಿಕೆಗಳು ಹಾಗೂ ಅಭಿವೃದ್ಧಿಶೀಲ ಚಟುವಟಿಕೆಗಳು, ಕೇವಲ ವಿದೇಶಗಳಿಂದ ಆಮದು ಮಾಡಿಕೊಳ್ಳುವ ತಂತ್ರಜ್ಞಾನ ಮತ್ತು ಸಾಮಗ್ರಿಗಳನ್ನೇ ಆಧರಿಸಿದ್ದವು. ಆದರೆ ಈಗ, ಕೇವಲ ಅಲ್ಪಾವಧಿಯಲ್ಲಿ ಆಮದನ್ನೇ ಆಧರಿಸಿದ್ದ ನಮ್ಮ ದೇಶ ಈಗ ಗಣನೀಯವಾಗಿ ರಫ್ತು ಮಾಡುವಷ್ಟು ಬೆಳೆದು ನಿಂತಿದೆ. ಇಂತಹ ಚಮತ್ಕಾರ ದಿಡೀರನೆ ಆಗುವುದಕ್ಕೆ ಮುಖ್ಯ ಕಾರಣ- ನಮ್ಮ ಯುವ ತಂತ್ರಜ್ಞರು. ನಮ್ಮ ಯುವ ತಂತ್ರಜ್ಞರು ತಾವು ಕಲಿತಿದ್ದ ಜ್ಞಾನದ ಹಿನ್ನಲೆಯಲ್ಲಿ ನವೀನ ಅನ್ವೇಷಣೆಗಳನ್ನು ಮಾಡುತ್ತಿದ್ದಾರೆ; ಹೊಸ ಹೊಸ ಐಡಿಯಾಗಳ ಬೆನ್ನು ಹತ್ತಿ ಸಮಸ್ಯೆಗಳಿಗೆ ಪರಿಹಾರ ಕಂಡುಕೊಂಡು, ಇಡೀ ಜಗತ್ತು ನಮ್ಮ ಕಡೆಗೆ ಕೌತುಕದಿಂದ ತಿರುಗಿ ನೋಡುವಂತಹ ಸಾಧನೆ ಮಾಡಿದ್ದಾರೆ ಎಂದು ಏರೋನಾಟಿಕಲ್ ಸೊಸೈಟಿ ಆಫ್ ಇಂಡಿಯಾದ ಅಧ್ಯಕ್ಷ ಹಾಗೂ ಭಾರತ ಸರ್ಕಾರದ ರಕ್ಷಣಾ ಮಂತ್ರಾಲಯದ ಡಿ.ಆರ್.ಡಿ.ಓ ಸಂಸ್ಥೆಯ ಮಾಜಿ ನಿರ್ದೇಶಕ ಡಾ. ಜಿ. ಸತೀಶ್ ರೆಡ್ಡಿ ನುಡಿದರು.
ಅವರು ಬೆಂಗಳೂರಿನ ನಿಟ್ಟೆ ಮೀನಾಕ್ಷಿ ತಾಂತ್ರಿಕ ಮಹಾವಿದ್ಯಾಲಯದಲ್ಲಿ ನಡೆಯುತ್ತಿರುವ 'ಸಿವಿಲ್, ಏರೋನಾಟಿಕಲ್ ಹಾಗೂ ಮೆಕ್ಯಾನಿಕಲ್ ಇಂಜಿನಿಯರಿಂಗ್ ಕ್ಷೇತ್ರಗಳಲ್ಲಿ ನಡೆಯುತ್ತಿರುವ ನವನವೀನ ಅನ್ವೇಷಣೆಗಳನ್ನು ಕುರಿತಾದ ಎರಡು-ದಿನದ ಅಂತಾರಾಷ್ಟ್ರೀಯ ಸಮ್ಮೇಳನವನ್ನು (ಎರ್ಕ್ಯಾಂ-2023) ಉದ್ಘಾಟಿಸಿ ಮಾತನಾಡುತ್ತಿದ್ದರು.
ಮುಂಬರುವ ಐದು ವರ್ಷಗಳಲ್ಲಿ ಇಡೀ ಜಗತ್ತಿಗೇ ಹೊಸ ತಂತ್ರಜ್ಞಾನವನ್ನು, ಗುಣಮಟ್ಟದ ಸಲಕರಣೆಗಳನ್ನು, ಯುದ್ಧ ವಿಮಾನಗಳನ್ನು ಹಾಗೂ ಡ್ರೋನ್‌ಗಳನ್ನು ರಫ್ತು ಮಾಡುವ 'ವಿಶ್ವಗುರು' ಸ್ಥಾನ ತಲುಪುತ್ತೇವೆ. ಇದರಲ್ಲಿ ಯಾವುದೇ ಸಂಶಯವಿಲ್ಲ' ಎಂದು ಅವರು ಹೇಳಿದರು.
'ಬಹುಶಃ ಕ್ರಿ.ಶ. 2000ನೇ ಇಸವಿ ತನಕ ನಮಗೆ ಜಾಗತಿಕ ಗುಣಮಟ್ಟದ ಉತ್ತಮ ರಸ್ತೆಗಳ ಬಗ್ಗೆ ಅರಿವಿರಲಿಲ್ಲ. ಆದರೆ ಎರಡು ದಶಕಗಳ ಕಡಿಮೆ ಅವಧಿಯಲ್ಲಿ ಉತ್ತಮ ರಸ್ತೆಗಳನ್ನು ಮಾಡುವಲ್ಲಿ ನಾವು ಎಷ್ಟು ಪರಿಣತಿ ಸಾಧಿಸಿದ್ದೇವೆಂದರೆ, ವಿದೇಶಗಳು ನಮ್ಮ ತಂತ್ರಜ್ಞಾನಕ್ಕೆ ಮುಗಿಬೀಳುವಂತಾಗಿದೆ. ಅತ್ಯಂತ ಕಡಿಮೆ ಉಷ್ಣಾಂಶ ಇರುವ ಗುಡ್ಡಗಾಡುಗಳ ಪ್ರದೇಶಗಳಲ್ಲಿ ನಮ್ಮ ಇಂಜಿನಿಯರ್‌ಗಳು ನಿರ್ಮಿಸಿರುವ ಅದ್ಭುತ ಸುರಂಗಮಾರ್ಗಗಳು, ಎಕ್ಸ್‌ಪ್ರೆಸ್ ಹೆದ್ದಾರಿಗಳು ಇತ್ಯಾದಿ, ನೋಡುಗರ ಹುಬ್ಬೇರಿಸುವಂತಿವೆ. ನಮ್ಮ ನೆಲದಲ್ಲಿಯೇ ಸಲಕರಣೆಗಳನ್ನು ಉತ್ಪಾದಿಸಿ ನೂರಾರು ಸ್ಥಳೀಯ ಯುದ್ಧವಿಮಾನಗಳನ್ನು ಉತ್ಪಾದಿಸಿದ್ದೇವೆ, ನಮ್ಮ ಸ್ಥಳೀಯ ಹೆಲಿಕಾಪ್ಟರ್‌ಗಳಿಗೆ ಈಗ ಜಗತ್ತಿನಾದ್ಯಂತ ಬೇಡಿಕೆಯಿದೆ. ಬಾಹ್ಯಾಕಾಶ ತಂತ್ರಜ್ಞಾನದಲ್ಲಂತೂ ನಮ್ಮದು ಶ್ಲಾಘನೀಯ ಸಾಧನೆ. ನಮ್ಮ ಇಸ್ರೋ ಗಗನಯಾನದ ಹೆಸರಿನಲ್ಲಿ ಬ್ರಹ್ಮಾಂಡದಾಚೆಗೂ ದೃಷ್ಟಿ ನೆಟ್ಟಿದೆ. ನಮ್ಮ ಯುವ ಪ್ರತಿಭೆಗಳ ಈ ಅಪ್ರತಿಮ ಸಾಧನೆಗೆ ನಿಟ್ಟೆ ಮೀನಾಕ್ಷಿ ತಾಂತ್ರಿಕ ಮಹಾವಿದ್ಯಾಲಯವೂ ಸೇರಿದಂತೆ ನಮ್ಮ ದೇಶದಲ್ಲಿನ ಕೆಲವು ಜಾಗತಿಕ ಗುಣಮಟ್ಟದ ಇಂಜಿನಿಯರಿಂಗ್ ಕಾಲೇಜುಗಳ ಅವಿರತ ಪರಿಶ್ರಮದ ಕಾಣಿಕೆ ಕಾರಣ. ಈ ಕಾಲೇಜುಗಳಲ್ಲಿ ಅನ್ವೇಷಣೆ ಹಾಗೂ ಸಂಶೋಧನೆಗಳಿಗೆ ನೀಡಿರುವ ಆದ್ಯತೆ ನಿಜಕ್ಕೂ ಪ್ರಶಂಸಾರ್ಹ. 2017 ರಲ್ಲಿ ನಮ್ಮಲ್ಲಿದ್ದ ಸ್ಟಾರ್ಟ್-ಅಪ್‌ಗಳ ಸಂಖ್ಯೆ ಕೇವಲ 250. ಇಂದು ದೇಶಾದ್ಯಂತ ಒಂದು ಲಕ್ಷಕ್ಕೂ ಅಧಿಕ ಸ್ಟಾರ್ಟ್-ಅಪ್‌ಗಳು ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿವೆ', ಎಂದರು.
ಗೌರವಾನ್ವಿತ ಅತಿಥಿಗಳಾಗಿ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಅಸೆಟ್ ಮ್ಯಾನೇಜ್‌ಮೆಂಟ್‌ನ ಅಧ್ಯಕ್ಷ ಡಾ, ನವಿಲ್ ಶೆಟ್ಟಿ, ಸೈಂಟಿಫಿಕ್ ಇನೋವೇಶನ್ ಮತ್ತು ಸಂಶೋಧನಾ ಸಂಸ್ಥೆಯ ಪ್ರಧಾನ ವ್ಯವಸ್ಥಾಪಕ ಹಾಗೂ ಇನ್‌ಸ್ಟಿಟ್ಯೂಶನ್ ಆಫ್ ಇಂಜಿನಿಯರ್ಸ್‌ನ ಮಾಜಿ ಮಹಾನಿರ್ದೇಶಕ ಪ್ರೊ. ಯು. ಚಂದ್ರಶೇಖರ್, ಹಾಗೂ ಟ್ರೇನ್ ಟೆಕ್ನಾಲಜಿಯ ಡಾ. ಅತುಲ್ ಸಿಂಘಲ್ ಪಾಲ್ಗೊಂಡಿದ್ದರು.
ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ವಿಶ್ರಾಂತ ಕುಲಾಧಿಪತಿ ಪ್ರೊ. ಎನ್.ಆರ್. ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಅವರು ಮಾತನಾಡುತ್ತ- 'ಕೌಶಲ್ಯಾಧಾರಿತ ಕಲಿಕೆ, ಅನ್ವೇಷಣೆಗಳ ಬಗೆಗಿನ ಆಸಕ್ತಿ, ಹೊಸ ಹೊಸ ಐಡಿಯಾಗಳನ್ನು ಅಳವಡಿಸುವ ಸಾಮರ್ಥ್ಯ ಮಾತ್ರ ನಮ್ಮ ಯುವ ತಂತ್ರಜ್ಞರನ್ನು ಬೆಳೆಸಬಲ್ಲವು. ಈ ತೆರೆನ ಅಂತಾರಾಷ್ಟ್ರೀಯ ಸಮ್ಮೇಳನಗಳು ಅನ್ವೇಷಣೆಯ ಬಗ್ಗೆ ವಿದ್ಯಾರ್ಥಿಗಳಲ್ಲಿ ತೀವ್ರ ಆಸಕ್ತಿ ಬೆಳೆಯುವಂತೆ ಪ್ರೇರೇಪಿಸುತ್ತವೆ', ಎಂದರು.
ಎರಡು ದಿನಗಳ ಈ ಅಂತಾರಾಷ್ಟ್ರೀಯ ಸಮ್ಮೇಳನದಲ್ಲಿ ದೇಶವಿದೇಶಗಳಿಂದ ಸಾವಿರಕ್ಕೂ ಹೆಚ್ಚು ತಂತ್ರಜ್ಞರು ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ಸಮಾರಂಭದಲ್ಲಿ ಮೊದಲಿಗೆ ನಿಟ್ಟೆ ಮೀನಾಕ್ಷಿ ತಾಂತ್ರಿಕ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ. ಹೆಚ್.ಸಿ. ನಾಗರಾಜ್ ಸ್ವಾಗತಿಸಿದರು. ನಿಟ್ಟೆ ಶಿಕ್ಷಣ ಸಂಸ್ಥೆಯ ಆಡಳಿತಾಧಿಕಾರಿ ರೋಹಿತ್ ಪೂಂಜ, ಸಂಸ್ಥೆಯ ಶೈಕ್ಷಣಿಕ ಮುಖ್ಯಸ್ಥ ಡಾ. ವಿ. ಶ್ರೀಧರ್, ಪ್ರಾಧ್ಯಾಪಕರಾದ ಡಾ. ವೆಂಕಿಟಕೃಷ್ಣನ್, ಡಾ. ಪ್ರಹ್ಲಾದ್ ತೆಂಗಳಿ, ಡಾ. ಜಿ. ರಾಘವ, ಡಾ. ವಿ. ನಾಗೇಂದ್ರ, ಡಾ. ಕಪಿಲನ್, ಡಾ. ಶ್ರೀಕಾಂತ್ ಹೆಚ್.ವಿ. ಉಪಸ್ಥಿತರಿದ್ದರು. ಕೊನೆಯಲ್ಲಿ ಸಂಸ್ಥೆಯ ಅಂತಾರಾಷ್ಟ್ರೀಯ ಸಂಪರ್ಕ ವಿಭಾಗದ ಮುಖ್ಯಸ್ಥ ಡಾ. ಸುಧೀರ್ ರೆಡ್ಡಿ ವಂದಿಸಿದರು.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಚಾನೆಲ್ ಫಾಲೋ ಮಾಡಲು ಈ ಲಿಂಕ್ ಕ್ಲಿಕ್ ಮಾಡಿ