|| ಅರ್ಯಮಾಂತರ್ಗತ ಶ್ರೀ ವಾಸುದೇವಾಯ ನಮಃ ||
ಒಮ್ಮೆ ಕೃಷ್ಣ ಗೋಪಾಲಕರ ಜೊತೆ ವಿಹರಿಸುತ್ತಿದ್ದ. ಗೋಪಬಾಲಕರು ಕೃಷ್ಣನನ್ನು ಕೇಳಿದರು 'ನಮಗೆ ಹಸಿವಾಗುತ್ತಿದೆ, ತಿನ್ನಲು ಏನಾದರು ಕೊಡು'. ಪಕ್ಕದ ಬ್ರಾಹ್ಮಣರ ಕೇರಿಯಲ್ಲಿ ಯಜ್ಞಯಾಗಗಳು ನಡೆಯುತ್ತಿದ್ದವು, ಕೃಷ್ಣ ಅತ್ತ ತೋರಿಸಿ ನುಡಿದ 'ಆ ಮನೆಗಳಿಗೆ ಹೋಗಿ ಯಜ್ಞಕ್ಕಾಗಿ ಮಾಡಿದ ಭಕ್ಷ್ಯಭೋಜನವನ್ನು ತಿನ್ನಲಿಕ್ಕೆ ಕೊಡುವಂತೆ ಕೇಳಿ' ಕೃಷ್ಣ ಹೇಳಿದ ಅಂತ ಹೇಳಿ. ಗೋಪ ಬಾಲಕರು ಅಂತೆಯೇ ಮಾಡಿದರು. ಆ ಬ್ರಾಹ್ಮಣರು ಕೃಷ್ಣ ಸಾಕ್ಷಾತ್ ಭಗವಂತ ಎನ್ನುವ ಪ್ರಜ್ಞೆ ಇರಲಿಲ್ಲ. ಹುಡುಗಾಟದಲ್ಲಿ ಯಜ್ಞಕ್ಕೆ ಆಹುತಿಕೊಡುವ ಮುನ್ನ ಎಲ್ಲವನ್ನೂ ಗೋಪಬಾಲರಿಗೆ ಕೊಡಿ ಎಂದು ಹೇಳಿದ್ದಾನೆ. ತಿಳಿವಳಿಕೆ ಸಾಲದು ಎಂದುಕೊಂಡು ಯಜ್ಞಕಾರ್ಯ ಮುಂದುವರೆಸಿದರು. ನಿರಾಸೆಯಿಂದ ಗೋಪಬಾಲಕರು ಕೃಷ್ಣನಿಗೆ ನಡೆದ ಸಂಗತಿ ತಿಳಿಸಿದರು.
ಕೃಷ್ಣ ಅವರನ್ನು ಅವರ ಪತ್ನಿಯರ ಹತ್ತಿರ ಕಳಿಸಿದ. ಕೃಷ್ಣ ಎನ್ನುವ ಶಬ್ಧ ಕಿವಿಗೆ ಬಿದ್ದದ್ದೆ ತಡ, ಎಲ್ಲ ಹೆಂಗಸರೂ ಬಗೆ ಬಗೆಯ ರಸದೂಟವನ್ನು ಹಿಡಿದುಕೊಂಡು ಹೊರಟೇ ಬಿಟ್ಟರು. ನದಿಗಳು ಕಡಲಿನೆಡೆಗೆ ಹರಿದುಬರುವಂತೆ, ಅವಳಲ್ಲಿ ಒಬ್ಬಳು ಮಾಡಿದ ಅಡುಗೆಯನ್ನು ತಂದು ಕೃಷ್ಣನಿಗೆ ಅರ್ಪಿಸಿದಳು. ಕೃಷ್ಣ ಆಕೆಯನ್ನು ಹರಸಿದ. ಗಂಡನಿಂದ ಪರಿತ್ಯಕ್ತಳಾದ ಆಕೆ ಭಗವಂತನಿಗೆ ಶರಣಾದಳು. ತಾನು ಕೇಳಿ ತಿಳಿದಂತೆ ಭಗವಂತನ ರೂಪವನ್ನು ಮನದಲ್ಲಿ ನೆನೆಯುತ್ತ ಆತ್ಮತ್ಯಾಗ ಮಾಡಿದಳು. ಕರ್ಮಬಂಧನ, ದೇಹ ಬಂಧನ ಕಳಚಿಕೊಂಡು ಶ್ರೀಕೃಷ್ಣನ ಅನುಗ್ರಹದಿಂದ ಮೋಕ್ಷ ಪಡೆದಳು. ತಮ್ಮ ಹೆಂಡಂದಿರಿಗೆ ಶ್ರೀಕೃಷ್ಣನ ಬಗ್ಗೆ ಇರುವ ಭಕ್ತಿ ತಮಗೆ ಇಲ್ಲವಾಯಿತ್ತಲ್ಲ. ಅವರ ಮುಂದೆ ತಾವು ತೀರ ಸಣ್ಣವರಾದೆವಲ್ಲ ಎಂದು ತಮ್ಮನ್ನೇ ತಾವು ನಿಂದಿಸಿಕೊಂಡರು. ಅವರಿಂದಾಗಿ ನಾವು ಕೃಷ್ಣ ಭಕ್ತಿಯನ್ನು ಕಲಿಯುವಂತಾಯಿತು. ಅವರ ಭಕ್ತಿಯಿಂದ ನಮಗೆ ಕೃಷ್ಣನ ಅನುಗ್ರಹ ದೊರೆಯುವಂತಾಯಿತು ಎಂದು ಧನ್ಯತೆಯ ಭಾವದಿಂದ ಸ್ತುತಿಸಿದರು.
'ತಿಳಿಯ ಹೇಳುವ ಕೃಷ್ಣಕಥೆಯನು ಇಳೆಯ ಜಾಣರು- ಮೆಚ್ಚುವಂತಿರೆ ನೆಲೆಗೆ ಪಂಚಮ ಶ್ರುತಿಯನೊರೆವೆನು ಕೃಷ್ಣ ಮೆಚ್ಚಲಿಕೆ ಹಲವು ಪಾಪರಾಶಿಯ ತೊಳೆವ ಜಲವಿದು ಶ್ರೀಮದಾಗಮ ಕುಲಕೆ ನಾಯಕ ಭಾರತ ಕೃತಿ ಪಂಚಮ ಶೃತಿಯ' ಕುಮಾರವ್ಯಾಸ ಮಹಾಭಾರತವನ್ನು ಕೃಷ್ಣಕಥೆಯಾಗಿ ಪರಿವರ್ತಿಸಿದ. ಈ ಕಥೆಯು ಸಾಮಾನ್ಯವಾದುದಲ್ಲ. ಶ್ರೀಮದಾಗಮ ಕುಲಕೆ ನಾಯಕ ಮತ್ತು ಪಂಚಮ ಶ್ರುತಿ ಎಂಬುದಾಗಿ ಗಟ್ಟಿದನಿಯಲ್ಲಿ ಕವಿ ಉದ್ಘೋಷಿಸಿದ್ದಾನೆ. ಕೃಷ್ಣ, ಕುಮಾರವ್ಯಾಸ ಭಾರತದಲ್ಲಿ ಅಲ್ಲಲ್ಲಿ ಇದ್ದಾನೆ. ಹಾಗೆ ಬರುವ ಸಂದರ್ಭಗಳೆಲ್ಲ ಭಾರತ ಕಥೆಯ ಮಹತ್ವದ ತಿರುಗುಣಿಗಳಾಗಿವೆ. ಕೃಷ್ಣ ಪ್ರತ್ಯಕ್ಷವಾಗಿ ಬರಲಾರದೆ ಉಳಿದಿದ್ದು ಪಾಂಡವ-ಕೌರವ ಜೂಜಿನ ಸಂದರ್ಭದಲ್ಲಿ ಮಾತ್ರ. ಅದು ಹೊರತಾಗಿ ದ್ರೌಪದಿಯ ಸ್ವಯಂವರ (ಮಹಾಭಾರತದಲ್ಲಿ ಮೊದಲ ಬಾರಿಗೆ ಕೃಷ್ಣ ಕಾಣಿಸಿಕೊಂಡದ್ದು - ಹಾಗೆ ಕಾಣಿಸಿಕೊಂಡು ದ್ರೌಪದಿಗೆ ನಾಯಕನಾಗದೆ, ಅಣ್ಣನಾಗಿ ಚಾರಿತ್ರ್ಯ ಪಾತ್ರ ನಿರ್ವಹಣೆಗೆ ಸಹಿ ಹಾಕಿದ್ದು, ನಾಯಕನಾಗುವ ಬಲರಾಮನ ಉಮೇದಿಗೆ ಅಡ್ಡ ಬಂದದ್ದು ), ವಸ್ತ್ರಾಪಹರಣ ಸಂದರ್ಭದಲ್ಲಿ ಪರೋಕ್ಷವೃತ್ತಿ , ರಾಜಸೂಯ ಪ್ರಸಂಗ, ಜರಾಸಂಧನ ಸಂಹಾರ, ಆಗ್ರಪೂಜೆಯ ಪೂರೈಸಲು ನೀಡಿದ ಹಿತೋಕ್ತಿ, ಅಕ್ಷಯಪಾತ್ರೆ ಮತ್ತು ದೂರ್ವಾಸ ಪ್ರಸಂಗ, ಅಜ್ಞಾತವಾಸ ಮುಗಿದ ಮೇಲೆ ಅಭಿಮನ್ಯು, ಸುಭದ್ರಾ ಸಮೇತ ಬಂದದ್ದು, ಅಭಿಮನ್ಯು ಉತ್ತರೆಯ ಕಲ್ಯಾಣದಲ್ಲಿ ಭಾಗಿಯಾಗಿದ್ದು, ಮದುವೆ ಮುಗಿಸಿಕೊಂಡು ದ್ವಾರಕೆಗೆ ಹಿಂದಿರುಗಿ ರಾಜಕೀಯ ಕಾರಣಕ್ಕಾಗಿ ಮತ್ತೆ ವಿರಾಟನಗರಿಗೆ ಬಂದದ್ದು, ಸಂಧಿಯ ಪ್ರಸ್ತಾಪಕ್ಕಾಗಿ ಹಸ್ತಿನಾವತಿಗೆ ಹೋಗಿದ್ದು, ಹಸ್ತಿನಾವತಿಯಲ್ಲಿ ಕೌರವಾದಿಗಳ ಮನೆಗಳಲ್ಲಿ ಉಳಿಯದೆ ವಿದುರನ ಮನೆಯಲ್ಲಿ ಉಳಿದದ್ದು, ವಿದುರನ ಭಕ್ತಿ ಮರುಳು, ಸಭೆಯಲ್ಲಿ ಸಂಧಿ ಪ್ರಸ್ತಾಪ ಮುರಿದುಬಿದ್ದದ್ದು, ವಿದುರ ದುರ್ಯೋಧನನ ರಕ್ಷಣೆಗಾಗಿ ಇಟ್ಟುಕೊಂಡಿದ್ದ ಬಿಲ್ಲು ಮುರಿದದ್ದು, ದುರ್ಯೋಧನ ಕೃಷ್ಣನನ್ನು ಬಂಧಿಸಲು ಯತ್ನಿಸಿದ್ದು. ಕೃಷ್ಣನ ವೈಷ್ಣವ ಮಾಯೆ, ವಿಶ್ವರೂಪ ದರ್ಶನ, ಕರ್ಣನನ್ನು ಏಕಾಂತದಲ್ಲಿ ಭೇಟಿಯಾಗಿ ಅವನಿಗೆ ಕುಂತೀಪುತ್ರನೆಂಬ ಸತ್ಯವನ್ನು ಅರುಹಿ ಕರ್ಣಭೇದನ ಮಾಡಿದ್ದು, ಕುಂತಿಗೆ ಅವನಿಂದ ಪಾಂಡವಪರವಾದ ಕೆಲವು ಬೇಡಿಕೆಗಳಿಗೆ ಒಪ್ಪಿಗೆ ಪಡೆಯಲು ಸೂಚಿಸಿದ್ದು, ಯುದ್ಧದಲ್ಲಿ ಶಸ್ತ್ರ ಹಿಡಿಯನೆಂದು ಅರ್ಜುನನ ಸಾರಥಿಯಾದದ್ದು, ಕಾಲಕಾಲಕ್ಕೆ ಅರ್ಜುನನ (ಆಗಾಗ ಪಾಂಡವರ) ರಕ್ಷಣೆ ಮಾಡಿದ್ದು, ಅರ್ಜುನನಿಗೆ ಗೀತೆಯನ್ನು ಬೋಧಿಸಿ ಹುರಿಗೊಳಿಸಿದ್ದು- ಹೀಗೆ ಆಗಾಗ ಆಯಕಟ್ಟಿನ ಜಾಗಗಳಲ್ಲೆಲ್ಲ ಕೃಷ್ಣ ಭಾರತದ ಕಥೆಯೊಂದಿಗೆ ಹೊಕ್ಕಾಟ ನಡೆಸಿದ್ದಾನೆ.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ