ಗುರು ಪೂರ್ಣಿಮೆ ವಿಶೇಷ
ಮನುಷ್ಯನ ಬುದ್ಧಿಗೆ ಯೋಗ್ಯ ತರಬೇತಿ ನೀಡಿ ಉತ್ತಮ ಮನುಷ್ಯನನ್ನು ನಿರ್ಮಿಸಿ ತನ್ಮೂಲಕ ಇಡೀ ಜಗತ್ತಿಗೆ ಹಿತವಾಗುವಂತೆ ಮಾಡುವ ಗುರುತರವಾದ ಹೊಣೆ ಗುರು, ಆಚಾರ್ಯ ಅಥವಾ ಶಿಕ್ಷಕರ ಮೇಲೆ ಇದೆ. ಆದುದರಿಂದ “ಗುರು” ಎಂದರೆ ಅಜ್ಞಾನ ನಿವಾರಕ, ಜ್ಞಾನದಾಯಕ ಎಂದು ಪ್ರಾಜ್ಞರು ಅರ್ಥೈಸಿದ್ದಾರೆ. ‘ಆಚಾರ್ಯ’ ಶಬ್ದದ ಅರ್ಥ ವಿವರಣೆ ಗಮನಾರ್ಹವಾದುದು. ಗುರುವಾಗಿ ಅಜ್ಞಾನ ನಿವಾರಿಸಿ ಜ್ಞಾನ ನೀಡುವ ಕಾರ್ಯವನ್ನಷ್ಟೇ ಮಾಡಿದರೆ ಸಾಕಾಗದು. ಆತ ಆಚಾರ್ಯನು ಆಗಬೇಕು. ತನಗೆ ದೊರೆತ ಜ್ಞಾನಕ್ಕೆ ಸರಿಯಾಗಿ ಶಿಷ್ಯನು ಸತ್ಕಾರ್ಯಗಳಲ್ಲಿ ತೊಡಗುವಂತೆ ಮಾಡುವುದು ಗುರುವಿನ ಪ್ರಧಾನ ಹೊಣೆಗಾರಿಕೆ. ಶಿಷ್ಯನಿಗೆ ಮಾದರಿಯಾಗುವಂತೆ ಸ್ವತಃ ಗುರುವಿನ ಜೀವನವಿರಬೇಕು ಅದಕ್ಕಾಗಿಯೇ ಆಚಾರ್ಯ ಪದಕ್ಕೆ ಹೀಗೆ ಅರ್ಥ ಹೇಳಲಾಗಿದೆ.
ಆಚಿನೋತಿ ಚ ಶಾಸ್ತ್ರಾರ್ಥಾನಾಚಾರೇ ಸ್ಥಾಪಯತ್ಯಪಿ |
ಸ್ವಯಮಾಚರತೇ ಯಸ್ಮಾಥ್ ತಸ್ಮಾದಾಚಾರ್ಯ ಇಷ್ಯತೇ ||
ಅಂದರೆ ಶಿಷ್ಯನಿಗೆ ಶಾಸ್ತ್ರಾರ್ಥವನ್ನು ತಿಳಿಸಿ ಹೇಳಬೇಕು. ಶಿಷ್ಯನನ್ನು ಸದಾಚರಣೆಯಲ್ಲಿ ತೊಡಗಿಸಬೇಕು. ಶಿಷ್ಯನಿಗೆ ಮಾದರಿಯಾಗುವಂತೆ ಸದಾಚರಣೆಯಲ್ಲಿ ತೊಡಗಬೇಕು.
ಗುರುಗಳಾದವರು ತಮ್ಮದೇ ಆದ ರೀತಿಯಿಂದ ಶಿಷ್ಯರನ್ನು ಪರೀಕ್ಷಿಸಿ ವಿದ್ಯೆ ನೀಡುತ್ತಿದ್ದ ಘಟನೆಗಳು ನಮ್ಮ ಪ್ರಾಚೀನ ಸಾಹಿತ್ಯದಲ್ಲಿ ದಾಖಲಾಗಿವೆ. ವಿದ್ಯಾಗ್ರಹಣಕ್ಕಾಗಿ ಶಿಷ್ಯನಾಗಿ ಬಳಿಗೆ ಬಂದಿರುವವನನ್ನು ಸಾಮಾನ್ಯವಾಗಿ ಸುಮಾರು ಒಂದು ವರ್ಷದ ಕಾಲ ಸರ್ವವಿಧವಾಗಿ ಪರೀಕ್ಷಿಸಿ ಅವನ ಯೋಗ್ಯತೆಗೆ ತಕ್ಕಂತೆ ವಿದ್ಯೆ ನೀಡುತ್ತಿದ್ದರಿಂದ ಉಪನಿಷತ್ತು ಮತ್ತು ಗ್ರಂಥಗಳಲ್ಲಿ ಕಾಣಬಹುದು. ‘ಶಿಷ್ಯಾದಿಚ್ಛೇತ್ ಪರಾಜಯಮ್’ ಎಂಬುದು ಸದ್ಗುರುವಿನ ಬಯಕೆಯಾಗಿತ್ತು ಎಂದು ತಿಳಿದುಬರುತ್ತದೆ. ಮೇಲಾಗಿ ‘ಅರ್ಚಕಸ್ಯ ಪ್ರಭಾವೇಣ ಶಿಲಾಭವತಿ ಶಂಕರಃ’ ಎಂಬಂತೆ ‘ಶಿಷ್ಯಸ್ಯ ಸಾಮಥ್ರ್ಯಮಾಚಾರ್ಯಸ್ಯ ಪರಿಶ್ರಮಾತ್’ ಎಂಬುದರ ಪೂರ್ಣ ಅರಿವು ಪ್ರಾಚೀನ ಭಾರತದ ಗುರುಗಳಿಗೆ ರಕ್ತಗತವಾಗಿ ಬಂದಿತೆಂದು ತಿಳಿಯಬಹುದು. ಮನುಸ್ಮøತಿಯಲ್ಲಿ ಗುರುವಿನ ಬಗ್ಗೆ ಹೀಗೆ ಹೇಳಲಾಗಿದೆ.
ಉಪನೀಯ ತು ಯಃ ಶಿಷ್ಯಂ ವೇದಮಧ್ಯಾಪಯೇತ್ ದ್ವಿಜಃ |
ಸಂಕಲ್ಪಂ ಸ ರಹಸ್ಯಂ ಚ ತಮಾಚಾರ್ಯಂ ಪ್ರಚಕ್ಷತೇ ||
ಅಂದರೆ ತಾನೇ ಶಿಷ್ಯನಿಗೆ ಉಪನಯನ ಸಂಸ್ಕಾರ ಮಾಡಿ ಸಾಂಗ ವೇದಗಳನ್ನು, ರಹಸ್ಯ ವಿದ್ಯೆಗಳನ್ನು ತಿಳಿಸಿಕೊಡುವವನೆ ಗುರು ಆಗಿದ್ದಾನೆ. ರಾಮಾಯಣ ಕಾಲದಲ್ಲೂ ಗುರುವಿಗೆ ಅತ್ಯಂತ ಹೆಚ್ಚಿನ ಗೌರವ ಸ್ಥಾನವಿದ್ದಂತೆ ಕಾಣುತ್ತದೆ. ಗುರು ಶಿಷ್ಯರ ಸಂಬಂಧವನ್ನು ವಿಶ್ವಾಮಿತ್ರ ಮತ್ತು ರಾಮ ಲಕ್ಷ್ಮಣರಲ್ಲಿ ಚೆನ್ನಾಗಿ ಕಾಣಬಹುದು. ಮಹಾಭಾರತ ಕಾಲದಲ್ಲಿ ದ್ರೋಣಾಚಾರ್ಯರು ಪ್ರಸಿದ್ಧ ಗುರುಗಳಾಗಿದ್ದವರು. ಅಲ್ಲಿ ಅನೇಕ ಜನ ಗುರುಗಳಾಗಿದ್ದವರ ಬಗ್ಗೆ ತಿಳಿದುಬರುತ್ತದೆ. ಭಗವದ್ಗೀತೆ ಬೋಧಿಸಿದ ಶ್ರೀಕೃಷ್ಣನು ಅರ್ಜುನನಿಗೆ ಮಾತ್ರವಲ್ಲದೆ ಎಲ್ಲರಿಗೂ ಗುರುವೆಯಾಗಿದ್ದಾನೆ. ವೈದಿಕ ಸಾಹಿತ್ಯ ಚರಿತ್ರೆಯನ್ನು ಅವಲೋಕಿಸಿದಾಗ ಪ್ರಾಚೀನ ಕಾಲದ ಗುರುಗಳ ಹೆಸರುಗಳು ಮತ್ತು ಅವರ ಅಧ್ಯಾಪನ ಪದ್ಧತಿಯ ಪರಿಚಯ ಉಂಟಾಗುತ್ತದೆ. ಯಮ, ವರುಣ, ವೈಶಂಪಾಯನ ಪಿಪ್ಪಲಾದ, ಉದ್ಧಾಲಕ ಈ ಮುಂತಾದ ಗುರುಗಳು ಶಿಷ್ಯರ ಯೋಗ್ಯತೆಯನ್ನು ಪರೀಕ್ಷಿಸಿ ಅವರವರ ಬುದ್ಧಿಮಟ್ಟವನ್ನು ಅಳೆದು ಯಥಾಯೋಗ್ಯ ವಿದ್ಯಾದಾನ ನೀಡುತ್ತಿದ್ದುದಾಗಿ ನಮಗೆ ತಿಳಿದುಬರುತ್ತದೆ. ಆಗಿನ ಗುರು ಜೀವನವನ್ನೇ ಶಿಕ್ಷಣವನ್ನಾಗಿರಿಸುತ್ತಿದ್ದನು ಹೀಗೆ ಗುರುವಿನಿಂದ ಶಿಷ್ಯನು ಸತ್ಪ್ರಜೆಯಾಗಿ ಸಮಾಜಕ್ಕೆ ಮಾದರಿಯಾಗುತ್ತಿದ್ದನು.
ಸಾಮಾನ್ಯವಾಗಿ ಹಿಂದಿನ ಕಾಲದಲ್ಲಿ ಬಾಲ್ಯದಲ್ಲಿ ಉಪನೀತರಾಗಿ ವಟುಗಳು ಗುರುಕುಲವನ್ನು ಸೇರುತ್ತಿದ್ದರು ತಮ್ಮ ಬಾಲ್ಯವನ್ನು ಹೆಚ್ಚಿನದಾಗಿ ಗುರುಗಳ ಜೊತೆಯಲ್ಲಿ ಕಳೆಯುತ್ತಿದ್ದರು. ಆಗ ವಿದ್ಯಾರ್ಥಿಯ ಪೂರ್ಣ ವ್ಯಕ್ತಿತ್ವದ ವಿಕಾಸ ಗುರುವಿಗೆ ಸೇರಿತು. ಬಾಣಭಟ್ಟನ ಕಾದಂಬರಿಯಲ್ಲಿ ಬರುವ ಶುಕನಾಸೋಪದೇಶದಿಂದ ನಾವು ಒಬ್ಬ ಆದರ್ಶನಾದ ಗುರು ಅಥವಾ ಉಪದೇಶಕ ಹೇಗಿರಬೇಕೆಂದು ತಿಳಿಯಬಹುದು. ಒಟ್ಟಾರೆಯಾಗಿ ಹೇಳುವುದಾದರೆ ಅಂದಿನ ಗುರುವು ಆದರ್ಶಪ್ರಾಯವಾಗಿದ್ದನು ಹಾಗೂ ಶಿಷ್ಯರಿಗೆ ನಿಜವಾದ ಆದರ್ಶ ಗುರುವಾಗಿ ತೋರಿಬರುತ್ತಾನೆ.
- ಡಾ. ಪ್ರಸನ್ನಕುಮಾರ ಐತಾಳ, ಉಜಿರೆ
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ