ಗುರು ಪೂರ್ಣಿಮೆ ವಿಶೇಷ
ಗುರುವಿನ ಗುಲಾಮರಾಗುವ ತನಕ ದೊರೆಯದಣ್ಣ ಮುಕುತಿ ಎನ್ನುವ ನಾಣ್ಣುಡಿಯಂತೆ ಒಂದು ಜೀವ ಈ ಭೂಮಿಯಲ್ಲಿ ಮನುಷ್ಯ ರೂಪದಲ್ಲಿ ಹುಟ್ಟಿದ ಮೇಲೆ ಸಾರ್ಥಕತೆಯ ಬದು ಕನ್ನು ನಡೆಸಬೇಕು ಎಂದಾದರೆ ಒಂದು ಗುರುವಿನ ಅವಶ್ಯಕತೆ ಇದ್ದೇ ಇರುತ್ತದೆ. ಹುಟ್ಟಿದ ಮಗುವಿಗೆ ತಾಯಿ ಮೊದಲು ಗುರು ಆಕೆ ಪ್ರೀತಿಯ ಮಳೆಯನ್ನು ಸುರಿಸುವುದರ ಮೂಲಕ ಪ್ರಪಂಚಕ್ಕೆ ನಮ್ಮನ್ನು ಪರಿಚಯಿಸುತ್ತಾಳೆ ಹಾಗೆಯೇ ಜಗತ್ತಿನ ಬಗ್ಗೆ ಅರಿವನ್ನು ಮೂಡಿಸುವ ಪ್ರಯತ್ನ ಮಾಡುತ್ತಾಳೆ.
ವಿದ್ಯಾಭ್ಯಾಸದ ಹಂತದಲ್ಲಿ ನಾವು ಕಲಿಯುವ ಪ್ರತಿಯೊಂದು ವಿಷಯಗಳು ಒಂದಲ್ಲ ಒಂದು ಗುರುವಿನ ಮುಖಾಂತರವೇ ಹೊರತು ನಮಗೆ ನಾವೇ ಕಲಿಸಿಕೊಂಡಿರುವುದಿಲ್ಲ. ಹಲವಾರು ಬಾರಿ ನಮಗೆ ಎಷ್ಟೋ ವಿಷಯಗಳ ಜ್ಞಾನವನ್ನು ಒಬ್ಬ ಒಳ್ಳೆಯ ಸ್ನೇಹಿತ ಕೂಡ ತಿಳಿಸಿ ಕೊಡುವುದರ ಮೂಲಕ ನಮ್ಮ ಬದುಕಿನಲ್ಲಿ ಗುರುವಿನ ಸ್ಥಾನ ತುಂಬು ತ್ತಾನೆ. ಗುರು ಎಂದರೆ ಬರಿ ಪಠ್ಯ ಪುಸ್ತಕದಲ್ಲಿರುವ ಪಾಠವನ್ನು ಕಲಿಸಿಕೊಡುವ ವ್ಯಕ್ತಿ ಯಲ್ಲ ನಮ್ಮ ಜೀವನದ ಪ್ರತಿ ಹಂತದಲ್ಲೂ ನಮ್ಮ ನಡೆ ನುಡಿಯಲ್ಲಿನ ಸರಿ ತಪ್ಪುಗಳನ್ನು ಗುರುತಿಸಿ ಸರಿ ಮಾರ್ಗದಲ್ಲಿ ಹೋಗುವಂತೆ ಪ್ರೇರೇಪಿಸುವ ಹಿತೈಷಿಗಳು ಕೂಡ ಗುರುವಾಗಬಲ್ಲರು. ಗುರು ಎಂದಿಗೂ ಅಪೇಕ್ಷೆ ಮಾಡದೆ ಮತ್ತೊಬ್ಬರ ಬದುಕಿನ ಏಳಿಗೆಗೆ ಸಹಕರಿಸುವ ಮನಸ್ಸುಳ್ಳವರು. ಅಂತಹ ಸುಂದರ ಮನಸ್ಸಿನ ವ್ಯಕ್ತಿತ್ವಗಳು ನಮ್ಮ ನಿಮ್ಮೆಲ್ಲರ ಬದುಕಿನಲ್ಲಿ ಗುರುಗಳಾಗಿ ಇಂದಿಗೂ ಜೊತೆಗಿದ್ದಾರೆ. ಹಾಗಾಗಿ ನಾವು ಈ ಗುರು ಪೂರ್ಣಿಮೆಯ ದಿನ ಮಾಡಬಹುದಾದ ಅತ್ಯುನ್ನತ ಕಾರ್ಯವೆಂದರೆ ಅಂತಹ ಗುರುಗಳಿಗೆ ಕೃತಜ್ಞತೆ ಸಲ್ಲಿಸುವುದು. ಯಾವ ವ್ಯಕ್ತಿಯಲ್ಲಿ ಕೃತಜ್ಞತೆಯ ಭಾವ ಮೂಡದೋ ಅಂತವರು ಜ್ಞಾನದ ಶಿಖರ ಏರಿದರು ಅವರ ಕಲಿತಿರುವ ವಿದ್ಯೆ ತೃಣ ಸಮಾನ. ಏಕೆಂದರೆ ಕೃತಜ್ಞತೆ ಕಲಿಸದ ವಿದ್ಯೆಯನ್ನು ಅರಿತು ಉಪಯೋಗವೇನು?
ವಿದ್ಯಾ ಸರಸ್ವತಿಯನ್ನು ನಮ್ಮೆಲ್ಲರ ಬದುಕಿನಲ್ಲಿ ನೆಲೆಯೂರು ವಂತೆ ಮಾಡಿಸಿ ಇಂದಿನ ನಮ್ಮ ಒಳ್ಳೆಯ ಬದುಕಿನ ಸ್ಥಿತಿಗೆ ಕಾರಣರಾದವರಿಗೆ ನಮ್ಮ ಹೃದಯದ ಮೂಲಕ ವಂದಿಸುತ್ತ ಮುಂದೆಯೂ ಇದೇ ಭಾವವನ್ನು ಇಟ್ಟುಕೊಳ್ಳುವಂತಾಗಲಿ ನಮ್ಮೆಲ್ಲರಿಗೂ ಎಂದು ಆಶಿಸೋಣ.
- ಪ್ರದೀಪ ಶೆಟ್ಟಿ ಬೇಳೂರು
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ