(ಸಾಂದರ್ಭಿಕ ಚಿತ್ರ)
ಒಂದು ಜಿಂಕೆ ತನ್ನ ತ್ರಾಣವನ್ನೆಲ್ಲಾ ಒಟ್ಟು ಮಾಡಿ ಓಡುತ್ತಲಿದೆ. ಅದರ ಹಿಂದೆಯೇ ಒಂದು ಹುಲಿ ತನ್ನ ತ್ರಾಣವನ್ನೆಲ್ಲಾ ಒಟ್ಟು ಮಾಡಿ ಓಡುತ್ತಲಿದೆ. ಜಿಂಕೆ ಓಡುತ್ತಲಿರುವುದು ತನ್ನ ಪ್ರಾಣವನ್ನು ಉಳಿಸಿಕೊಳ್ಳಲು ಹುಲಿ ಓಡುತ್ತಲಿರುವುದೂ ತನ್ನ ಪ್ರಾಣವನ್ನು ಉಳಿಸಿಕೊಳ್ಳಲು. ಹುಲಿಯ ಪ್ರಾಣ ಉಳಿಯ ಬೇಕಾದರೆ ಜಿಂಕೆಯ ಪ್ರಾಣ ಹೋಗಲೇಬೇಕು. ಜಿಂಕೆ ಹುಲಿಗೆ ಸಿಕ್ಕಿತು ಜಿಂಕೆಯ ಕಣ್ಣಲ್ಲಿ ನೋವು ನೀರು, ಹುಲಿಯ ಕಣ್ಣಿನಲ್ಲಿ ಆನಂದ, ಜಿಂಕೆಯ ಆಕ್ರಂದನ ಹುಲಿಗೆ ತೃಪ್ತಿ. ಜಿಂಕೆ ಸತ್ತಿತು ಹುಲಿ ಬದುಕಿತು. ಜಿಂಕೆ ಸತ್ತು ಎಷ್ಟೋ ದಿನಗಳಿಂದ ಊಟವಿಲ್ಲದೆ ಹಸಿವಿನಿಂದ ಪ್ರಾಣಸಂಕಟವನ್ನು ಅನುಭವಿಸುತ್ತಿದ್ದ ಹುಲಿಯನ್ನು ಉಳಿಸಿತು. ಇಲ್ಲಿ ದೇವರು ಕಾಯ್ದದ್ದು ಹುಲಿಯನ್ನು, ಕೊಂದದ್ದು ಜಿಂಕೆಯನ್ನು. ಒಂದನ್ನು ಕಾಯಲು ಮತ್ತೊಂದನ್ನು ಕೊಲ್ಲಲೇಬೇಕು ಇಂದ್ರನನ್ನು ಕಾಯಲು ಬಲಿಯನ್ನು ತುಳಿದಂತೆ. ಕೊಲ್ಲದೇ ಕಾಯುವ ಶಕ್ತಿ ದೇವರಿಗಿದೆ ಎಂದಾದರೆ ಅದು ಸೃಷ್ಟಿಯ ಅಸಮತೋಲನ (Ecological Imbalance) ಸೃಷ್ಟಿಯ ಅಂತ್ಯವಷ್ಟೆ.
ಆತ್ಮೀಯ ಗೆಳೆಯರಾದ ಜಗದೀಶರ ಒಂದು ಪೋಸ್ಟ್ ನನ್ನ ಚಿಂತನೆಯನ್ನು ಕೆದಕಿ ಈ ಲೇಖನವನ್ನು ಬರೆಯಿಸಿದೆ. ಒಮ್ಮೆ ಆಕಾಶವನ್ನು ಕಂಡಾಗ ಗೋಚರಿಸುತ್ತದೆ ನೀಲಸ್ಥಾಯಿರೂಪ, ಅಲ್ಲಲ್ಲಿ ಚುಕ್ಕಿ. ಅದೇ ಪೂರ್ವದಲ್ಲಿ ಹುಟ್ಟುವ ಸೂರ್ಯ ಪಶ್ಚಿಮದಲ್ಲಿ ಮುಳುಗುತ್ತಾನೆ. ವರ್ಷದಲ್ಲಿ ಆರು ಋತು, ಎರಡು ಯಾನ ಸೂರ್ಯನದ್ದು ವರ್ಷದಲ್ಲಿ. ಬದಲಾದೀತೆ ಇದು? ನಾನು ಕಂಡಂತೆ ಇಲ್ಲ ನನ್ನಜ್ಜ ಕಂಡಂತೆಯೂ ಇಲ್ಲ. ಸೃಷ್ಟಿ ಸ್ವಯಂ ನಿಯಂತ್ರಿತ, ಸ್ವಯಂಸಂಚಾಲನ ಘಟಕ (Self regulated n Self sustained) ಇಲ್ಲದಿದ್ದರೆ ನಮ್ಮ ಅಧ್ಯಾತ್ಮದಲ್ಲಿ "ಅಹಂ ಬ್ರಹ್ಮಾಸ್ಮಿ" ಎನ್ನುವ ಪದವೇ ಬರುತ್ತಿರಲಿಲ್ಲ. ಮೇಲೊಬ್ಬ ಸೃಷ್ಟಿ ಕರ್ತ ಇರುವಾಗ ನಾನು ಸೃಷ್ಟಿಕರ್ತನಾಗಲು ಸಾಧ್ಯವಾದರೂ ಹೇಗೆ?. ಧರ್ಮ ಕಂಡ ದೇವರು ಯುಗ ಯುಗಾಂತರಗಳಿಂದ ಕಾಲಕ್ಕೆ ತಕ್ಕಂತೆ ಬದಲಾಗಿರುವುದೇ ಈ ಎಲ್ಲಾ ಗೊಂದಲಕ್ಕೆ ಕಾರಣ. ಉದಾಹರಣೆಗೆ ನಾನು ಕಂಡಂತೆ ನಾನು ಚಿಕ್ಕವನಿರುವಾಗ ವರಮಹಾಲಕ್ಷ್ಮಿ ವ್ರತ ಒಂದು ವ್ರತವಷ್ಟೆ ಅಲ್ಲಿ ಉಪವಾಸ ನಿಯಮಗಳಿಗಷ್ಟೆ ಜಾಗ ಈಗಿನ ವರಮಹಾಲಕ್ಷ್ಮಿಯ ಹಬ್ಬದಂತೆ ಆಡಂಭರಕ್ಕಲ್ಲ. ವೇದಗಳ ಕಾಲಕ್ಕೆ ಒಮ್ಮೆ ತಿರುಗಿ ನೋಡಿ ಇಲ್ಲಿ ವಿಷ್ಣು ಶಿವ ಅವತಾರ ಕತೆ ಈ ಯಾವುದಕ್ಕೂ ಮನ್ನಣೆ ಇಲ್ಲ. ರುದ್ರ, ವಾಯು, ಅಗ್ನಿ, ವರುಣ, ಪುರುಷ, ಪ್ರಕೃತಿ ಇವನ್ನೇ ನೀವು ಕಾಣುವುದು. ಈ ರುದ್ರ ಪುರಾಣಗಳ ಕಾಲಕ್ಕೆ ಶಿವನಾದ. ವೇದಗಳ ಕಾಲ ಮನುಷ್ಯನಲ್ಲಿ ಧರ್ಮದ ಜಾಗೃತಿಯನ್ನು ಮೂಡಿಸಿದ ಕಾಲ ಈ ಕಾಲದಲ್ಲಿ ಮನುಷ್ಯ ತನ್ನ ಕಣ್ಣಿಗೆ ಕಾಣುವುದನ್ನೇ ಆರಾಧಿಸಿ ಪೂಜಿಸಿದ್ದ. ಕಾಲಾನಂತರ ಕಲ್ಪನಾತೀತ ಶಕ್ತಿಗೆ ಪ್ರಾಮುಖ್ಯತೆ ಕೊಟ್ಟು ಎಷ್ಟು ಕೋಟಿ ದೇವರನ್ನು ಮಾಡಿಕೊಂಡೆವು.
ದೇವರು- ಧರ್ಮ ಎನ್ನುವ ಪರಿಕಲ್ಪನೆ ಮನುಷ್ಯನಲ್ಲಿ ಬಂದಾಗಲೇ ಭಿನ್ನತೆ ಕಾಡಿತು ವಿವಿಧ ಧರ್ಮಗಳು ಮೇಲು ಕೀಳು ಭಾವನೆಗಳು ಹುಟ್ಟಿಕೊಂಡವು ಇರುವ ಒಂದೇ ಶಕ್ತಿಯನ್ನು ಬಗೆ ಬಗೆಯ ರೂಪಗಳಲ್ಲಿ ಬಗೆ ಬಗೆಯ ಹೆಸರಿನಲ್ಲಿ ಆರಾಧಿಸಲು ಪ್ರಾರಂಭಿಸಿದರು. ಉಪನಿಷತ್ತಿನ ಒಂದು ಶ್ಲೋಕ "ಅಸತೋಮ ಸದ್ಗಮಯ ತಮಸೋಮ ಜ್ಯೋತಿರ್ಗಮಯ..." ಈ ಶ್ಲೋಕದ ಭಾವಾರ್ಥಕ್ಕೂ ಸಿದ್ದಪ್ಪಾಜಿಯ ಜಾನಪದ ಗೀತೆಯ "ಆದಿಜ್ಯೋತಿ ಬನ್ಯೋ ಪರಂಜ್ಯೋತಿ ಬನ್ಯೋ... ಅಯ್ಯ ಪದವನಾಡೊ ನಾಲ್ಗೆಮೇಲೆ ಬಂದೊದಗೊ ಧರ್ಮಗುರುವೇ" ಈ ಹಾಡಿಗೂ ಇರುವ ವ್ಯತ್ಯಾಸವಾದರೂ ಏನೂ. ಆದಿಜ್ಯೋತಿ ಶಿವ. ಉಪನಿಷತ್ತಿನ ಶ್ಲೋಕವೂ ಅವನನ್ನೇ ಕರೆದಿದೆ, ಜಾನಪದ ಹಾಡೂ ಅವನನ್ನೇ ಕರೆದಿದೆ. ಇನ್ನೂ ವೈಜ್ಞಾನಿಕವಾಗಿ ಹೇಳುವುದಾದರೆ ಸೃಷ್ಟಿಯ ಮೊದಲು ಆದ ಮಹಾಸ್ಫೋಟದಿಂದ ಪ್ರಜ್ಜಲಿಸಿದ ಅಗಣಿತಸೂರ್ಯಪ್ರಕಾಶ ಬೆಳಕೇ ಈ ಆದಿಜ್ಯೋತಿ ಅಥವ ಶಿವ. ಇದಕ್ಕೆ ಬೇಕಷ್ಟು ಕತೆಗಳು ನಮ್ಮ ಪುರಾಣದಲ್ಲಿಯೇ ಸಿಕ್ಕುತ್ತವೆ. ಇಲ್ಲಿ ಗಮನಿಸಬೇಕಾದ ಅಂಶ ಒಂದು ಜಾನಪದರು ಉಪನಿಷತ್ತನ್ನು ಓದದೆಯೂ ಕೇಳದೆಯೂ ಇರಬಹುದು. ಆದರೆ ನಮ್ಮ ಇಂದ್ರೀಯಕ್ಕೆಟುಕದ ಅತೀಂದ್ರಿಯ ಶಕ್ತಿಯ ಇರುವೊಂದನ್ನು ಗ್ರಹಿಸಿದ್ದಾರೆ, ಗುರುತಿಸಿದ್ದಾರೆ. ಅಲ್ಲಿಗೆ ಒಂದೇ ಶಕ್ತಿಯ ಅಗಣಿತ ಚೂರುಗಳು ನಾವೂ ನೀವು.
ಧರ್ಮದ ಹಾದಿಯಲ್ಲಿ ಬಂದ ತತ್ವಗಳು ಮನುಷ್ಯನನ್ನು ಮತ್ತಷ್ಟು ಗೊಂದಲಕ್ಕೀಡು ಮಾಡಿದ್ದು ಸತ್ಯ. ಆದಿಶಂಕರಾಚಾರ್ಯರ ಅದ್ವೈತ ಒಂದು ಹಂತದ ತತ್ವವಾದರೆ, ಮಧ್ವಾಚಾರ್ಯರ ದ್ವೈತ ಒಂದು ಹಂತದ್ದು. ಸ್ವಲ್ಪ ವಿಜ್ಞಾನದ ಅರಿವಿದ್ದ ಯಾರೂ ಈ ಎರಡರಲ್ಲಿಯೂ ಅಂತಹ ಬೇಧವನ್ನು ಕಾಣಲಾರರು. ಆಗಲೇ ಹೇಳಿದ ಹಾಗೆ ಸೃಷ್ಟಿ ಸ್ವಯಂ ನಿಂತ್ರಿತ ಮತ್ತು ಸ್ವಯಂ ಸಂಚಾಲಿತ ಎಂದು. ಯಾರೂ ನಿಂತು ಭೂಮಿಯನ್ನು ತಳ್ಳುತ್ತಲಿಲ್ಲ ಒಂದೇ ಒಂದು ಸೆಂ.ಮಿ ಆಚೀಚೆ ಕದಲದೆ ಸೂರ್ಯನ ಸುತ್ತ ತನ್ನ ಪಥದಲ್ಲಿ ಸುತ್ತುತ್ತಲಿದೆ. ಸೂರ್ಯನಾಗಲೀ ಗ್ಯಾಲಕ್ಸಿಯಾಗಲೀ ಎಲ್ಲವೂ ತನ್ನಷ್ಟಕ್ಕೆ ತಾವು ಕಾರ್ಯಪ್ರವೃತ್ತಕಾಗಿವೆ. ಹೀಗಿರುವಾಗ ದೇವರು? ದೇವರು ಸರ್ವಶಕ್ತ, ಸರ್ವಾಂತರ್ಯಾಮಿ. ಈ ಆರೋಪಗಳನ್ನು ಗುಡಿಯ ದೇವರಿಗೆ ಹೊರಿಸಿದವರು ಯಾರು? ದೇವರು ಸರ್ವಶಕ್ತನಾಗಿರಲಿಕ್ಕೂ ಸಾಕು ಇಲ್ಲದಿರಲಿಕ್ಕೂ ಸಾಕು. ಇಲ್ಲ ಎನ್ನುವು ಶೂನ್ಯಭಾವಕ್ಕಿಂತ ಇದ್ದಾನೆ ಎನ್ನುವ ಪೂರ್ಣಭಾವ ಇದ್ದರೆ ಒಳಿತು. ಆ ನಿಟ್ಟಿನಲ್ಲಿ ಇಡೀ ವಿಶ್ವದಲ್ಲಿ ಒಬ್ಬ ಸರ್ವಶಕ್ತನಿದ್ದಾನೆ ಎನ್ನೋಣ ಆದರೆ ನಮ್ಮಂತೆಯೇ ಇದ್ದಾನೆ ಸ್ನಾನ ಮಾಡುತ್ತಾನೆ ಮಡಿಯುಟ್ಟು ಗಂಧಪೂಸಿ ಊಟಮಾಡಿ ಮಲಗುತ್ತಾನೆ ಎನ್ನುವುದು ಎಷ್ಟು ಸರಿ. ನಮ್ಮ ಸಮಾಧಾನಕ್ಕೆ ಸರಿಯಷ್ಟೆ. ಸರ್ವಶಕ್ತನೊಬ್ಬ ಇದ್ದರೆ ಉಸಿರಾಡುವ ಜೀವಿಯೇ ಆಗಿರಬೇಕಿಲ್ಲ. ಉಸಿರಾಡುವ ಎಲ್ಲವನ್ನೂ ನಿಯಂತ್ರಿಸುವ ಉಸಿರಿಲ್ಲದ ಕ್ರಿಯಾಶಕ್ತಿಯಾದರೂ ಆದೀತು. ಕಾರಂತರ ಮಾತು ನೆನಪಿಗೆ ಬರುತ್ತದೆ ನನಗೆ "ದೇವರು ಅವತಾರವೆತ್ತಿದನಂತೆ ಸಂಹಾರ ಮಾಡಲು. ಅವನೇ ಸೃಷ್ಟಿಸಿದ ಒಂದು ಹುಳು ಈ ರಾಕ್ಷಸ ಇವನನ್ನು ಕೊಲ್ಲಲು ಅವತಾರವೆತ್ತಿ ಬರಬೇಕೆ ಒಂದು ಸಿಡಿಲು ಸಿಡಿಸಿದ್ದರೆ ಆಗುತ್ತಿತ್ತಲ್ಲವೇ?" ಬಹಳ ದೂರದೃಷ್ಟಿ ಕಾರಂತರದ್ದು. ಬಹುಮುಖ್ಯವಾಗಿ ಇಲ್ಲಿ ಗಮನಿಸಬೇಕಾದದ್ದು ಪುರಾಣಗಳು, ಕತೆಗಳು ಇರುವುದು ಅದರೊಳಗಿನ ಸಾರ ತಿಳಿಯುವುದಕ್ಕಾಗಿ ಹೊರತು ಕತೆಯನ್ನು ತಪ್ಪು ತಿಳಿಯುವುದಕ್ಕಾಗಿ ಅಲ್ಲ.
ದೇವರು ಇದ್ದಾನೆ ಎಂದು ನಂಬುವ. ನಂಬಿಕೆಗಿಂತಲೂ ಮಿಗಿಲಾದ ದೇವರಿಲ್ಲ. ಈ ನಂಬಿಕೆಯೇ ನಮ್ಮೊಳಗೊಂದು ಹೊಸ ಚೈತನ್ಯ ತರುವಾಗ ದೇವರು ನಂಬಿಕೆಯೊಳಗೇ ಇದ್ದಾನೆ ಎಂದುಕೊಳ್ಳುವುದು ಉತ್ತಮ. ಕೃಷ್ಣ ದೇವಕಿಯಲ್ಲಿ ಹುಟ್ಟಿದ, ಯಶೋದೆಯನ್ನು ಸೇರಿದ ತುಂಟುತನದಿಂದ ಮುದ್ದಾಗಿ ಆಡಿಬೆಳೆದ ಎನ್ನುವಾಗ ಅದೇ ಮುಗ್ಧತೆಯನ್ನು ನಮ್ಮ ಮಕ್ಕಳಲ್ಲಿಯೂ ನಾವು ಕಾಣಬಹುದು. ವೇಷ ಸ್ಪರ್ಧೆಗಳಿಗೆ ಯಾರು ತಾನೆ ಮಕ್ಕಳನ್ನು ಕೃಷ್ಣನಂತೆ ಸಿಂಗರಿಸುವುದಿಲ್ಲ ಹೇಳಿ. ಆ ಮಕ್ಕಳ ಮುಗ್ಧತೆಯಲ್ಲಿರುವುದೇ ಸರ್ವಶಕ್ತಿ ಮಕ್ಕಳೇ ಕೃಷ್ಣ, ಕೃಷ್ಣನೇ ಸರ್ವಶಕ್ತ. ಎಂತಹ ಕಠೋರ ಮನಸ್ಸನ್ನು ಕರಗಿಸುವ ಶಕ್ತಿ ಮಗುವಿನ ಮುಗ್ಧತೆಗಿದೆ ಎಂದಮೇಲೆ ಅದು ಸರ್ವಶಕ್ತನಲ್ಲವೇ. ಕೊಲ್ಲಲು, ಕಾಯಲೂ ದೇವರು ನಮ್ಮ ಕಾವಲುಗಾರನಲ್ಲ. ಕಾವಲುಗಾರನಂತೆ ದೇವರನ್ನು ಕಾಣುವುದೂ ಬೇಡ. ಹಾಗೆ ಎಲ್ಲವನ್ನೂ ನೋಡುತ್ತ ಎಲ್ಲೋ ಒಂದು ಕಡೆ ನಿಷ್ಕ್ರಿಯನಾಗಿ ಕುಳಿತಿರುವುದೇ ಆದರೆ ಅವನು ದೇವರಾಗುತ್ತಾನೆಯೇ? ಸ್ವಯಂನಿಯಂತ್ರಿತ ಸ್ವಯಂಚಾಲಿತ ಈ ಸೃಷ್ಟಿಗೆ ಮೂಲಶಕ್ತಿಯನ್ನು ತುಂಬಿದ ಆ ಕ್ರಿಯೆ ಮತ್ತು ಕಾರಣವೇ ದೇವರು. ಆ ದೇವರೇ ನಮ್ಮ ನಿಮ್ಮೊಳಗೆ ಸರ್ವಾಂತರ್ಯಾಮಿಯಾಗಿದ್ದಾನೆ. ಅವನನ್ನು ಜಾಗೃತನನ್ನಾಗಿಸಿ ಅರಿಯುವ ಕೆಲಸ ಮಾತ್ರ ನಮ್ಮದು ಅಷ್ಟೆ.
- ಡಾ.ಭಾಸ್ಕರ ಮಾಳ್ವ
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ