‘ಸುಸ್ಥಿರತೆಗೆ ಆರ್ಥಿಕತೆಯಷ್ಟೇ ಸಮಾನತೆಯೂ ಅಗತ್ಯ' - ಉಲ್ಲಾಸ್ ಕಾಮತ್
ಮಿಜಾರು: ಉದ್ಯೋಗ ಅನ್ವೇಷಕರ ಬದಲು ಉದ್ಯೋಗದಾತರಾಗಿ ಎಂದು ಜ್ಯೋತಿ ಲ್ಯಾಬ್ಸ್ ಮಾಜಿ ಜಂಟಿ ವ್ಯವಸ್ಥಾಪಕ ನಿರ್ದೇಶಕ ಉಲ್ಲಾಸ್ ಕಾಮತ್ ಯುವ ಜನತೆಗೆ ಕರೆ ನೀಡಿದರು.
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಹಾಗೂ ಕೇಂದ್ರ ಯುವ ವ್ಯವಹಾರ ಮತ್ತು ಕ್ರೀಡಾ ಇಲಾಖೆ, ಯಂಗ್ ಇಂಡಿಯನ್ ಮಂಗಳೂರು ಘಟಕ, ಭಾರತೀಯ ಕೈಗಾರಿಕೆಗಳ ಒಕ್ಕೂಟ (ಸಿಐಐ), ಜಿ20, ಯುವ, ವೈ20 ಸಹಯೋಗದಲ್ಲಿ ಸ್ವಾತಂತ್ರ್ಯದ ಅಮೃತ ಮಹೋತ್ಸವ ಅಂಗವಾಗಿ ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನ ಆವರಣದಲ್ಲಿ ಶನಿವಾರ ಹಮ್ಮಿಕೊಂಡ 'ದೇಶದ ಭವಿಷ್ಯಕ್ಕಾಗಿ ವ್ಯವಹಾರಗಳ ಮರುಚಿತ್ರಣದೆಡೆಗೆ ಯುವ ಭಾರತೀಯ ಸಾಧಕರ ಜೊತೆ ಸಂವಾದ' - 'ವೈ -20 ಮಾತುಕತೆ' ಯಲ್ಲಿ ಅವರು ಮಾತನಾಡಿದರು.
ಭಾರತ ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮುತ್ತಿದೆ. ಆದರೆ ಶ್ರೀಮಂತರು ಬಡವರ ಮಧ್ಯದ ಅಂತರವೂ ಹೆಚ್ಚುತ್ತಿದೆ. ಲಿಂಗ ಸಮಾನತೆ, ಹಸಿವು ಮುಕ್ತ, ಪರಿಸರ ರಕ್ಷಣೆಯಂತಹ ವಿಚಾರಗಳ ಬಗ್ಗೆಯೂ ಯುವಜನತೆ ಕಣ್ತೆರೆದು ನೋಡಬೇಕಾಗಿದೆ. ಆಗ ಸುಸ್ಥಿರ ಅಭಿವೃದ್ಧಿ ಸಾಧ್ಯ ಎಂದರು.
ನಿಮಗೆ ಎಷ್ಟು ಅಗತ್ಯವೋ ಅಷ್ಟೇ ಬಳಸಿ. ಆಹಾರ ವ್ಯರ್ಥವೂ ಇತರರ ಅನ್ನ ಕಸಿದಂತೆ. ಇಂತಹ ಸೂಕ್ಷ್ಮ ವಿಚಾರಗಳ ಬಗ್ಗೆ ಗಮನಹರಿಸಿ ಎಂದರು.
ದೇಶದಲ್ಲಿ ಡಿಜಿಟಲ್ ಕ್ರಾಂತಿ ಆಗುತ್ತಿದೆ. ಸರ್ಕಾರವೇ ಡಿಜಿಟಲೈಸೇಷನ್ ಹೆಜ್ಜೆ ಇಡುತ್ತಿದೆ. ಜಾಗತಿಕ ಡಿಜಿಟಲ್ ಪಾವತಿ ವ್ಯವಸ್ಥೆಯಲ್ಲಿ ದೇಶದ ಪಾಲು ಶೇ 45ಕ್ಕೂ ಹೆಚ್ಚಿದೆ. ಬಡ, ಹಿಂದುಳಿದ, ಮೂರನೇ ಆರ್ಥಿಕತೆ ಎಂದು ಕರೆಯಿಸಿಕೊಳ್ಳುತ್ತಿದ್ದ ಭಾರತವು ಇಂದು ಅಭಿವೃದ್ಧಿಶಿಲತೆಯೊಂದಿಗೆ ಅಭಿವೃದ್ಧಿ ಹೊಂದಿದ ರಾಷ್ಟ್ರವಾಗಲು ದಾಪುಗಾಲು ಇಡುತ್ತಿದೆ ಎಂದು ಆರ್ಥಿಕ ಬೆಳವಣಿಗೆಯನ್ನು ಮೆಲುಕು ಹಾಕಿದರು. ಸ್ಟಾರ್ಟ್ ಅಪ್ಸ್ ಗಳು ಬರುತ್ತಿದ್ದರೂ, ತಂತ್ರಜ್ಞಾನ, ಕೃತಕ ಬುದ್ಧಿಮತ್ತೆ, ರೋಬೊಟಿಕ್ಸ್ ಗಳೂ ಉದ್ಯೋಗ ಕಸಿಯುತ್ತಿವೆ. ಇದೂ ಒಂದು ಸವಾಲು ಎಂದರು.
ಉದ್ಯಮಶೀಲತೆಗೆ ವಯಸ್ಸಿನ ಹಂಗಿಲ್ಲ. ಉತ್ತಮ ಯೋಚನೆ ಇದ್ದರೆ ಯೋಜನೆಗೆ ಬಂಡವಾಳ ಸಿಗುತ್ತದೆ. ವಿದ್ಯಾರ್ಥಿಗಳು ಈ ದಿಶೆಯೆಡೆ ಹೆಜ್ಜೆ ಇಡಿ. ಸಮಾಜದ ಬೇಡಿಕೆಗೆ ಸ್ಪಂದಿಸಿ. ಎಲ್ಲರೂ ಅಸಾಧ್ಯ ಎಂದರೆ ಅದುವೇ ನಿಮ್ಮಿಂದ ಸಾಧ್ಯ. ಭಾರತ ವೇಗವಾಗಿ ಬದಲಾಗುತ್ತಿದೆ. ಯುವಜನತೆಯು ದೇಶದ ಭವಿಷ್ಯಕ್ಕಿಂತ ಹೆಚ್ಚಾಗಿ ವರ್ತಮಾನ ಎಂದರು.
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವ್ಯವಸ್ಥಾಪಕ ಟ್ರಸ್ಟಿ ವಿವೇಕ್ ಆಳ್ವ ಮಾತನಾಡಿ, ನೈಜ ಧರ್ಮ, ಭಾμÉಯ ಜ್ಞಾನ ಇಲ್ಲದವರೇ ಅದರ ಬಗ್ಗೆ ಹೆಚ್ಚು ಮಾತನಾಡುವುದೇ ಸಮಸ್ಯೆಯಾಗಿದೆ. ಪರಿಸರದ ಬಗ್ಗೆ ಜಾಗೃತಿ ಮೂಡಬೇಕಾಗಿದೆ ಎಂದರು
ಸಿಐಐ ಮಂಗಳೂರು ಘಟಕದ ಅಧ್ಯಕ್ಷ ಪ್ರವೀಣ್ ಕುಮಾರ್ ಕಲ್ಬಾವಿ ಪ್ರಾಸ್ತಾವಿಕವಾಗಿ ಮಾತನಾಡಿ, ಇಲ್ಲಿ ನಡೆಯುವ ಬುದ್ಧಿಮತ್ತೆಯ ಚರ್ಚೆ- ಮಾತುಕತೆ ದೇಶದ ಅಭಿವೃದ್ಧಿಯ ರೂಪುರೇಷೆಯಲ್ಲಿ ಕೊಡುಗೆ ನೀಡಲಿದೆ ಎಂದರು.
ಸಂವಾದ: ಸುಸ್ಥಿರ ಅಭಿವೃದ್ಧಿಯ ಸಫಲತೆ
ಸುಸ್ಥಿರತೆ ಕುರಿತ ಸಂವಾದಲ್ಲಿ ಮಾತನಾಡಿದ ಸಾಮಾಜಿಕ ಉದ್ಯಮಿ ದಿವ್ಯಾ ಹೆಗ್ಡೆ, ಪಾಶ್ಚಾತ್ಯಕರಣವೇ ಅಭಿವೃದ್ಧಿ ಅಲ್ಲ. ಸುಸ್ಥಿರತೆ ಏನೆಂದು ನಿಮ್ಮ ಅಜ್ಜಿಯಲ್ಲಿ ಕೇಳಿ. ಅವರು ಸುಸ್ಥಿರವಾಗಿ ಬದುಕಿದ್ದಾರೆ ಎಂದರು.
ಇಡಬ್ಲ್ಯೂಆರ್‍ಜಿ ಸಂಯೋಜಕ ಹಾಗೂ ವಿಜ್ಞಾನಿ ಡಾ. ಟಿ.ವಿ. ರಾಮಚಂದ್ರ ಮಾತನಾಡಿ, ವಲಸೆಯೇ ಇಂದಿನ ಸಮಸ್ಯೆ. ಗ್ರಾಮ ಸ್ವರಾಜ್ಯದಿಂದ ಪರಿಸರ ಇದು ಸಾಧ್ಯ ಎಂದರು. ನಮ್ಮ ಅಧಿಕಾರಿ ವರ್ಗದಲ್ಲಿ ವಸಾಹತುಶಾಹಿ ಮನಸ್ಥಿತಿ ಇನ್ನೂ ಹೋಗಿಲ್ಲ ಎಂದು ಅವರು ಬೇಸರ ವ್ಯಕ್ತಪಡಿಸಿದರು. ಎತ್ತಿನಹೊಳೆ ಲೂಟಿಕೋರರ ಯೋಜನೆ. ಧರ್ಮ, ಪ್ರದೇಶ ಭಾಷೆ ಇತ್ಯಾದಿಗಳ ಹಂಗು ವಿಜ್ಞಾನಿಗೆ ಇಲ್ಲ ಎಂದ ಅವರು, ಅಕಾಡೆಮಿಕ್ ಸ್ವಾತಂತ್ರ್ಯ ಅತ್ಯುನ್ನತ ಸಾಧನೆಗೆ ಸಹಕಾರಿ ಎಂದರು.
ಭಾರತದ ಸರೋವರ ಮನುಷ್ಯ(ಲೇಕ್‍ಮ್ಯಾನ್) ಆನಂದ್ ಮಲ್ಲಿಗೌಡ್ ಮಾತನಾಡಿ, ಸರಳತೆಯೇ ಸುಸ್ಥಿರತೆ. ನಾವು ಸರಳ ಸಂಸ್ಕೃತಿಯಲ್ಲಿ ಬದುಕಿದರೆ ಅದೇ ಆಧುನಿಕತೆ ಎಂದರು. ನಿಮ್ಮ ಶುದ್ಧ ನೀರು ಎಲ್ಲಿ ಹೋಯಿತು? ಬಾಟಲ್ ನೀರು ಶುದ್ಧವಲ್ಲ. ಇಂಡಿಯಾವನ್ನು ಭಾರತ ಮಾಡಬೇಕಾಗಿದೆ. ಹಣ ಇರುವುದು ನಮ್ಮ ಭೂಮಿಯನ್ನು ಕೊಲ್ಲಲು ಅಲ್ಲ. ಯಾವುದೇ ವಿಚಾರದ ಬಗ್ಗೆ ಭಾಷಣ ಅಲ್ಲ, ಬದ್ಧತೆ ಇದ್ದರೆ ಮಾತ್ರ ಯಶಸ್ಸು ಸಾಧ್ಯ ಎಂದರು.
ಯಂಗ್ ಇಂಡಿಯನ್ ಮಂಗಳೂರು ಘಟಕ ಅಧ್ಯಕ್ಷೆ ಸಮೀಕ್ಷಾ ಶೆಟ್ಟಿ ಸಂವಾದ ನಡೆಸಿಕೊಟ್ಟರು.
ಸಂವಾದ 2: ಡಿಜಿಟಲೀಕರಣದ ವೇಗವರ್ಧನೆ
ಕೋಡ್ ಕ್ರಾಫ್ಟ್ ಟೆಕ್ನಾಲಜಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ದೀಕ್ಷಿತ್ ರೈ ಮಾತನಾಡಿ, ತಂತ್ರಜ್ಞಾನ , ಡಿಜಿಟಲೈಸೇಷನ್ ಬೆಳವಣಿಗೆ ಜೊತೆ ಸುರಕ್ಷತೆ ಹಾಗೂ ಇತರ ಸವಾಲುಗಳೂ ಹೆಚ್ಚುತ್ತಿವೆ ಎಂದರು.
ಇಸಮುದಾಯ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ (ಸಿಇಒ) ಅನೂಪ್ ಪೈ ಮಾತನಾಡಿ, ಡಿಜಿಟಲ್ ವಿಕೇಂದ್ರೀಕರಣ ಇಂದಿನ ಅಗತ್ಯ. ಹಣದ ಚಲಾವಣೆ ವೇಗಗೊಂಡರೆ ಆರ್ಥಿಕತೆ ಅಭಿವೃದ್ಧಿ ಇನ್ನಷ್ಟು ಹೆಚ್ಚುತ್ತದೆ. ಡಿಜಿಟಲ್ ಮೂಲಸೌಕರ್ಯ ಹೆಚ್ಚಿಸುವುದು ಸರ್ಕಾರದ ಸವಾಲಾಗಿದೆ. ಸ್ಥಳೀಯ ಪರಿಸರ ಹಾಗೂ ಆರ್ಥಿಕತೆ ಸುಸ್ಥಿರತೆಗೆ ಅಗತ್ಯ ಎಂದರು.
ಹೆಲ್ತ್ ಪ್ಲಿಕ್ಸ್ ಟೆಕ್ನಾಲಜಿ ಮತ್ತು ಜಿನೊ ಟೆಕ್ನಾಲಜಿ ಸಂಸ್ಥಾಪಕ ರಘುರಾಜ್ ಸುಂದರ್‍ರಾಜು ಮಾತನಾಡಿ, ಜನರ ಒಳಿತಿಗಾಗಿ ತಂತ್ರಜ್ಞಾನ ಅಭಿವೃದ್ಧಿ ಪಡಿಸಿದರೆ, ಯಶಸ್ಸು ಖಚಿತ. ವೈದ್ಯಕೀಯ ತಂತ್ರಜ್ಞಾನ ಅಭಿವೃದ್ಧಿ ಪಡಿಸುವುದು ಬಹಳ ಸವಾಲಾಗಿತ್ತು ಎಂದರು. ಆರ್ಕೀವಾದ ಏಷ್ಯ ಫೆಸಿಪಿಕ್ ವ್ಯವಸ್ಥಾಪಕ ನಿರ್ದೇಶಕ ಆಶಿತ್ ಹೆಗ್ಡೆ ಸಂವಾದ ನಡೆಸಿಕೊಟ್ಟರು.
ಕಾರ್ಯಕ್ರಮದಲ್ಲಿ ದಕ್ಷಿಣ ಕನ್ನಡದ 5 ಕಾಲೇಜುಗಳಿಂದ 350ಕ್ಕೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಸಿಐಐನ ಉಪಾಧ್ಯಕ್ಷ ಅಜಿತ್ ಕಾಮತ್, ಆಳ್ವಾಸ್ ಎಂಜಿನಿಯರಿಂಗ್ ಮತ್ತು ತಂತ್ರಜ್ಞಾನ ಕಾಲೇಜಿನ ಪ್ರಾಂಶುಪಾಲ ಡಾ. ಪೀಟರ್ ಫೆನಾರ್ಂಡಿಸ್ ಸಭಾ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಯಂಗ್ ಇಂಡಿಯನ್ ಮಂಗಳೂರು ಘಟಕ ಅಧ್ಯಕ್ಷೆ ಸಮೀಕ್ಷಾ ಶೆಟ್ಟಿ ಸ್ವಾಗತಿಸಿ, ಯಂಗ್ ಇಂಡಿಯನ್ ಮಂಗಳೂರು ಘಟಕದ ಕೋ ಛೇರ್ ಸಿಎ ಸಲೋಮಿ ಲೋಬೊ ಫೆರೆರಾ ವಂದಿಸಿ, ಪ್ರತೀಕ್ಷಾ ಜೈನ್ ಕಾರ್ಯಕ್ರಮ ನಿರೂಪಿಸಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ