ಮತ್ತೊಮ್ಮೆ ರಾಜ್ಯದಲ್ಲಿ ಬಿಜೆಪಿಗೆ ಗದ್ದುಗೆಗೆ, ಮೋದಿಗೆ ರಾಮನ ರಕ್ಷೆಗೆ ಪ್ರಾರ್ಥನೆ
ಪಲಿಮಾರು ಶ್ರೀ, ಬಿ.ಎಲ್. ಸಂತೋಷ್, ಶಾಸಕರು ಅಭ್ಯರ್ಥಿಗಳು ಭಾಗಿ
ಉಡುಪಿ: ಉಡುಪಿ ಜಿಲ್ಲೆ ಹಿರಿಯಡಕ ಸಮೀಪದ ಮಾಣಾಯಿಯ ಪ್ರಾಚೀನವಾದ ಶ್ರೀ ಮುಖ್ಯಪ್ರಾಣ ದೇವರ ಮಠದಲ್ಲಿ ಅಕ್ಷಯ ತೃತೀಯಾ ಪರ್ವದಿನ ಭಾನುವಾರ ಅತ್ಯಂತ ವಿಶೇಷವೂ ಫಲಪ್ರದವೂ ಆದ ಶ್ರೀ ರಾಮಭದ್ರಕ ಪೂಜೆಯು ನಡೆಯಿತು.
ಭಾರತವನ್ನು ವಿಶ್ವದ ಶ್ರೇಷ್ಠ ರಾಷ್ಟ್ರವನ್ನಾಗಿಸಲು ಮತ್ತು ದೇಶದಲ್ಲಿ ಸುಭಿಕ್ಷ ಸಮೃದ್ಧ ರಾಮರಾಜ್ಯ ನಿರ್ಮಾಣವಾಗಲು ಶ್ರಮಿಸುತ್ತಿರುವ ಹೆಮ್ಮೆಯ ಪ್ರಧಾನಿ ಶ್ರೀ ನರೇಂದ್ರ ಮೋದಿಯವರಿಗೆ ಶ್ರೀ ರಾಮದೇವರ ಪೂರ್ಣ ರಕ್ಷೆ ಮತ್ತು ಅವರಿಗೆ ಮತ್ತಷ್ಟು ಬಲ ತುಂಬುವ ನಿಟ್ಟಿನಲ್ಲಿ ರಾಜ್ಯದಲ್ಲೂ ಈ ಚುನಾವಣೆಯಲ್ಲಿ ಅಭೂತಪೂರ್ವ ಜನಬೆಂಬಲ ಒದಗಿ ವಿಜಯ ಪ್ರಾಪ್ತವಾಗಬೇಕೆಂಬ ಸಂಕಲ್ಪದೊಂದಿಗೆ ಅನೇಕ ಸಮಾನ ಮನಸ್ಕ ವೈದಿಕರು ಸ್ವಯಂಸ್ಫೂರ್ತಿಯಿಂದ ಪೂಜಾವಿಧಿಯನ್ನು ನೆರವೇರಿಸಿದರು.
ಬೆಳಗ್ಗೆ ಸೂರ್ಯೋದಯದಿಂದ ಸೂರ್ಯಾಸ್ತ ಪರ್ಯಂತ ನಡೆದ ಈ ವಿಶೇಷ ಪೂಜೆಯಲ್ಲಿ ತಲಾ ಹದಿನಾರು ಬಾರಿ ಶ್ರೀರಾಮನ ಹೆಸರನ್ನು ಸಂಸ್ಕೃತ ಭಾಷೆಯಲ್ಲಿ ಮತ್ತು ಶ್ರೀ ರುದ್ರದೇವರ ಲಿಂಗವನ್ನು ಚಿತ್ರಿಸಿದ ಬೃಹದಾಕಾರದ ರಾಮಭದ್ರಕ ಮಂಡಲದಲ್ಲಿ ಶ್ರೀ ರಾಮಚಂದ್ರದೇವರನ್ನು ಮೂರು ಹೊತ್ತು ವಿಧಿಪೂರ್ವಕವಾಗಿ ಅರ್ಚಿಸಿ ಪೂಜಿಸಲಾಯಿತು.
ಪ್ರಧಾನಿ ನರೇಂದ್ರ ಮೋದಿ, ಮುಖ್ಯಮಂತ್ರಿ ಬೊಮ್ಮಾಯಿ ಹಾಗೂ ಉಡುಪಿ ಜಿಲ್ಲೆಯ ಎಲ್ಲ ಬಿಜೆಪಿ ಅಭ್ಯರ್ಥಿಗಳು ಮತ್ತು ಹಾಲಿ ಶಾಸಕರ ಜನ್ಮ ನಕ್ಷತ್ರ ಜನ್ಮ ರಾಶಿಯನ್ನು ಉಲ್ಲೇಖದೊಂದಿಗೆ ಜಿಲ್ಲಾ ಬಿಜೆಪಿ ಅಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಮತ್ತು ಪೂರ್ಣಿಮಾ ನಾಯಕ್ ದಂಪತಿ ಸಂಕಲ್ಪ ನೆರವೇರಿಸಿದರು.
ಶಾಸಕರಾದ ರಘುಪತಿ ಭಟ್ ಲಾಲಾಜಿ ಆರ್ ಮೆಂಡನ್, ಅಭ್ಯರ್ಥಿಗಳಾದ ಗುರ್ಮೆ ಸುರೇಶ್ ಶೆಟ್ಟಿ, ಯಶ್‌ಪಾಲ್ ಎ ಸುವರ್ಣ, ರಾ.ಸ್ವ. ಸಂಘದ ಹಿರಿಯರಾದ ಟಿ ಶಂಭು ಶೆಟ್ಟಿ ಮೊದಲಾದವರು ಭಾಗವಹಿಸಿ ಪ್ರಾರ್ಥನೆ ಸಲ್ಲಿಸಿದರು.
ಶ್ರೀ ಪಲಿಮಾರು ಮಠಾಧೀಶ ಶ್ರೀ ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರು ಭಾಗವಹಿಸಿ ಗುರುಪೂಜೆಯನ್ನು ಸ್ವೀಕರಿಸಿ ಅನುಗ್ರಹ ಸಂದೇಶ ನೀಡಿ ಅಕ್ಷಯ ತದಿಗೆಯ ಪರ್ವದಿನ ರಾಮದಾಸ ಹನುಂಮತನ ಸನ್ನಿಧಿಯಲ್ಲಿ ನಡೆಸಿದ ಈ ಸತ್ಕರ್ಮದ ಫಲ ಪ್ರಧಾನಿ ಮೋದಿಯವರಿಗೆ ಮತ್ತು ಅವರನ್ನು ಬಲ ಪಡಿಸಲು ನಿಂತಿರುವ ಪ್ರತಿಯೊಬ್ಬರಿಗೂ ಅಕ್ಷಯವಾಗಿ ದೊರೆಯಲಿ; ಅವರೆಲ್ಲರಿಗೆ ರಾಜ್ಯದ ಜನರ ಪ್ರೀತಿ ಅಭಿಮಾನಪೂರ್ವಕ ಬೆಂಬಲಗಳು ಅಕ್ಷಯವಾಗಿ ದೊರಕಲಿ ಎಂದರು.
ವಿದ್ವಾನ್ ಹೆರ್ಗ ಹರಿಪ್ರಸಾದ್ ಭಟ್ಟರ ನೇತೃತ್ವದಲ್ಲಿ ವೈದಿಕ ವಿದ್ವಾಂಸರಾದ ಸುಬ್ರಹ್ಮಣ್ಯ ಭಟ್ ಗುಂಡಿಬೈಲು ಹೆರ್ಗ ರವೀಂದ್ರ ಭಟ್ ಹಾಗೂ ಇತರೆ ಅನೇಕ ವೈದಿಕರು, ಶ್ರೀ ಮಠದ ಪ್ರಧಾನ ಅರ್ಚಕ ಮಾಧವ ಉಪಾಧ್ಯಾಯರು ಈ ಪೂಜೆಯನ್ನು ಸಂಯೋಜಿಸಿ ನೆರವೇರಿಸಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ