ಸೋಲಿನ ಭೀತಿಯಲ್ಲಿರುವ ಕಾಂಗ್ರೆಸ್‌ನ ಪ್ರಚಾರಕ್ಕೆ ದೇಶದ್ರೋಹಿಗಳು: ಕ್ಯಾಪ್ಟನ್ ಗಣೇಶ್ ಕಾರ್ಣಿಕ್

Upayuktha
0

ಯಾರೀ ಪ್ರತಾಪ್‌ ಸಿಂಹ ಎಂದ ಸಿದ್ದರಾಮಯ್ಯಗೆ 'ಯಾರೀ ಇಮ್ರಾನ್ ಪ್ರತಾಪ್ ಘಡಿ' ಪ್ರಶ್ನೆಯ ಮೂಲಕ ತಿರುಗೇಟು


ಮಂಗಳೂರು: ವಿಧಾನಸಭೆ ಚುನಾವಣೆಯಲ್ಲಿ ಸೋಲಿನ ಭೀತಿಯಲ್ಲಿರುವ ಕಾಂಗ್ರೆಸ್ ತನ್ನ ಪ್ರಚಾರಕ್ಕೆ ದೇಶದ್ರೋಹಿ ವ್ಯಕ್ತಿಗಳನ್ನು ಬಳಸಿಕೊಳ್ಳುತ್ತಿದೆ ಎಂದು ಬಿಜೆಪಿ ತೀವ್ರ ವಾಗ್ದಾಳಿ ನಡೆಸಿದೆ.

ಉತ್ತರ ಪ್ರದೇಶದಲ್ಲಿ ಇತ್ತೀಚೆಗೆ ಹತನಾದ ಮಾಫಿಯಾ ಡಾನ್‌ ಅತೀಕ್ ಅಹ್ಮದ್‌ನನ್ನು ತನ್ನ ಗುರು ಎಂದು ಹೇಳಿಕೊಂಡ ಕಾಂಗ್ರೆಸ್‌ನ ರಾಜ್ಯಸಭಾ ಸದಸ್ಯ ಇಮ್ರಾನ್ ಪ್ರತಾಪ್ ಘಡಿಯನ್ನು ರಾಜ್ಯ ಕಾಂಗ್ರೆಸ್ ತನ್ನ ಸ್ಟಾರ್ ಪ್ರಚಾರಕನೆಂದು ಘೋಷಿಸಿರುವುದನ್ನು ಬಿಜೆಪಿ ಖಂಡಿಸಿದೆ.


ವರುಣಾ ಕ್ಷೇತ್ರದಲ್ಲಿ ಪ್ರಚಾರ ಕಾರ್ಯದಲ್ಲಿ ತೊಡಗಿರುವ ಸಂಸದ ಪ್ರತಾಪ್ ಸಿಂಹ ಅವರನ್ನು 'ಯಾವನ್ರೀ ಅವನು ಪ್ರತಾಪ್ ಸಿಂಹ...? ಇಲ್ಯಾಕೆ ಬಂದಿದ್ದಾನೆ?' ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿರುವುದನ್ನು ಕೂಡ ಬಿಜೆಪಿ ಖಂಡಿಸಿದೆ.


ಮಾಫಿಯಾ ಡಾನ್‌ ಅತೀಕ್‌ ಅಹ್ಮದ್‌ನನ್ನು ತನ್ನ ಗುರು ಎಂದು ಹೇಳಿಕೊಳ್ಳುವ ಕಾಂಗ್ರೆಸ್‌ನ ರಾಜ್ಯಸಭಾ ಸದಸ್ಯ ಇಮ್ರಾನ್ ಪ್ರತಾಪ್ ಘಡಿಯವರನ್ನು ಆ ಪಕ್ಷ ತನ್ನ ಸ್ಟಾರ್ ಪ್ರಚಾರಕನೆಂದು ಹೆಸರಿಸಿರುವುದು ಕಾಂಗ್ರೆಸ್‌ನ ದೇಶವಿರೋಧಿ ಮನಸ್ಥಿತಿಯನ್ನು ಬಿಂಬಿಸುತ್ತದೆ ಎಂದು ಬಿಜೆಪಿಯ ರಾಜ್ಯ ವಕ್ತಾರ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಹೇಳಿದರು. ಈ ಕುರಿತು ಭಾನುವಾರ ಸುದ್ದಿಗೋಷ್ಠಿ ನಡೆಸಿದ ಅವರು ಹಲವು ಮಾಹಿತಿಗಳನ್ನು ನೀಡಿದರು.


ಯಾರು ಈ ಇಮ್ರಾನ್ ಪ್ರತಾಪ್ ಘಡಿ?

ಕಾಂಗ್ರೆಸ್‌ನ ರಾಷ್ಟ್ರೀಯ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷರಾಗಿರುವ ಇಮ್ರಾನ್ ಪ್ರತಾಪ್ ಘಡಿ, ಮಹಾರಾಷ್ಟ್ರದಿಂದ ರಾಜ್ಯಸಭೆಗೆ ಆಯ್ಕೆಯಾದವರು. ಮೂಲತಃ ಉತ್ತರ ಪ್ರದೇಶದ, ವಿವಾದಾತ್ಮಕ ಉರ್ದು ಕವಿ. ತನ್ನ ಶಾಯಿರಿಗಳ ಮೂಲಕ  ಪ್ರಸಿದ್ಧಿಗೆ ಬಂದವರು. ಹೈದರಾಬಾದ್‌ನಲ್ಲಿ ನಡೆದ ಸಿಎಎ ಗಲಭೆಗಳ ಸಂದರ್ಭದಲ್ಲಿ  'ಮುಝೇ ಹೈರತ್‌ ಹೈ ಕೀ ಇಸ್‌ ಹೈದರಾಬಾದ್‌ ಮೇ ಕೋಯೀ ಶಾಹೀನ್‌ಬಾಗ್‌ ಕ್ಯೋಂ ನಹೀಂ ಹೈ' ಎಂಬ ಪ್ರಚೋದನಕಾರಿ ಕರೆಯ ಮೂಲಕ ಶಾಹೀನ್‌ಬಾಗ್ ತರಹದ ಪ್ರತಿಭಟನೆಯನ್ನು ಪ್ರತಿಪಾದಿಸಿದ್ದ ವ್ಯಕ್ತಿ.


ಟಿಪ್ಪು ಜಯಂತಿಯ ಆಚರಣೆಗೆ ಕರ್ನಾಟಕದಲ್ಲಿ ಪ್ರತಿರೋಧ ಇದ್ದ ಸಂದರ್ಭದಲ್ಲಿ ಆತ ಅಲ್ಪಸಂಖ್ಯಾತರನ್ನು ಉದ್ದೇಶಿಸಿ- 'ನೀವೆಲ್ಲಾ ಟಿಪ್ಪುವಿನ ಸಂತತಿ. ತಲೆ ಕಡಿಯಬೇಕೇ ಹೊರತು ತಲೆ ತಗ್ಗಿಸಬಾರದು' ಎಂಬ ಹೇಳಿಕೆ; ಪ್ರತಿಯೋರ್ವ ಮುಸ್ಲಿಂ ಯುವಕ ಐದು ಜನ ಹಿಂದೂಗಳ ರುಂಡ ಚೆಂಡಾಡಬೇಕು ಎಂದು ಕೊಟ್ಟಿರುವ ಕರೆ ಆತ ಒಬ್ಬ ಮತೀಯ ಹಿಂಸಾವಾದಿ ಎಂಬುದನ್ನು ಸಾಬೀತುಪಡಿಸಿದೆ ಎಂದು ಕ್ಯಾಪ್ಟನ್ ಕಾರ್ಣಿಕ್ ಹೇಳಿದರು.


ಇದೇ ಇಮ್ರಾನ್ ಪ್ರತಾಪ್ ಘಡಿಯ ಮೇಲೆ ಮೊರಾದಾಬಾದ್‌ನ ಜಿಲ್ಲಾಡಳಿತ ಫೆಬ್ರವರಿ 2020ರಲ್ಲಿ ಸಿಎಎ ವಿರುದ್ಧ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ಹಿಂಸಾಚಾರ ಮತ್ತು ಆಸ್ತಿ ಪಾಸ್ತಿ ನಾಶದ ಮೊಕದ್ದಮೆಯಲ್ಲಿ  1 ಕೋಟಿ 4 ಲಕ್ಷದ 8 ಸಾವಿರ ರುಪಾಯಿಗಳ ಮೊತ್ತದ ದಂಡ ವಿಧಿಸಿರುವುದು ಇಲ್ಲಿ ಉಲ್ಲೇಖನೀಯ. ಈ ರೀತಿಯ ಹಿನ್ನೆಲೆಯುಳ್ಳ, ಅಪರಾಧ ಜಗತ್ತನ್ನು ವೈಭವೀಕರಿಸುವ, ಹಿಂಸಾ ಕೃತ್ಯವನ್ನು ಪ್ರಚೋದಿಸುವ, ಹಿಂದೂಗಳ ಹತ್ಯೆಗೆ ನೇರ ಕರೆ ಕೊಟ್ಟಿರುವ ಇಮ್ರಾನ್ ಪ್ರತಾಪ್ ಘಡಿ ಕರ್ನಾಟಕದ ವಿಧಾನಸಭೆ ಚುನಾವಣೆಯ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಯಾವ ಕಾರಣಗಳಿಗಾಗಿ ಸ್ಟಾರ್ ಪ್ರಚಾರಕನಾಗಬಲ್ಲ ಎನ್ನುವುದಕ್ಕೆ ಜಾತ್ಯತೀತತೆಯನ್ನು ಹಾಡಿ ಹೊಗಳುವ ಕಾಂಗ್ರೆಸ್ ಪಕ್ಷ ಉತ್ತರ ನೀಡಬೇಕು ಎಂದು ಕ್ಯಾಪ್ಟನ್ ಕಾರ್ಣಿಕ್ ಆಗ್ರಹಿಸಿದರು.


ಕನ್ನಡಿಗರಿಗೆ ಅವಮಾನ:

ಅಪರಾಧಿಗಳಿಗೆ ಮತ್ತು ಅಪರಾಧಿ ಕೃತ್ಯಗಳಿಗೆ ಪ್ರೋತ್ಸಾಹ ನೀಡುತ್ತಿರುವ ಇಮ್ರಾನ್ ಪ್ರತಾಪ್ ಘಡಿ ಎನ್ನುವ ವ್ಯಕ್ತಿಯನ್ನು ಅತ್ಯಂತ ಪ್ರಮುಖವಾದ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಸ್ಟಾರ್ ಪ್ರಚಾರಕನನ್ನಾಗಿ ನೇಮಿಸಿರುವುದು, ಪ್ರಜಾಪ್ರಭುತ್ವವನ್ನು ಗೌರವಿಸುವ, ಸಮಾಜದಲ್ಲಿ ಸಾಮರಸ್ಯ ಮತ್ತು ಶಾಂತಿಯನ್ನು ಪ್ರೀತಿಸುವ  6.5 ಕೋಟಿ ಕನ್ನಡಿಗರಿಗೆ ಮಾಡಿದ ಅವಮಾನ ಎಂದು ಕಾರ್ಣಿಕ್ ಬಣ್ಣಿಸಿದರು.


ನಮ್ಮ ನಾಡಿನ ಸಂಸದ ವರುಣಾ ಕ್ಷೇತ್ರಕ್ಕೆ ಪ್ರಚಾರಕ್ಕಾಗಿ ಹೋಗುವುದನ್ನು ಸಹಿಸಿಕೊಳ್ಳದ ನೀವು ಇಮ್ರಾನ್ ಪ್ರತಾಪ್ ಘಡಿಯನ್ನು ಅತ್ಯಂತ ಆತ್ಮೀಯತೆಯಿಂದ ಸ್ವಾಗತಿಸುತ್ತಿರುವುದು ಇಮ್ರಾನ್ ಪ್ರತಾಪ್ ಘಡಿ ಇನ್ನಿತರ ಅನೇಕ ದುಷ್ಕರ್ಮಿಗಳಂತೆ ನಿಮ್ಮ ಪಕ್ಷದ ಅಧ್ಯಕ್ಷರ ಸಹೋದರ ಎನ್ನುವ ಭಾವನೆಯಿಂದ ಆಗಿರಬಹುದೆಂದು ಭಾವಿಸುತ್ತೇನೆ ಎಂದು ಸಿದ್ದರಾಮಯ್ಯ ಅವರಿಗೆ ಕ್ಯಾ. ಕಾರ್ಣಿಕ್ ಕುಟುಕಿದರು.


ಈ ಹಿಂದೆ ಕೆಜಿ ಹಳ್ಳಿ, ಡಿಜೆ ಹಳ್ಳಿ ಗಲಭೆಯ ಸಂದರ್ಭದಲ್ಲಿ ಅಲ್ಲಿನ ದಲಿತ ಶಾಸಕನ ಮನೆಯ ಮೇಲೆ ದಾಳಿ ನಡೆಸಿ ಪೊಲೀಸ್ ವಾಹನಗಳನ್ನು ನಾಶಗೊಳಿಸಿದ ದುಷ್ಕರ್ಮಿಗಳನ್ನು "ನನ್ನ ಸಹೋದರರು" ಎಂದು ಕರೆದಿರುವ ಮತ್ತು ಕುಕ್ಕರ್ ಬಾಂಬ್ ಸ್ಫೋಟದ ಆರೋಪಿ, ಮೊಹಮ್ಮದ್ ಶಾರೀಕ್‌ನನ್ನು ರಾಜ್ಯ ಪೊಲೀಸ್ ವರಿಷ್ಠಾಧಿಕಾರಿಯವರು ಐಸಿಸ್‌ ಸಂಪರ್ಕ ಹೊಂದಿರುವ ಶಂಕಿತ ಭಯೋತ್ಪಾದಕ ಎಂದು ಹೇಳಿದಾಗಲೂ ಅಮಾಯಕನೆಂದು ಕಾಂಗ್ರೆಸ್‌ನ ಅಧ್ಯಕ್ಷರು ಬಣ್ಣಿಸಿರುವಾಗ ಇಮ್ರಾನ್‌ ಪ್ರತಾಪ್‌ ಘಡಿ ಅಂಥವರನ್ನು ಕಾಂಗ್ರೆಸ್‌ ನೇಮಿಸಿರುವುದು ಅಚ್ಚರಿಯೇನಲ್ಲ. ಆದರೆ ಇದರಿಂದ ಕಾಂಗ್ರೆಸ್‌ನ ಹಿಂದೂ ವಿರೋಧಿ ಮಾನಸಿಕತೆ ಸ್ಪಷ್ಟವಾಗಿದೆ ಎಂದು ಕಾರ್ಣಿಕ್ ಹೇಳಿದರು.


ನಾಡಿನ ಪ್ರಜ್ಞಾವಂತ ಮತದಾರರು ಕಾಂಗ್ರೆಸ್‌ನ ಮಾನಸಿಕತೆಯನ್ನು ಅರ್ಥೈಸಿಕೊಂಡು ಇಂತಹ ವ್ಯಕ್ತಿಯನ್ನು ಚುನಾವಣೆಯ ಸಂದರ್ಭದಲ್ಲಿ ಸ್ಟಾರ್ ಪ್ರಚಾರಕನನ್ನಾಗಿ ನೇಮಿಸಿರುವ  ನಿರ್ಣಯವನ್ನು ತಿರಸ್ಕರಿಸಿ ತಕ್ಕ  ಪಾಠ ಕಲಿಸಬೇಕೆಂದು ಅವರು ವಿನಂತಿಸಿದರು.

ಸುದ್ದಿಗೋಷ್ಠಿಯಲ್ಲಿ, ಜಿಲ್ಲಾ ಬಿಜೆಪಿ ವಕ್ತಾರ ಜಗದೀಶ್ ಶೇಣವ, ಸಾಮಾಜಿಕ ಜಾಲತಾಣ ಪ್ರಕೋಷ್ಠದ ಮುಖ್ಯಸ್ಥರಾದ ಅಜಿತ್ ಕುಮಾರ್ ಉಳ್ಳಾಲ, ರಾಜ್ಯ ಮಾಧ್ಯಮ ಸಂಚಾಲಕ ರತನ್ ರಮೇಶ್ ಪೂಜಾರಿ ಉಪಸ್ಥಿತರಿದ್ದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter

إرسال تعليق

0 تعليقات
إرسال تعليق (0)
Maruti Suzuki Festival of Colours
Maruti Suzuki Festival of Colours
To Top