ಮೂಡುಬಿದಿರೆ: ಇಲ್ಲಿನ ಸಮಾಜ ಮಂದಿರ ಸಭಾ (ರಿ.) ವತಿಯಿಂದ ಸಾಹಿತಿ ಅರವಿಂದ ಚೊಕ್ಕಾಡಿ ಅವರು ಬರೆದ 'ಕಬೀರನಾದ ಕುಬೇರ ಕಾರ್ನಾಡ್ ಸದಾಶಿವ ರಾವ್' ಕೃತಿಯ ಲೋಕಾರ್ಪಣೆ ಸಮಾರಂಭ ಏಪ್ರಿಲ್ 1ರಂದು ಶನಿವಾರ ಸಂಜೆ 4.30ಕ್ಕೆ ಸಮಾಜ ಮಂದಿರದಲ್ಲಿ ಜರಗಲಿದೆ.
ಹಿರಿಯ ಸಾಹಿತಿ ಡಾ. ನಾ. ಮೊಗಸಾಲೆ ಅವರು ಕೃತಿಯ ಲೋಕಾರ್ಪಣೆ ಮಾಡಲಿದ್ದಾರೆ. ಇತಿಹಾಸ ಸಂಶೋಧಕ ಡಾ. ಪುಂಡಿಕಾಯಿ ಗಣಪಯ್ಯ ಭಟ್ ಅವರು ಕೃತಿ ಪರಿಚಯ ಮಾಡಲಿದ್ದಾರೆ. ಉಡುಪಿಯ ಪೂರ್ಣಪ್ರಜ್ಞ ಸಂಧ್ಯಾ ಕಾಲೇಜಿನ ಪ್ರಾಂಶುಪಾಲೆ ಡಾ.ಸುಕನ್ಯಾ ಮೇರಿ ಜೆ. ಅವರು ಆಶಯದ ನುಡಿಗಳನ್ನಾಡಲಿದ್ದಾರೆ.
ಅರವಿಂದ ಚೊಕ್ಕಾಡಿ ಸಹಿತ ಗಣ್ಯರ ಉಪಸ್ಥಿತಿಯಲ್ಲಿ ಸಮಾಜ ಮಂದಿರ ಸಭಾದ ಅಧ್ಯಕ್ಷ, ಮಾಜಿ ಸಚಿವ ಕೆ. ಅಭಯಚಂದ್ರ ಜೈನ್ ಅಧ್ಯಕ್ಷತೆಯಲ್ಲಿ ಸಮಾರಂಭ ನಡೆಯಲಿದೆ ಎಂದು ಸಮಾಜ ಮಂದಿರ ಸಭಾದ ಪ್ರಕಟಣೆ ತಿಳಿಸಿದೆ.
ಕಬೀರನಾದ ಕುಬೇರ ಕಾರ್ನಾಡ್ ಸದಾಶಿವ ರಾವ್ ಕೃತಿಯ ಕುರಿತು:
ಕುಬೇರ ಹಣದ ಒಡೆಯ ಎಂದು ನಂಬಿಕೆ. ಕಾರ್ನಾಡ್ ಸದಾಶಿವ ರಾವ್ ಅವರ ಹಿರಿಯರು ಮುಲ್ಕಿಯ ಸಾವಂತರಸರ ಶಾನುಭಾಗರಾಗಿದ್ದು, ಅವರ ತಂದೆ ರಾಮಚಂದ್ರ ರಾಯರು ಹೆಸರಾಂತ ವಕೀಲರಾಗಿ ಆಗರ್ಭ ಶ್ರೀಮಂತರಾಗಿದ್ದರು. ಸ್ವಾತಂತ್ರ್ಯ ಹೋರಾಟಕ್ಕಾಗಿ ಕರ್ನಾಟಕದ ಭಾಗಕ್ಕೆ ಕಾಂಗ್ರೆಸ್ ಚಳವಳಿಯನ್ನು ತಂದ ಕಾರ್ನಾಡ್ ಸದಾಶಿವ ರಾಯರು ಸ್ವಾತಂತ್ರ್ಯ ಹೋರಾಟ, ದಲಿತೋದ್ಧಾರ, ನೆರೆ ಪರಿಹಾರ, ವಿಧವಾ ಪುನರ್ವಿವಾಹ, ರಾಷ್ಟ್ರೀಯ ಶಾಲೆಗಳು ಮುಂತಾಗಿ ಜನಸೇವೆಯಲ್ಲೆ ತೊಡಗಿ ತಮ್ಮ ಶ್ರೀಮಂತಿಕೆ ಎಲ್ಲವನ್ನೂ ಕಳೆದುಕೊಂಡು ಕೊನೆಗೆ ಫೈಝ್‌ಪುರ್ ಕಾಂಗ್ರೆಸ್ ಅಧಿವೇಶನದಿಂದ ಹಿಂದಿರುಗುವಾಗ ಮುಂಬೈಯಲ್ಲಿ ಬೀದಿ ಬದಿಯಲ್ಲಿ ಕುಸಿದು ಬಿದ್ದರು. ಅವರನ್ನು ಹರ್‌ಕಿಶನ್ ಆಸ್ಪತ್ರೆಗೆ ಸೇರಿಸಲಾಯಿತು. ತನ್ನ ಅನಾರೋಗ್ಯವನ್ನು ಲೆಕ್ಕಿಸದೆ ಜ್ವರ ಪೀಡಿತರಾಗಿದ್ದ ಸ್ವಾತಂತ್ರ್ಯ ಹೋರಾಟಗಾರರೊಬ್ಬರಿಗೆ ಮದ್ದು ತೆಗೆದುಕೊಳ್ಳಲು ತಮ್ಮ ಬಳಿ ಕೊನೆಗೆ ಉಳಿದಿದ್ದ ಐದು ರೂಪಾಯಿಯನ್ನೂ ಕೊಟ್ಟಿದ್ದರು. ಒಬ್ಬ ನಿರ್ಗತಿಕ ಅನಾಥನಂತೆ ಆಸ್ಪತ್ರೆಗೆ ಸೇರಿದ್ದ ಸದಾಶಿವ ರಾಯರ ಪಾರ್ಥೀವ ದೇಹ ಮರುದಿನ ಆಸ್ಪತ್ರೆಯಿಂದ ಹೊರ ಬರುವಾಗ ಕಾಲು ಹಾಕಲು ಜಾಗವಿಲ್ಲದಷ್ಟು ಜನ ಮುಂಬೈಯಲ್ಲಿ ಸೇರಿ ಅಂತಿಮ ಗೌರವವನ್ನು ಸಲ್ಲಿಸಿದ್ದರು. ಬಾಲಗಂಗಾಧರ ತಿಲಕರ ಮರಣದ ನಂತರ ಮುಂಬೈಯಲ್ಲಿ ಸಾವಿನ ಸಂದರ್ಭದಲ್ಲಿ ಆ ರೀತಿಯಲ್ಲಿ ಜನ ಸೇರಿದ್ದು ಕಾರ್ನಾಡ್ ಸದಾಶಿವ ರಾಯರಿಗೆ. ಒಬ್ಬ ನಿರ್ಗತಿಕನಿಗೆ ಈ ರೀತಿಯ ಗೌರವ ಸಲ್ಲುವುದಿಲ್ಲ. ಸಂತನಿಗೆ ಸಲ್ಲುವ ಗೌರವವರು. ಆದ್ದರಿಂದಲೇ ಕಾರ್ನಾಡ್ ಸದಾಶಿವ ರಾಯರು 'ಕಬೀರನಾದ ಕುಬೇರ'.
1881 ರ ಯುಗಾದಿಯ ದಿನ ಜನಿಸಿದ್ದ ಸದಾಶಿವ ರಾಯರು 9 ಜನವರಿ 1937 ರಂದು ಮೃತರಾದರು. ಅವರ ಜೀವನವೂ ಸಂತನ ಶೈಲಿಯದೇ ಆಗಿತ್ತು. ಶಾಲೆಯ ಬಾಲಕ ಸದಾಶಿವ ರಾಯರು ಚಳಿಯಲ್ಲಿ ನಡುಗುತ್ತಿದ್ದ ಹುಡುಗನನ್ನು ಕಂಡು ತನ್ನ ಕೋಟನ್ನು ಬಿಚ್ಚಿ ಅವನಿಗೆ ಕೊಟ್ಟವರು. ಸದಾಶಿವ ರಾಯರ ಪತ್ನಿ ಶಾಂತಾ ಬಾಯಿ ಮಂಗಳೂರಿನಲ್ಲಿ ಮಹಿಳಾ ಸಭಾವನ್ನು ಪ್ರಾರಂಭಿಸಿದ್ದರು. ಈಗಲೂ ಅದೇ ಮಹಿಳಾ ಸಭಾ ಇದೆ. ಹಲವು ಬಾರಿ ಸತ್ಯಾಗ್ರಹಕ್ಕೆ ಹೋಗಿ ಸೆರೆವಾಸ ಅನುಭವಿಸಿದ್ದ ಸದಾಶಿವ ರಾಯರು ತಮ್ಮ ಎಳೆಯ ಮಗನ ಚಿಕಿತ್ಸೆ ಫಲಕಾರಿಯಾಗದೆ ಮಗನ ಪಾರ್ಥಿವ ದೇಹ ಬರುವಾಗಲೂ ಅವರು ಸ್ವಾತಂತ್ರ್ಯಕ್ಕಾಗಿ ಸತ್ಯಾಗ್ರಹದಲ್ಲಿ ನಿರತರಾಗಿದ್ದರು.
ದಕ್ಷಿಣ ಕನ್ನಡ ಜಿಲ್ಲೆ ಮತ್ತು ಕಾಸರಗೋಡು ಭಾಗಗಳಲ್ಲಿ ಖಾದಿ ಘಟಕಗಳನ್ನು ಸ್ಥಾಪಿಸಿ ಕರಕುಶಲ ಕರ್ಮದ ಶಿಕ್ಷಣ ಕೊಡಿಸಿದ್ದರು. ಕುದ್ಮಲ್ ರಂಗರಾಯರ ಡಿಪ್ರೆಸ್ಡ್ ಕ್ಲಾಸಸ್ ಮಿಷನ್ ನಲ್ಲೂ ಕೆಲಸ ಮಾಡಿದ್ದರು. 21 ರಾಷ್ಟ್ರೀಯ ಶಾಲೆಗಳನ್ನು ತೆರೆದಿದ್ದರು. ಶ್ರೀಹರಿಯ ಭಕ್ತರಾಗಿದ್ದ ಸದಾಶಿವ ರಾಯರು ಧಾರ್ಮಿಕ ಸಮನ್ವಯದ ಪ್ರತೀಕರಾಗಿದ್ದು ಅವರ ಅಂತಿಮ ಯಾತ್ರೆಗೆ ಹಿಂದೂಗಳು ಹೂವುಗಳಿಂದ, ಕ್ರೈಸ್ತರು ಮೇಣದ ಬತ್ತಿಗಳಿಂದ, ಮುಸ್ಲಿಮರು ಧೂಪ ಲೋಬಾನಗಳಿಂದ, ಪಾರ್ಸಿಗಳು ಚಂದನದ ತುಂಡುಗಳಿಂದ ಗೌರವಾರ್ಪಣೆ ಮಾಡಿದ್ದರು. ಸ್ತ್ರೀ ಸ್ವಾತಂತ್ರ್ಯದ ಪ್ರತಿಪಾದಕರಾಗಿದ್ದ ಅವರು ತಿಲಕ್ ವಿದ್ಯಾಲಯದ ಮೂಲಕ ಹಿಂದಿಯ ಪ್ರಚಾರ ಕಾರ್ಯವನ್ನೂ ಮಾಡಿದ್ದರು.
ಈಗ ಮಂಗಳೂರಿನಲ್ಲಿರುವ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಜಾಗದಲ್ಲಿ ಕಾರ್ನಾಡ್ ಸದಾಶಿವ ರಾಯರ ಮನೆ ಇತ್ತು. ಅವರು ಸಾಲ ಪಡೆದುಕೊಂಡಿದ್ದವರು ಆಸ್ತಿಯ ಬೆಲೆ ಕಡಿಮೆ ಇದ್ದಾಗ ಮತ್ತು ಸದಾಶಿವ ರಾಯರು ಜೈಲಿನಲ್ಲಿದ್ದಾಗ ಅವರ ಈ ಮನೆಯನ್ನು ಹರಾಜು ಹಾಕಿಸಿದ್ದರು. ಹರಾಜನ್ನು ತಡೆಯಲು ತಡೆಯಾಜ್ಞೆ ತರಬಹುದೆಂದು ವಕೀಲರಾಗಿದ್ದ ಕೆ. ಆರ್. ಆಚಾರ್ ತಿಳಿಸಿದರೂ ಸದಾಶಿವ ರಾಯರ ತಾಯಿ ರಾಧಾ ಬಾಯಿ,"ಮಗ ಯಾವ ಕೆಟ್ಟದನ್ನೂ ಮಾಡಲಿಲ್ಲ. ಸಾಲವನ್ನು ತೀರಿಸಬೇಕಾದ್ದು ನಮ್ಮ ಜವಾಬ್ದಾರಿ" ಎಂದು ಮನೆಯನ್ನು ಬಿಟ್ಟು ಕದ್ರಿಯ ಬಳಿ ಬಾಡಿಗೆ ಮನೆಗೆ ಹೋಗಿದ್ದರು. ಮಹಾತ್ಮಾ ಗಾಂಧಿ, ಜವಾಹರ ಲಾಲ್ ನೆಹರೂ, ಸರೋಜಿನಿ ನಾಯ್ಡು ದಕ್ಷಿಣ ಕನ್ನಡ ಭಾಗಕ್ಕೆ ಬಂದಾಗ ಸದಾಶಿವ ರಾಯರಲ್ಲೆ ತಂಗುತ್ತಿದ್ದರು.
ಸದಾಶಿವ ರಾಯರು ಮೃತರಾಗಿ ಒಂದು ವರ್ಷದ ನಂತರ ಸದಾಶಿವ ರಾಯರ ಜನ್ಮದಿನವಾದ ಯುಗಾದಿಯಂದೇ ಅವರ ತಾಯಿ ಮೃತರಾದರು. ಸದಾಶಿವ ರಾಯರ ಹಿರಿಯ ಮಗಳು ಸುಗುಣಾ ವಿವಾಹಿತೆಯಾದರೂ ಮಕ್ಕಳಿರಲಿಲ್ಲ. ಸುಗುಣಾ ಅವರು 8 ಮಾರ್ಚ್ 1976 ರಂದು ನಿಧನರಾದರು. ಎರಡನೆಯ ಮಗಳು ಡಾ. ರಾಧಾ ಅವಿವಾಹಿತೆ. 6 ಮಾರ್ಚ್ 1977 ರಂದು ನಿಧನರಾದರು. ಸದಾಶಿವ ರಾಯರ ಸ್ಮರಣಾರ್ಥ ಬೆಂಗಳೂರಿನಲ್ಲಿ 65 ನೆಯ ಕಾಂಗ್ರೆಸ್ ಅಧಿವೇಶನ ನಡೆದ ಜಾಗವನ್ನು 'ಸದಾಶಿವ ನಗರ' ಎಂಬ ಹೆಸರಿನಿಂದ ಕರೆಯಲಾಗಿದೆ.
ಹೀಗಿದ್ದ ಕಾರ್ನಾಡ್ ಸದಾಶಿವ ರಾಯರ ಕುರಿತ ಅಧ್ಯಯನ ಕೃತಿಯನ್ನು ಅರವಿಂದ ಚೊಕ್ಕಾಡಿಯವರು ಬರೆದಿದ್ದು ನವಕರ್ನಾಟಕ ಪ್ರಕಾಶನದವರು ಪ್ರಕಟಿಸಿದ್ದಾರೆ. ಈ ಕೃತಿಯನ್ನು ಮೂಡುಬಿದಿರೆಯ ಸಮಾಜ ಮಂದಿರ ಸಭಾದವರು 1 ಎಪ್ರಿಲ್ 2023 ರಂದು ಅಪರಾಹ್ನ 4.30 ಕ್ಕೆ ಮೂಡುಬಿದಿರೆಯ ಸಮಾಜ ಮಂದಿರದಲ್ಲಿ ಲೋಕಾರ್ಪಣೆಗೊಳಿಸಲಿದ್ದಾರೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ