ಕೆಲವೊಬ್ರು ಹೆಂಗೆ ಗೊತ್ತಾ... ತಾವಿಷ್ಟ ಪಡೋ ಜೀವ ಅವರನ್ನ ಎಷ್ಟೇ ತಿರಸ್ಕಾರ ಮಾಡ್ಲಿ, ಅವಮಾನ ಮಾಡ್ಲಿ ಯಾವದನ್ನು ಲೆಕ್ಕಿಸದೆ ಅವರನ್ನ ಪ್ರಾಣಕ್ಕಿಂತ ಹೆಚ್ಚು ಪ್ರೀತಿಸ್ತಾನೆ ಇರ್ತಾರೆ, ಅವರು ಕರಿಯದಿದ್ರು ಅವರ ಮನೆಗೆ ಹೋಗ್ತಾನೆ ಇರ್ತಾರೆ, ಅವರು ಫೋನ್ ತಗಿಯಲ್ಲ ಅಂತ ಗೊತ್ತಿದ್ರು ಪದೇ ಪದೇ ಅವರಿಗೆ ಕಾಲ್ ಮಾಡ್ತಾನೆ ಇರ್ತಾರೆ.. ಹೀಗೆ ಮಾಡೋದ್ರಿಂದ ದೇವರಾಣೆಗೂ ಅವರಿಗೆ ನಿಮ್ ಮೇಲೆ ಪ್ರೀತಿ ಹುಟ್ಟಲ್ಲ, ಅಯ್ಯೋ ಪಾಪ ಅಂತ ಕನಿಕರನು ಬರಲ್ಲ ಅದರ ಬದಲಿಗೆ ಹಿಂಸೆ ಆಗುತ್ತೆ ಅವರಿಗೆ ನಿಮ್ಮಿಂದ, ಅಸಹ್ಯ ಪಟ್ಕೊಂತಾರೆ ನಿಮ್ ಮೇಲೆ. ನೀವೊಬ್ಬರು ದೊಡ್ಡ ತಲೆ ನೋವು ಆಗೋಗ್ತೀರಾ ಅವರಿಗೆ. ನೀವು ಇಷ್ಟುದ್ದ ಮೆಸೇಜ್ ಮಾಡಿದ್ರು ಕೆಲವ ಅವರು ಒಂದು ಸಿಂಬಲ್ ಕಲಿಸಿದ್ರೆ ಅಷ್ಟ್ರಲ್ಲೇ ತಿಳ್ಕೊಳ್ಳಿ, ಅವರಿಗೆ ನಿಮ್ ಜೊತೆ ಮಾತಾಡೋ ಆಸಕ್ತಿ ಇಲ್ಲ ಅಂತ. ಮೊದಲು ಇರ್ಬಹುದು ಬಟ್ ಕಾಲ ಕಳೆದಂತೆ ಎಲ್ಲವೂ ಬದಲಾಗುತ್ತೆ, ನಾವು ಅದನ್ನು ಒಪ್ಪಿಕೊಳ್ಳಬೇಕಾಗುತ್ತೆ.
ಎಲ್ಲಾ ಚೆನ್ನಾಗಿ ಇದ್ದಾಗ ಖುಷಿ ಕೊಡೊ ನಿಮ್ ಮಾತು ನೀವು ಅವರಿಗೆ ಬೇಡವಾದಾಗ ನಿಮ್ಮ ಮಾತು, ಪ್ರೀತಿ, ಅತಿಯಾದ ಕಾಳಜಿ ಕೂಡ ಹಿಂಸೆ ಆಗುತ್ತೆ. ಆದ್ರೂ ಯಾವುದನ್ನು ಲೆಕ್ಕಿಸದೆ ಅದೇ ನಗುಮುಖದಿಂದ ನೀವು ಅವರನ್ನ ಪ್ರೀತಿಸ್ತಾನೆ ಇರ್ತೀರ, ಮಾತಾಡ್ತಾನೆ ಇರ್ತೀರ... ಅವರು ನಿಮ್ಮನ್ನ ಬ್ಲಾಕ್ ಕೂಡ ಮಾಡಲ್ಲ, ಮಾತು ಕೂಡ ಆಡಲ್ಲ ಸುಮ್ನೆ ಹಾಗೆ ಇಟ್ಟಿರ್ತಾರೆ ಸೈಡ್‌ಗೆ ಹಳೆ ಬಟ್ಟೆ ಹಾಗೆ. ಬಿಸಾಡೋದು ಇಲ್ಲ, ಹಾಕ್ಕೋಳೋದು ಇಲ್ಲ. ಆದ್ರೆ ಇನ್ನು ಚೆನಾಗಿದೆ ಅಂತ ಯಾವುದೋ ಮೂಲೆಯಲ್ಲಿ ಇಟ್ಟಿರ್ತೀವಲ್ಲ ಹಾಗೇ ನಿಮ್ಮನ್ನ ಮೂಲೆಯಲ್ಲಿ ಇಟ್ಟಿರ್ತಾರೆ. ಆದ್ರೂ ಅವರ ಜೊತೆ ಮಾತಾಡಿದ್ರೇನೇ ಖುಷಿ ನಿಮ್ಗೆ, ಅವರ ಗುಡ್ ಮಾರ್ನಿಂಗ್ ಇಂದಾನೆ ಬೆಳಕು, ಗುಡ್ ನೈಟ್ ಇಂದಾನೆ ಕತ್ತಲು, ಅಪ್ಪ ಅಮ್ಮಗೂ ವಿಚಾರಿಸಿರಲ್ಲ ಅಷ್ಟು ಅವರನ್ನ ವಿಚಾರಿಸಿರ್ತೀರ ಊಟ ಆಯ್ತಾ, ತಿಂಡಿ ಆಯ್ತಾ, ಟೀ ಆಯ್ತಾ, ರೆಸ್ಟ್ ಮಾಡು, ಬೇಗ ಮಲಗು ಅಂತೆಲ್ಲ. ಆದ್ರೆ ಅವರಿಗೆ ಮಾತ್ರ ನೀವು, ನಿಮ್ ಮಾತು ಅಂದ್ರೆ ದೊಡ್ಡ ತಲೆ ನೋವು..
ಪ್ಲೀಸ್ ಸ್ವಾಭಿಮಾನ ಬಿಟ್ಟು ಯಾರನ್ನೂ ಇಷ್ಟ ಪಡ್ಬೇಡಿ.. ಯಾರನ್ನೂ ಮೆಚ್ಚಿಸಲು ಹೋಗ್ಬೇಡಿ, ನಾವು ನಿಜ್ವಾಗ್ಲೂ ಅವರಿಗೆ ಬೇಕು ಅನ್ನೋದಾದ್ರೆ ನಾವು ಹೇಗಿದ್ರು ಅವರು ನಮ್ಮನ್ನ ಒಪ್ಕೋತಾರೆ. ಬೇಡ ಆದ್ರೆ ನೀವೇನು ಮಾಡಿದ್ರು ಅಷ್ಟೇ ಎಲ್ಲಾ ವ್ಯರ್ಥ. ಅವರು ಬೇಕು ಅನ್ನೋ ಒಂದೇ ಕಾರಣಕ್ಕೆ ಎಲ್ಲಾ ಬಿಟ್ಟು ಹಿಂದೆ ಬೀಳೋದು ಯಾಕೆ, ಪ್ರೀತಿ ಇದ್ರೆ ಮನಸಲ್ಲೇ ಇಟ್ಕೊಳ್ಳಿ, ಬೆಲೆ ಸಿಗದ ಜಾಗದಲ್ಲಿ ಅದರ ಪ್ರದರ್ಶನವಾದ್ರೂ ಯಾಕೆ ಮಾಡೋದು ಹೇಳಿ. ಯಾರನ್ನು ಮೆಚ್ಚಿಸುವದು ಬೇಡ, ಯಾರನ್ನು ಮೆಚ್ಚಿಸಲಿಕ್ಕಾಗಿ ಬದುಕೋದು ಬೇಡ. ದೇವರೇ ಎಲ್ಲರನ್ನು ಮೆಚ್ಚಿಸಲು ಆಗಲಿಲ್ಲ, ಇನ್ನು ನಾವು ನೀವೇನ್ ಲೆಕ್ಕ. ಮೆಚ್ಚಿಸಿಲಿಕ್ಕಾಗಿ ಬದುಕೋದು ಬೇಡ, ಇಚ್ಚಿಸಿದಂತೆ ಬದುಕೋಣ. ಸ್ವಾಭಿಮಾನ ಕಳೆದು ಕೊಂಡು ಇಷ್ಟ ಪಡದವರ ಜೊತೆ ಇರುವದಕ್ಕಿಂತ ಒಂಟಿಯಾಗಿ, ಸ್ವಾಭಿಮಾನಿಯಾಗಿ ಇದ್ದು ಬಿಡಿ. ಪ್ರೀತಿ ಮುಂದೆ ತಲೆ ಬಾಗಿ ಆದ್ರೆ ಪ್ರಿಯ ಬೆಲೆ ಗೊತ್ತಿಲ್ಲದವರ ಮುಂದೆ ಎಂದು ತಲೆಬಾಗಬೇಡಿ.
ಯಾರ ಮುಂದೆಯಾದ್ರೂ ಸಹಾಯ ಕೇಳಲು ಸಾವಿರ ಬಾರಿ ಯೋಚಿಸಿ. ಏಕೆಂದ್ರೆ, ಕಷ್ಟದ ಭಾರ ಸ್ವಲ್ಪ ದಿನಗಳ ನಂತರ ಸರಿ ಹೋಗಬಹುದು. ಆದ್ರೆ ಸಹಾಯ ಪಡೆದಿರುವ ಭಾರ ಜೀವನ ಪರ್ಯಂತ ಇರುತ್ತೆ. ರಸ್ತೆಯಲ್ಲಿ ಜಾರಿ ಬಿದ್ರೆ ಯಾರೂ ನೋಡದ ಹಾಗೆ ಎದ್ದು ಬಿಡಿ. ಆದ್ರೆ ಜೀವನದಲ್ಲಿ ಜಾರಿ ಬಿದ್ದಾಗ ಮಾತ್ರ ಎಲ್ರು ನೋಡೋ ಹಾಗೆ ಎದ್ದೇಳಿ.
ಮನುಷ್ಯ ಜನ್ಮನೆ ಒಂಥರಾ ವಿಚಿತ್ರ, ನಂಬೋಕು ಕಷ್ಟ, ನಂಬದೆ ಇರೋಕು ಕಷ್ಟ. ಯಾರ ಮೇಲೆ ಜಾಸ್ತಿ ನಂಬಿಕೆ ಇಟ್ಟು ಯಾರ ಮುಂದೆ ನಮ್ಮ ಮನದಾಳದ ಮಾತು ಹೇಳಿಕೊಳ್ಳುತ್ತೇವೆಯೋ, ಅವರೆ ನಮಗೆ ಸುಲಭವಾಗಿ ಮೋಸ ಮಾಡಿ ಬಿಡ್ತಾರೆ. ಕೆಲವರು ತಮ್ಮ ಒಂದೆರಡು ದಿನಗಳ ಸಂತೋಷಕ್ಕಾಗಿ ಇತರರ ಇಡೀ ಜೀವನದ ಸಂತೋಷವನ್ನು ಹಾಳು ಮಾಡಿ ಬಿಡ್ತಾರೆ. ಆದ್ದರಿಂದ ಅತಿಯಾಗಿ ಯಾರನ್ನು ನಂಬುವುದು ಬೇಡ, ದ್ವೇಷಿಸುವದು ಬೇಡ. ನಾವು ಜೀವನದಲ್ಲಿ ಕಳೆದುಕೊಂಡಿರುವುದರ ಬಗ್ಗೆ ಅತಿಯಾಗಿ ಚಿಂತಿಸುತ್ತಾ, ನಮ್ಮಲ್ಲಿ ಇರುವುದರ ಕುರಿತು ಮರೆತು ಬಿಡುತ್ತೇವೆ. ನಮಗೆ ಎದುರಾಗುವ ಸಮಸ್ಯೆಗಳಿಗೆ ಹೆದರಿ ಕೈ ಚೆಲ್ಲಿ ಕುಳಿತು ಬಿಡುತ್ತೇವೆ. ನಿಮಗೆ ಗೊತ್ತಾ, ನಮಗೆ ಬರುವ ಅದೆಷ್ಟೋ ಸಮಸ್ಯೆಗಳು ಒಂದು ಕಡೆ ನಷ್ಟ ಉಂಟುಮಾಡಿದಂತೆ ಅನಿಸಿದರೂ ಮತ್ತೆಲ್ಲೋ ಆ ನಷ್ಟಕ್ಕಿಂತ ದೊಡ್ಡ ಲಾಭ ಮಾಡಿ ಹೋಗಿರುತ್ತದೆ. ನಾವು ಸಮಸ್ಯೆಯ ಕುರಿತು, ಅದರಿಂದಾದ ತೊಂದರೆಯ ಕುರಿತೇ ಅತಿಯಾಗಿ ಚಿಂತಿಸುವುದರಿಂದ ನಮಗಾದ ಲಾಭದ ಕುರಿತು ತಿಳಿಯುವುದೇ ಇಲ್ಲ. ಇನ್ನೊಂದು ಅರ್ಥದಲ್ಲಿ ಅದೂ ಕೂಡ ನಮಗೆ ನಷ್ಟದಂತೆ ಕಾಣುತ್ತೆ. ಆದರೆ ನಾವು ಸಮಸ್ಯೆಯ ಆಚೆ ನಿಂತು ವಿಚಾರ ಮಾಡಿದರೆ ನಮಗಾದ ಲಾಭ, ಸಮಸ್ಯೆಯಿಂದಾದ ನಷ್ಟವನ್ನೇ ಮರೆಸಿಬಿಡುವುದರ ಮಟ್ಟಿಗೆ ಖುಷಿಯನ್ನು ನೀಡುತ್ತದೆ. ಬಿಟ್ಟು ಹೋದವರ ಬಗ್ಗೆ, ಕಳೆದುಕೊಂಡ ವಸ್ತು ಬಗ್ಗೆ ಯೋಚಿಸುತ್ತ ಕೂತಾಗ ನಮ್ಮ ಜೀವನ ನಿಂತ ನೀರಂತೆ ಆಗಿಬಿಡುವುದು. ನಿಮಗೇ ಗೊತ್ತು ನಿಂತ ನೀರಲ್ಲೇ ಪಾಚಿ, ಕೊಳೆ, ಕಸ ಕಡ್ಡಿಗಳು, ರೋಗಕಾರಕ ಸೊಳ್ಳೆಗಳು ಬೆಳೆಯುವುದೆಂದು. ನಮ್ಮ ಜೀವನ ಹೀಗಾಗೋದು ಬೇಡ ಅಲ್ವಾ...? ಹಳೆ ನೀರು ಹರೆದು ಹೋದಾಗಲೇ ಹೊಸ ನೀರು ಬರಲು ಸಾಧ್ಯ ಅಲ್ವಾ..?
ಇದು ಗೊತ್ತಿದ್ರೂ ಕೊಚ್ಚೆಯಲ್ಲೇ ಬಿದ್ದು ಒದ್ದಾಡುವುದೇಕೆ? ಆಚೆ ಬನ್ನಿ ಒಂದು ವಿಸ್ಮಯ ಜಗತ್ತು ನಿಮಗಾಗಿ ಕಾದಿದೆ.
ನೋವು ಕಲಿಸುವ ಪಾಠವನ್ನು ನಗು ಎಂದಿಗೂ ಕಲಿಸಲಾರದು. ಹಾಗೆ ಜೀವನದ ಅಂತ್ಯದವರೆಗೂ ಕಲಿಯುವುದು ಬೆಟ್ಟದಷ್ಟಿದೆ ಎನ್ನುವುದೇ ಬದುಕು ಕಲಿಸುವ ಪಾಠ. ಈ ಜಗತ್ತಿನಲ್ಲಿ ಒಳ್ಳೇದು ಕೆಟ್ಟದ್ದು ಎಲ್ಲಾ ಇದೆ, ಆದ್ರೆ ಆಯ್ಕೆ ಮಾತ್ರ ನಮಗೆ ಬಿಟ್ಟ ವಿಚಾರ. ಪ್ರತಿಯೊಬ್ಬರೂ ಒಂದೇ ತರ ಇರಲ್ಲ. ಎಲ್ಲಾ ಸಮಸ್ಸೆಗೂ ಪರಿಹಾರ ಇರದೆ ಇರಲ್ಲ. ಎಲ್ಲ ಬಗೆಯ ಬಿರುಗಾಳಿಯೂ ಬದುಕನ್ನು ಹಾಳು ಮಾಡಲೆಂದೇ ಬರಲ್ಲ. ಕೆಲವೊಂದು ನಿಮ್ಮ ದಾರಿಯನ್ನು ಸ್ವಚ್ಛಗೊಳಿಸಲು ಬರಬಹುದು. ಹಾಗೆ ಕೆಲವು ವ್ಯಕ್ತಿಗಳು ದೂರ ಆದ್ರೆ ಅದು ನಮ್ಮ ಒಳ್ಳೇದಕ್ಕೆ ಎಂದು ತಿಳಿಯೋಣ.
ಸೋಲು ಬಂದರೆ ಮುಂದೊಂದು ದಿನ ಅದ್ಭುತವಾದ ಗೆಲುವು ನಮಗಾಗಿ ಕಾದಿದೆ ಎಂದು ನಂಬಿ ಮುನ್ನಡೆಯೋಣ. ಮಳೆಗೂ ಮೊದಲು ಆಕಾಶದಲ್ಲಿ ಕಾಮನಬಿಲ್ಲು ಮೂಡಿಬರುವಂತೆ ಸಂತೋಷವು ಜೀವನದಲ್ಲಿ ಆಗಾಗ ಬಂದು ಕಷ್ಟಗಳು ಶಾಶ್ವತವಲ್ಲವೆಂದು ನೆನಪಿಸುತ್ತದೆ. ಪ್ರತಿಯೊಂದು ಕತ್ತಲೆ ಮನೆಗೂ ಬೆಳಕಿನ ದಾರಿಗಾಗಿ ಒಂದು ಕಿಟಕಿ ಇರುತ್ತದೆ. ಅದೇ ರೀತಿ ನಮ್ಮ ಕಷ್ಟದ ಜೀವನದಲ್ಲಿ ಸುಖದ ಬಾಗಿಲು ತೆರೆದೆ ತೆರೆಯುತ್ತೆ ಕಾಯುವ ತಾಳ್ಮೆ ಇರಬೇಕಷ್ಟೇ. ಜೀವನದಲ್ಲಿ ಯಾರಿಗೂ ನಿಮ್ಮನ್ನು ಮೆಚ್ಚಿಸುವುದಕ್ಕೆ ಪ್ರಯತ್ನ ಮಾಡಬೇಡಿ, ಒಳ್ಳೆತನದಿಂದ ಬದುಕೋಕೆ ಪ್ರಯತ್ನಪಡಿ. ನಿಮ್ಮ ಒಳ್ಳೆಯತನ ಎಲ್ಲರಿಗೂ ಇಷ್ಟವಾಗುತ್ತೆ. ಅದೇ ಎಲ್ಲರನ್ನು ನಿಮ್ಮತ್ತ ಸೆಳೆಯುತ್ತೆ.
ಜೀವನಕ್ಕೊಂದು ಅರ್ಥ ಸಿಗಬೇಕೆಂದರೆ ಇಷ್ಟ ಬಂದಂತೆ ಬದುಕಬೇಕು, ಕಷ್ಟ ಬಂದರೂ ಎದುರಿಸಬೇಕು. ನೀವು ಎತ್ತರಕ್ಕೆ ಏರಿದಾಗ ಜನ ನಿಮ್ಮತ್ತ ಕಲ್ಲು ತೂರುತ್ತಾರೆ ಹಾಗೆಂದು ನೀವು ಕೆಳಕ್ಕೆ ಇಳಿದು ಕೆಳಕ್ಕೆ ನೋಡುತ್ತಾ ನಿಲ್ಲಬಾರದು. ಬದಲಿಗೆ ಇನ್ನು ಎತ್ತರಕ್ಕೆ ಏರಬೇಕು, ಆಗ ಆ ಕಲ್ಲುಗಳು ನಿಮಗೆ ತಾಗುವುದೇ ಇಲ್ಲಾ. ಇನ್ನೊಬ್ಬರ ಬಗ್ಗೆ ಯಾವತ್ತೂ ಯೋಚಸಬೇಡಿ, ನಿಮ್ಮ ಲಕ್ಷ ಕೇವಲ ನಿಮ್ಮ ಗುರಿಯತ್ತ ಇರಲಿ. ಅದಕ್ಕೇನು ಕಷ್ಟ, ಶ್ರಮ ಪಡಬೇಕು. ಅದನ್ನು ಪ್ರಾಮಾಣಿಕವಾಗಿ ಪ್ರಯತಿಸುವುದು ತುಂಬಾ ಮುಖ್ಯ. ಯಾವತ್ತೂ ಜೀವನದಲ್ಲಿ ಯಾವ ವಸ್ತು ಕೂಡ ಸುಲಭವಾಗಿ ಸಿಗುವುದಿಲ್ಲ, ಸಿಗಲೂ ಬಾರದು. ಯಾಕಂದ್ರೆ ಎಷ್ಟು ಸುಲಭವಾಗಿ ನಮಗೆ ಸಿಗುತ್ತೋ ಅದರ ಬೆಲೆ ನಮಗೆ ಗೊತ್ತಾಗಲ್ಲ.
ತೋಚಿದ್ದು ಗೀಚಿದಷ್ಟು ಸುಲಭವಲ್ಲ ಬದುಕು, ಜೀವನದಲ್ಲಿ ಪ್ರತಿ ದಿನವನ್ನು ನಗು ನಗುತಾ ಎದುರಿಸುವುದೇ ಬದುಕು...
- ಸರಸ್ವತಿ ವಿಶ್ವನಾಥ್ ಪಾಟೀಲ್, ಕಾರಟಗಿ
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ