ಸುಮಾ ಆಯ್ತೇನೆ? ಆಫೀಸಿಗೆ ಲೇಟಾಗ್ತಿದೆ, ಎಷ್ಟೊತ್ತು ತಿಂಡಿ ಮಾಡಕ್ಕೆ, ಅದೇನ್ ಮಾಡ್ತೀಯಾ ಇಷ್ಟೊತ್ತು"ಎಂದ ರಮೇಶನ ಧ್ವನಿಗೆ "ಆಯ್ತು ರೀ, ಟೇಬಲ್ ಮೇಲೆ ಇಟ್ಟಿದ್ದೀನಿ "ಎಂದಳು ಸುಮಾ. "ಅಮ್ಮ ನನ್ನ ಸಾಕ್ಸ್ ಸಿಕ್ತಾ ಇಲ್ಲ, ಸ್ವಲ್ಪ ನೋಡು" ಎಂದ ಮಗ ಸುದರ್ಶನನ ಕೂಗು ಕೇಳಿಸಿತವಳಿಗೆ. ಅಲ್ಲೇ ಎದುರು ಟೀಪಾಯಿ ಮೇಲಿದ್ದ ಸಾಕ್ಸ್ ಆತನ ಕಣ್ಣಿಗೆ ಕಾಣದೆ ಇದ್ದದ್ದು ನಿಜಕ್ಕೂ ವಿಪರ್ಯಾಸವೇ ಸರಿ ಎಂದು ಕೊಂಡು ಹೊರಬಂದವಳಿಗೆ ಮಗಳು ಸಂಗೀತ ತಲೆ ಬಾಚಲು ಕಿರುಚಾಡಿದ್ದು ಕೇಳಿ ಅವಳು ರೂಮಿಗೆ ಓಡೋಡಿ ಧಾವಿಸಿದಳು. ಕೂದಲಿಗೆ ಎಣ್ಣೆ ಹಾಕಿ ಕ್ರಾಪು ಮಾಡಿ ತಯಾರು ಮಾಡಿದಳು .ಅಲ್ಲಿಂದ ಅರೆಕ್ಷಣವೂ ನಿಲ್ಲದೆ ಅತ್ತೆ ಮಾವನಿಗೆ ತಿಂಡಿ ಕೊಟ್ಟು ಮಕ್ಕಳಿಗೂ ಗಂಡನಿಗೂ ಟಿಫನ್ ಬಾಕ್ಸಿಗೆ ತುಂಬಿಸಿ ಅವರಿಗೂ ತಿನ್ನಲು ಕೊಟ್ಟು ತಾನು ತಿನ್ನಬೇಕೆಂದು ತಟ್ಟೆಗೆ ಹಾಕಿದಾಗ ತಿಂಡಿ ಆರಿ ಹೋಗಿ ಚಹಾ ನೀರಾಗಿತ್ತು. ಪಾಲಿಗೆ ಬಂದಿದ್ದು ಪಂಚಾಮೃತ ಎಂದು ತಿನ್ನುತ್ತಿದ್ದ ಆಕೆಗೆ ತಿಂದು ಮುಗಿಸುವಷ್ಟರಲ್ಲಿಯೇ ಮಾತ್ರೆಗಾಗಿ ಅತ್ತೆ ಕರೆಯುವುದು ಕೇಳಿಸಿತು .
ಬೆಳಗ್ಗಿನ ಗಡಿಬಿಡಿಯೆಲ್ಲ ಮುಗಿದ ಮೇಲೆ ಅಷ್ಟೇ ದೊಡ್ಡದಾಗಿ ರಮೇಶ ಕಟ್ಟಿಸಿದ್ದ ಎರಡು ಅಂತಸ್ತಿನ ಮನೆಯನ್ನು ಗುಡಿಸಿ ಒರೆಸುವಷ್ಟರಲ್ಲಿ ಅವಳಿಗೆ ಸಾಕು ಸಾಕಾಗುತ್ತಿತ್ತು. ಕೆಲಸದಾಳು ನೇಮಿಸೋಣವೆಂದರೆ ಅದಕ್ಕೆ ಅತ್ತೆ ಒಪ್ಪಬೇಕಲ್ಲ! ಅದಾದ ಬಳಿಕ ರಾಶಿ ರಾಶಿಯಾಗಿ ಬಚ್ಚಲು ಮನೆಯಲ್ಲಿ ಬಿದ್ದಿರುತ್ತಿದ್ದ ,ಕೆಲವೊಮ್ಮೆ ರೂಮ್ ಒಳಗೆ ಚೆಲ್ಲಾಪಿಲ್ಲಿಯಾಗಿ ಇರುತ್ತಿದ್ದ ಬಟ್ಟೆಗಳನ್ನೆಲ್ಲ ಹೆಕ್ಕಿ ತಂದು ಒಗೆದು ಹಾಕುತ್ತಿದ್ದಳು .ಹಣಕ್ಕೆ ಬರವಿಲ್ಲದಿದ್ದರೂ ಇನ್ನೂ ಆ ಮನೆಗೆ ವಾಷಿಂಗ್ ಮಿಷನ್ ಕಾಲಿಟ್ಟಿರಲಿಲ್ಲ. ಕಾರಣ ರಮೇಶನಿಗೆ ಕೈಯಲ್ಲಿ ಬಟ್ಟೆ ಒಗೆದು ಅದಕ್ಕೆ ಇಸ್ತ್ರಿ ಮಾಡಬೇಕಿತ್ತು. ಆದರೇನೇ ಖುಷಿ ಅವನಿಗೆ. ಅವನ ತಾಳಕ್ಕೆ ತಕ್ಕಂತೆ ಕುಣಿಯುತ್ತಿದ್ದ ಸುಮಾ ತನಗೆ ಸುಸ್ತಾದರೂ ಅದನ್ನು ಹೇಳಿಕೊಳ್ಳದೆ ಎಲ್ಲವನ್ನು ಸಹನೆಯಿಂದ ಮಾಡುತ್ತಿದ್ದಳು. ಅಷ್ಟರಲ್ಲೇ ಗಂಟೆ ಹನ್ನೊಂದಾಗಿತ್ತು. ಅಯ್ಯೋ ಮಧ್ಯಾಹ್ನಕ್ಕೆ ಅಡಿಗೆ ಆಗಿಲ್ಲವಲ್ಲ ಎಂದರಿ ತವಳು ಅಡಿಗೆ ಮನೆ ಸೇರಿಕೊಂಡಳು. ಅದೇನೇ ಆಗಲಿ ಅತ್ತೆಗೆ ಯಾವತ್ತೂ ಊಟಕ್ಕೊಂದು ಪಲ್ಯ ಇರಲೇಬೇಕಿತ್ತು. ಬರಿ ಪಲ್ಯ ಮಾಡಿದರು ಸಾಲುತ್ತಿ ರಲಿಲ್ಲ. ಜೊತೆಗೆ ಒಂದು ಸಾಂಬಾರು ಅಥವಾ ಹುಳಿ ಹೀಗೆ ಏನಾದರೂ ಇರಲೇಬೇಕಿತ್ತು. ಬೆಳಗ್ಗೆ ಆಫೀಸಿಗೆ ಹೋಗುವವರಿಗೂ ಇದೆಲ್ಲ ಆಗಲೇ ಬೇಕಲ್ಲ! ಅಂತೆಯೇ ಸಾರು ಪಲ್ಯ ಜೊತೆಗೆ ಸಂಡಿಗೆ ಕರಿದು ಬಿಸಿ ಬಿಸಿ ಅನ್ನದೊಡನೆ ಎಲ್ಲವನ್ನು ಡೈನಿಂಗ್ ಟೇಬಲ್ ಮೇಲಿಟ್ಟು ಅತ್ತೆ ಮಾವನನ್ನು ಊಟಕ್ಕೆ ಕರೆದಳು. ಅವರು ಚೆನ್ನಾಗಿ ತಿಂದು ಸೊಸೆಯನ್ನು ಚೆನ್ನಾಗಿ ಹೊಗಳಿದರು. ಹೊಟ್ಟೆಗೆ ಅನ್ನ ಹೋದಂತೆ ಅವರಿಗೆ ನಿದ್ರಾದೇವಿ ಕಣ್ಣಲ್ಲಿ ಆವರಿಸಿಕೊಂಡಳು. ಅವರು ನಿದ್ರಿಸಿದ ಮೇಲೆ ಸುಮಾ ತಣ್ಣಗಾಗಿದ್ದ ಊಟ ಮಾಡಿ ಪಾತ್ರೆ ತೊಳೆದು ಸಿಗುವ ಅಲ್ಪ ವಿರಾಮವನ್ನು ಅನುಭವಿಸುವುದಕ್ಕಾಗಿ ಬಾಲ್ಕನಿ ಮೇಲೆರಿದಳು.
ಕೈಯಲ್ಲಿ ವಾರ್ತಾ ಪತ್ರಿಕೆ ಇತ್ತು. ಕಣ್ಣುಗಳು ಅದರ ಮೇಲಿದ್ದರೂ ತಲೆಯೊಳು ನೂರಾರು ಯೋಚನೆ... ಎಲ್ಲಿಂದ ಎಲ್ಲೆಲ್ಲಿಗೋ ಓಡುತ್ತಾ ಸ್ವ ಇಚ್ಛೆಯಿಂದ ಚಲಿಸುತ್ತಿತ್ತು, ಯಾವುದೇ ಸೀಮೆಯಿಲ್ಲದೆ.. ಹಣ ಕೊಡದೆ ಸಿಗುವುದು ಅದೊಂದೆ ತಾನೇ! ಖಾಲಿ ಇರುವ ತಲೆಯೊಳಗೆ ವ್ಯರ್ಥ ಅದನ್ನೇ ತುಂಬಿ ಸದಾಕಾಲ ಯೋಚಿಸುವುದಕ್ಕೂ ಒಂದು ಕಲೆ ಬೇಕು. ಆ ಕಲೆ ಸುಮಾಳಿಗೆ ಎಂದೋ ಸಿದ್ಧಿಯಾಗಿತ್ತು. ಚಿಂತಿಸುತ್ತಾ ಕುಳಿತವಳಿಗೆ ಸಮಯ ಕಳೆದದ್ದೇ ತಿಳಿಯಲಿಲ್ಲ. ಚಹಾಕ್ಕಾಗಿ ಕರೆದ ಮಾವನ ಧ್ವನಿಗೆ ಎಚ್ಚೆತ್ತು, ಅಯ್ಯೋ ತಡವಾಯಿತಲ್ಲ ಎನ್ನುತ್ತಾ ತನ್ನನ್ನೇ ಬೈದುಕೊಂಡು ದಡಬಡನೆ ಓಡಿದ ರಭಸಕ್ಕೆ ಕಾಲಿಗೆ ಏಟಾದರೂ ಲೆಕ್ಕಿಸದೆ ಅಡುಗೆ ಮನೆ ಒಳಗೆ ಸೇರಿದಳು. ಚಹಾ ಕುಡಿಯುವಾಗ ನೀರಿಗಾಗಿ ತನ್ನನ್ನೇ ಕಾಯುತ್ತಿರುವ ಸಸಿಗಳು ಕಾಣಿಸಿದವು. ಅವುಗಳಿಗೆ ನೀರುಣಿಸಿ ಹಿಂತಿರುಗಿ ನೋಡಿದಾಗ ಶಾಲೆಯ ಮಕ್ಕಳ ವ್ಯಾನ್ ಕಾಣಿಸಿತು. ಮಕ್ಕಳು "ಅಮ್ಮಾಹಸಿವು" ಎಂದನ್ನುತ್ತಾ ಬಳಿಗೆ ಧಾವಿಸಿದವು. ಅವರಿಗೆ ತಿಂಡಿ ಕೊಟ್ಟು, ಅವರ ಸಮವಸ್ತ್ರಗಳನ್ನು ಒಗೆದು ಹಾಕುವಷ್ಟರಲ್ಲಿ ರಮೇಶನೂ ಬಂದ. ಮತ್ತೆ ಅವನಿಗೆ ಕಾಫಿ ತಿಂಡಿ ಕೊಟ್ಟು ಉಪಚರಿಸಿ ರಾತ್ರಿ ಊಟಕ್ಕೆ ಸಿದ್ಧತೆಗಳನ್ನು ನಡೆಸಿ ಮತ್ತೆ ಎಂದಿನಂತೆ ಎಲ್ಲರನ್ನ ಊಟಕ್ಕೆ ಕರೆದಳ ವಳು. ಹೊಟ್ಟೆಗೆ ಬೀಳುತ್ತಲೇ ಎಲ್ಲರೂ ತೂಕಡಿಸತೊಡಗಿದರು. ರಮೇಶನೂ ತನ್ನ ಶಯ್ಯಾಗೃಹಕ್ಕೆ ಕಾಲಿಟ್ಟ. ಮಕ್ಕಳು ಆಗಲೇ ಮಲಗಿದ್ದವು .ಮನೆ ಪ್ರಶಾಂತವಾಗಿತ್ತು .ಲೈಟುಗಳು ಆರಿತ್ತು. ಆದರೆ ಅಡುಗೆ ಮನೆಯೊಂದನ್ನು ಬಿಟ್ಟು.. ಸುಮಾಳ ಕೆಲಸವಿನ್ನೂ ಮುಗಿದಿರಲಿಲ್ಲ. ಪಾತ್ರೆಗಳನ್ನು ತೊಳೆದು ಒರಸಿ, ನಾಳೆ ಬೆಳಗ್ಗಿನ ತಿಂಡಿಗೆ ತಯಾರಿ ಮಾಡಿ, ಎಲ್ಲ ಮುಗಿಸಿ ತನ್ನ ಕೋಣೆಗೆ ತೆರಳುವಾಗ ಗಂಟೆ ಹನ್ನೊಂದು ಕಳೆದಿತ್ತು. ಮಲಗೋಣವೆಂದು ರೂಮಿಗೆ ಬಂದ ಆಕೆಗೆ ರಮೇಶ ಫೋನಿನಲ್ಲಿ ಮಾತನಾಡುವುದು ಕೇಳಿಸಿತು ."ಹಾ ನಿನ್ನ ಅತ್ತಿಗೆ ಚೆನ್ನಾಗಿದ್ದಾಳೆ. ಅವಳಿಗೆ ಏನಾಗಿದೆ .ಅಲ್ಲ, ಅವಳಿಗೇನು ದಿನವಿಡೀ ಫ್ರೀ ಇರುತ್ತಾಳಲ್ಲ. ಮನೆ ಕೆಲಸ ಒಂದು ಮಾಡಿದ್ರೆ ಆಯ್ತು. ಅದರಲ್ಲೇನಿದೆ ?"ಗಂಡನ ಮಾತುಗಳು ಸುಮಾಳಿಗೆ ಕಾದ ಕಬ್ಬಿಣವನ್ನು ಮೈಗೆ ಇಟ್ಟಂತಾಯಿತು. ಹೌದೌದು.. ನನಗೇನಿದೆ ಕೆಲಸ? ಮನೆ ಕೆಲಸ ಮಾತ್ರ.. ಎಂದ ಮನದಲ್ಲಿ ಅಂದುಕೊಂಡ ಸುಮಾಳ ಕಣ್ಣಂಚಿನಲ್ಲಿ ಹನಿ ನೀರು ಜಾರಿತ್ತು...
ಸಾಮಾನ್ಯವಾಗಿ ಹೇಳುವುದಾದರೆ ಹಿಂದೆ ಇದು ಪ್ರತಿ ಮನೆಯ ಮಾತಾಗಿತ್ತು. ಮನೆ ಕೆಲಸವೆಂದರೆ ಏನೂ ಇಲ್ಲ .ಹೊರಗಡೆ ದುಡಿಯುವುದು ಅದೂ ಕಚೇರಿಗಳಲ್ಲಿ ದುಡಿಯುವುದು ಮಾತ್ರ ಕೆಲಸವೆಂದು ಪರಿಗಣಿಸುತ್ತಿದ್ದ ಕಾಲವೊಂದಿತ್ತು. ಆದರೆ ಇಂದು ಪರಿಸ್ಥಿತಿ ಬದಲಾಗಿದೆ .ಮನೆ ಕೆಲಸವೆಂದರೆ ಅದು ಮನೆಯ ಪ್ರತಿಯೊಬ್ಬರ ಕರ್ತವ್ಯವೆಂದು ಪರಿಗಣಿಸಲಾಗುತ್ತಿದೆ .ಬದಲಾವಣೆ ಒಳ್ಳೆಯದೆ .ಅದು ನಮ್ಮಿಂದಲೇ ಆಗಬೇಕಾದದು ಹೌದು. ಇಂದಿನ ಕಾಲದಲ್ಲಂತೂ ಇಬ್ಬರೂ ದುಡಿಯಲು ಹೊರಗಡೆ ತೆರಳುವಾಗ ಸಾಮಾನ್ಯವಾಗಿ ಜವಾಬ್ದಾರಿ ಇಬ್ಬರು ಹಂಚಿಕೊಳ್ಳಬೇಕಾಗುತ್ತದೆ. ಅದರಂತೆ ಮನೆ ಕೆಲಸವನ್ನೂ ಇಬ್ಬರೂ ಹಂಚಿಕೊಂಡರೆ ಒಳ್ಳೆಯದು.ಅದರೆ ಹಿಂದೆ ಹೇಗಿರಲಿಲ್ಲ. ಗಂಡ ಕಚೇರಿಗೆ ಹೋದರೆ ಹೆಂಡತಿ ಮನೆ ಕೆಲಸವನ್ನೇ ಮಾಡಬೇಕಿತ್ತು. ಅಲ್ಲದೆ ಹೆಂಡತಿ ಕಚೇರಿಗೆ ಹೋಗುವಂತೆಯೂ ಇರಲಿಲ್ಲ. ಹೆಣ್ಣೆಂದರೆ ನಾಲ್ಕು ಗೋಡೆಗಳ ಮಧ್ಯೆ ಇದ್ದು ಗಂಡನ ಮತ್ತು ಮನೆಯ ಸದಸ್ಯರ ಸೇವೆ ಮಾಡಬೇಕಿತ್ತು. ಮುಂಜಾನೆ ಸೂರ್ಯೋ ದಯಕ್ಕಿಂತಲೂ ಮೊದಲು ಎದ್ದು ಅಡಿಗೆ ಮನೆ ಸೇರಿದರೆ ರಾತ್ರಿ ಹನ್ನೊಂದಾಗುವ ವರೆಗೂ ಗಾಣದೆತ್ತಿನಂತೆ ದುಡಿಯುವ ಆಕೆಯ ಕೆಲಸ ಯಾರ ಕಣ್ಣಿಗೂ ಕಾಣುತ್ತಲೇ ಇರಲಿಲ್ಲ. ಮಕ್ಕಳು ಯಾವುದೋ ಅರ್ಜಿ ಫಾರಂ ತಂದು ಅಪ್ಪ ಅಮ್ಮನ ಉದ್ಯೋಗ ಭರ್ತಿ ಮಾಡುವ ಜಾಗದಲ್ಲಿ "ಅಪ್ಪ ಇಂಜಿನಿಯರ್ ಎಂದು ಬರೆದಿದ್ದೇನೆ ನಿನಗೇನು ಕೆಲಸವಿಲ್ಲವೇನಮ್ಮ?" ಅಂದಾಗ ಹೃದಯಕ್ಕೆ ಬಡಿದಂತಾಗಿ ಕಟ್ಟೆ ಒಡೆದು ಹೋಗುತ್ತಿದ್ದ ಕಣ್ಣೀರನ್ನು ತಡೆದು, "ಇಲ್ಲ ನನಗೇನು ಕೆಲಸವಿಲ್ಲ "ಎಂದು ಉತ್ತರಿಸಿ ಒತ್ತಿ ಬರುವ ಅಳುವನ್ನು ಹಿಡಿದ ಹೆಣ್ಣು ಮಕ್ಕಳೆಷ್ಟೋ? ಮದುವೆಗೆ ಮೊದಲು ವಿದ್ಯಾಭ್ಯಾಸ ಪಡೆದು ರಾಂಕ್ ಗಳಿಸಿ ಮದುವೆಯ ನಂತರ ಮನೆಯಲ್ಲೇ ಕುಳಿತವರೆಷ್ಟೋ? ಮುಂದೆ ಓದಿಸುವೆನೆಂದು ನೀಡಿದ ವಿಶ್ವಾಸಕ್ಕೆ ಮತ್ತೆ ತಣ್ಣೀರ ಎರಚಿದವರೆಷ್ಟೋ?
ಸಾಮಾನ್ಯವಾಗಿ ಇಂತಹ ಪ್ರಕರಣಗಳು ನಮ್ಮ ಕಣ್ಣ ಮುಂದೆ ನಡೆಯುತ್ತಲೇ ಇರುತ್ತದೆ .ಆದರೆ ನಾವು ಹೆಚ್ಚಾಗಿ ಗಮನಿಸಿಯೇ ಇರುವುದಿಲ್ಲ. ಇಂದಿಗೂ ಇಂತಹ ಕೆಲವು ಪ್ರಕರಣಗಳು ಜೀವಂತವಾಗಿದೆ .ನಗರಗಳಲ್ಲಿ ಇದು ಕಾಣಲು ವಿರಳವಿರಬಹುದು, ಆದರೆ ಗ್ರಾಮೀಣ ಪ್ರದೇಶದಲ್ಲಿ ಇಂದಿಗೂ ಇದೆ. ಹೆಣ್ಣು ಕೇವಲ ಕೆಲಸದಾಳುವಲ್ಲ. ಆಕೆ ಯಂತ್ರವೂ ಅಲ್ಲ. ಆದರೆ ಎಷ್ಟು ಕೆಲಸ ಮಾಡಿದರೂ ಆಕೆಯ ಮೇಲಿನ ಬೈಗಳ ನಿಲ್ಲುವುದೇ ಇಲ್ಲ. ಆದರೆ ಆಕೆ ಸಹನಾಮಯಿ, ತ್ಯಾಗಮಯಿ.. ಯಾರೇ ಹೇಳಿದರು ತನ್ನ ಕರ್ತವ್ಯ ನಿಷ್ಠೆಯನ್ನು ಪೂರೈಸುವವಳು. ತನ್ನವರಿಗಾಗಿ ಸರ್ವವನ್ನೂ ನೀಡುವವಳು. ಹಾಗಾಗಿ ಇಂದಿಗೂ ಆಕೆ ಪೂಜನೀಯ ಸ್ಥಾನದಲ್ಲಿ ವಿರಾಜಮಾನಳಾಗಿದ್ದಾಳೆ. ಆದರೆ ಆಕೆಯ ಭಾವನೆಗಳಿಗೆ ಬೆಲೆ ಕೊಡಿ. ಆಕೆಯ ಅಂತರಾಳದಲ್ಲಿನ ಕನಸುಗಳನ್ನು ಅರಿತುಕೊಳ್ಳಿ. ಆಕೆಯ ಕೆಲವು ಇಷ್ಟಗಳನ್ನಾದರೂ ಪೂರೈಸಿ. ಆಕೆ ಕಟ್ಟಿ ನಿಂತ ನೀರಾಗದೆ ಹರಿಯುವ ಜಲವಾಗಲಿ.. ಆಕೆ ಪಂಜರದ ಹಕ್ಕಿಯಾಗದೆ ಬಾನಂಗಳದಲ್ಲಿ ಹಾರಾಡುವ ಖಗವಾಗಲಿ..ಆಕೆ ಅಂಧಕಾರವನ್ನು ಓಡಿಸುವ ಜ್ಯೋತಿಯಾಗಲಿ...
-ಅನ್ನಪೂರ್ಣ ಯನ್ ಕುತ್ತಾಜೆ
ಪ್ರಥಮ ಸ್ನಾತಕೋತ್ತರ ವಿದ್ಯಾರ್ಥಿನಿ
ರಸಾಯನಶಾಸ್ತ್ರ ವಿಭಾಗ
ಮಂಗಳೂರು ವಿಶ್ವವಿದ್ಯಾನಿಲಯ, ಕೊಣಾಜೆ
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ