ಪ್ರಧಾನಿ ನರೇಂದ್ರ ಮೋದಿ ಅವರ ತಾಯಿ ಶತಾಯುಷಿ ಹೀರಾಬೆನ್ ನಿಧನ

Upayuktha
0

ಅಹಮದಾಬಾದ್‌: ಪ್ರಧಾನಿ ನರೇಂದ್ರ ಮೋದಿ ಅವರ ತಾಯಿ ಹೀರಾಬೆನ್ ನಿಧನರಾದರು.. ಇಂದು ಮುಂಜಾನೆ ಅವರು ಅಹಮದಾಬಾದ್‌ನ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು. ಅವರಿಗೆ 100 ವರ್ಷ ವಯಸ್ಸಾಗಿತ್ತು. ಇಂದು ಬೆಳಗ್ಗೆ ತಮ್ಮ ತಾಯಿಯ ಅಂತಿಮ ದರ್ಶನ ಪಡೆಯಲು ಪ್ರಧಾನಿ ಗಾಂಧಿನಗರಕ್ಕೆ ಧಾವಿಸಿದರು.

ದುಃಖತಪ್ತ ಪ್ರಧಾನಿ ಮೋದಿ ಅವರು, ಭವ್ಯವಾದ ಶತಮಾನದ ಬೆಳಕೊಂದು ಈಗ ದೇವರ ಪಾದದಲ್ಲಿ ಲೀನವಾಗಿದೆ ಎಂದು ಭಾವನಾತ್ಮಕವಾಗಿ ಟ್ವೀಟ್‌ ಮಾಡಿದ್ದಾರೆ. ತಮ್ಮ ತಾಯಿಗೆ ಶ್ರದ್ಧಾಂಜಲಿ ಸಲ್ಲಿಸಿದ ಮೋದಿ, ತಮ್ಮ ತಾಯಿಯಲ್ಲಿ ತ್ರಿಮೂರ್ತಿಗಳ ಉಪಸ್ಥಿತಿಯನ್ನು ನಾನು ಕಾಣುತ್ತೇನೆ ಎಂದು ಹೇಳಿದರು. ಅವರ ಬದುಕು ತಪಸ್ವಿ, ನಿಸ್ವಾರ್ಥ ಕರ್ಮಯೋಗಿ ಮತ್ತು ಮೌಲ್ಯಗಳಿಗೆ ಸಮರ್ಪಿತ ಜೀವನವನ್ನು ಸಂಕೇತಿಸುತ್ತದೆ ಎಂದು ನುಡಿದರು.

ತಾಯಿಯವರ 100 ನೇ ಹುಟ್ಟುಹಬ್ಬದಂದು ಅವರ ಜತೆಗಿನ ತಮ್ಮ  ಭೇಟಿಯನ್ನು ನೆನಪಿಸಿಕೊಂಡ ಪ್ರಧಾನಿ, ಬುದ್ಧಿವಂತಿಕೆಯಿಂದ ಕೆಲಸ ಮಾಡು ಮತ್ತು ಪರಿಶುದ್ಧತೆಯಿಂದ ಜೀವನ ನಡೆಸು ಎಂದು ಅವರು ತಮಗೆ ಬೋಧಿಸಿದ್ದರು ಎಂದು ಹೇಳಿದರು.

2015 ರಲ್ಲಿ ಫೇಸ್‌ಬುಕ್ ಸಂಸ್ಥಾಪಕ ಮಾರ್ಕ್ ಜುಕರ್‌ಬರ್ಗ್ ಅವರೊಂದಿಗೆ ಸ್ಯಾನ್ ಜೋಸ್‌ನಲ್ಲಿ ಟೌನ್ ಹಾಲ್ ಅಧಿವೇಶನದಲ್ಲಿ, ಪ್ರಧಾನಿ ಮೋದಿ ಅವರು ತಮ್ಮ ಮಕ್ಕಳನ್ನು ಬೆಳೆಸಲು ತಮ್ಮ ತಾಯಿ ಪಟ್ಟ ಕಷ್ಟಗಳನ್ನು ನೆನಪಿಸಿಕೊಂಡಿದ್ದರು.

ಪ್ರಧಾನಿ ನರೇಂದ್ರ ಮೋದಿ ಅವರ ತಾಯಿಯ ನಿಧನಕ್ಕೆ ಪಕ್ಷ ಭೇದ ಮರೆತು  ವಿವಿಧೆಡೆಯಿಂದ ರಾಜಕೀಯ ಮುಖಂಡರು ಸಂತಾಪ ಸೂಚಿಸಿದ್ದಾರೆ. 

ಪ್ರಧಾನಿ ಮೋದಿಯವರ ತಾಯಿಗೆ ಶ್ರದ್ಧಾಂಜಲಿ ಸಲ್ಲಿಸಿದ ಕೇಂದ್ರ ಗೃಹ ಸಚಿವ ಅಮಿತ್ ಶಾ, ಕುಟುಂಬವನ್ನು ಪೋಷಿಸಲು ಹೀರಾ ಬಾ ಅವರು ಎದುರಿಸಿದ ಹೋರಾಟಗಳು ಎಲ್ಲರಿಗೂ ಮಾದರಿಯಾಗಿದೆ ಎಂದು ಹೇಳಿದರು. ಈ ದುಃಖದ ಸಮಯದಲ್ಲಿ ಇಡೀ ರಾಷ್ಟ್ರವು ಪ್ರಧಾನಿ ಮೋದಿ ಮತ್ತು ಅವರ ಕುಟುಂಬದೊಂದಿಗೆ ನಿಂತಿದೆ ಎಂದು ಶಾ ಹೇಳಿದರು.



ಈ ಘಟನೆಯಿಂದ ನನಗೆ ಅತೀವ ನೋವಾಗಿದೆ ಎಂದು ಹೇಳಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್, ತಾಯಿಯ ಸಾವು ಒಬ್ಬರ ಜೀವನದಲ್ಲಿ ಅಂತಹ ಶೂನ್ಯವನ್ನು ತುಂಬಲು ಅಸಾಧ್ಯವಾಗಿದೆ ಎಂದು ಹೇಳಿದರು.

ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಅವರು ಪ್ರಧಾನಿ ತಾಯಿ ಹೀರಾಬಾ ಅವರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ. ಒಬ್ಬ ವ್ಯಕ್ತಿಯ ಜೀವನವನ್ನು ಮೌಲ್ಯಗಳೊಂದಿಗೆ ಪೋಷಿಸುವವಳು ತಾಯಿ ಎಂದು ಬಿರ್ಲಾ ಹೇಳಿದರು. ಹೀರಾಬಾ ಅವರ ಪುಣ್ಯ ಜೀವನ ನಮಗೆಲ್ಲರಿಗೂ ಪ್ರೇರಣೆಯಾಗಿದೆ ಎಂದರು.

ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ ಮಾತನಾಡಿ, ಹೀರಾ ಬಾ ಅವರ ಹೋರಾಟ ಮತ್ತು ಸದ್ಗುಣದ ಜೀವನ ಸ್ಫೂರ್ತಿಯಾಗಿದೆ. ಆಕೆಯ ವಾತ್ಸಲ್ಯ ಮತ್ತು ಸತ್ಯವಂತಿಕೆಯು ದೇಶಕ್ಕೆ ಯಶಸ್ವಿ ನಾಯಕತ್ವವನ್ನು ನೀಡಿದೆ ಎಂದು  ಹೇಳಿದರು. ಈ ನಷ್ಟ ಭರಿಸಲಾಗದು ಎಂದು ನಡ್ಡಾ ಹೇಳಿದರು..

ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಸಂತಾಪ ಸೂಚಿಸಿದ್ದು, ಮೃತರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸಿದ್ದಾರೆ. ಪ್ರಧಾನಿ ಮೋದಿಯವರ ತಾಯಿ ಸದಾ ಸ್ಫೂರ್ತಿಯಾಗಿ ಉಳಿಯುತ್ತಾರೆ ಎಂದು ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಹೇಳಿದ್ದಾರೆ.

ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಅನುರಾಗ್ ಸಿಂಗ್ ಠಾಕೂರ್ ಅವರು ತಮ್ಮ ತಾಯಿ ಹೀರಾಬೆನ್ ಅವರ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸಂತಾಪ ಸೂಚಿಸಿದ್ದಾರೆ. ಅವರ ಅಗಲಿದ ಆತ್ಮಕ್ಕೆ ಪ್ರಾರ್ಥಿಸಿದ ಸಚಿವರು, ತಾಯಿಯನ್ನು ಕಳೆದುಕೊಂಡಿರುವುದು ದೊಡ್ಡ ದುಃಖ ಆದರೆ ಅವರ ಒಳ್ಳೆಯತನ, ಕಾಳಜಿ, ಬುದ್ಧಿವಂತಿಕೆ ಮತ್ತು ಪ್ರೀತಿ ಸದಾ ಇರುತ್ತದೆ ಎಂದು ಹೇಳಿದರು.

ತಾಯಿಯ ನಿಧನದಿಂದ ಉಂಟಾಗಿರುವ ಶೂನ್ಯವನ್ನು ತುಂಬಲು ಸಾಧ್ಯವಿಲ್ಲ ಎಂದು ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಹೇಳಿದ್ದಾರೆ. ನೊಂದ ಕುಟುಂಬಕ್ಕೆ ಸಾಂತ್ವನ ಹೇಳಿದರು.

ಹೀರಾಬೆನ್ ಮೋದಿ ಅವರ ನಿಧನದ ಸುದ್ದಿ ಕೇಳಿ ನನಗೆ ಅತೀವ ದುಃಖವಾಗಿದೆ ಎಂದು ರಾಜ್ಯಸಭಾ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ. ಅವರ ಸದ್ಗತಿಗಾಗಿ ಪ್ರಾರ್ಥಿಸುತ್ತೇನೆ ಮತ್ತು ಕುಟುಂಬದ ದುಃಖದಲ್ಲಿ ಭಾಗಿಯಾಗುತ್ತೇನೆ ಎಂದು ಹೇಳಿದರು.

ಆಂಧ್ರಪ್ರದೇಶದ ಮುಖ್ಯಮಂತ್ರಿ ವೈಎಸ್ ಜಗನ್ ಮೋಹನ್ ರೆಡ್ಡಿ, ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೆನ್, ಛತ್ತೀಸ್‌ಗಢ ಮುಖ್ಯಮಂತ್ರಿ ಭೂಪೇಶ್ ಬಾಘೇಲ್, ಅಸ್ಸಾಂ ಸಿಎಂ ಹಿಮಂತ ಬಿಸ್ವಾ ಶರ್ಮಾ ಮತ್ತು ತಮಿಳುನಾಡು ಸಿಎಂ ಎಂಕೆ ಸ್ಟಾಲಿನ್ ಸಂತಾಪ ಸೂಚಿಸಿದ್ದು, ಮೃತರ ಆತ್ಮಕ್ಕೆ ಶಾಂತಿ ಸಿಗಲೆಂದು ಪ್ರಾರ್ಥಿಸಿದ್ದಾರೆ.

ಮಾಜಿ ಉಪರಾಷ್ಟ್ರಪತಿ ಎಂ ವೆಂಕಯ್ಯ ನಾಯ್ಡು ಮಾತನಾಡಿ, ತಾಯಿ ಮತ್ತು ಮಗುವಿನ ನಡುವಿನ ಬಾಂಧವ್ಯದಷ್ಟು ಬೆಲೆಕಟ್ಟಲಾಗದ ಮತ್ತು ವರ್ಣನಾತೀತ ಸಂಬಂಧ ದೇವರ ಸೃಷ್ಟಿಯಲ್ಲಿ ಯಾವುದೂ ಇಲ್ಲ. ಅಗಲಿದ ಆತ್ಮಕ್ಕೆ ಚಿರಶಾಂತಿ ಸಿಗಲಿ ಎಂದು ಪ್ರಾರ್ಥಿಸಿದರು.

ಈ ದುಃಖದ ಕ್ಷಣಗಳಲ್ಲಿ ಕುಟುಂಬಕ್ಕೆ ಧೈರ್ಯ ನೀಡಲಿ ಎಂದು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ದೇವರಲ್ಲಿ ಪ್ರಾರ್ಥಿಸಿದ್ದಾರೆ. ಈ ದುಃಖದ ಸಮಯದಲ್ಲಿ ಅವರ ಆಲೋಚನೆಗಳು ಮತ್ತು ಪ್ರಾರ್ಥನೆಗಳು ಕುಟುಂಬದೊಂದಿಗೆ ಇರುತ್ತವೆ ಎಂದು ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ಎನ್ ಚಂದ್ರಬಾಬು ನಾಯ್ಡು ಹೇಳಿದ್ದಾರೆ.

ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ತಮಿಳುನಾಡು ಮಾಜಿ ಸಿಎಂ ಎಡಪ್ಪಾಡಿ ಕೆ.ಪಳನಿಸ್ವಾಮಿ, ಮಹಾರಾಷ್ಟ್ರದ ಮಾಜಿ ಉಪಮುಖ್ಯಮಂತ್ರಿ ಅಜಿತ್ ಪವಾರ್, ಲೋಕಸಭೆ ಸಂಸದೆ ಸುಪ್ರಿಯಾ ಸುಳೆ, ರಾಜ್ಯಸಭಾ ಸಂಸದೆ ಪ್ರಿಯಾಂಕಾ ಚತುರ್ವೇದಿ, ಡೆಮಾಕ್ರಟಿಕ್ ಆಜಾದ್ ಪಕ್ಷದ ಅಧ್ಯಕ್ಷ ಗುಲಾಂ ನಬಿ ಆಜಾದ್, ಛತ್ತೀಸ್‌ಗಢದ ಮಾಜಿ ಸಿಎಂ ಡಾ.ರಮಣ್ ಸಿಂಗ್ , ಕರ್ನಾಟಕದ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ, ಟಿಎಂಸಿ ಲೋಕಸಭಾ ಸಂಸದ ಮಹುವಾ ಮೊಯಿತ್ರಾ ಮತ್ತು ಕಾಂಗ್ರೆಸ್ ನಾಯಕ ಅಮರಿಂದರ್ ಸಿಂಗ್ ರಾಜಾ ವಾರಿಂಗ್ ಅವರು ಅಗಲಿದ ಆತ್ಮಕ್ಕೆ ಶ್ರದ್ಧಾಂಜಲಿ ಸಲ್ಲಿಸಿದರು.

ರಾಜಸ್ಥಾನದ ಮಾಜಿ ಸಿಎಂ ವಸುಂಧರಾ ರಾಜೇ, ರವಿಶಂಕರ್ ಪ್ರಸಾದ್, ಸಂಬಿತ್ ಪಾತ್ರ, ಕೆ ಅಣ್ಣಾಮಲೈ ಸೇರಿದಂತೆ ಬಿಜೆಪಿ ನಾಯಕರು ಕುಟುಂಬಕ್ಕೆ ಸಾಂತ್ವನ ಹೇಳಿದ್ದಾರೆ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ



web counter

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top