ಬಪ್ಪಳಿಗೆಯ ಅಂಬಿಕಾ ವಿದ್ಯಾಲಯ ಸಿಬಿಎಸ್‌ಇಯಲ್ಲಿ ಮಾರ್ಕೆಟ್ ಫೆಸ್ಟ್ ಉದ್ಘಾಟನೆ

Upayuktha
0

ನಮ್ಮ ಸುತ್ತಲಿನ ಪ್ರತಿಯೊಂದು ವಸ್ತುವಿಗೂ ಮೌಲ್ಯವಿದೆ : ಅಜೇಯ ರಾಮ್ ಕೋಡಿಬೈಲ್


ಪುತ್ತೂರು: ನಮ್ಮ ಸುತ್ತಮುತ್ತಲು ಇರುವ ಪ್ರತಿಯೊಂದು ವಸ್ತುವಿಗೂ ಕೂಡ ಮೌಲ್ಯವಿದೆ. ಆದ್ದರಿಂದ ನಮ್ಮ ಪರಿಸರವನ್ನು ಸೂಕ್ಷ್ಮವಾಗಿ ವೀಕ್ಷಿಸಿ ಅಲ್ಲಿ ದೊರೆತ ವಸ್ತುವನ್ನು ಮಾರಾಟಮಾಡಿ ಅದರಿಂದ ನಾವು ಸಣ್ಣ ಮೊತ್ತವನ್ನು ಪಡೆದಾಗ ಆಗುವ ಖುಷಿ ಅಪರಿಮಿತವಾದದ್ದು. ಹಾಗೆ ದೊರಕುವ ಮೊತ್ತ ತನ್ನ ಸ್ವಂತ ಸಂಪಾದನೆ ಎಂಬ ಮನೋಭಾವ ಮೂಡುತ್ತದೆ ಎಂದು ಕೋಡಿಬೈಲ್ ಇಂಪೋರ್ಟ್ ಅಂಡ್ ಎಕ್ಸ್ಪೋರ್ಟ್ ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕ ಅಜಯ್ ರಾಮ್ ಕೋಡಿಬೈಲ್ ಹೇಳಿದರು.


ಅವರು ನಗರದ ಅಂಬಿಕಾ ವಿದ್ಯಾಲಯ ಸಿಬಿಎಸ್‌ಇಯ ಶ್ರೀ ಶಂಕರ ಸಭಾಭವನದ ಶ್ರೀ ಲಲಿತಾಂಬಿಕಾ ವೇದಿಕೆಯಲ್ಲಿ ಬುಧವಾರ ಆಯೋಜಿಸಲಾದ ‘ಮಾರ್ಕೆಟ್ ಮೇಳ’ವನ್ನು ಉದ್ಘಾಟಿಸಿ ಮಾತನಾಡಿದರು.


ನಾವು ಯಾವುದೇ ಹುದ್ದೆಗೆ ಹೋದರೂ ಕಾರ್ಯವನ್ನು ಇತರರಿಗೆ ಮನವರಿಕೆ ಮಾಡಿಸುವ ಕೌಶಲ ಅತ್ಯಂತ ಮುಖ್ಯವಾಗಿರುತ್ತದೆ. ವ್ಯವಹಾರದ ಕೌಶಲ ಮೂಡಬೇಕಾದರೆ ಶಾಲಾ ಕಾಲೇಜುಗಳಲ್ಲಿ ದೊರಕುವ ಅನುಭವ ಮುಖ್ಯವಾಗುತ್ತದೆ. ವ್ಯವಹಾರದಲ್ಲಿ ಲಾಭ ನಷ್ಟಗಳು ಸಹಜ. ಆದರೆ ನಾವು ಯಾವಾಗಲೂ ಧನಾತ್ಮಕವಾಗಿ ಚಿಂತನೆಯನ್ನು ಮಾಡಬೇಕು. ಯಾವುದೇ ಕಾರಣಕ್ಕೂ ಕುಗ್ಗಬಾರದು. ವ್ಯವಹಾರದಲ್ಲಿ ನಾವು ಎಷ್ಟು ಜನರನ್ನು ತಲುಪುತ್ತೇವೆ ಎನ್ನುವುದು ಮುಖ್ಯ. ಯಾವುದೇ ಹುದ್ದೆಗೆ ಹೋದರೂ ಪ್ರಾಮಾಣಿಕವಾಗಿರುವುದು ಹಾಗೂ ವಿನಯದಿಂದಿರುವುದು ಅಗತ್ಯ ಎಂದು ಕಿವಿ ಮಾತು ಹೇಳಿದರು.


ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಸುಬ್ರಹ್ಮಣ್ಯ ನಟ್ಟೋಜ ಮಾತನಾಡಿ ವಿದ್ಯಾರ್ಥಿಯೊಬ್ಬ ತನ್ನ ಕಾಲಮೇಲೆ ನಿಲ್ಲುವ ಅಡಿಗಲ್ಲನ್ನು ಶಿಕ್ಷಣ ಸಂಸ್ಥೆ ರೂಪಿಸಿಕೊಡಬೇಕಿದೆ. ಇದುವೇ ನಿಜವಾದ ಶಿಕ್ಷಣದ ಸಾರ್ಥಕತೆಯಾಗಿದೆ. ಒಂದು ವಿಷಯದಲ್ಲಿ ನೂರಕ್ಕೆ ನೂರು ಅಂಕ ಗಳಿಸುವುದು, ದೊಡ್ಡ ಸಂಗತಿ ಅಲ್ಲ. ತನ್ನ ಕಾಲ ಮೇಲೆ ತಾನೇ ನಿಲ್ಲುವುದು ಜೀವನದ ನಿಜವಾದ ಗೆಲುವು. ಸೊನ್ನೆಯಿಂದ ಮನುಷ್ಯ ಹೇಗೆ ಬೆಳೆಯುತ್ತಾನೆ ಎಂಬುದೇ ನಿಜವಾದ ಕೌಶಲ. ವ್ಯಕ್ತಿ ದುಡಿಯುವುದು ಮಾತ್ರವಲ್ಲ ಆತ ದೇಶಪ್ರೇಮಿಯಾಗಿಯೂ ಕೂಡ ಬೆಳೆಯಬೇಕು ಎಂದು ವಿದ್ಯಾರ್ಥಿಗಳಿಗೆ ತಿಳಿಹೇಳಿದರು.


ಹಣ ಒಂದು ಬೆಂಕಿಯ ಹಾಗೆ. ಹೇಗೆ ಹಣದೊಂದಿಗೆ ವ್ಯವಹರಿಸುವುದು ಎಂಬುವುದನ್ನು ಮಾರ್ಕೆಟ್ ಫೆಸ್ಟ್ ವಿದ್ಯಾರ್ಥಿಗಳಿಗೆ ತಿಳಿಸಿಕೊಡಲಿದೆ. ಹಣವನ್ನು ಸಂಪಾದಿಸಿ ತನ್ನ ಸ್ವಂತ ಉಪಯೋಗಕ್ಕಾಗಿ ಬಳಸುವುದು ಮಾತ್ರವಲ್ಲ, ಸಮಾಜಮುಖಿಯಾಗಿಯೂ ಕಾರ್ಯನಿರ್ವಹಿಸಬೇಕಿದೆ ಎಂದು ಸಂಸ್ಥೆಯ ಪ್ರಾಂಶುಪಾಲೆ ಮಾಲತಿ.ಡಿ ಭಟ್ ಹೇಳಿದರು. ವೇದಿಕೆಯಲ್ಲಿ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಯ ಕೋಶಾಧಿಕಾರಿ ರಾಜಶ್ರೀ ನಟ್ಟೋಜ, ಉಪಪ್ರಾಂಶುಪಾಲೆ ಸುಜನಿ ಬೋರ್ಕರ್ ಉಪಸ್ಥಿತರಿದ್ದರು.


ವಿದ್ಯಾರ್ಥಿ ಅದ್ವೈತ ಕೃಷ್ಣ ಕಾರ್ಯಕ್ರಮವನ್ನು ನಿರೂಪಿಸಿದರು. ವಿದ್ಯಾರ್ಥಿನಿ ನಿಯತಿ ಭಟ್ ಸ್ವಾಗತಿಸಿ, ವಂದಿಸಿದರು. ಕಾರ್ಯಕ್ರಮದಲ್ಲಿ ಶಿಕ್ಷಕ ಶಿಕ್ಷಕೇತರ ವೃಂದ, ವಿದ್ಯಾರ್ಥಿಗಳು ಹಾಗೂ ಪೋಷಕರು ಉಪಸ್ಥಿತರಿದ್ದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top